ಬೇಕಾಬಿಟ್ಟಿ ಪ್ರೆಸ್ ಲೇಬಲ್: ಎಚ್ಚರಿಕೆ
ಕೋಲಾರ: ಜಿಲ್ಲೆಯಾದ್ಯಂತ ಕೆಲವರು ಬೈಕ್, ಕಾರು ಮುಂತಾದ ವಾಹನಗಳ ಮೇಲೆ ಬೇಕಾಬಿಟ್ಟಿಯಾಗಿ ಪ್ರೆಸ್ ಅಂತ ಲೇಬಲ್ ಹಾಕಿಕೊಂಡು ನಿಜವಾದ ಕಾರ್ಯನಿರತ ಪತ್ರಕರ್ತರಿಗೆ ಅಪಮಾನ ಮಾಡುತ್ತಿದ್ದಾರೆಂಬ ದೂರಿನ ಮೇರೆಗೆ ಪ್ರೆಸ್ ಲೇಬಲ್ ದುರ್ಬಳಕೆ ತಪ್ಪಿಸಲು ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದಾಗಿ ದಕ್ಷಿಣ ವಲಯ ಐಜಿಪಿ ಅಮರ ಕುಮಾರ ಪಾಂಡೆ ಭರವಸೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುವಾಗ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ. ಗೋಪಿನಾಥ್ ಜಿಲ್ಲೆಯಾದ್ಯಂತ ಕೆಲ ಅನಾಮಧೇಯ ವ್ಯಕ್ತಿಗಳು ತಮ್ಮ ವಾಹನಗಳ ಮೇಲೆ ಬೇಕಾಬಿಟ್ಟಿಯಾಗಿ ಪ್ರೆಸ್ ಅಂತ ಲೇಬಲ್ ಅಂಟಿಸಿಕೊಂಡು ನಿಜವಾದ ಪತ್ರಕರ್ತರಿಗೆ ಮುಜುಗರವನ್ನು ಉಂಟು ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ ಭರವಸೆ ಈಡೇರಿಲ್ಲವೆಂದು ದೂರಿದರು.
ಇದಕ್ಕೆ ಸ್ಪಂದಿಸಿದ ಐಜಿಪಿ ಅಮರಕುಮಾರ ಪಾಂಡೆ, ಕ್ರಮ ಕೈಗೊಳ್ಳುವುದಕ್ಕೆ ನಮ್ಮ ಅಭ್ಯಂತರವೇನಿಲ್ಲ. ನಾಳೆ ತಮ್ಮ ಕಡೆಯವರು ಏಕೆ ಎಂದು ಪ್ರಶ್ನಿಸುವಂತಿರಬಾರದು, ಎಲ್ಲಾ ಪತ್ರಕರ್ತರು ಒಮ್ಮತದಿಂದ ಕಡಿವಾಣಕ್ಕೆ ಒಪ್ಪಿಗೆ ನೀಡಿದಲ್ಲಿ ಸಂಘದ ಸದಸ್ಯರನ್ನು ಹೊರತುಪಡಿಸಿ ಉಳಿದಂತೆ ಯಾರೇ ತಮ್ಮ ವಾಹನಗಳ ಮೇಲೆ ಪ್ರೆಸ್ ಎಂಬ ಲೇಬಲ್ ಹಾಕಿಕೊಂಡು ಓಡಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರಲ್ಲದೆ, ವಾಹನಗಳ ತಪಾಸಣೆ ಸಂದರ್ಭದಲ್ಲಿ ಪ್ರೆಸ್ ಎಂಬ ಲೇಬಲ್ ಹಾಕಿಕೊಂಡಿರುವವರನ್ನು ತಪಾಸಣೆ ಮಾಡಿ ಅವರ ಬಳಿ ಪತ್ರಕರ್ತರ ಸಂಘದ ಗುರುತಿನ ಚೀಟಿ, ಇಲ್ಲವೇ ಪತ್ರಿಕಾ ಸಂಸ್ಥೆಗಳಿಂದ ನೀಡಲ್ಪಟ್ಟಿರುವ ಗುರುತಿನ ಚೀಟಿ ಅಥವಾ ಸರ್ಕಾರದಿಂದ ನೀಡಿರುವ ಮಾನ್ಯತಾ ಪತ್ರ ಇಲ್ಲದಿದ್ದ ಪಕ್ಷದಲ್ಲಿ ಕ್ರಮ ಕೈಗೊಳ್ಳುವಂತೆ ಡಿವೈಎಸ್ಪಿ ಅಶೋಕ್ಕುಮಾರ್ ಅವರಿಗೆ ಸೂಚನೆ ನೀಡಿದರು.
ಹೊಸ ಜಾಹೀರಾತು ನೀತಿ; ಪ್ರತಿಭಟನೆ
ಕ.ಪ್ರ.ವಾರ್ತೆ ಕೋಲಾರ ನ.19
ವಾರ್ತಾ ಇಲಾಖೆಯು ಜಾರಿಗೆ ತಂದಿರುವ ಹೊಸ ಜಾಹಿರಾತು ನೀಡಿ ವಿರೋಧಿಸಿ ನಗರದಲ್ಲಿ ಮಂಗಳವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಸಣ್ಣ ಪತ್ರಿಕೆಗಳ ಸಂಪಾದಕರು ಮತ್ತು ಪತ್ರಕರ್ತರು ಪ್ರತಿಭಟನೆ ನಡೆಸಿದರು.
ನಗರದ ಅಂತರಗಂಗೆ ರಸ್ತೆಯ ಪತ್ರಕರ್ತರ ಭವನದಿಂದ ಬೈಕ್ ರ್ಯಾಲಿ ಮೂಲಕ ಉಪ ವಿಭಾಗಾಧಿಕಾರಿಗಳ ಕಚೇರಿವರೆಗೆ ಬಂದು ನಂತರ ಅಲ್ಲಿಂದ ಕಾಲು ನಡಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮುಖ್ಯಮಂತ್ರಿಗಳಿಗೆ ಕಳುಹಿಸಿ ಕೊಡುವಂತೆ ಕೋರಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಮಾತನಾಡಿ, ರಾಜ್ಯ ಸರ್ಕಾರವು ಅಂಗೀಕರಿಸಿರುವ ಹೊಸ ಜಾಹಿರಾತು ನೀತಿ ಕನ್ನಡ ಪತ್ರಿಕೆಗಳಿಗೆ ಮಾರಕವಾಗಿದೆ ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್ ಮಾತನಾಡಿ, ಸಣ್ಣ ಪತ್ರಿಕೆಗಳಿಗೆ ಆರ್ಥಿಕ ಚೈತನ್ಯ ತುಂಬುವಂತ ಜಾಹಿರಾತು ನೀತಿ ರೂಪಿಸುವ ಬದಲು ಪತ್ರಿಕೆಗಳನ್ನು ಮುಚ್ಚುವಂತಹ ಮರಣ ಶಾಸನ ಜಾರಿಗೆ ತಂದಿದೆ ಎಂದು ಆರೋಪಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ವಿ.ಮುನಿರಾಜು, ರಾಜ್ಯ ಸಮಿತಿ ಸದಸ್ಯೆ ಗೋಪಿಕಾ ಮಲ್ಲೇಶ್, ಕಾರ್ಯದರ್ಶಿಗಳಾದ ಎ.ಜಿ. ಸುರೇಶ್ಕುಮಾರ್, ಎಸ್.ಕೆ. ಚಂದ್ರಶೇಖರ್, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಮಹಮದ್ ಯೂನುಸ್, ಹಿರಿಯ ಸಂಪಾದಕ ಕೆ. ಪ್ರಹ್ಲಾದರಾವ್, ಕಲಾವಿದ ವಿಷ್ಣು, ಎಚ್.ಎನ್. ಮುರಳೀಧರ್, ಕೆ.ಆರ್. ಹರೀಶ್ , ಬದರಿನಾಥ್, ಕೋ.ನಾ.ಮಂಜುನಾಥ್, ಕೋ.ನಾ ಪ್ರಭಾಕರ್, ವೆಂಕಟೇಶ್ ಬಾಬಾ ಸೇರಿದಂತೆ ವಿವಿಧ ಪತ್ರಿಕೆಗಳ ಸಂಪಾದಕರು ಮತ್ತು ವರದಿಗಾರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

