ಕೋಲಾರ

ಪೇದೆ-ವಿದ್ಯಾರ್ಥಿ ಸಾವು: ಮುಂದುವರೆದ ತನಿಖೆ

Published On :

ಕ.ಪ್ರ.ವಾರ್ತೆ ಕೋಲಾರ ನ.19
ಇತ್ತೀಚೆಗೆ ಮರಳು ಲಾರಿ ಡಿಕ್ಕಿಯಿಂದ ಸತ್ತ ಪೊಲೀಸ್ ಪೇದೆ ಶಿವಕುಮಾರ್ ಹಾಗೂ ಬೆಂಕಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿ ಆಗದೆ ಮಂಗಳವಾರ ಬೆಂಗಳೂರಿನಲ್ಲಿ ಮೃತಪಟ್ಟಿರುವ ವೈದ್ಯಕೀಯ ವಿದ್ಯಾರ್ಥಿ ಕಾಮೇಶ್ವರ ರಾವ್ ಪ್ರಕರಣದ ತನಿಖೆ ಮುಂದುವರೆದಿದೆ ಎಂದು ದಕ್ಷಿಣ ವಲಯ ಐಜಿಪಿ ಅಮರಕುಮಾರ ಪಾಂಡೆ ತಿಳಿಸಿದರು.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪೊಲೀಸ್ ಪೇದೆ ಶಿವಕುಮಾರ್‌ಗೆ ಡಿಕ್ಕಿ ಹೊಡೆದಿದ್ದ ಲಾರಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಲಾರಿಯ ಚಾಲಕ ಯಾರೆಂಬುದು ಗೊತ್ತಾಗಿದ್ದು ತನಿಖಾ ತಂಡ ಆರೋಪಿಯನ್ನು ಬಂಧಿಸಲು ಶೋಧನೆ ಮುಂದುವರೆಸಿದೆ ಎಂದರು.
ಮರಳು ಲಾರಿಯ ಚಾಲಕ ಉದ್ದೇಶಪೂರ್ವಕವಾಗಿಯೇ ಪೇದೆಯ ಮೇಲೆ ಲಾರಿ ಹರಿಸಿ ಸಾಯಿಸಿದ್ದಾನೆಂಬುದಕ್ಕೆ ಸದ್ಯಕ್ಕೆ ಯಾವುದೇ ಸಾಕ್ಷಿ ಲಭ್ಯವಾಗಿಲ್ಲ. ತನಿಖಾ ತಂಡಕ್ಕೆ ಕೆಲವು ಮಾಹಿತಿ ಸಿಕ್ಕಿದ್ದು ಪೂರ್ತಿ ತನಿಖೆ ಮುಗಿಸಿದ ನಂತರ ಸತ್ಯ ಏನೆಂಬುದು ತಿಳಿಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣೆ ತಡೆಗೆ ಜಿಲ್ಲಾ ಆಡಳಿತ ಮತ್ತು ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡ ನಂತರ ಶೇ. 80 ರಷ್ಟು ನಿಯಂತ್ರಣಕ್ಕೆ ಬಂದಿದೆ. ಕೆಲವರು ಅಡ್ಡದಾರಿಗಳಲ್ಲಿ ಮರಳು ಸಾಗಾಣೆ ಮಾಡುತ್ತಿದ್ದು ಇದಕ್ಕೂ ಕಡಿವಾಣ ಹಾಕಲಾಗುವುದೆಂದು ತಿಳಿಸಿದರು.
ಮರಳು ಅಕ್ರಮ ಸಾಗಾಣೆ ತಡೆಯುವುದು ಕೇವಲ ಪೊಲೀಸರ ಕೆಲಸ ಮಾತ್ರವಲ್ಲ, ಸಮನ್ವಯ ಸಮಿತಿಯಲ್ಲಿರುವ ಎಲ್ಲರ ಸಹಕಾರ ಅತ್ಯಗತ್ಯ. ಪೊಲೀಸ್ ಇಲಾಖೆಯಲ್ಲೇ ಕೆಲವರು ಅಕ್ರಮ ಮರಳು ಸಾಗಾಣೆಗೆ ಕುಮ್ಮಕ್ಕು ನೀಡುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದ್ದು ನಿಖರವಾದ ಮಾಹಿತಿ ನೀಡಿದಲ್ಲಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆಂದು ಹೇಳಿದರು.
ಅಕ್ರಮ ಮರಳು ಸಾಗಾಣೆ ತಡೆಗೆ ನೇಮಿಸಿರುವ ಸಮನ್ವಯ ಸಮಿತಿಯಲ್ಲಿ ಹೊಂದಾಣಿಕೆ ಮತ್ತು ಸಾಮರಸ್ಯದ ಕೊರತೆ ಇದ್ದರೆ ಅದನ್ನು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪರಸ್ವರ ಸಮಾಲೋಚನೆ ಮೂಲಕ ಬಗೆಹರಿಸಿಕೊಳ್ಳಬೇಕು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಿಳುವಳಿಕೆ ನೀಡುವ ಮೂಲಕ ಅಕ್ರಮ ಮರಳು ಸಾಗಾಣೆ ನಿಯಂತ್ರಿಸಬೇಕಾಗಿದೆ ಎಂದರು.
ವಿದ್ಯಾರ್ಥಿ ಸಾವಿಗೆ ಕಾರಣ ತಿಳಿದು ಬಂದಿಲ್ಲ; ಕಳೆದ ನ.12 ರ ರಾತ್ರಿ ದೇವರಾಜ ಅರಸು ವೈದ್ಯಕೀಯ ವಿದ್ಯಾರ್ಥಿ ಕಾಮೇಶ್ವರ ರಾವ್ ಬೆಂಕಿ ಅವಘಡದಲ್ಲಿ ಗಾಯಗೊಂಡು ಮಂಗಳವಾರ  ಚಿಕಿತ್ಸೆ ಫಲಕಾರಿ ಆಗದೆ ಮೃತನಾಗಿದ್ದಾನೆ. ವಿದ್ಯಾರ್ಥಿಯ ಸಾವಿನಿಂದ ತಮಗೂ ನೋವುಂಟಾಗಿದೆ ಎಂದು ಐಜಿಪಿ ತಿಳಿಸಿದರು. ವಿದ್ಯಾರ್ಥಿ ನೀಡಿರುವ ಹೇಳಿಕೆಯನ್ನು ಆಧರಿಸಿ ಸರಗಳ್ಳನ ಮತ್ತು ಕೊಲೆಗೆ ಯತ್ನಿಸಿದ ವಿಚಾರದ ಬಗ್ಗೆ ವಿಶೇಷ ಪೊಲೀಸ್ ತನಿಖಾ ತಂಡ ಸತ್ಯ ತಿಳಿಯಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ, ಮೃತನ ಕೊಠಡಿಯಲ್ಲಿ ಸಿಕ್ಕಿರುವ ಚೀಟಿಯಲ್ಲಿ ಆತ ತಾನು ಮಾನಸಿಕ ತುಮುಲಕ್ಕೆ ಸಿಕ್ಕಿರುವುದಾಗಿ ಬರೆದುಕೊಂಡಿದ್ದು ಈ ಚೀಟಿ ಆತನದೇ ಎಂಬುದನ್ನು ತಿಳಿಯಲು ಪ್ರಾಯೋಗಾಲಯಕ್ಕೆ ಕಳುಹಿಸಲಾಗಿದೆ. ಮೃತನ ಸ್ನೇಹಿತರು, ಕಾಲೇಜಿನ ಸಹಪಾಠಿಗಳು ಮತ್ತು ಇನ್ನಿತರರನ್ನು ವಿಚಾರಣೆ ಮಾಡಿ ಮಾಹಿತಿ ಸಂಗ್ರಹಣೆ ಮಾಡಲಾಗುತ್ತಿರುವುದರಿಂದ ತನಿಖಾ ವಿವರಗಳನ್ನು ಈಗ ಹೇಳಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದರು.
ಕೋಲಾರದಲ್ಲಿ ಜಾರಿಯಲ್ಲಿದ್ದ ಇ-ಬೀಟ್ ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆ ಇದ್ದ ಕಾರಣ ಈ ಹಿಂದಿನ ರೀತಿಯಲ್ಲೇ ಗಸ್ತು ಕಾರ್ಯ ಮುಂದುವರೆಸಲಾಗಿದ್ದು ಸಿಬ್ಬಂದಿಯ ಕೊರತೆ ಇಲ್ಲವೆಂದು ಉತ್ತರಿಸಿದರು. ನಗರದಲ್ಲಿ ಈಗ ಸರಗಳ್ಳತನ ಕಡಿಮೆಯಾಗಿದೆ. ಕೆಲವು ಪ್ರಕರಣಗಳು ಪತ್ತೆಯಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ. ನಗರದಲ್ಲಿ ನಡೆಯುತ್ತಿದ್ದ ಸರಗಳ್ಳತನ ಈಗ ಗ್ರಾಮೀಣ ಪ್ರದೇಶಕ್ಕೆ ವ್ಯಾಪಿಸಿದ್ದು ಆರೋಪಿಗಳನ್ನು ಹಿಡಿಯಲು ಜಿಲ್ಲಾ ಅಪರಾಧ ಪತ್ತೆ ದಳಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು. ಕೋಲಾರ ನಗರದಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆ ಆಗಬೇಕಾದರೆ ರಸ್ತೆಗಳು ದುರಸ್ತಿ ಆಗಬೇಕು, ಏಕ ಮುಖ ಸಂಚಾರಕ್ಕೆ ಜನತೆಯ ಸಹಕಾರ ಬೇಕೆಂದು ಐಜಿಪಿ ಅಮರಕುಮಾರಪಾಂಡೆ ಪ್ರತಿಪಾದಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ನಿವಾಸ್ ಸಪಟ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಮೀಲ್ ಇದ್ದರು.

ಗಾಯಾಳು ವೈದ್ಯಕೀಯ ವಿದ್ಯಾರ್ಥಿ ಸಾವು
ಕೋಲಾರ: ದುಷ್ಕರ್ಮಿಗಳ ಕೃತ್ಯದಿಂದಾಗಿ ಬೆಂಕಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕೋಲಾರದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಕಾಮೇಶ್ವರ್ ರಾವ್ ಮಂಗಳವಾರ ಮೃತನಾಗಿದ್ದಾರೆ. ಕಳೆದ ನ.12ರಂದು ರಾತ್ರಿ ಕಾಮೇಶ್ವರ ರಾವ್ ಟಮಕ ಬಡಾವಣೆಯಲ್ಲಿ ಹೋಗುತ್ತಿದ್ದಾಗ ಅಪರಿಚಿತರಿಬ್ಬರು ಬೈಕಿನಲ್ಲಿ ಬಂದು, ಕೊರಳಿನಲ್ಲಿದ್ದ ಚಿನ್ನದ ಸರ ಕಸಿದುಕೊಂಡಾಗ ತೀವ್ರ ವಿರೋಧ ವ್ಯಕ್ತಪಡಿಸಿದ್ದ. ಆಗ  ದುಷ್ಕರ್ಮಿಗಳು ತಮ್ಮ ಬಳಿಯಿದ್ದ ಪೆಟ್ರೋಲ್‌ನ್ನು ಕಾಮೇಶ್ವರ ರಾವ್ ಮೈ ಮೇಲೆ ಸುರಿದು ಬೆಂಕಿ ಹಚ್ಚಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕರು ರಾವ್ ಅವರನ್ನು ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಸೇಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೇ ರಾವ್ ಅವರು ಮೃತಪಟ್ಟಿದ್ದಾರೆ. ಗಲ್‌ಪೇಟೆ ಪೊಲೀಸರು ಕೊಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.