ನಕಲಿ ಪಡಿತರ ಚೀಟಿ; ಕಾನೂನು ಕ್ರಮದ ಎಚ್ಚರಿಕೆ
ಚಿಕ್ಕಬಳ್ಳಾಪುರ: ನಕಲಿ ಪಡಿತರ ಚೀಟಿಗಳನ್ನಿಟ್ಟುಕೊಂಡು ಪಡಿತರ ಪದಾರ್ಥಗಳನ್ನು ದುರುಪಯೋಗಪಡಿಸಿಕೊಳ್ಳುವ ನ್ಯಾಯ ಬೆಲೆ ಅಂಗಡಿಗಳ ಪರವಾನಗಿಯನ್ನು ನಿರ್ದಾಕ್ಷಿಣ್ಯವಾಗಿ ರದ್ದುಪಡಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಎಚ್ಚರಿಕೆ ನೀಡಿದರು.
ಅಲ್ಲದೇ ಅಕ್ರಮವಾಗಿ ಪಡಿತರ ಚೀಟಿಗಳನ್ನು ಹೊಂದಿರುವವರು ಮುಂದೆ ಕಾನೂನು ಕ್ರಮಕ್ಕೆ ಗುರಿಯಾಗದಿರಲು ಈಗಲೇ ವಾಪಸ್ ನೀಡಬೇಕೆಂದು ಹೇಳಿದರು. ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು,ನಿಜವಾದ ಬಡಜನರನ್ನು ವಂಚಿಸಿ ಕಾಳಸಂತೆಯಲ್ಲಿ ಪಡಿತರ ಪದಾರ್ಥಗಳನ್ನು ಮಾರಾಟ ಮಾಡಲು ಸಹಕಾರಿಯಾಗುವ, ಸರ್ಕಾರದ ಅನ್ನಭಾಗ್ಯಯೋಜನೆಗೆ ತೊಡಕು ಉಂಟು ಮಾಡುವ ಅಕ್ರಮ ಪಡಿತರ ಚೀಟಿಗಳ ಬಳಕೆಯ ಬಗ್ಗೆ ಕಿಡಿಕಾರಿದರು.
ರಾಜ್ಯ ಸರ್ಕಾರ ಬಡವರಿಗೆ ತಲಾ 1 ರು. ದರದಲ್ಲಿ 30 ಕೆ.ಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದು ತುಂಬಾ ಅನುಕೂಲ ಮಾಡಿಕೊಟ್ಟಿದೆಯಾದರೂ ಅಕ್ರಮ ಪಡಿತರ ಚೀಟಿಗಳನ್ನು ತೋರಿಸಿ ಅನೇಕ ಕಡೆ ದುರುಪಯೋಗಪಡಿಸಿಕೊಳ್ಳುವಂತಹುದು ಹೆಚ್ಚಿಗೆ ನಡೆಯುತ್ತಿದ್ದು ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಿಗೂ ನೋಟಿಸ್ ಕೊಟ್ಟಿರುವುದಲ್ಲದೇ ದುರುಪಯೋಗ ತಡೆಯಲು ಮುಂದಾಗುವಂತೆ ಅಧಿಕಾರಿಗಳಿಗೂ ಖಡಕ್ಕಾಗಿ ಎಚ್ಚರಿಕೆ ನೀಡಲಾಗಿದೆ ಎಂದರು.
ಕಾಳಸಂತೆಯಲ್ಲಿ ಪಡಿತರ ಪದಾರ್ಥಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಜನರು ನಿರ್ಭಯವಾಗಿ ದೂರನ್ನು ನೀಡಿ ಅಕ್ರಮ ವ್ಯವಹಾರಕ್ಕೆ ಕಡಿವಾಣ ಹಾಕಲು ಸಹಕರಿಸಬೇಕು. ದೂರು ನೀಡುವವರು ಹೆಸರನ್ನು ಗೌಪ್ಯವಾಗಿಡಲಾಗುತ್ತದೆ ಎಂದ ಅವರು, ಕೆಲವಡೆ ಕಾಳಸಂತೆಯಲ್ಲಿ ಪದಾರ್ಥಗಳು ಮಾರಾಟವಾಗುತ್ತಿರುವುದು ಕಂಡು ಬಂದ ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದರ ನಡುವೆಯೂ ಅಕ್ರಮ ಮಾರಾಟದ ಬಗ್ಗೆ ದೂರುಗಳು ಹೆಚ್ಚಿಗೆ ಬರುತ್ತಿವೆ ಎಂದು ತಿಳಿಸಿದರು.
ಪ್ರಸ್ತುತ ಖಾಸಗಿಯವರಿಗೆ ನ್ಯಾಯ ಬೆಲೆ ಅಂಗಡಿಗಳನ್ನು ಹೊಸದಾಗಿ ನಡೆಸಲು ಪರವಾನಗಿ ನೀಡದೇ ಸಹಕಾರಿ ಸಂಘಗಳಿಗೆ ಕೊಡಲಾಗುತ್ತಿದೆ. ಹಾಲಿ ಬಹುತೇಕ ನ್ಯಾಯ ಬೆಲೆ ಅಂಗಡಿಗಳ ಮಾಲೀಕರೇ ಹೆಚ್ಚಿಗೆ ನಕಲಿ ಚೀಟಿಗಳನ್ನು ಹೊಂದಿರುವುದು, ಕೆಲವರ ಹೆಸರಿನಲ್ಲಿ ಚೀಟಿಗಳನ್ನು ಮಾಡಿಸಿಟ್ಟುಕೊಂಡಿರುವುದು ಕಂಡು ಬಂದಿದೆ ಎಂದು ಒಪ್ಪಿಕೊಂಡ ಅವರು, ಇದಕ್ಕೆಲ್ಲಾ ಕಡಿವಾಣ ಹಾಕಲು ಜನರು ಸಹಕಾರ ನೀಡಬೇಕೆಂದರು.
ಸರ್ಕಾರದ ಮಹತ್ವದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳ ಪಾತ್ರ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ಜವಾಬ್ದಾರಿಯುತವಾಗಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕೆಂದು ಸೂಚನೆ ನೀಡಿದರು. ಆರೋಗ್ಯ ಇಲಾಖೆಯಲ್ಲಿ ತಜ್ಞರ ಕೊರತೆಯಿದೆ. ಗ್ರೂಫ್ ಡಿ ನೌಕರರ ನೇಮಕಾತಿ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಆರೋಗ್ಯ ಇಲಾಖಾಧಿಕಾರಿ ರಂಗಸ್ವಾಮಿ ಸಚಿವರ ಗಮನ ಸೆಳೆದರು. ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಪಡೆಯಲು ಈಗ ಬ್ಯಾಂಕ್ ಖಾತೆ ಮತ್ತು ಆಧಾರ್ ಸಂಖ್ಯೆಯನ್ನು ಕಡ್ಡಾಯ ಮಾಡಲಾಗಿದೆ. ಆದರೂ ಜಿಲ್ಲೆಯಲ್ಲಿ ಆಧಾರ್ ಶಾಖೆಗಳನ್ನು ಆಧಾರ್ ಚೀಟಿ ಪಡೆಯುವ ಕೌಂಟರನ್ನು ಹೆಚ್ಚಿಗೆ ತೆರೆದಿಲ್ಲ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಸುಂದರೇಶ್ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಸುರೇಖಾ, ಅಂಗನವಾಡಿ ಕೇಂದ್ರಗಳಿಗೆ ವೇದಾಂತ ಫೌಂಡೇಷನ್ ಸಮವಸ್ತ್ರ, ಅವಲಕ್ಕಿ, ಸಕ್ಕರೆ, ಕಡ್ಲೆಕಾಳು, ವಿಟಮಿನ್ ಮಾತ್ರೆಗಳನ್ನು ವಿತರಿಸುತ್ತಿದೆ. ಜಿಲ್ಲೆಯಲ್ಲಿ 600 ಅಪೌಷ್ಟಿಕ ಮಕ್ಕಳಿದ್ದು ಇವರಿಗೆ ಹಾಲಿನಲ್ಲಿ ಎಂಸಿಟಿ ಆಯಿಲ್ ಅನ್ನು ಬೆರೆಸಿ ಕೊಡಲಾಗುತ್ತಿದೆ. ಈಗ ಅವರ ಬೆಳವಣಿಗೆಯಲ್ಲಿ ಸುಧಾರಣೆ ಕಂಡಿದೆ ಎಂದರು.
ಸಭೆಯಲ್ಲಿ ವಿಧಾನಸಭಾ ಉಪಸಭಾಪತಿ ಎನ್.ಎಚ್. ಶಿವಶಂಕರರೆಡ್ಡಿ, ಶಾಸಕರಾದ ರಾಜಣ್ಣ, ಕೃಷ್ಣಾರೆಡ್ಡಿ, ಸುಬ್ಬಾರೆಡ್ಡಿ, ಜಿಪಂ ಅಧ್ಯಕ್ಷ ಚಿನ್ನಪ್ಪ, ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್, ಜಿಪಂ ಕಾರ್ಯ ನಿರ್ವಹಣಾಧಿಕಾರಿ ನೀಲಾಮಂಜುನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಸಾದ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

