ಕ್ಷುಲ್ಲಕ ಕಾರಣಕ್ಕೆ ಜಗಳ; ತಾಯಿ ಮಗನಿಗೆ ಗಾಯ
ಚಿಂತಾಮಣಿ: ಕ್ರಿಕೆಟ್ ಆಟದಲ್ಲಿ ಬಂದ ಭಿನ್ನಾಭಿಪ್ರಾಯದಿಂದ ಇಬ್ಬರು ಯುವಕರ ನಡುವೆ ಮಾರಾಮಾರಿ ನಡೆದು, ಯುವಕನ ತಾಯಿಯ ಮೇಲೆಯೂ ಹಲ್ಲೆ ಮಾಡಿರುವ ಘಟನೆ ನಡೆದಿದೆ. ತಾಲೂಕಿನ ಆಲಂಬಗಿರಿ ಗ್ರಾಮದ ಶ್ರೀನಿವಾಸ್ ಎಂಬಾತ ಗ್ರಾಮದಲ್ಲಿ ನಡೆಯುತ್ತಿರುವ ಕ್ರಿಕೆಟ್ ನೋಡುತ್ತಿರುವಾಗ ಅದೇ ಗ್ರಾಮದ ಕೇಶವ ಎಂಬಾತ ಆಟಕ್ಕೆ ತೊಂದರೆ ಮಾಡದಂತೆ ತಾಕೀತು ಮಾಡಿದ ಎನ್ನಲಾಗಿದೆ. ಆದರೆ ಇಬ್ಬರು ಯುವಕರು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಹೊಡೆದಾಡಿದ ಪರಿಣಾಮ ಇಬ್ಬರೂ ತೀವ್ರ ಗಾಯಗೊಂಡಿದ್ದಾರೆ. ನಂತರ ಶ್ರೀನಿವಾಸ್ ಅವರ ತಾಯಿ ನರಸಮ್ಮ ಗ್ರಾಮದಲ್ಲಿ ಒಂಟಿಯಾಗಿ ಬರುತ್ತಿರುವಾಗ ಕೇಶವ ಹಲ್ಲೆ ಮಾಡಿದ ಪರಿಣಾಮ ಮಹಿಳೆಯೂ ತೀವ್ರ ಗಾಯಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ಗುಂಪುಗಳ ನಡುವೆ ಮಾರಾಮಾರಿ
ಚಿಂತಾಮಣಿ: ಕುಡಿಯುವ ನೀರಿನ ವಿಷಯವಾಗಿ 2 ಗುಂಪುಗಳ ನಡುವೆ ಮಾರಾಮಾರಿ ನಡೆದು ವ್ಯಕ್ತಿಯೊಬ್ಬ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಡಿಕೆರೆ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಮಾಡಿಕೆರೆ ಗ್ರಾಮದಲ್ಲಿರುವ ಕುಡಿಯುವ ನೀರಿನ ಪಂಪ್ ಹೌಸ್ ಬಳಿ ಶ್ರೀನಿವಾಸಚಾರಿ ಎಂಬವರು ಮತ್ತು ಇದೇ ಗ್ರಾಮದ ನಾರಾಯಣಸ್ವಾಮಿ ಮತ್ತು ಮಕ್ಕಳ ನಡುವೆ ಕೈ ಕೈ ಮಿಲಾಯಿಸಿದಾಗ ಶ್ರೀನಿವಾಸಚಾರಿ ತೀವ್ರ ಗಾಯಗೊಂಡು ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಉದ್ಯೋಗ ವಂಚನೆ; ಮಹಿಳೆ ಬಂಧನ
ಬೆಂಗಳೂರು: ಭಾರತೀಯ ಸೇನೆ ನೇಮಕ ಅಧಿಕಾರಿಯ ನಕಲಿ ಗುರುತಿನ ಚೀಟಿ ಮಾಡಿಸಿ ಉದ್ಯೋಗ ಕೊಡಿಸುವುದಾಗಿ ಯುವಕರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಮಹಿಳೆಯನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಲಾರದ ಕೆಜಿಎಫ್ ಚಾಂಪಿಯನ್ ರೀಫ್ ನಿವಾಸಿ ಜಿ.ಸುಜಾತ (38) ಅಲಿಯಾಸ್ ಸುಫಿಯಾ ಬಂಧಿತೆ. ಆರೋಪಿಯಿಂದ ಭಾರತೀಯ ಸೇನೆ ನೇಮಕ ಅಧಿಕಾರಿ ಹೆಸರಿನ ಗುರುತಿನ ಚೀಟಿ, ನೇಮಕ ಅಧಿಕಾರಿ ಆರ್.ಎಸ್.ಚವ್ಹಾಣ್ ಹೆಸರಿನ ನಕಲಿ ಸೀಲ್ಗಳು ಹಾಗೂ ಯುವಕರಿಗೆ ನೀಡಿದ್ದ, ನೀಡಲಿರುವ ನಕಲಿ ನೇಮಕ ಆದೇಶ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಲಸೂರು ಪೊಲೀಸರು ಶುಕ್ರವಾರ ಚಾಂಪಿಯನ್ ರೀಫ್ನಲ್ಲಿ ಸುಜಾತಳನ್ನು ಬಂಧಿಸಿ ಆಕೆಯ ವಶದಲ್ಲಿದ್ದ ನಕಲಿ ಗುರುತಿನ ಚೀಟಿ, ಸೀಲ್ಗಳು ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಚರಂಡಿಯಲ್ಲಿ ಸಿಕ್ಕಿದ ನವಜಾತ ಗಂಡು ಶಿಶುವಿಗೆ ಆರೈಕೆ
ಗೌರಿಬಿದನೂರು: ತಾಲೂಕಿನ ಕುರೂಡಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ನವಜಾತ ಗಂಡು ಶಿಶು ರಸ್ತೆ ಬದಿಯ ಚರಂಡಿ ಬಳಿ ಅನಾಥವಾಗಿ ಬಿದ್ದಿದ್ದು, ಸಾರ್ವಜನಿಕರು ಗಮನಿಸಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಆರೈಕೆ ಮಾಡಿಸಿದ ನಂತರ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ತರಲಾಯಿತು. ಇದೀಗ ಮಗು ಸರ್ಕಾರಿ ಆಸ್ಪತ್ರೆಯಲ್ಲಿ ಕ್ಷೇಮದಿಂದ ಇದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಗ್ರಾಮದ ನಿವಾಸಿಗಳಾದ ಚೇತನ್ ಬಿ.ಎನ್, ಆನಂದ್, ಕೆ.ಎಸ್. ಲಕ್ಷ್ಮೀಕಾಂತ್, ರಾಜು ಹಾಗೂ ಅಂಗನವಾಡಿ ಕಾರ್ಯಕರ್ತರ ಸಹಕಾರದಿಂದ ಮಗುವಿನ ಪ್ರಾಣ ಉಳಿದಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

