ಕೋಲಾರ

ಸಕಾಲ ಕುರಿತು ಎರಡು ದಿನ ತರಬೇತಿ

Published On :

ಕೋಲಾರ; ಮೈಸೂರಿನಲ್ಲಿರುವ ಆಡಳಿತ ತರಬೇತಿ ಸಂಸ್ಥೆಯಿಂದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ  ಸಕಾಲ ಕುರಿತು 2 ದಿನಗಳ ತರಬೇತಿ ಕಾರ್ಯಕ್ರಮವನ್ನು  ನ.21 ಮತ್ತು 22 ರವರೆಗೆ ಕೋಲಾರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ನ.21 ರಂದು ಬೆಳಿಗ್ಗೆ 9.30ಕ್ಕೆ ಜಿಲ್ಲಾಧಿಕಾರಿ ಡಿ.ಕೆ. ರವಿ ಉದ್ಘಾಟಸಲಿದ್ದಾರೆ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಝಲ್ಫಿಖಾರ್ ಉಲ್ಲಾ .ಭಾಗವಹಿಸುವರು. ಆಡಳಿತ ತರಬೇತಿ ಸಂಸ್ಥೆಯ ತರಬೇತಿ ಸಂಯೋಜಕ ಡಾ. ಕ್ರಿಸ್ಟಿನ ಕಾಂತರಾಜು ಅವರು ಸಕಾಲ ಕುರಿತು ಉಪನ್ಯಾಸ ನೀಡಲಿದ್ದಾರೆ.  ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಹಾಗೂ ಉಪಪ್ರಾಚಾರ್ಯ ಸಿ.ಎಸ್. ವೆಂಕಟರಂಗನ್ ಉಪಸ್ಥಿತರಿರುವರು.

ಇಂದು ಬೃಹತ್ ಪ್ರತಿಭಟನೆ
ಗೌರಿಬಿದನೂರು: ರಾಜ್ಯ ಸರ್ಕಾರ ಮೆಕ್ಕೆಜೋಳಕ್ಕೆ ಪ್ರೋತ್ಸಾಹ ಧನ ನೀಡಬೇಕು ಹಾಗೂ 1800 ರು.ಗಳ ಬೆಂಬಲ ಬೆಲೆಯನ್ನು ನೀಡಬೇಕೆಂದು ಆಗ್ರಹಿಸಿ ನ.21ರಂದು ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಬೃಹತ್‌ಪ್ರತಿಭಟನೆ ಹಾಗೂ ಧರಣಿಯನ್ನು ಬೆಳಿಗ್ಗೆ 11ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್‌ಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 ಕಾಲುಬಾಯಿ ಜ್ವರ ಕುರಿತು ಇಂದು ಸಭೆ
ಕೋಲಾರ: ಕಾಲುಬಾಯಿ ಜ್ವರದಿಂದ ಮೃತಪಟ್ಟಿರುವ ಜಾನುವಾರುಗಳಿಗೆ 50 ಸಾವಿರ ರು. ಪರಿಹಾರಕ್ಕೆ ಮತ್ತು ಈ ರೋಗ ಸಂಪೂರ್ಣ ನಿಯಂತ್ರಣ ಮತ್ತು ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ವಿಜ್ಞಾನಿಗಳು, ಜನಪ್ರತಿನಿಧಿಗಳು ಮತ್ತು ರೈತರನ್ನೊಳಗೊಂಡ ದುಂಡು ಮೇಜಿನ ಸಭೆಯನ್ನು ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ನಗರದ ಲಯನ್ಸ್ ಕ್ಲಬ್‌ನಲ್ಲಿ ನ.21 ರಂದು ಬೆಳಿಗ್ಗೆ 11.30ಕ್ಕೆ ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಈ ಸಭೆಯಲ್ಲಿ ಬೆಂಗಳೂರಿನ ಹೆಬ್ಬಾಳದಲ್ಲಿರುವ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ರವೀಂದ್ರ ಹೆಗ್‌ಡೆ, ಶ್ರೀನಿವಾಸಪುರದ ಶಾಸಕರಾದ ಕೆ.ಆರ್. ರಮೇಶ್‌ಕುಮಾರ್, ಮಾಲೂರು ಶಾಸಕ ಮಂಜುನಾಥಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷ ತೂಪಲ್ಲಿ ಆರ್. ನಾರಾಯಣಸ್ವಾಮಿ, ಕೋಲಾರ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷರಾದ ವಿ. ಪ್ರಸನ್ನ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಜಿ.ಸಿ. ಬಯ್ಯಾರೆಡ್ಡಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಪಿ.ಆರ್. ಸೂರ್ಯನಾರಾಯಣ ವಹಿಸಲಿದ್ದಾರೆ.

ಕಾಡಾನೆ ದಾಳಿಗೆ ವ್ಯಕ್ತಿ ಬಲಿ
ಎಚ್.ಡಿ. ಕೋಟೆ: ದನ ಮೇಯಿಸುವ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ಅರಣ್ಯ ಪ್ರದೇಶದ ತಾರೆ ಮರದ ಕಂಡಿ ಎಂಬಲ್ಲಿ ಮಂಗಳವಾರ ಜರುಗಿದೆ.ತಾಲೂಕಿನ ರಾಜೇಗೌಡನಹುಂಡಿ ಗ್ರಾಮದ ಜಯರಾಮೇಗೌಡ ಮೃತ ವ್ಯಕ್ತಿ.  ಗ್ರಾಮದ ಹಲವು ಮಂದಿ ಕಾಡಿನ ಒಳಭಾಗದಲ್ಲಿ ದನ, ಕರುಗಳನ್ನು ಮೇಯಿಸಲು ತೆರಳಿದಾಗ ಕಾಡಾನೆ ಕಾಣಿಸಿಕೊಂಡಿದ್ದು, ಜಯರಾಮೇಗೌಡನನ್ನು ಹೊರತುಪಡಿಸಿ ಉಳಿದವರು ಜಾನುವಾರನ್ನು ಬಿಟ್ಟು ಗ್ರಾಮದ ಕಡೆ ಓಡಿ ಬಂದರು. ಆದರೆ ಜಯರಾಮೇಗೌಡ ಸಂಜೆ ಸುಮಾರು 5 ಗಂಟೆಯಾದರೂ ಗ್ರಾಮಕ್ಕೆ ಹಿಂತಿರುಗದೆ ಇ್ಟಜ್ಟಜಿದ್ದರಿಂದ ಭಯಗೊಂಡ ಗ್ರಾಮಸ್ಥರು ಹಾಗೂ ಕುಟುಂಬ ವರ್ಗದವರು ಕಾಡಿನ ಒಳಭಾಗಕ್ಕೆ ತೆರಳಿ ನೋಡಿದಾಗ, ಮೃತ ದೇಹ ಪತ್ತೆಯಾಯಿತು. ಆನೆ ತುಳಿದು ಜಯರಾಮೇಗೌಡ ಮೃತಪಟ್ಟಿರುವುದಾಗಿ ಅರಣ್ಯ ಇಲಾಖೆಗೆ ಹಾಗೂ ಪಟ್ಟಣದ ಪೊಲೀಸ್ ಠಾಣೆಗೆ ಕುಟುಂಬದವರು ದೂರು ನೀಡಿದ್ದಾರೆ. ಸ್ಥಳಕ್ಕೆ ಶಾಸಕ ಎಸ್.ಚಿಕ್ಕಮಾದು, ತಹಸೀಲ್ದಾರ್ ಕೃಷ್ಣ, ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ಭೇಟಿ ನೀಡಿದ್ದರು. ಪರಿಹಾರಕ್ಕಾಗಿ ಕುಟುಂಬದವರು ಒತ್ತಾಯಿಸಿದ್ದಾರೆ.

ಅರಸೀಕೆರೆ: ಆಹಾರ, ಸರ್ವೆ ಇಲಾಖೆ ಪರಿಶೀಲಿಸಿದ ಡಿಸಿ
ಅರಸೀಕೆರೆ: ಜಿಲ್ಲಾಧಿಕಾರಿ ಅನ್ಬುಕುಮಾರ್ ತಾಲೂಕು ಕಚೇರಿಗೆ ಭೇಟಿ ನೀಡಿ ಆಹಾರ ಇಲಾಖೆ, ಚುನಾವಣಾ ಶಾಖೆ ಹಾಗೂ ಸರ್ವೇ ಇಲಾಖೆಗಳಲ್ಲಿ ಪರಿಶೀಲನೆ ನಡೆಸಿದರು. ಸರ್ವೇ ಇಲಾಖೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸರ್ವೇಗಾಗಿ ಅರ್ಜಿ ಸಲ್ಲಿಸಿರುವ ರೈತರ ಜಮೀನನ್ನು ಕೂಡಲೇ ಸರ್ವೇ ಮಾಡಿಕೊಡುವಂತೆ ಸೂಚಿಸಿದರು.  ನಂತರ ಆಹಾರ ಇಲಾಖೆಯಲ್ಲಿ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಪಟ್ಟಿ ಇನ್ನೂ ತಯಾರಾಗಿರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ತ್ವರಿತಗತಿಯಲ್ಲಿ ಪಟ್ಟಿ ತಯಾರಿಸಿ ಈ ತಿಂಗಳ ಅಂತ್ಯದೊಳಗೆ ಕಾರ್ಡ್ ವಿತರಿಸುವಂತೆ ತಾಕೀತು ಮಾಡಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲಾಖೆಗಳ ಕಾರ್ಯವೈಖರಿ ತೃಪ್ತಿದಾಯಕವಾಗಿದ್ದು ಆಹಾರ ಇಲಾಖೆಯಲ್ಲಿ ಬಿಪಿಎಲ್ ಕಾರ್ಡ್‌ಗಾಗಿ 16,630 ಮಂದಿ ಅರ್ಜಿ ಸಲ್ಲಿಸಿದ್ದು ಆ ಪೈಕಿ ನಗರ ಪ್ರದೇಶದ 2,830 ಅರ್ಜಿ ಪರಿಶೀಲನೆ ನಡೆಸಲಾಗಿದೆ ಎಂದರು.

ಗುಡಿಬಂಡೆಯಲ್ಲಿ ಕನಕ ಜಯಂತ್ಯುತ್ಸವ
ಗುಡಿಬಂಡೆ: ತಾಲೂಕಿನಲ್ಲಿ ಅಧಿಕಾರಿಗಳು ಸರ್ಕಾರಿ ಕಾರ್ಯಕ್ರಮಗಳಿಗೆ ಪದೇ ಪದೇ ಗೈರು ಹಾಜರಾಗುತಿರುವುದು ಬೇಸರದ ಸಂಗತಿಯಾಗಿದ್ದು ಅಂತಹ ಅಧಿಕಾರಿಗಳನ್ನು ಮನೆಗೆ ಕಳುಹಿಸಬೇಕಾಗಿದೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ಕುರುಬ ಸಂಘದ ವತಿಯಿಂದ ಪಟ್ಟಣದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಕನಕ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಶಿಕ್ಷಕ ಎನ್. ನಾರಾಯಣಸ್ವಾಮಿ ಮಾತನಾಡಿ, ಕನಕದಾಸರು ಕನ್ನಡದ ಪ್ರಮುಖ ಸಂತ ಕವಿಗಳಾಗಿದ್ದು ಸಮಾಜ ಒಡ್ಡಿದ ಅಗ್ನಿ ಪರೀಕ್ಷೆಗಳನ್ನು ತನ್ನ ಕೀರ್ತನೆಗಳಿಂದ ಎದುರಿಸಿದರು ಎಂದರು. ತಹಸೀಲ್ದಾರ್ ಶೈಲಜಾ ಮಾತನಾಡಿದರು. ಕದಿರಪ್ಪ, ನವೀನ್, ಕೆ.ವಿ.ನಾರಾಯಾಣಸ್ವಾಮಿ, ತಿರುಮಣಿ ತಿಮ್ಮಪ್ಪ, ಮುನಿಕೃಷ್ಣಪ್ಪರನ್ನು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಸನ್ಮಾನಿಸಿದರು. ಇದಕ್ಕೂ ಮುನ್ನ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ತಹಸೀಲ್ದಾರ್ ಶೈಲಜಾ ಚಾಲನೆ ನೀಡಿದರು. ಆರಕ್ಷಕ ವೃತ್ತ ನಿರೀಕ್ಷಕ ಶಿವಕುಮಾರ್, ಪಪಂ ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಕುಮಾರ್, ಕಾರ್ಯ ನಿರ್ವಹಣಾಧಿಕಾರಿ ಇಂದ್ರೇಶ್, ಸಿ.ಡಿ.ಪಿ.ಒ ಸಿದ್ದಲಿಂಗಪ್ಪ, ತೋಟಗಾರಿಕೆ ಇಲಾಖೆಯ ರವಿಕುಮಾರ್, ಕೃಷಿ ಇಲಾಖಾ ಸಹಾಯಕ ನಿರ್ದೇಶಕ ಮಂಜುನಾಥ್, ತಾಲೂಕು ಕುರುಬ ಸಂಘದ ಅಧ್ಯಕ್ಷ ಕಾರುಕೂರಪ್ಪ, ಮಲ್ಲಿಕಾರ್ಜುನ್ ಇದ್ದರು.

ಚಿಂತಾಮಣಿಯಲ್ಲಿ ಅದ್ಧೂರಿ ಜಯಂತಿ
ಚಿಂತಾಮಣಿ: ಚಿಂತಾಮಣಿಯಲ್ಲಿ ಅದ್ಧೂರಿಯಾಗಿ ಕನಕ ಜಯಂತಿ ಆಚರಿಸಲಾಯಿತು. ಪಟ್ಟಣದ ಪ್ರವಾಸಿ ಮಂದಿರದಿಂದ ಸ್ತಬ್ದ ಚಿತ್ರ ಮೆರವಣಿಗೆಗೆ ತಾಪಂ ಅಧ್ಯಕ್ಷರಾದ ಗೌರಮ್ಮ ನಾಗೇಶ್ ಚಾಲನೆ ನೀಡಿದರು. ಬೀರಪ್ಪ ದೇವರಿಗೆ ತೆಂಗಿನಕಾಯಿ ಪವಾಡ, ಕತ್ತಿವರಸೆ ಹಾಗೂ ಮಂಗಳ ವಾದ್ಯಗಳೊಂದಿಗೆ ಸುಮಾರು 20ಕ್ಕೂ ಹೆಚ್ಚು ಸ್ತಬ್ದ ಚಿತ್ರಗಳು ಭಾಗವಹಿಸಿದ್ದವು.ಕನಕ ಜಯಂತಿ ಯಶಸ್ವಿಯಾಗಲು ಸಹಕಾರ ನೀಡಿದ ಎಲ್ಲರಿಗೆ ಕುರುಬ ಸಂಘದ ತಾಲೂಕು ಅಧ್ಯಕ್ಷ ಚಿನ್ನಸಂದ್ರ ಚಂದ್ರಶೇಖರ್, ಮಾಜಿ ಅಧ್ಯಕ್ಷ ಎ. ನಾಗರಾಜ್, ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

'ಕನಕದಾಸರನ್ನು ಜಾತಿಗೆ ಸೀಮಿತಗೊಳಿಸಬೇಡಿ'
ಬಾಗೇಪಲ್ಲಿ: ಎಲ್ಲಿಯವರೆಗೂ ಸಮಾಜದಲ್ಲಿ ಜಾತಿಗಳು ಇರುತ್ತವೊ ಅಲ್ಲಿಯವರೆಗೂ ಸಮಾಜ ಸಮರ್ಪಕವಾಗಿ ಉದ್ಧಾರವಾಗಲ್ಲ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅಭಿಪ್ರಾಯಪಟ್ಟರು. ತಾಲೂಕು ಆಡಳಿತ, ತಾಪಂ ಹಾಗೂ ಪುರಸಭೆ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕನಕ ಜಯಂತಿ ಉದ್ಘಾಟಿಸಿ ಮಾತನಾಡಿ, ಕನಕದಾಸರು ಒಂದು ಕುಲಕ್ಕೆ ಸೇರಿದವರಲ್ಲ. ಇಡೀ ಮಾನವ ಕುಲಕ್ಕೆ ಸೇರಿದಂತಹ ವ್ಯಕ್ತಿ, ಇಂತಹ ವ್ಯಕ್ತಿಯ ಜಯಂತಿಯನ್ನು ಒಂದು ಕುಲದವರಿಗೆ ಸೀಮಿತಗೊಳಿಸದೇ ಪ್ರತಿಯೊಬ್ಬರು ಆಚರಿಸಬೇಕೆಂದರು.  ಜಿಪಂ ಸದಸ್ಯೆ ಬಿ. ಸಾವಿತ್ರಮ್ಮ, ನಾರಾಯಣಮ್ಮ, ಅಮರಾವತಿ, ತಾಪಂ ಅಧ್ಯಕ್ಷೆ ಮುನಿರತ್ನಮ್ಮ, ಉಪಾಧ್ಯಕ್ಷ ಶಂಕರರೆಡ್ಡಿ, ಇಒ ಸಿ. ಶ್ರೀನಿವಾಸ್, ನಂಜುಂಡಪ್ಪ, ಆ.ನಾ. ಮೂರ್ತಿ, ಜಿ. ಚಂದ್ರಶೇಖರ್, ತಹಸೀಲ್ದಾರ್ ಎಂ.ಎ. ಪಧ್ಮ, ಬಿಇಒ ಕೆ. ವೆಂಕಟೇಶ್, ಮುನಿಸ್ವಾಮಿ, ಆರ್. ಶ್ರೀಕಾಂತ್ ಇದ್ದರು.

ಕುರುಬ ಸಂಘದಿಂದ ಮಾಜಿ ಶಾಸಕರ ಭೇಟಿ
ಚಿಂತಾಮಣಿ: ತಾಲೂಕು ಕುರುಬ ಸಂಘದ ಅಧ್ಯಕ್ಷ ಚಿನ್ನಸಂದ್ರ ಚಂದ್ರಶೇಖರ್‌ರನ್ನು ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ಅಭಿನಂದಿಸಿದರು. ಪಟ್ಟಣದ ಮಾಳಪಲ್ಲಿ ಅಂಜನಿ ನಿವಾಸಕ್ಕೆ ಭೇಟಿ ನೀಡಿದ ಎಲ್ಲಾ ಕುರುಬ ಸಮಾಜದ ಪದಾಧಿಕಾರಿಗಳಿಗೂ ಮಾಜಿ ಶಾಸಕ ಸುಧಾಕರ್ ಅವರು ಕನಕ ಜಯಂತಿ ಪ್ರಯುಕ್ತ ಅಭಿನಂದನೆ ತಿಳಿಸಿದರು. ಕೆ.ವಿ. ಸುಬ್ಬಾರೆಡ್ಡಿ, ಅರುಣಾ ಮಂಜುನಾಥ್, ಎ. ನಾಗರಾಜ್, ರಮಾದೇವಿ ಮಂಜುನಾಥ್, ವೆಂಕಟಗಿರಿಕೋಟೆ ವೆಂಕಟರವಣಪ್ಪ, ಕನಂಪಲ್ಲಿ ಟೈಲರ್ ಸೀನಾ, ಶಿಕ್ಷಕ ಪ್ರಕಾಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.