ಕೋಲಾರ

ಮೇಳದಲ್ಲಿ 1,464 ಜನರಿಗೆ ಉದ್ಯೋಗ

Published On :

-ಪಾ.ಶ್ರೀ. ಅನಂತರಾಮ್
ಕೋಲಾರ: ಉದ್ಯೋಗ ಮೇಳಕ್ಕೆ ನೋಂದಣಿ ಮಾಡಿಕೊಂಡಿದ್ದವರು 17 ಸಾವಿರ ಮಂದಿ, ಪಾಲ್ಗೊಂಡಿದ್ದು 16138, ಪಾಲಿಗೆ ಬಂದದ್ದು ಪಂಚಾಮೃತ ಎಂದು ವಿವಿಧ ಕಂಪನಿಗಳ ಕೃಪೆಗೆ ಪಾತ್ರರಾಗಿ ಉದ್ಯೋಗ ಗಿಟ್ಟಿಸಿಕೊಂಡವರು ಕೇವಲ 1,464 ಜನರು ಮಾತ್ರ.
ನಗರದಲ್ಲಿ ನಡೆದ ಎರಡು ದಿನಗಳ ಉದ್ಯೋಗ ಮೇಳ ಭಾನುವಾರ ಮುಕ್ತಾಯಗೊಂಡಿತು. ಜಿಲ್ಲಾ ಆಡಳಿತ ಉದ್ಯೋಗ ಮೇಳ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಆದರೆ, ಐಟಿ-ಬಿಟಿ ಕಂಪನಿಗಳು ಕೋಲಾರದತ್ತ ತಿರುಗಿ ನೋಡದಿರುವುದಕ್ಕೆ ಸಜವಾಗಿಯೇ ಅಸಮಾಧಾನ ವ್ಯಕ್ತಪಡಿಸಿದೆ.
ಉದ್ಯೋಗ ಮೇಳದ ಮೊದಲ ದಿನವಾದ ಶನಿವಾರ 10,452 ಉದ್ಯೋಗಾಕಾಂಕ್ಷಿಗಳು, 154 ಉದ್ಯೋಗದಾತರು ಭಾಗವಹಿಸಿದ್ದರು. ಈ ಪೈಕಿ 654 ಮಂದಿ ಮಾತ್ರ ಆಯ್ಕೆಯಾಗಿದ್ದರೆ, 2,342 ಮಂದಿ ಕಾಯ್ದಿರಿಸಿದ ಪಟ್ಟಿಗೆ ಸೇರಿದ್ದರು.
ಭಾನುವಾರ ನಡೆದ ಎರಡನೇ ದಿನದ ಉದ್ಯೋಗ ಮೇಳದಲ್ಲಿ 5,686 ಮಂದಿ ಪಾಲ್ಗೊಂಡಿದ್ದು 810 ಮಂದಿ ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ. 3,725 ಜನ ಕಾದಿರಿಸಿದ ಪಟ್ಟಿಯಲ್ಲಿದ್ದಾರೆ.
ಉದ್ಯೋಗ ಮೇಳದಲ್ಲಿ 200 ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇತ್ತು. ಮೊದಲ ದಿನ 154 ಕಂಪನಿಗಳು ಹಾಜರಾತಿ ತೋರಿದ್ದರೆ, ಎರಡನೇ ದಿನ 34 ಕಂಪನಿಗಳು ಸೇರಿಕೊಂಡು ಒಟ್ಟು 184 ಕಂಪನಿಗಳು ನಿರುದ್ಯೋಗ ಯುವಕ-ಯುವತಿಯರ ಕೌಶಲ್ಯ ಪರೀಕ್ಷಿಸಿ 1,464 ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ.
ಕೋಲಾರದಿಂದ ಉದ್ಯೋಗ ಮೇಳದಲ್ಲಿ 51 ಸಂಸ್ಥೆಗಳು ಭಾಗವಹಿಸಿ 316 ಜನರನ್ನು ಆಯ್ಕೆ ಮಾಡಿಕೊಂಡಿದ್ದಾರೆ. 2,466 ಜನರನ್ನು ಕಾದಿರಿಸಿದ ಪಟ್ಟಿಯಲ್ಲಿ ಸೇರಿಸಿ ಮತ್ತೊಂದು ಸುತ್ತಿನ ಸಂದರ್ಶನ ಮತ್ತು ಅಭ್ಯರ್ಥಿಗಳ ಬೇಡಿಕೆ ನೋಡಿ ನೇಮಕಾತಿ ಪತ್ರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಮೊದಲ ದಿನ ನೂರಾರು ಎಂಜನಿಯರಿಂಗ್ ಪದವೀಧರರು ಐಟಿ-ಬಿಟಿ ಕಂಪನಿಗಳಲ್ಲಿ ಅಥವಾ ದೊಡ್‌ಡ ಪ್ರಮಾಣದ ಕೈಗಾರಿಕೆಗಳಲ್ಲಿ  ಉದ್ಯೋಗ ನಿರೀಕ್ಷೆ ಮಾಡಿ ಬಂದು ನಿರಾಸೆಯಿಂದ ತೆರಳಿದ್ದರು. ಎರಡನೇ ದಿನವಾದ ಭಾನುವಾರ ನಮಗೆ ಅದೃಷ್ಟ ಸಿಗಬಹುದೆಂದು ಬಂದಿದ್ದ ಅನೇಕ ಎಂಜನಿಯರಿಂಗ್ ಪದವೀಧರರು ಐಟಿ-ಬಿಟಿ ಕಂಪನಿಯವರು ಮೇಳದತ್ತ ಮುಖ ಮಾಡದಿದ್ದರಿಂದ ಬಂದ ದಾರಿಗೆ ಸುಂಕವಿಲ್ಲವೆಂದು ಬರೀಗೈಯಲ್ಲಿ ನಿರ್ಗಮಿಸಿದರು.
ಉದ್ಯೋಗ ಮೇಳದಲ್ಲಿ ಆಯ್ಕೆಯಾದವರಲ್ಲಿ ಕೆಲವರು ಕಡಿಮೆ ಸಂಬಳವಾದರೂ ಸರಿ ಉದ್ಯೋಗಂ ಪುರುಷ ಲಕ್ಷಣಂ ಎಂದು ಒಪ್ಪಿಕೊಂಡಿದ್ದಾರೆ. ಪ್ರಸ್ತುತ ಆಯ್ಕೆಯಾಗಿರುವವವರು ಕೆಲಸಕ್ಕೆ ಸೇರಿಕೊಂಡಲ್ಲಿ ತಿಂಗಳಿಗೆ 4,500 ರಿಂದ 6 ಸಾವಿರ ರು.ವರೆಗೆ ಸಂಪಾದನೆ ಮಾಡಲಿದ್ದಾರಲ್ಲದೆ, ಇಎಸ್‌ಐ, ಪಿ.ಎಫ್ ಇನ್ನಿತರ ಸೌಲಭ್ಯಕ್ಕೆ ಆರ್ಹರಾಗುತ್ತಾರೆ.
ಬಹುತೇಕರಿಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿದೆ. ಪಾಲಿಗೆ ಬಂದದ್ದು ಪಂಚಾಮೃತ ಎಂದು ತಿಳಿದು ಮನೆಯವರಿಗೆ ಭಾರವಾಗುವುದನ್ನು ತಪ್ಪಿಸಲು ಉದ್ಯೋಗ ಒಪ್ಪಿಕೊಂಡಿದ್ದೇವೆ. ಬೆಂಗಳೂರಿನಲ್ಲೇ ರೂಮ್ಮಾಡಿಕೊಂಡು ಕೆಲಸಕ್ಕೆ ಹೋಗುವುದಾಗಿ ಅಕ್ಷಯ ಬಯೋಟೆಕ್‌ಗೆ ಆಯ್ಕೆಯಾಗಿರುವ ಚಿಂತಾಮಣಿಯ ಯುವಕ ಕಿಶೋರ್ ಬಾಬು ತಿಳಿಸಿದರೆ, ಉಳಿದವರು ಸ್ನೇಹಿತರ ಮತ್ತು ಬಂಧುಗಳ ಮನೆಯಲ್ಲಿದ್ದುಕೊಂಡು ಜೀವನ ಸಾಗಿಸುವುದಾಗಿ ಕನ್ನಡಪ್ರಭದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.ಮೇಳದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಸೇರಿದಂತೆ ಇನ್ನಿತರ ಗಣ್ಯರೊಂದಿಗೆ ವೇದಿಕೆಯಲ್ಲಿ ರಾರಾಜಿಸಿದ ಕಾಂಗ್ರೆಸ್ ಮುಖಂಡರು ಸಮಾರೋಪ ಸಮಾರಂಭದಲ್ಲಿ ಕಾಣಿಸಿಕೊಳ್ಳಲಿಲ್ಲ. ಭಾನುವಾರ ಬೆಳಿಗ್ಗೆ ಸಾವಿರಾರು ಸಂಖ್ಯೆಯಲ್ಲಿ ಹಾಜರಿದ್ದು ಸಂಪನ್ಮೂಲ ವ್ಯಕ್ತಿಯಿಂದ ಮಾರ್ಗದರ್ಶನ ಪಡೆದು ಸಂದರ್ಶನದಲ್ಲಿ ಭಾಗವಹಿಸಿದ್ದ ಉದ್ಯೋಗಾಕಾಂಕ್ಷಿಗಳು ಸಹ ಕೆಲಸ ಸಿಗದ ಹಿನ್ನಲೆಯಲ್ಲಿ ಖಾಲಿ ಆಗಿದ್ದರು. ಹಾಗಾಗಿ ಸಮಾರೋಪ ಸಮಾರಂಭದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಕಾಣಿಸಿಕೊಂಡರು.
ಒಟ್ಟಾರೆ ಎರಡು ದಿನಗಳ ಉದ್ಯೋಗ ಮೇಳ ಶಾಂತಿಯುತವಾಗಿ ಯಾವುದೇ ಗದ್ದಲ, ಗೊಂದಲ ಇಲ್ಲದೆ ಮುಕ್ತಾಯಗೊಂಡಿರುವುದು ಜಿಲ್ಲಾ ಆಡಳಿತಕ್ಕೆ ಸಮಾಧಾನ ತಂದಿದೆಯಾದರೂ ಉನ್ನತ ಶಿಕ್ಷಣ ಪಡೆದು ಕೆಲಸಕ್ಕಾಗಿ ಅಲೆದಾಡುತ್ತಿರುವವರ ಪಾಲಿಗೆ ಮಾತ್ರ ನಿರಾಸೆಯನ್ನುಂಟು ಮಾಡಿದೆ.

ಯುವಕರಲ್ಲಿ ಜಾಗೃತಿ ಮೂಡಿಸದ ಮೇಳ
ಕನ್ನಡಪ್ರಭ ವಾರ್ತೆ, ಕೋಲಾರ, ನ.24
ನಗರದಲ್ಲಿ ನಡೆದ ಎರಡು ದಿನಗಳ ಉದ್ಯೋಗ ಮೇಳದಿಂದ ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ಕೆಲಸ ಸಿಗದಿದ್ದರೂ ಮುಂದಿನ ದಿನಗಳಲ್ಲಿ ಯಾವ ರೀತಿ ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಬೇಕೆಂಬ ಬಗ್ಗೆ ಅರಿವು ಮೂಡಿದೆ ಎಂದು ಉದ್ಯೋಗ ಮೇಳದ ಹೊಣೆ ಹೊತ್ತಿದ್ದ ಜಿಲ್ಲಾಧಿಕಾರಿ ಡಿ.ಕೆ. ರವಿ ಅಭಿಪ್ರಾಯಿಸಿದರು.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ ಉದ್ಯೋಗ ಮೇಳದ ಮುಕ್ತಾಯ ಸಮಾರಂಭದಲ್ಲಿ ಅವರು ವಿವಿಧ ಕಂಪನಿಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಣೆ ಮಾಡಿ ಮಾತನಾಡಿದರು. ಕೈಗಾರಿಕೋದ್ಯಮಿಗಳು, ಉದ್ಯೋಗಾಕಾಂಕ್ಷಿಗಳು, ಅಧಿಕಾರಿ ವರ್ಗದ ಸಹಕಾರದಿಂದ ಉದ್ಯೋಗ ಮೇಳ ಯಶಸ್ವಿಯಾಗಿ ನಡೆದಿದೆ ಎಂದು ಕೃತಜ್ಞತೆ ಸಮರ್ಪಿಸಿದರು.
ಉದ್ಯೋಗ ಮೇಳಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ಕೇಂದ್ರ ಸರ್ಕಾರದ ಎಸ್.ಎಸ್.ಎಂ.ಇ ನೀಡಿದೆ. ಸ್ಟಾಲ್‌ಗಳ ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಗಳಿಗೆ ಅನುಕೂಲ ಮಾಡಿಕೊಟ್ಟಿರುವ ಈ ಸಂಸ್ಥೆಗೆ ನಾವು ಇನ್ನು ಹಣ ಕೊಟ್ಟಿಲ್ಲ. ಆದರೂ ಉದ್ಯೋಗ ಮೇಳ ಅಚ್ಚುಕಟ್ಟಾಗಿ ನಡೆಯುವುದಕ್ಕೆ ಸಂಪೂರ್ಣ ಸಹಕಾರ ನೀಡಲಾಗದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಥಳೀಯರಿಗೆ ಉದ್ಯೋಗ ಕೊಡಿ: ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಇರುವುದರಿಂದ ರೈತರ ಮಕ್ಕಳು ವ್ಯವಸಾಯ ಬಿಟ್ಟು ವಲಸೆ ಹೋಗುತ್ತಿದ್ದಾರೆ. ಜಿಲ್ಲೆಯ ಕೈಗಾರಿಕೋದ್ಯಮಿಗಳು ಹಾಗೂ ಬೇರೆ ಕಡೆಯಿಂದ ಕಂಪನಿಗಳನ್ನು ಆರಂಭಿಸಿರುವವರು ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸಹಕಾರ ನೀಡಿ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಮನವಿ ಮಾಡಿದರು.
ಜಿಲ್ಲೆಯಲ್ಲಿ ಸ್ಥಾಪನೆ ಆಗಿರುವ ಹೊಸ ಕೈಗಾರಿಕೆಗಳನ್ನು ಉಳಿಸಿ ಬೆಳೆಸಿ ಅಭಿವೃದ್ಧಿಪಡಿಸುವುದು ಜಿಲ್ಲೆಯ ಜನತೆಯ ಕರ್ತವ್ಯವಾಗಿದೆ. ಸಮಸ್ಯೆಗಳು ಇದ್ದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ನಿವಾರಣೆ ಮಾಡಿಕೊಳ್ಳಿ ಎಂದು ಕೈಗಾರಿಕೋದ್ಯಮಿಗಳು ಮತ್ತು ಸಂಘಟನೆಗಳ ಮುಖಂಡರಿಗೆ ಸಲಹೆ ನೀಡಿದರು.
ಉದ್ಯೋಗ ಮೇಳದಲ್ಲಿ ಕೆಲಸ ಪಡೆಯಲಾಗದವರು ನಿರಾಸೆ ಹೊಂದಬೇಕಾಗಿಲ್ಲ, ಕೌಶಲ್ಯ ಹೆಚ್ಚಿಸಿಕೊಂಡು ಉತ್ತಮ ಅವಕಾಶ ಪಡೆಯರಿ, ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಹಾಗೂ ಜಿಲ್ಲಾ ಆಡಳಿತ ಇನ್ನಷ್ಟು ಉದ್ಯೋಗ ಮೇಳಗಳನ್ನು ನಡೆಸುವ ಮೂಲಕ ಜಿಲ್ಲೆಯ ಬಡ ನಿರುದ್ಯೋಗಿಗಳಿಗೆ ಕೆಲಸ ದೊರಕಿಸಿಕೊಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಎಂಎಸ್‌ಎಂಇ-ಡಿಐನ ಕರ್ನಾಟಕ ರಾಜ್ಯದ ನಿರ್ದೇಶಕ ಎಸ್.ಎಂ. ಜಮಖಂಡಿ, ಕೇಂದ್ರದ ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕೆಗಳ ಆಯೋಗದ ನಿರ್ದೇಶಕ ಜಗನ್ನಾಥರಾವ್ ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ಸಂಸ್ಥೆಯ ವಲಯ ಜನರಲಲ್ಮ್ಯಾನೇಜರ್ ರವಿಕುಮಾರ್, ಕೈಗಾರಿಕಾ ಇಲಾಖೆಯ ಅಧಿಕಾರಿ ಎಂ. ಭೈರೇಗೌಡ, ಜಿಪಂ ಉಪ ಕಾರ್ಯದರ್ಶಿ ಬದನೂರು, ಕೋಲಾರ ಉಪವಿಭಾಗಾಧಿಕಾರಿ ಮಂಜುನಾಥ್, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ರವಿಚಂದ್ರ ಇದ್ದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ವೆಂಕಟೇಶ್ ಸ್ವಾಗತಿಸಿ, ಜಿಲ್ಲಾ ಉದ್ಯೋಗ ಮತ್ತು ತರಬೇತಿ ಇಲಾಖೆಯ ಅಧಿಕಾರಿ ಶ್ರೀನಿವಾಸ್ ವಂದಿಸಿ, ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಕೇಂದ್ರದ ಆಧೀಕ್ಷಕ ಶಿವಕುಮಾರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.