ಉದ್ಯೋಗಾಕಾಂಕ್ಷಿಗಳೇ ಬೆಸ್ಟ್ ಆಫ್ ಲಕ್
-ಪಾ.ಶ್ರೀ. ಅನಂತರಾಮ್
ಕೋಲಾರ: ಉದ್ಯೋಗಾಕಾಂಕ್ಷಿಗಳೇ ಆಲ್ ದ ಬೆಸ್ಟ್...
ನಿಮ್ಮ ಪ್ರತಿಭೆ, ಕೌಶಲ್ಯಕ್ಕೆ ಜಯ ಸಿಗಲಿ, ಪ್ರಾಮಾಣಿಕತೆ ಮತ್ತು ಪರಿಶ್ರಮ ಸಾರ್ಥಕವಾಗಲಿ. ಅಂದ ಹಾಗೆ ಈ ಶುಭಾಶಯ ಏಕೆಂಬುದು ನಿಮಗೆ ಈಗಾಗಲೇ ಗೊತ್ತಿದೆ. ಎರಡು ದಿನ ಕೋಲಾರದಲ್ಲಿ ನಡೆಯುವ ಬೃಹತ್ ಉದ್ಯೋಗ ಮೇಳ ಯುವ ಜನತೆಯ ಬಾಳಿಗೆ ಇಂದು ಮತ್ತು ನಾಳೆಯ ಕನಸುಗಳಿಗೆ ಬೆಳಕು ನೀಡಲಿ ಎಂಬುದು ಕನ್ನಡಪ್ರಭದ ಕಾಳಜಿ.
ಜಿಲ್ಲಾ ಕೇಂದ್ರವಾದ ಕೋಲಾರ ನಗರದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ಮತ್ತು ಭಾರತ ಸರ್ಕಾರದ ಸಹಯೋಗದಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಭಾಗವಹಿಸುವ ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶ ಸಿಗಲಿ, ನಿರುದ್ಯೋಗ ಸಮಸ್ಯೆ ನಿವಾರಣೆ ಆಗಲಿ ಎಂಬುದು ಪತ್ರಿಕೆಯ ಶುಭ ಹಾರೈಕೆಯಾಗಿದೆ. ಒಂದು ವೇಳೆ ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ಒಮ್ಮೆಗೆ ಕೆಲಸ ಸಿಗದಿದ್ದರೆ ಕುಗ್ಗುವ, ಆತಂಕ ಪಡುವ, ಹತಾಶೆಗೊಳ್ಳುವ ಪ್ರಮೇಯವೇನಿಲ್ಲ. ಮತ್ತಷ್ಟು ಕೌಶಲ್ಯ ಸಂಪಾದಿಸಿ, ಮತ್ತಷ್ಟು ಉದ್ಯೋಗ ಮೇಳಗಳಲ್ಲಿ ಭಾಗವಹಿಸಿ ಸುಂದರವಾದ ಬದುಕಿಗೆ ಭದ್ರವಾದ ಬುನಾದಿ ಕಾಣಲು ಸಫಲರಾಗಿ.
13,500 ಉದ್ಯೋಗಾಕಾಂಕ್ಷಿಗಳು; ನ.23 ಮತ್ತು 24 ರಂದು ನಡೆಯುವ ಉದ್ಯೋಗ ಮೇಳದಲ್ಲಿ ಸುಮಾರು 200 ಕಂಪನಿಗಳು ಭಾಗವಹಿಸುತ್ತಿವೆ. ಈಗಾಗಲೇ ಉದ್ಯೋಗಕ್ಕಾಗಿ 13,500 ಉದ್ಯೋಗಾಕಾಂಕ್ಷಿಗಳು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಉದ್ಯೋಗ ನೀಡಲು ಬರುತ್ತಿರುವ ಉದ್ಯಮಿಗಳ ಮುಂದೆ ಧೈರ್ಯದಿಂದ, ಆತ್ಮಸ್ಥೈರ್ಯದಿಂದ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಿ. ನೀವು ಸಂದರ್ಶನಕಾರರ ಮುಂದೆ ಪ್ರತಿಪಾದಿಸುವ ವಿಚಾರಗಳು, ಕೌಶಲ್ಯ, ಗುಣಮಟ್ಟದ ನಡವಳಿಕೆ ತೃಪ್ತಿಯಾದಲ್ಲಿ ಕೆಲಸ ಗ್ಯಾರೆಂಟಿ.
ರಾಷ್ಟ್ರಕ್ಕೆ ಮಾದರಿಯಾಗಲಿ: ಕೆಲಸ ಬೇಕೇಬೇಕು ಎಂದು ಅಡ್ಡದಾರಿ ಹಿಡಿಯಬೇಡಿ, ಮಧ್ಯವರ್ತಿಗಳ ಮಾತಿಗೆ ಮರುಳಾಗಿ ಮೋಸ ಹೋಗಬೇಡಿ, ಉದ್ಯೋಗಾಕಾಂಕ್ಷಿಗಳು ಹೇಗೆ ಸಂದರ್ಶನ, ಸವಾಲುಗಳನ್ನು ಎದುರಿಸಬೇಕೆಂದೇ ಮಾರ್ಗದರ್ಶಕರಿಂದ ಕೆಲ ನಿಮಿಷ ನಿಮಗೆ ಸಲಹೆ-ಸೂಚನೆ ನೀಡುವುದಕ್ಕೂ ವ್ಯವಸ್ಥೆ ಮಾಡಲಾಗಿದೆ. ಈ ಅವಕಾಶ ಸದುಪಯೋಗ ಮಾಡಿಕೊಂಡಲ್ಲಿ ಜಯ ಖಚಿತ. ನಿಮಗಾಗಿ ಬಂದಿರುವ 200 ಉದ್ದಿಮೆದಾರರು ತೃಪ್ತಿಗೊಂಡಲ್ಲಿ ಸಣ್ಣ ಉದ್ಯಮಿ ಕನಿಷ್ಠ 50 ರಿಂದ 100 ಮಂದಿಗೆ ಉದ್ಯೋಗ ನೀಡುವ ಅವಕಾಶಗಳು ಇವೆ. ಬೃಹತ್ ಕಾರ್ಖಾನೆಗಳು ಇನ್ನು ಹೆಚ್ಚಿನ ನೇಮಕಾತಿ ಮಾಡಿಕೊಳ್ಳುವುದಕ್ಕೆ ಅವಕಾಶಗಳು ಇವೆ. ಈ ಉದ್ಯೋಗ ಮೇಳದಿಂದ ಕನಿಷ್ಠ 5 ಸಾವಿರ ಯುವಕ-ಯುವತಿಯರಿಗೆ ಕೆಲಸ ಸಿಕ್ಕಿದಲ್ಲಿ ಕನಿಷ್ಠ 20 ರಿಂದ 25 ಸಾವಿರ ಜನರಿಗೆ ಅನುಕೂಲವಾಗುತ್ತದೆ. ಕೌಶಲ್ಯದ ಕೊರತೆಯಿಂದ ಯಾರಿಗಾದರೂ ಕೆಲಸ ಸಿಗದಿದ್ದ ಪಕ್ಷದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಕನಿಷ್ಠ ಆರು ತಿಂಗಳಿಂದ ಒಂದು ವರ್ಷದ ಅವಧಿಯ ಕೌಶಲ್ಯ ತರಬೇತಿ ನೀಡಿ, ಈ ಅವಧಿಯಲ್ಲಿ ಶಿಷ್ಯ ವೇತನ ನೀಡಿದಲ್ಲೂ ಸಾವಿರಾರು ಜನರಿಗೆ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶಗಳು ಸಿಗುವ ಸಾಧ್ಯತೆಗಳು ಇರುವುದರಿಂದ ಜಿಲ್ಲಾ ಆಡಳಿತ ಮುಖ್ಯಮಂತ್ರಿ ಈ ಉದ್ಯೋಗ ಮೇಳ ನಡೆಯಲು ಕಾರಣಕರ್ತರಾಗಿರುವ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರು ಎರಡೂ ದಿನಗಳ ಕಾಲ ಉದ್ಯೋಗ ಮೇಳ ನಡೆಯುವ ಸ್ಥಳದಲ್ಲಿ ಖುದ್ಧು ಹಾಜರಿದ್ದು ಯಾವುದೇ ಲೋಪ, ತಾರತಮ್ಯ, ಲಾಬಿಗಳಿಗೆ ಅವಕಾಶವಾಗದಂತೆ ನೋಡಿಕೊಂಡಲ್ಲಿ ಕೋಲಾರದ ಉದ್ಯೋಗ ಮೇಳ ರಾಷ್ಟ್ರಕ್ಕೆ ಮಾದರಿ ಆಗುವುದರಲ್ಲಿ ಅನುಮಾನವಿಲ್ಲ.
ಬೃಹತ್ ಮೇಳದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ವಿವಿಧ ಕಡೆಗಳಿಂದ ಉದ್ಯೋಗಾಕಾಂಕ್ಷಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರುವ ಹಾಗೂ ಅನುತ್ತೀರ್ಣರು, ಪಿಯುಸಿ, ಜಿಒಸಿ, ಐಟಿಐ, ಡಿಪ್ಲೊಮೋ, ಸಾಮಾನ್ಯ, ವೃತ್ತಿ ಆಧಾರಿತ ಪದವೀಧರರು, ಸ್ನಾತಕೋತ್ತರ ಪದವಿಧರರು ಸೇರಿದಂತೆ ಎಲ್ಲಾ ರೀತಿಯ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
ಸಂದರ್ಶನಕ್ಕಾಗಿ ಸ್ಟಾಲ್ಗಳು: ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಕಂಪನಿಗಳಿಗಾಗಿ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ 200 ಸ್ಟಾಲ್ಗಳನ್ನು ನಿರ್ಮಿಸಲಾಗಿದೆ. ಉದ್ಯೋಗಾಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಲು ಸ್ಟಾಲ್ಗಳ ಮುಂದೆ ಸ್ವಾಗತಕಾರರ ಸ್ಟಾಲ್ಗಳು ಇರುತ್ತವೆ. ಇಲ್ಲಿ ಮಾಹಿತಿ ಪಡೆದು ನಂತರ ನೋಂದಣಿ ಕೇಂದ್ರಕ್ಕೆ ತೆರಳಿ ಅಲ್ಲಿಂದ ಕಂಪನಿಗಳ ಕಡೆಯಿಂದ ಬಂದಿರುವ ಸಂದರ್ಶಕರನ್ನು ಸಂಪರ್ಕಿಸಿ ಸಂದರ್ಶನ ಎದುರಿಸಬೇಕಾಗುತ್ತದೆ.
ಅಭ್ಯರ್ಥಿಗಳಿಗೆ ಮಾಹಿತಿ ನೀಡಲು ಹಾಗೂ ಒಂದು ಸಾವಿರ ಅಭ್ಯರ್ಥಿಗಳು ಕುಳಿತುಕೊಳ್ಳಬಹುದಾದ ಬೃಹತ್ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ, 4 ದೊಡ್ಡ ಸ್ಕ್ರೀನ್ಗಳು ಅಳವಡಿಸಿ ಉದ್ಯೋಗಾಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡುವುದಕ್ಕೂ ಸ್ಟಾಲ್ಗಳನ್ನು ನಿರ್ಮಿಸಲಾಗಿದೆ.
ಆಯ್ಕೆಯಾದವರಿಗೆ ಕಾಲಮಿತಿಯಲ್ಲಿ ನೇಮಕಾತಿ
ಕ.ಪ್ರ.ವಾರ್ತೆ ಕೋಲಾರ ನ.22
ಬರಪೀಡಿತ ಕೋಲಾರ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ನ.23 ಮತ್ತು 24 ರಂದು ಹಮ್ಮಿಕೊಂಡಿರುವ ಎರಡು ದಿನಗಳ ಉದ್ಯೋಗ ಮೇಳ ವರದಾನವಾಗಿದೆ. ಈ ಉದ್ಯೋಗ ಮೇಳದಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕಾಲಮಿತಿಯಲ್ಲಿ ನೇಮಕಾತಿ ಆದೇಶ ಪತ್ರ ನೀಡಿ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಕೈಗಾರಿಕೋದ್ಯಮಿಗಳಿಗೆ ಸೂಚನೆ ನೀಡುವೆ ಎಂದು ಕೇಂದ್ರ ಸರ್ಕಾರದ ಸಣ್ಣ, ಅತೀ ಸಣ್ಣ, ಮಧ್ಯಮ ಕೈಗಾರಿಕೆಗಳ ಸ್ವತಂತ್ರ ಖಾತೆಯ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಭರವಸೆ ನೀಡಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಶನಿವಾರದಿಂದ ಆರಂಭಗೊಳ್ಳಲಿರುವ ಉದ್ಯೋಗ ಮೇಳಕ್ಕೆ ಆಗಿರುವ ವ್ಯವಸ್ಥೆಗಳ ಪರಿಶೀಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮಳೆಯ ಅಭಾವದಿಂದ ಜಿಲ್ಲೆಯ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಜನರ ಬದುಕಿಗೆ ದಾರಿ ತೋರಲು ಉದ್ಯೋಗ ಮೇಳ ನಡೆಸುತ್ತಿದ್ದು ಜನತೆ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಬೇಕೆಂದರು. ಮೇಳದಲ್ಲಿ ಭಾಗವಹಿಸುವ ಕೈಗಾರಿಕೋದ್ಯಮಿಗಳಿಗೆ ನಾವು ಯಾವುದೇ ಬೇಡಿಕೆ ಮುಂದಿಟ್ಟಿಲ್ಲ, ಅಗತ್ಯಕ್ಕೆ ತಕ್ಕಂತೆ ಉದ್ಯೋಗಾಕಾಂಕ್ಷಿಗಳಿಗೆ ಕೆಲಸ ನೀಡುವಂತೆ ಮನವಿ ಮಾಡಲಾಗಿದೆ. ಉದ್ಯಮಿಗಳು ಹೆಚ್ಚಿನ ಯುವಕರನ್ನು ತಮ್ಮ ಸಂಸ್ಥೆಗಳಿಗೆ ಸೇರಿಸಿಕೊಳ್ಳುತ್ತಾರೆಂಬ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದರು.
ಉದ್ಯೋಗಕ್ಕಾಗಿ 17 ಸಾವಿರ ಜನ ನೋಂದಣಿ ಮಾಡಿದ್ದಾರೆ. ಶನಿವಾರ ಬೆಳಿಗ್ಗೆಯಿಂದಲೇ ಸಂದರ್ಶನ ಪ್ರಕ್ರಿಯೆ ಆರಂಭವಾಗುತ್ತದೆ. 11 ಗಂಟೆಗೆ ಉದ್ಯೋಗ ಮೇಳದ ಉದ್ಘಾಟನೆ ನಡೆಯಲಿದ್ದು ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಶಾಸಕ ವರ್ತೂರ್ ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆಂದರು.
ಕೈಗಾರಿಕೋದ್ಯಮಿಗಳೊಂದಿಗೆ ಸಭೆ: ಉದ್ಯೋಗ ಮೇಳ ನಡೆಯುವ ಸ್ಥಳದಲ್ಲೇ ಶನಿವಾರ ಬೆಳಿಗ್ಗೆ 11 ಗಂಟೆಗೆ ಕೈಗಾರಿಕೋದ್ಯಮಿಗಳ ಸಭೆಯನ್ನು ಸಹ ಏರ್ಪಡಿಸಲಾಗಿದೆ. ಈ ಸಭೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವಂತೆ ಸೂಚಿಸುತ್ತೇನೆ. ಉದ್ಯೋಗ ಮೇಳದಲ್ಲಿ ಆಯ್ಕೆಯಾಗುವವರಿಗೂ ಕಾಲಮಿತಿಯಲ್ಲಿ ಉದ್ಯೋಗ ನೀಡುವಂತೆಯೂ ತಿಳಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಉದ್ಯೋಗ ಮೇಳದಲ್ಲಿ ಆಯ್ಕೆಯಾಗುವವರಿಗೆ ತ್ವರಿತಗತಿಯಲ್ಲಿ ನೇಮಕಾತಿ ಆದೇಶ ಪತ್ರ ಕೊಡಿಸಲು ಜಿಲ್ಲಾಧಿಕಾರಿಗಳು ನಿಗಾ ವಹಿಸಲಿದ್ದಾರೆ. ಅದೇ ರೀತಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಬಗ್ಗೆಯೂ ಕೈಗಾರಿಕೋದ್ಯಮಿಗಳ ಜೊತೆ ಸಭೆ ನಡೆಸಿ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವರೆಂದು ತಿಳಿಸಿದರು.
ಕೈಗಾರಿಕೆಗಳಲ್ಲಿ ಐದು ಬಗೆಯ ಉದ್ಯೋಗಾವಕಾಶ ಉಂಟು. ಕೋಲಾರ ಜಿಲ್ಲೆಯ ಯುವಕ-ಯುವತಿಯರಲ್ಲಿನ ಸಾಮರ್ಥ್ಯ, ಕೌಶಲ್ಯವನ್ನು ಪರಿಗಣಿಸಿ ಈ ಎಲ್ಲಾ ಐದು ಬಗೆಯ ಉದ್ಯೋಗಾವಕಾಶ ಕಲ್ಪಿಸಲಿ ಎಂಬುದು ನಮ್ಮ ಬಯಕೆಯಾಗಿದ್ದು, ಮೇಳದಲ್ಲಿ ಭಾಗವಹಿಸುವ ಯುವಕರು ಪ್ರತಿಭೆಯನ್ನು ಯಶಸ್ವಿಯಾಗಿ ಅನಾವರಣಗೊಳಿಸಲಿ ಎಂದು ಹಾರೈಸಿದರು.
ಜಿಲ್ಲೆಯ ನರಸಾಪುರದಲ್ಲಿ ಆರಂಭಗೊಂಡಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ, ಕೆಲ ಕಾರ್ಖಾನೆಗಳಲ್ಲಿ ಕನ್ನಡಿಗರನ್ನು ಕೆಲಸದಿಂದ ವಜಾ ಮಾಡಲಾಗುತ್ತಿದೆ ಎಂಬ ಕಾರಣಕ್ಕೆ ಪ್ರತಿಭಟನೆಗಳು ನಡೆಯುತ್ತಿದ್ದು ಜಿಲ್ಲಾಧಿಕಾರಿಗಳು ಸಮಸ್ಯೆ ನಿವಾರಣೆ ಮಾಡಲು ಸಂಬಂಧಪಟ್ಟ ಉದ್ಯಮಿಗಳೊಂದಿಗೆ ಚರ್ಚಿಸಬೇಕೆಂದು ಸೂಚಿಸಿದರು. ಅನೇಕ ವರ್ಷಗಳ ನಂತರ ಜಿಲ್ಲೆಗೆ ಹಲವು ಕೈಗಾರಿಕೆಗಳು ಬಂದಿವೆ. ಸಮಸ್ಯೆಗಳು ಇದ್ದಲ್ಲಿ ಮುಕ್ತವಾಗಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಗೊಂದಲಗಳು ನಿವಾರಣೆ ಆಗದಿದ್ದರೆ ಕೈಗಾರಿಕೆಗಳು ಉಳಿಯಲ್ಲವೆಂದು ಮಾರ್ಮಿಕವಾಗಿ ನುಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಿ.ಕೆ.ರವಿ, ಜಿಪಂ ಸಿಇಓ ಝಲ್ಫಿಖಾರ್ ಉಲ್ಲಾ ಖಾನ್, ಜಿಲ್ಲಾ ಉದ್ಯೋಗ ಮತ್ತು ತರಬೇತಿ ಇಲಾಖೆಯ ಅಧಿಕಾರಿ ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ಕುಮಾರ್, ಉಪವಿಭಾಗಾಧಿಕಾರಿ ಮಂಜುನಾಥ್, ಕೋಮುಲ್ ನಿರ್ದೇಶಕರಾದ ಮುನಿವೆಂಕಟಪ್ಪ, ಬ್ಯಾಟಪ್ಪ, ಡಿಸಿಸಿ ಬ್ಯಾಂಕಿನ ನಿರ್ದೇಶಕ ವೆಂಕಟರೆಡ್ಡಿ, ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷ ಬಿಸ್ಸೇಗೌಡ, ಜಿ.ಪಂ ಸದಸ್ಯ ನಾರಾಯಣರೆಡ್ಡಿ, ರೇಲ್ವೆ ಸಲಹಾ ಸಮಿತಿ ಸದಸ್ಯ ಜಯದೇವ್, ಕೆಪಿಸಿಸಿ ಎಸ್ಸಿ ವಿಭಾಗದ ಸಂಚಾಲಕ ಕುಮಾರ್, ಕೋಲಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ವೆಂಕಟೇಶ್, ಸಹಾಯಕ ನಿರ್ದೇಶಕ ರವಿಚಂದ್ರ, ಕಾಂಗ್ರೆಸ್ ಮುಖಂಡರಾದ ಶಫಿ, ವೆಂಕಟಪತಪ್ಪ, ಜಿಪಂ ಮಾಜಿ ಸದಸ್ಯ ಬಾಲಾಜಿ ಚನ್ನಯ್ಯ ಇದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

