ಕೋಲಾರ

ಗುಜರಾತ್ ಮಾದರಿಯಲ್ಲಿ ಜಿಲ್ಲಾಭಿವೃದ್ಧಿ

Published On :

ಕನ್ನಡಪ್ರಭವಾರ್ತೆ, ಕೋಲಾರ, ನ.23
ಗುಜರಾತ್ ಮಾದರಿಯಲ್ಲಿ ಕೋಲಾರ ಜಿಲ್ಲೆಯಲ್ಲೂ ಕೈಗಾರಿಕೆಗಳ ಅಭಿವೃದ್ಧಿ ಆಗಲಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.
ಅವರು ಶನಿವಾರ ನಗರದಲ್ಲಿ ಆರಂಭಗೊಂಡ ಎರಡು ದಿನಗಳ ಉದ್ಯೋಗ ಮೇಳದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಈಗ ಕೈಗಾರಿಕೆಗಳ ಅಭಿವೃದ್ಧಿ ಪರ್ವ ಆರಂಭಗೊಂಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಕೋಲಾರ ಜಿಲ್ಲೆಯಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸಹಕಾರಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ನೀರಿನ ಸಮಸ್ಯೆಯಿಂದಾಗಿ ಕೃಷಿ ಚಟುವಟಿಕೆಯ ಮೇಲೆ ಪರಿಣಾಮ ಬೀರಿರುವುದರಿಂದ ಇಲ್ಲಿನ ಜನರು ವಲಸೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಮೇಳ ಹಮ್ಮಿಕೊಂಡಿದ್ದು ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಸ್ವಯಂ ಘೋಷಿತರಿಂದ ಅಡ್ಡಿ: ಇದಕ್ಕೆ ಮುಂಚೆ ಮಾತನಾಡಿದ ಶ್ರೀನಿವಾಸಪುರ ಶಾಸಕ ಕೆ.ಆರ್. ರಮೇಶ್ ಕುಮಾರ್ ಅವರು, ಜಿಲ್ಲೆಯ ಕೆಲ ಸ್ವಯಂ ಘೋಷಿತ ವ್ಯಕ್ತಿಗಳು, ಸಂಘಟನೆಗಳು ಹೊಸದಾಗಿ ಆರಂಭಗೊಂಡಿರುವ ಕೈಗಾರಿಕೆಗಳ ಮುಂದೆ ಪ್ರತಿನಿತ್ಯ ಪ್ರತಿಭಟನೆ ನಡೆಸುತ್ತಿರುವುದರಿಂದ ಉದ್ದಿಮೆದಾರರು ತಲೆಕೆಟ್ಟು ಕಾರ್ಖಾನೆಗಳನ್ನು ಬಂದ್ ಮಾಡಿ ಹೋಗುವ ಸಾಧ್ಯತೆಗಳು ಇವೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತಿಭಟನೆ ನಡೆಸುವ ವ್ಯಕ್ತಿಗಳೊಂದಿಗೆ ಮಾತನಾಡಿ ಸಮಸ್ಯೆ ಏನಾದರೂ ಇದ್ದರೆ ನಿವಾರಣೆ ಮಾಡಿ. ನಿರ್ಮಲವಾದ ವಾತಾರಣದಲ್ಲಿ ಮತ್ತು ನಿರ್ಭಿತಿಯಿಂದ ಕೈಗಾರಿಕೆಗಳು ನಡೆಯುವುದಕ್ಕೆ ಅವಕಾಶ ಮಾಡಿಕೊಡುವಂತೆ ತಿಳಿಸಿದರು.
ಶಾಶ್ವತ ನೀರಾವರಿ ನಾವು ಅಂದುಕೊಂಡತೆ ಆಗುತ್ತಿಲ್ಲ. ನ.24 ರಂದು ಮುಖ್ಯಮಂತ್ರಿಗಳು ಈ ಸಂಬಂಧ ಬೆಂಗಳೂರಿನಲ್ಲಿ ಸಭೆ ಕರೆದಿರುವುದರಿಂದ ಸರ್ಕಾರಕ್ಕೆ ನೀಡಬೇಕಾದ ಸಲಹೆಗಳ ಕುರಿತು ತಜ್ಞರೊಂದಿಗೆ ಚರ್ಚಿಸುವುದಾಗಿ ಹೇಳಿದರು.
ವರ್ತೂರ್ ಪ್ರಕಾಶ್ ಗೈರು: ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಎಫ್.ಕೆ.ಸಿ.ಸಿ.ಐ ಹಿರಿಯ ಉಪಾಧ್ಯಕ್ಷ ಸಂಪತ್ ರಾಮ್, ವಾಣಿಜ್ಯ ಮತ್ತು ಕೈಗಾರಿಕಾ ಸಲಹಾ ಮಂಡಳಿಯ ನಿರ್ದೇಶಕ ಮೋಹನ್ ಸುರೇಶ್, ಕೈಗಾರಿಕಾ ಇಲಾಖೆಯ ಆಯುಕ್ತ ಮಹೇಶ್ವರ ರಾವ್, ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷ ಬಿಸ್ಸೇಗೌಡ, ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಅ.ಮು. ಲಕ್ಷ್ಮೀನಾರಾಯಣ, ಜಿಪಂ ಸಿಇಒ ಝಲ್ಫಿಖಾರ್ ಉಲ್ಲಾ, ಜಿಲ್ಲಾ ಎಸ್ಪಿ ಡಾ. ರಾಮ್‌ನಿವಾಸ್ ಸಪಟ್, ಎಸ್.ಎಂ. ಜಮಖಂಡಿ ಇದ್ದರು. ಜಿಲ್ಲಾಧಿಕಾರಿ ಡಿ.ಕೆ. ರವಿ ಸ್ವಾಗತಿಸಿದರು. ವಿಧಾನ ಪರಿಷತ್ ಸದಸ್ಯ ಹಾಗೂ ಉದ್ಯೋಗ ಮೇಳ ಸಮಿತಿ ಅಧ್ಯಕ್ಷ ದಯಾನಂದರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವರ್ತೂರ್ ಪ್ರಕಾಶ್, ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಗೈರು ಹಾಜರಾಗಿದ್ದರು.

654 ಜನರಿಗೆ ಉದ್ಯೋಗ ಭಾಗ್ಯ
ಕೋಲಾರ: ನಗರದಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದ ಮೊದಲ ದಿನವಾದ ಶನಿವಾರ ಕೇವಲ 654 ಮಂದಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಆಡಳಿತ, ಜಿಪಂ, ಭಾರತ ಸರ್ಕಾರದ ಎಂಎಸ್‌ಎಂಇ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಹಾಗೂ ಉದ್ಯೋಗ ತರಬೇತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಎರಡು ದಿನಗಳ ಉದ್ಯೋಗ ಮೇಳ ಏರ್ಪಡಿಸಲಾಗಿದ್ದು ಶನಿವಾರ ಮೇಳ ಉದ್ಘಾಟನೆಗೊಂಡಿದೆ. ಕಾರ್ಯಕ್ರಮದ ಸಂಘಟಕರು 17 ಸಾವಿರ ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ವ್ಯಕ್ತಪಡಿಸಿದ್ದರು. ಮೊದಲ ದಿನವೇ 10,452 ಮಂದಿ ಹಾಜರಾಗಿದ್ದಾರೆ. ಉದ್ಯೋಗ ಮೇಳದಲ್ಲಿ 200 ಕಂಪನಿಗಳು ಭಾಗವಹಿಸಬೇಕಾಗಿತ್ತು. ಆದರೆ, 154 ಕಂಪನಿಗಳು ಮೊದಲ ದಿನ ಹಾಜರಾತಿ ತೋರಿಸಿವೆ. ಉದ್ಯಮಿಗಳು ಮೊದಲ ದಿನದಲ್ಲಿ ನಡೆಸಿದ ಸಂದರ್ಶನದಲ್ಲಿ 2,342 ಜನರನ್ನು ಕಾಯ್ದಿರಿಸಲಾದ ಪಟ್ಟಿಯಲ್ಲಿ ಸೇರಿಸಿದ್ದಾರೆ.
ಉದ್ಯೋಗ ಮೇಳದಲ್ಲಿ ಸಾಫ್ಟ ವೇರ್ ಕಂಪನಿಗಳು ಭಾಗವಹಿಸದಿರುವುದರಿಂದ ಅನೇಕ ಇಂಜನಿಯರಿಂಗ್ ಪದವೀಧರರು ನಿರಾಸೆಗೊಳ್ಳುವಂತಾಗಿದೆ.

ಉದ್ಯೋಗ ಮೇಳದ ಹೈಲೈಟ್ಸ್
ಮುನಿಯಪ್ಪ ಪರ ಸಚಿವ ಹುಕ್ಕೇರಿ ಮತಯಾಚನೆ
ಕೋಲಾರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪನವರನ್ನು ಮತ್ತೆ ಗೆಲ್ಲಿಸುವಂತೆ ರಾಜ್ಯ ಸರ್ಕಾರದ ಸಣ್ಣ ಕೈಗಾರಿಕೆ, ಮುಜರಾಯಿ ಮತ್ತು ಸಕ್ಕರೆ ಸಚಿವ ಪ್ರಕಾಶ. ಬಿ. ಹುಕ್ಕೇರಿ ಮತಯಾಚಿಸಿದರು. ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ ಸಚಿವ ಪ್ರಕಾಶಶ್ಬಿ.ಹುಕ್ಕೇರಿಯವರು, ಕೆ.ಹೆಚ್. ಮುನಿಯಪ್ಪನವರನ್ನು ಹಾಡಿ ಹೊಗಳಿದರಲ್ಲದೆ, 7ನೇ ಬಾರಿಗೆ ಮುನಿಯಪ್ಪನವರನ್ನು ಲೋಕಸಭೆಗೆ ಆಯ್ಕೆ ಮಾಡುವ ಮೂಲಕ ಇತಿಹಾಸ ನಿರ್ಮಿಸುವಂತೆ ಜನತೆಗೆ ಕರೆ ನೀಡಿದರು.
ಕೈಕೊಟ್ಟ ಮೈಕಾಸುರ
ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಧ್ವನಿವರ್ಧಕ ಕೈಕೊಟ್ಟಿದ್ದರಿಂದ ವೇದಿಕೆಯ ಮೇಲಿದ್ದ ಗಣ್ಯರು ಹಾಗೂ ಸಭೀಕರು ಸಿಡಿಮಿಡಿಗೊಂಡರು.
ಜಿಲ್ಲಾಧಿಕಾರಿ ಡಿ.ಕೆ.ರವಿ ಸ್ವಾಗತ ಭಾಷಣ ಮಾಡುವಾಗ ಮೈಕ್ ಕೊಟ್ಟಿತು. ಇದರಿಂದ ಕುಪಿತರಾದ ಶಾಸಕ ರಮೇಶ್ಕುಮಾರ್ತ್‌ಮ್ಮ ಆಸನದಿಂದ ಎದ್ದು ಬಂದು ಒಳ್ಳೆ ಮೈಕ್ ಹಾಕೋದಕ್ಕೆ ಆಗಲ್ವ ಎಂದು ಮೈಕ್ ಟೆಸ್ಟ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಪದೆ ಪದೆ ಮೈಕಾಸುರನ ಕಾಟ ಹೆಚ್ಚಾದ್ದರಿಂದ ಕಾಂಗ್ರೆಸ್ ಮುಖಂಡರು ಹಾಗೂ ಅಧಿಕಾರಿಗಳು ಸಹ ಬೇಸತ್ತು ಮೈಕ್ ಸಿಬ್ಬಂದಿ ವಿರುದ್ಧ ಹರಿಹಾಯ್ದರು.
ಹುಕ್ಕೇರಿ ಹೆಸರು ಮರೆತ ಶಾಸಕ
ತಮ್ಮ ಭಾಷಣದ ಸಮಯದಲ್ಲಿ ಶಾಸಕ ಕೆ.ಆರ್. ರಮೇಶೆ ಕುಮಾರ್ ವೇದಿಕೆಯ ಮೇಲಿದ್ದ ಎಲ್ಲರ ಹೆಸರು ಹೇಳಿ ಸಚಿವ ಪ್ರಕಾಶ್ ಬಿ. ಹುಕ್ಕೇರಿ ಹೆಸರನ್ನು ಮರೆತಿದ್ದರು. ಇನ್ನೇನು ಭಾಷಣ ಮುಗಿಸುವ ವೇಳೆಗೆ ಶಾಸಕರ ಕಡೆಯವರು ಚೀಟಿ ನೀಡಿ ಹುಕ್ಕೇರಿ ಹೆಸರು ಮರೆತಿರುವುದನ್ನು ನೆನಪು ಮಾಡಿದರು. ತಕ್ಷಣ ತಮ್ಮ ತಪ್ಪು ಅರಿತ ಶಾಸಕ ರಮೇಶ್‌ಕುಮಾರ್, ಹುಕ್ಕೇರಿ ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು, ಅವರ ಮೇಲೆ ಪ್ರೀತಿ ಹೆಚ್ಚಾಗಿರುವುದರಿಂದ ಹೆಸರು ಮರೆತೆ ಎಂದು ಸಮಜಾಯಿಷಿ ನೀಡಿದರು. ಇನ್ನು ಒಂದು ಹೆಜ್ಜೆ ಮುಂದೆ ಹೋದ ಅವರು, ಬೆಳಗಾವಿಯಲ್ಲಿ ನಾವು 10 ದಿನ ಇರಬೇಕಾಗಿದೆ, ಹುಕ್ಕೇರಿಯವರು ನನ್ನ ಹೆಸರು ರಮೇಶ್‌ಕುಮಾರ್ ಹೇಳಲಿಲ್ಲವೆಂದು ರೂಮ್‌ನಲ್ಲಿ ಉಳಿಯಲು ಬಿಡದಿರಬಹುದೆಂದು ಹಾಸ್ಯ ಚಟಾಕಿ ಹಾರಿಸಿದಾಗ ಸಚಿವ ಹುಕ್ಕೇರಿ, ಹಾಗೆಲ್ಲ ಏನು ನಡೆಯಲ್ಲವೆಂದು ಕುಳಿತಲ್ಲೇ ಭರವಸೆ ನೀಡಿದರು.
ಶಾಸಕರ ಗೈರು
ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭಕ್ಕೆ ವಿಧಾನ ಪರಿಷತ್ ಸದಸ್ಯ, ಉದ್ಯಮಿ ನಜೀರ್ ಅಹಮ್ಮದ್ ಹಾಗೂ ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್ ಬಂದಿರಲಿಲ್ಲ. ಜಿಲ್ಲಾ ಆಡಳತದಿಂದ ತಮಗೆ ಆಹ್ವಾನ ಇರಲಿಲ್ಲ. ಹಾಗಾಗಿ ಕಾರ್ಯಕ್ರಮಕ್ಕೆ ಬರಲಾಗಲಿಲ್ಲವೆಂದು ಈ ಇಬ್ಬರು ಶಾಸಕರು ಕೋಲಾರದಲ್ಲಿ ಶನಿವಾರ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೇರವಾಗಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪನವರಿಗೆ ದೂರಿದರು.
ಸಾಲಕ್ಕಾಗಿ ಬಂದಿದ್ದ ಅಂಗವಿಕಲ
ಉದ್ಯೋಗ ಮೇಳದಲ್ಲಿ ಕೆಲಸ ಸಿಗುವುದೇ ಕಷ್ಟ. ಅಂತಹದರಲ್ಲಿ ಬಂಗಾರಪೇಟೆ ತಾಲೂಕಿನ ಯಲ್ಬುರ್ಗಿ ಗ್ರಾಮದ ಅಂಗವಿಕಲ ತಿಮ್ಮರಾಯಪ್ಪ ಎಂಬುವರು ಸ್ವಂತ ಉದ್ಯೋಗಕ್ಕಾಗಿ ಸಾಲ ಕೇಳಲು ಬಂದಿದ್ದರು. ಆರನೇ ತರಗತಿ ಓದಿರುವ ತಿಮ್ಮರಾಯಪ್ಪ ಕಾಲುಗಳ ಸ್ವಾಧೀನವಿಲ್ಲದೆ ವೀಲ್‌ಚೇರ್ ಅವಲಂಬಿಸಿದ್ದಾರೆ. ಉದ್ಯೋಗ ಮೇಳದಲ್ಲಿ ಕೆಲಸ ಕೇಳುವುದಕ್ಕೆ ಬಂದಿರಬಹುದೆಂದು ಅಧಿಕಾರಿಗಳು ತಿಮ್ಮರಾಯಪ್ಪನನ್ನು ವಿಚಾರಿಸಿದಾಗ, ಸಾಲ ಕೇಳಲು ಬಂದಿರುವುದು ತಿಳಿದು ಮೌನಕ್ಕೆ ಶರಣಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.