ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಿ
ಕ.ಪ್ರ.ವಾರ್ತೆ ಕೋಲಾರ ನ. 20
ಕುರುಬ ಸಮಾಜ ಒಗ್ಗೂಡಿದರೆ ಸಾಲದು, ಸಮಾಜದ ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುವುದಕ್ಕೆ ಹೆಚ್ಚಿನ ಗಮನ ನೀಡಬೇಕೆಂದು ಶಾಸಕ ವರ್ತೂರ್ ಆರ್. ಪ್ರಕಾಶ್ ಕರೆ ನೀಡಿದರು.
ಜಿಲ್ಲಾ ಆಡಳಿತ, ಜಿಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಕುರುಬರ ಸಂಘದ ಆಶ್ರಯದಲ್ಲಿ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ದಾಸ ಶ್ರೇಷ್ಠ ಕನಕ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕನಕದಾಸರು ಕುರುಬ ಸಮಾಜದವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾವು ನಮ್ಮ ಮಕ್ಕಳನ್ನು ಕನಕದಾಸರಂತೆ ಶ್ರೇಷ್ಠ ವ್ಯಕ್ತಿಗಳನ್ನಾಗಿ ಮಾಡುವ ಮೂಲಕ ಸಮಾಜಕ್ಕೆ ಇನ್ನಷ್ಟು ಕೀರ್ತಿ ಹೆಚ್ಚಿಸುವಂತೆ ಅವರು ಸಲಹೆ ನೀಡಿದರು.
ಕನಕ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಘೋಷಣೆ ಮಾಡಿ, ರಜೆ ಘೋಷಿಸಿದ ಕೀರ್ತಿ ಹಿಂದಿನ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ, ಸಮಾಜಕ್ಕೆ ಸಹಾಯ ಮಾಡಿದ ಸರ್ಕಾರವನ್ನು ಸ್ಮರಣೆ ಮಾಡುವುದು ತಪ್ಪೇನಲ್ಲ. ಅದೇ ರೀತಿ ನಮ್ಮ ಸಮಾಜದವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದು ಸಮಾಜದ ಸೌಭಾಗ್ಯ. ಇವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಕುರುಬ ಸಮಾಜ ಇತರರಿಗೆ ಮಾದರಿ ಆಗುವ ರೀತಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಸಮಾಜದ ಬಡತನ ನಿವಾರಣೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ತಾವು ಹಿಂದೆ ರಾಜ್ಯದಲ್ಲಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮುಂದೊಂದು ದಿನ ಕುರಿ ಕಾಯುವವನೊಬ್ಬ ರಾಜ್ಯದ ಮುಖ್ಯಮಂತ್ರಿ ಆಗುತ್ತಾನೆಂದು ಭವಿಷ್ಯ ನುಡಿದಿದ್ದೆ. ಅದೇ ರೀತಿಯಲ್ಲಿ ನಮ್ಮ ಸಿದ್ರಾಮಣ್ಣ ಸಿಎಂ ಆಗಿದ್ದಾರೆ. ನಮ್ಮ ಸಮಾಜದ ಹೆಮ್ಮೆಯ ಪುತ್ರರಾಗಿರುವ ಸಿದ್ದರಾಮಯ್ಯ ಬಡವರ ಪರವಾಗಿ ಕೆಲಸ ಮಾಡುತ್ತಿದ್ದು ಇವರಿಗೆ ಜನತೆಯ ಸಹಕಾರ ಅತ್ಯಗತ್ಯವೆಂದು ಹೇಳಿದರು.
ಬಡವರಿಗೆ ಹಂಚಬೇಕು: ನಾನು ಜಾತಿವಾದಿ ಅಲ್ಲ, ಬಡವರ ಪರವಾಗಿದ್ದೇನೆ, ನಾನು ಸಂಪಾದಿಸಿದ ಹಣದಲ್ಲಿ ಬಡವರಿಗೆ ಸಹಾಯ ಮಾಡುತ್ತಿರುವುದರಿಂದಲೇ ಕೋಲಾರ ಕ್ಷೇತ್ರದ ಜನ ನನ್ನನ್ನು ಎರಡನೇ ಬಾರಿಯೂ ಗೆಲ್ಲಿಸಿದ್ದಾರೆ. ಹಣ ಇರುವವರು ಬಡವರಿಗೆ ಹಂಚಬೇಕು. ಕೆಲವರು ತಮ್ಮ ಬಳಿ ಹಣವಿದ್ದರೂ ಕಷ್ಟದಲ್ಲಿ ಇರುವವರಿಗೆ ಒಂದು ರು. ಸಹಾಯ ಮಾಡದೆ ಜೀಪುಣತನ ತೋರಿಸುತ್ತಾರೆ, ಅದಕ್ಕಾಗಿಯೇ ಜನರು ಅಂತಹ ವ್ಯಕ್ತಗಳನ್ನು ಎಲ್ಲಿ ಇಡಬೇಕೋ ಅಲ್ಲಿ ಇಟ್ಟಿದ್ದಾರೆಂದು ಯಾರ ಹೆಸರು ಪ್ರಸ್ತಾಪಿಸದೆ ಕುಹಕವಾಡಿದರು.
ಸಿಎಂ ಗುಣಗಾನ: ಸಿದ್ದರಾಮಯ್ಯನವರಿಗೆ ಬಡವರ ಕಷ್ಟ ಏನೆಂಬುದು ಗೊತ್ತಿರುವುದರಿಂದ 1 ಕೆಜಿ ಅಕ್ಕಿಗೆ 1 ರು.ನಂತೆ ವಿತರಣೆ ಮಾಡುವ ಮೂಲಕ ಎಲ್ಲಾ ಜಾತಿ ಜನಾಂಗದ ಬಡವರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆಂದು ಹಾಡಿ ಹೊಗಳಿದರು.
ಸಚಿವ ಖಾದರ್ ವಿರುದ್ಧ ಅಸಮಾಧಾನ: ಯು.ಟಿ. ಖಾದರ್ ಕೋಲಾರ ಜಿಲ್ಲೆಗೆ ನಾಮಕೇವಾಸ್ತೆ ಉಸ್ತುವಾರಿ ಸಚಿವರಾಗಿದ್ದಾರೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಕನಕ ಜಯಂತಿಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಈಗ ಜನರೇ ಕಡಿಮೆ ಎಂದು ಸಚಿವ ಖಾದರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ವರ್ತೂರ್ ಆರ್. ಪ್ರಕಾಶ್, ಸಮಾಜದ ಜನರು ಮತ್ತು ಕ್ಷೇತ್ರದ ಮತದಾರರು ನಾನಿರುವವರೆಗೂ ಯಾವುದೇ ಆಂಜಿಕೆ ಪಡಬೇಕಾಗಿಲ್ಲ, ನಿಮ್ಮ ಪಾಲಿಗೆ ನಾನೇ ಉಸ್ತುವಾರಿ ಎಂದು ಹೇಳುವ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡರು. ಜಿಲ್ಲೆಗೆ ಉತ್ತಮ ಜಿಲ್ಲಾಧಿಕಾರಿ ಬಂದಿದ್ದಾರೆ. ಬಡವರ ಬಗ್ಗೆ ಅಪಾರವಾದ ಕಾಳಜಿ ಇದೆ. ಈ ತಿಂಗಳ 23 ಮತ್ತು 24 ರಂದು ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ನಡೆಯಲಿರುವ ಉದ್ಯೋಗ ಮೇಳಕ್ಕೆ ನಿರುದ್ಯೋಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ತಮ ಅವಕಾಶಗಳನ್ನು ಪಡೆಯಬೇಕೆಂದರು.
ಜಿಲ್ಲೆಯ ನರಸಾಪುರದಲ್ಲಿ ಸ್ಥಾಪನೆ ಆಗಿರುವ ಸ್ಕಾನಿಯಾ, ಹೋಂಡಾ ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ, ಹೊರಗಿನವರಿಗೆ ಕಂಪನಿ ಮಾಲೀಕರು ಮಣೆ ಹಾಕಿ ಸ್ವಾಗತಿಸುತ್ತಿದ್ದಾರೆ, ಸ್ಥಳೀಯರಿಗೆ ಮಾತ್ರ ಡಿ ಗ್ರೂಪ್ ನೌಕರಿ ಸಿಗುತ್ತಿದ್ದು, ಜಿಲ್ಲಾಧಿಕಾರಿಗಳು ಕಂಪನಿಯ ಮಾಲೀಕರ ಜೊತೆ ಚರ್ಚಿಸಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲು ಪ್ರಯತ್ನಿಸಬೇಕೆಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ, ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಜಿಪಂ ಸದಸ್ಯೆ ಮಂಗಮ್ಮ ಮುನಿಸ್ವಾಮಿ, ಜಿಲ್ಲಾಧಿಕಾರಿ ಡಿ.ಕೆ. ರವಿ, ಜಿಪಂ ಸಿಇಒ ಝುಲ್ಫಿಖಾರ್ ಉಲ್ಲಾ, ಕೋಲಾರ ಉಪವಿಭಾಗಾಧಿಕಾರಿ ಮಂಜುನಾಥ್, ತಹಸೀಲ್ದಾರ್ ನಾಗರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ನಿವಾಸ್ ಸಪಟ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಮಧುಸೂದನ್, ಕಾರ್ಯಾಧ್ಯಕ್ಷ ಪಿಳ್ಳಪ್ಪ, ನಗರಸಭಾ ಸದಸ್ಯರಾದ ಸೋಮಶೇಖರ್, ಮಂಜುನಾಥ್, ಮಾಜಿ ಅಧ್ಯಕ್ಷ ವಿ.ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ವೆಂಕಟಾಚಾಲಪತಿ, ನಡುಪಳ್ಳಿ ಕೃಷ್ಣಮೂರ್ತಿ, ಚಲಪತಿ, ತಂಬಿಹಳ್ಳಿ ನಾಗರಾಜು, ಅರ್ಬನ್ ಬ್ಯಾಂಕಿನ ಅಧ್ಯಕ್ಷ ರಾಜಣ್ಣ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಜಗದೀಶ್ ಗಂಗಣ್ಣನವರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

