ಸಾಲ ಮನ್ನಾದಿಂದ ಸಹಕಾರ ಕ್ಷೇತ್ರಕ್ಕೆ ಪೆಟ್ಟು: ಜಿ.ಟಿ. ದೇವೇಗೌಡ
ಕ.ಪ್ರ.ವಾರ್ತೆ ಕೋಲಾರ ನ.18
ಸರ್ಕಾರದ ಸಾಲ ಮನ್ನಾ ಯೋಜನೆಗಳಿಂದ ಸಹಕಾರ ಕ್ಷೇತ್ರಕ್ಕೆ ಪೆಟ್ಟು ಬಿದ್ದಿದೆ ಎಂದು ರಾಜ್ಯ ಸಹಕಾರ ಮಹಾ ಮಂಡಳದ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ. ದೇವೇಗೌಡ ಅಭಿಪ್ರಾಯಪಟ್ಟರು.
ನಗರದ ಟಿ. ಚನ್ನಯ್ಯ ರಂಗ ಮಂದಿರದಲ್ಲಿ ಸೋಮವಾರ ನಡೆದ ಸಹಕಾರ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಹಕಾರ ಕ್ಷೇತ್ರ ಆರ್ಥಿಕ ರಂಗದ ಹೆಬ್ಬಾಗಿಲು ಆಗಿದ್ದು ಇದಕ್ಕೆ ಹಾನಿ ಆಗುವುದಕ್ಕೆ ಯಾರೂ ಸಹ ಅವಕಾಶ ನೀಡಬಾರದೆಂದು ಸೂಚ್ಯವಾಗಿ ತಿಳಿಸಿದರು. ಜಾಗತಿಕರಣ ಮತ್ತು ಉದಾರಿಕರಣದ ಪ್ರವಾಹದಲ್ಲಿ ಸಹಕಾರಿ ಕ್ಷೇತ್ರ ಕೊಚ್ಚಿ ಹೋಗುತ್ತದೆ ಎಂಬುದು ಅನೇಕರ ಅಭಿಪ್ರಾಯವಾಗಿತ್ತು. ಆದರೆ, ಕರ್ನಾಟಕದಲ್ಲಿ ಇಂದು ಸಹಕಾರ ಕ್ಷೇತ್ರ ಗಟ್ಟಿಯಾಗಿ ಉಳಿದಿರುವುದಕ್ಕೆ ಸಹಕಾರಿಗಳ ಚಿಂತನೆ, ಪರಿಶ್ರಮ ಕಾರಣವಾಗಿದ್ದು, ಈ ಸಂಸ್ಥೆಗಳು ಸಾಲ ಮನ್ನಾ ಯೋಜನೆಗಳಿಂದಾಗಿ ಕುಗ್ಗವಂತಾಗಬಾರೆದೆಂದರು. ಲಾಭ ಬಂದ್ರೆ ವಿದೇಶ ಪ್ರವಾಸ ಮಾಡಲು ಮುಂದಾಗುವ ಸಹಕಾರಿಗಳು ನಷ್ಟವಾದಾಗ ಮಾತ್ರ ನಮಗೂ ಸಂಸ್ಥೆಗೂ ಸಂಬಂಧವಿಲ್ಲವೆಂದು ದೂರ ಉಳಿಯುವುದು ಸರಿಯಲ್ಲ. ಸಹಕಾರ ಸಪ್ತಾಹಗಳು ನಡೆಸುವುದೇ ಚಿಂತನ-ಮಂಥನಕ್ಕಾಗಿ, ಪ್ರತಿಯೊಬ್ಬ ಸಹಕಾರಿ ಆತ್ಮಾವಲೋಕನೆ ಮಾಡಿಕೊಂಡು ಸಹಕಾರ ಕ್ಷೇತ್ರವನ್ನು ಇನ್ನಷ್ಟು ಗಟ್ಟಿಗೊಳಿಸಬೇಕೆಂದರು. ಪ್ರತಿ ದಿನ ಸರ್ಕಾರಿ ಕಟ್ಟಡಗಳ ಮೇಲೆ ಹೇಗೆ ರಾಷ್ಟ್ರ ದ್ವಜವನ್ನು ಹಾರೋಹಣ ಮಾಡಲಾಗುತ್ತದೋ ಅದೇ ರೀತಿ ಸಹಕಾರ ಸಂಸ್ಥೆಗಳ ಮೇಲೂ ಸಹಕಾರ ದ್ವಜವನ್ನು ಹಾರಿಸುವ ಮೂಲಕ ಸಹಕಾರ ತತ್ವಗಳಿಗೆ ಗೌವರ ನೀಡಬೇಕೆಂದು ಜಿ.ಟಿ. ದೇವೇಗೌಡ ಕರೆ ನೀಡಿದರು. ಕೋಲಾರದಲ್ಲಿ ಸಹಕಾರ ಭವನ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಆರ್ಥಿಕ ಸಹಾಯ ಮಾಡಬೇಕು, ಸರ್ಕಾರವೂ ಸಹ ನೆರವು ನೀಡುವ ಮೂಲಕ ಸಹಕಾರಿಗಳ ಬೇಡಿಕೆ ಈಡೇರಿಸಬೇಕೆಂದರು. ಜಿಲ್ಲಾ ಸಹಕಾರ ಯೂನಿಯನ್ ಹೆಸರಿನಲ್ಲಿ ಕೋಲಾರ ಬಂಗಾರಪೇಟೆ ರಸ್ತೆಯಲ್ಲಿ 10,080 ಅಡಿ ಉತ್ತಮ ನಿವೇಶನವಿದ್ದು ಇಲ್ಲಿ ಸಹಕಾರಿ ಭವನ ನಿರ್ಮಾಣಕ್ಕೆ ಸಹಕಾರ ಕನಿಷ್ಟ 50 ಲಕ್ಷ ರು. ನೀಡಬೇಕೆಂದು ಯೂನಿಯನ್ ಪರವಾಗಿ ನಿರ್ದೇಶಕ ಹೊಳಲಿ ಪ್ರಕಾಶ್ ಸಹಕಾರ ಸಚಿವರಿಗೆ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಹಾದೇವ ಪ್ರಸಾದ್, ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇರುವ ಸಹಕಾರ ಸಂಸ್ಥೆಗಳು ತಮ್ಮ ಕೈಲಾದಷ್ಟು ದೇಣಿಗೆ ನೀಡಲಿ, ಸರ್ಕಾರದಿಂದಲೂ ಆರ್ಥಿಕ ನೆರವು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು. ಈ ಹಿಂದೆ ಯಾವುದೇ ಸರ್ಕಾರ ಸಹಕಾರ ಸಂಸ್ಥೆಗಳಿಗೆ ಸೇರಿದ ಕಟ್ಟಡ ದುರಸ್ತಿ, ವಿಸ್ತರಣೆಗಾಗಿ ಅನುದಾನ ನೀಡಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ 10 ಕೋಟಿ ರು. ಬಿಡುಗಡೆ ಮಾಡಿಸಲಾಗಿದೆ, ಇದೇ ರೀತಿ ಸಹಕಾರ ಭವನ ನಿರ್ಮಾಣಕ್ಕೂ ಸಹಾಯ ಮಾಡುವುದಾಗಿ ಆಶ್ವಾಸನೆ ನೀಡಿದರು.
ಹತಾಶೆಯಿಂದ ವಿರೋಧ ಪಕ್ಷಗಳ ಟೀಕೆ
ಕ.ಪ್ರ.ವಾರ್ತೆ ಕೋಲಾರ ನ.18
ಸಮಾಜಕ್ಕೆ ಮಾರಕವಾದ ಮೂಢನಂಬಿಕೆಗಳನ್ನು ನಿಷೇಧಿಸಬೇಕೆಂದು ಸಾರ್ವಜನಿಕರು ಮುಖ್ಯಮಂತ್ರಿಗಳಿಗೆ ಮನವಿ ನೀಡಿದ ಸಂದರ್ಭದಲ್ಲಿ ಪರಿಶೀಲನೆ ಮಾಡುವುದಾಗಿ ಹೇಳಿರುವುದನ್ನು ಮಹಾಪರಾಧವೆಂದು ಭಾವಿಸಿ ವಿರೋಧ ಪಕ್ಷದವರು ಅನಗತ್ಯವಾಗಿ ವಿವಾದ ಎಬ್ಬಿಸಿದ್ದಾರೆಂದು ಸಹಕಾರ ಸಚಿವ ಎಚ್.ಎಸ್. ಮಹಾದೇವ ಪ್ರಸಾದ್ ಆರೋಪಿಸಿದರು.
ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೋಮವಾರ ಕೋಲಾರಕ್ಕೆ ಬಂದಿದ್ದ ಸಂದರ್ಭದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತಾತ್ಮಕ ವಿಚಾರಗಳಿಗೆ ಸಂಬಂಧಿಸಿದಂತೆ ಸರ್ಕಾರ ವಿರುದ್ಧ ಆರೋಪ, ಟೀಕೆ ಮಾಡಲು ವಿರೋಧ ಪಕ್ಷದವರಿಗೆ ವಸ್ತು ಇಲ್ಲದೆ ಸಮಾಜಕ್ಕೆ ಬೇಡವಾದ ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆಂದು ಸಿಡಿಮಿಡಿಗೊಂಡರು.
ಮಂಡ್ಯ-ರಾಮನಗರ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಸೋತ ಬಳಿಕ ವಿರೋಧ ಪಕ್ಷದವರು ಹತಾಶರಾಗಿ ಸರ್ಕಾರ ಮತ್ತು ಮುಖ್ಯಮಂತ್ರಿಗಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆಂದರು. ವಿರೋಧ ಪಕ್ಷದವರು ಹೇಳುತ್ತಿರುವ ರೀತಿಯಲ್ಲಿ ಮುಖ್ಯಮಂತ್ರಿಗಳು ಯಾವುದೇ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲವೆಂದು ಸಚಿವ ಮಹದೇವಪ್ರಸಾದ್ ಸಮರ್ಥನೆ ಮಾಡಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

