ಮನೆ ಕಟ್ಟಲು ಅಡ್ಡಿ ಆರೋಪ: ಪ್ರತಿಭಟನೆ
ಕೋಲಾರ: ದಾಖಲೆಗಳು ಇದ್ದರೂ ಮನೆಯ ನಿರ್ಮಾಣಕ್ಕೆ ನಗರಸಭೆಯವರು ಅಡ್ಡಿಪಡಿಸುತ್ತಿದ್ದಾರೆಂದು ಆರೋಪಿಸಿ ನಗರಸಭೆಯ 6ನೇ ವಾರ್ಡ್ನ ಮಾಸ್ತಿ ಕಾಲೋನಿಯ ವಿಜಯಲಕ್ಷ್ಮಿ ಮತ್ತು ಸಂಬಂಧಿಕರು ಶುಕ್ರವಾರ ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ಮನೆ ನಿರ್ಮಾಣ ಮಾಡುವ ಉದ್ದೇಶದಿಂದ ನಗರಸಭೆಗೆ ಅನೇಕ ಬಾರಿ ಮನವಿ ನೀಡಿದ್ದರೂ ಮಾಸ್ತಿ ಕಾಲೋನಿ ತಾಲೂಕಿನ ದೊಡ್ಡಹಸಾಳ ಗ್ರಾಪಂ ವ್ಯಾಪ್ತಿಗೆ ಬರುವುದರಿಂದ ಅಲ್ಲಿನ ದಾಖಲೆ ಪರಿಶೀಲಿಸಿ ನಂತರ ಅನುಮತಿ ನೀಡುವುದಾಗಿ ಹೇಳಿ ಯಾವುದೇ ಕ್ರಮ ಕೈಗೊಳ್ಳದೆ ಅನಗತ್ಯ ವಿಳಂಬ ಮಾಡುತ್ತಿದ್ದಾರೆಂದು ವಿಜಯಲಕ್ಷ್ಮೀ ಆರೋಪಿಸಿದರು.
ಮಾಸ್ತಿ ಕಾಲೋನಿ ನಗರಸಭೆಯ 6ನೇ ವಾರ್ಡಿಗೆ ಸೇರಿದ್ದರೂ ದೊಡ್ಡ ಹಸಾಳ ಗ್ರಾಪಂನಲ್ಲೇ ಕಡತಗಳನ್ನು ಉಳಿಸಿಕೊಳ್ಳಲಾಗಿದೆ. ತಾವು ತೆರಿಗೆ ಪಾವತಿ ಸೇರಿದಂತೆ ಇನ್ನಿತರ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿದ್ದರೂ ಮನೆ ನಿರ್ಮಾಣಕ್ಕೆ ಮದಸೀರ್ ಮತ್ತು ಇತನ ಕೆಲವು ದಲ್ಲಾಳಿಗಳು ತೊಂದರೆ ನೀಡುತ್ತಿದ್ದಾರೆಂದು ದೂರಿದರು.
ಜಮೀನು ವಿವಾದ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದೆ. ತೀರ್ಪು ತಮ್ಮ ಪರವಾಗಿ ಬಂದಿದ್ದರೂ ಮದಸೀರ್ ಹಾಗೂ ಆತನ ಕಡೆಯವರು ಮನೆ ನಿರ್ಮಾಣಕ್ಕೆ ಅವಕಾಶ ನೀಡದೆ ನಗರಸಭೆ ಅಧಿಕಾರಿಗಳ ಮೂಲಕ ಅಡ್ಡಿಪಡಿಸಿದ್ದಾರೆ ಎಂದು ತಿಳಿಸಿದರು.
1991ರಲ್ಲಿ ಮಾಸ್ತಿ ಕಾಲೋನಿಯ ಸರ್ವೇ ನಂ. 105.106,107ರಲ್ಲಿರುವ ಜಮೀನನ್ನು ವೆಂಕಟಚಲಪತಿ ಎಂಬುವರು ಅಮೀರ್ಜಾನ್ ಮತ್ತು ಮದಸೀರ್ ಎಂಬುವರಿಗೆ ಜಿಪಿಒ ಮಾಡಿಕೊಟ್ಟಿದ್ದು, ಇವರ ಬಳಿ ತಾವು ಜಮೀನು ಖರೀದಿ ಮಾಡಿ ಕ್ರಯ ಮಾಡಿಕೊಂಡಿರುವುದಾಗಿ ವಿಜಯಲಕ್ಷ್ಮೀ ತಮ್ಮ ಬಳಿ ಇರುವ ದಾಖಲೆಗಳನ್ನು ನಗರಸಭೆ ಅಧಿಕಾರಿಗಳಿಗೆ ನೀಡಿದ್ದಾರೆ. ನಗರಸಭೆ ಆಯುಕ್ತ ಬಿ.ಎನ್. ಜಗದೀಶ್ ಮನವಿ ಸ್ವೀಕರಿಸಿ ಮಾತನಾಡಿ, ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ಪ್ರತಿಭಟನೆಯಲ್ಲಿ ವಿಜಯಲಕ್ಷ್ಮೀ ಪತಿ ಸುಬ್ರಮಣಿ, ಆಟೋ ನಾರಾಯಣಸ್ವಾಮಿ, ನಾರಾಯಣಸ್ವಾಮಿ, ನಿವೃತ್ತ ಪಿಎಸ್ಐ ಶಾಂತಪ್ಪ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

