ಡಿಸಿಸಿ ಬ್ಯಾಂಕಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲ
ಕ.ಪ್ರ.ವಾರ್ತೆ ಕೋಲಾರ ನ.20
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಈ ಹಿಂದಿನ ಆಡಳಿತ ಮಂಡಳಿಯ ತಪ್ಪುಗಳಿಂದ ರೈತರು ಮತ್ತು ಬಡವರಿಗೆ ಆಗಿರುವ ಕಷ್ಟದ ಬಗ್ಗೆ ಅರಿವಾಗಿರುವುದರಿಂದ ನೂತನ ಆಡಳಿತ ಮಂಡಳಿಯು ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ಹಿರಿಯ ಸಹಕಾರಿ ಹಾಗೂ ಡಿಸಿಸಿ ಬ್ಯಾಂಕಿನ ನೂತನ ನಿರ್ದೇಶಕ ಬ್ಯಾಲಹಳ್ಳಿ ಎಂ. ಗೋವಿಂದಗೌಡ ಭರವಸೆ ನೀಡಿದರು.
ಅವರು ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘ, ಕರ್ನಾಟಕ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 60ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪತ್ರಕರ್ತರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಹಕಾರ ಬೇರೆ, ರಾಜಕೀಯ ಬೇರೆ, ಡಿಸಿಸಿ ಬ್ಯಾಂಕಿನಲ್ಲಿ ರಾಜಕೀಯ ಮಾಡಿದರೆ ಏನಾಗುತ್ತದೆ ಎಂಬುದು ಜಿಲ್ಲೆಯ ಪ್ರತಿಯೊಬ್ಬರಿಗೂ ಅರ್ಥವಾಗಿದೆ. ರೈತರಿಗೆ ಮಾತ್ರವಲ್ಲದೆ ಆರ್ಥಿಕ ಸಹಾಯ ನಿರೀಕ್ಷೆ ಮಾಡುವ ಎಲ್ಲ ಅರ್ಹರಿಗೂ ಬ್ಯಾಂಕಿನಿಂದ ಸಹಾಯ ದೊರೆಯುವಂತಹ ಕಾರ್ಯಕ್ರಮಗಳನ್ನು ಜಾರಿಗೆ ತರಲು ತಾವು ಮತ್ತು ಇನ್ನಿತರ ಎಲ್ಲ ನೂತನ ನಿರ್ದೇಶಕರು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ, ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ, ತಪ್ಪು ಹೆಜ್ಜೆ ಇಡದೆ ಡಿಸಿಸಿ ಬ್ಯಾಂಕಿನ ಘನತೆ ಹೆಚ್ಚಿಸುವುದಾಗಿ ತಿಳಿಸಿದರು.
ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಟೀಕೆ, ಟಿಪ್ಪಣಿಗಳು ಸಹಜ. ಅದಕ್ಕೆ ಅಂಜಿದರೆ ಉತ್ತಮ ಸಹಕಾರಿ ಆಗಲಾಗದು, ಯಾರು ಟೀಕೆಗಳನ್ನು ಸಹಿಸಿಕೊಂಡು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬಲ್ಲನೋ ಅವನೇ ನಿಜವಾದ ಹಾಗೂ ಉತ್ತಮ ಸಹಕಾರಿ ಆಗಬಲ್ಲನೆಂದು ಅಭಿಪ್ರಾಯಪಟ್ಟರು.
ಸಹಕಾರಿಗಳಿಗೆ ತರಬೇತಿ ಅಗತ್ಯ. ಇದರಿಂದ ಕಾನೂನು ತಿಳಿವಳಿಕೆ ಹೆಚ್ಚಾಗುತ್ತದೆ, ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ಮೇಲೆ ಸಾಲ ಯೋಜನೆ ಚಾಲನೆ ಬರುತ್ತದೆ, ಸದಸ್ಯರು ಸಾಲ ಪಡೆದು ಸಕಾಲಕ್ಕೆ ಮರು ಪಾವತಿ ಮಾಡಿದಲ್ಲಿ ಬ್ಯಾಂಕು ಸುಸೂತ್ರವಾಗಿ ನಡೆಯಲು ಸಾಧ್ಯವಾಗುತ್ತದೆ ಎಂದರು.
ಸಹಕಾರ ಸಂಘಗಳನ್ನು ಕೆಲವರು ರಾಜಕೀಯ ಮೆಟ್ಟಲುಗಳನ್ನಾಗಿ ಬಳಸಿಕೊಳ್ಳುತ್ತಿರುವುದರಿಂದ ಸಹಕಾರ ಚಳುವಳಿಯನ್ನು ಬಲಿಷ್ಠಗೊಳಿಸಲಾಗುತ್ತಿಲ್ಲ, ಇನ್ನು ಮುಂದೆ ಈ ರೀತಿ ಆಗುವುದಕ್ಕೆ ತಾವು ಅವಕಾಶ ನೀಡಲ್ಲವೆಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಜಿಲ್ಲೆಯಲ್ಲಿ ರಾಜ್ಯ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಸಹಕಾರಿಗಳು ಇದ್ದರೂ ಸಹಕಾರ ಚಳುವಳಿಯನ್ನು ಪ್ರಬಲವಾಗಿ ಬೆಳಸುವಲ್ಲಿ ವಿಫಲವಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಹಕಾರ ಸಪ್ತಾಹಗಳನ್ನು ಕೇವಲ ಭಾಷಣಕ್ಕೆ ಮಾತ್ರ ಸೀಮಿತಗೊಳಿಸಿದ್ದರೆ ಹೊರತು ಸಹಕಾರ ಚಳುವಳಿಗಳನ್ನು ಬಲಿಷ್ಟವಾಗಿ ರೂಪಿಸುವಂತಹ ಕೆಲಸ ಆಗುತ್ತಿಲ್ಲ ಎಂದು ಆರೋಪಿಸಿದರು.
ಸಹಕಾರ ಸಂಘಗಳನ್ನು ಉನ್ನತ ಸ್ಥಾನಗಳನ್ನು ಪಡೆಯಲು ಬಳಸಿಕೊಂಡರೆ ಹೊರತು ಪ್ರಬಲ ಶಕ್ತಿಯನ್ನಾಗಿ ಮಾಡಲಿಲ್ಲವೆಂದರು. ಇಂದು ಧಾರವಾಡ, ಬೆಳಗಾಂ ಜಿಲ್ಲೆಗಳಲ್ಲಿ ಸಹಕಾರ ಸಂಘಗಳು ಬಲಿಷ್ಟಗೊಂಡಿವೆ. ಆದರೆ ಇಲ್ಲಿ ಮಾತ್ರ ಕನಿಷ್ಟ ರೈತರಿಗೆ ಸಾಲ ನೀಡುವಂತಹ ಪರಿಸ್ಥಿತಿಯಲ್ಲಿ ಅನೇಕ ಸಂಘಗಳು ಇಲ್ಲ ಎಂದು ವಿಷಾಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಪತ್ರಕರ್ತರಿಗೆ ಯಶಸ್ವಿನಿ ಕಾರ್ಡ್‌ಗಳನ್ನು ವಿತರಿಸಿ ಮಾತನಾಡಿದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಎನ್. ಕೃಷ್ಣಾರೆಡ್ಡಿ, ಸಹಕಾರ ಸಂಘದಲ್ಲಿ ರಾಜಕೀಯ ಹಸ್ತಾಕ್ಷೇಪವನ್ನು ತಡೆಯಲು ಕೇಂದ್ರ ಸರಕಾರ ಸಹಕಾರ ಕ್ಷೇತ್ರದಲ್ಲಿ 97 ತಿದ್ದುಪಡಿ ತರುವುದರ ಮೂಲಕ ಸಂಘಗಳಿಗೆ ಸ್ವಾಯತೆಯನ್ನು ನೀಡಿದೆ ಎಂದರು.
ಸಹಕಾರ ಸಂಘದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಲು ಅವಕಾಶವಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸಿ.ಎಂ. ರಂಗಾರೆಡ್ಡಿ ಮಾತನಾಡಿ, ಸಹಕಾರ ಸಂಘದಲ್ಲಿ ಒಳ್ಳೆ ಕೆಲಸಗಳನ್ನು ಮಾಡಲು ಸಾಕಷ್ಟು ಯೋಜನೆಗಳು ಇದೆ. ಇದನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಉರಿಗಿಲಿ ರುದ್ರಸ್ವಾಮಿ, ಡಿಸಿಸಿ ಬ್ಯಾಂಕಿನ ನೂತನ ನಿರ್ದೇಶಕ ದಯಾನಂದ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್‌ಗೆ ನೂತನವಾಗಿ ಆಯ್ಕೆಗೊಂಡಿರುವ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಮತ್ತು ದಯಾನಂದ್ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್ ಸಂಘದ ಸ್ಥಾಪನೆ ಮತ್ತು ಉದ್ದೇಶಗಳನ್ನು ತಿಳಿಸಿದರು. ಪತ್ರಕರ್ತರ ಸಹಕಾರ ಸಂಘದ ಕಾರ್ಯದರ್ಶಿ ಬಿ.ಎಸ್. ಗಂಗಾಧರ್ ,ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಾಸುದೇವಹೊಳ್ಳ, ನಿರ್ದೇಶಕರಾದ ಎ.ಜಿ.ಸುರೇಶ್‌ಕುಮಾರ್, ಎಸ್.ಎನ್. ಪ್ರಕಾಶ್(ಸ್ವಾಮಿ), ಕೆ.ಆರ್.ಹರೀಶ್, ಎಚ್.ಎನ್.ಮುರಳಿಧರ್, ಕೋ.ನಾ.ಮಂಜುನಾಥ್, ಎಂ.ವರಲಕ್ಷ್ಮೀ, ಸಿ.ಜಿ.ಮುರಳಿ, ಆರ್.ವೆಂಕಟೇಶ್ ಇದ್ದರು. ಜಿಲ್ಲಾ ಸಹಕಾರ ಯೂನಿಯನನ್ಸಿಇಒ ಮಹಾದೇವಯ್ಯ ನಿರೂಪಿಸಿ, ಅಬ್ಬಣಿ ಶಂಕರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

