ಸ್ಥಳೀಯ ಸಂಸ್ಥೆಗಳು ಮೇಲ್ದರ್ಜೆಗೆ; ಸಚಿವ ಸೊರಕೆ
ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಆಯಾ ಪ್ರದೇಶದ ಜನ ಸಂಖ್ಯೆ ಪ್ರಮಾಣವನ್ನಾಧಾರಿಸಿ ಹಾಲಿ ಇರುವ ಆಡಳಿತ ವ್ಯವಸ್ಥೆಯನ್ನು ಅರ್ಹತೆಗೆ ತಕ್ಕಂತೆ ಹೊಸದಾಗಿ ಪಪಂ, ಪುರಸಭೆ, ನಗರಸಭೆಯನ್ನಾಗಿ ಪರಿವರ್ತಿಸಲು ಮುಂದಾಗಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ತಿಳಿಸಿದರು.
ನಗರದ ಭುವನೇಶ್ವರಿ ವೃತ್ತದಲ್ಲಿ ಆಯೋಜಿಸಿದ್ದ 2013-14ನೇ ಸಾಲಿನ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ನಗರೋತ್ಥಾನ ಹಂತ-2 ಹಾಗೂ ನೀರು ಸರಬರಾಜು ವಿತರಣ ಕೊಳವೆ ಮಾರ್ಗ (ಜಕ್ಕಲಮಡಗು) ಶಂಕುಸ್ಥಾಪನಾ ಸಮಾರಂಭ ಮತ್ತು ಚೆನ್ನಯ್ಯ ಪಾರ್ಕ್ ನವೀಕರಣ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಅರ್ಹವಾಗಿರುವ ಹೋಬಳಿಗಳನ್ನು ಪಪಂನ್ನಾಗಿ, ಪಪಂನ್ನು ಪುರಸಭೆ, ಪುರಸಭೆಯನ್ನು ನಗರಸಭೆಯನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ತುಮಕೂರು ಸೇರಿದಂತೆ ಕೆಲ ಜಿಲ್ಲೆಗಳನ್ನು ಮಹಾನಗರ ಪಾಲಿಕೆಯನ್ನಾಗಿ ಬದಲಾಯಿಸುವ ಕಾರ್ಯವೂ ಅಂತಿಮ ಹಂತದಲ್ಲಿದೆ ಎಂದರು. ಪ್ರಸ್ತುತ ನಗರ ವಾಸಿಗಳ ಪ್ರಮಾಣ ಸುಮಾರು ಶೇ.38 ರಷ್ಟಿದ್ದು ಮುಂಬರುವ ದಿನಗಳಲ್ಲಿ ಶೇ.50 ಕ್ಕೆ ಏರಲಿದೆ. ಈ ಹಿನ್ನೆಲೆಯಲ್ಲಿ ಈಗಲೇ ದೂರದೃಷ್ಟಿ ಯೋಜನೆಗಳನ್ನು ಕೈಗೊಂಡು ನಗರಗಳಿಗೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ದೊರಕಿಸಿಕೊಟ್ಟು ಜನರಿಗೆ ಅನುಕೂಲ ಮಾಡಿಕೊಡಬೇಕಾಗಿದೆ ಎಂದರು.
ಇಲಾಖೆಯಲ್ಲಿ ಹೊರ ಗುತ್ತಿಗೆಯ ನೌಕರರನ್ನು ಕೆಲಸಕ್ಕಿಟ್ಟುಕೊಳ್ಳುವುದರ ಬದಲಿಗೆ ನೇರವಾಗಿ ಕಾರ್ಮಿಕರನ್ನು ಆಯ್ಕೆ ಮಾಡಿಕೊಂಡು ಕೆಲಸ ಕೊಡಬೇಕಾಗಿದೆ.ಇದರಿಂದ ಹಲವರು(ಗುತ್ತಿಗೆದಾರರು)ಹೊರ ಗುತ್ತಿಗೆಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ 12 ಸಾವಿರ ವೇತನ ನೀಡುತ್ತಿದ್ದೇವೆ ಎಂದೇಳಿ, ಕೇವಲ 4 ಸಾವಿರ ರು.ಗಳಿಗೆ ದುಡಿಸಿಕೊಳ್ಳುವುದು ತಪ್ಪುತ್ತದೆ.ಇದನ್ನರಿತುಕೊಂಡು ಇಲಾಖೆಯಲ್ಲಿ ಹೆಚ್ಚಿಗೆ ಹೊಸ ನೇರ ನೇಮಕಾತಿಗೆ ಒತ್ತು ನೀಡಲಾಗಿದೆ ಎಂದರು.
ಪಪಂ, ಪುರಸಭೆ, ನಗರಸಭೆ ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಇದುವರೆಗೂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳು ಖಾಲಿ ಇವೆ. ಈ ಸ್ಥಾನಗಳಿಗೆ ಹೊರಡಿಸಿರುವ ಮೀಸಲಾತಿ ಪಟ್ಟಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದಿರುವುದರಿಂದ ಈ ಸಮಸ್ಯೆ ಕಂಡು ಬಂದಿದ್ದು ಇನ್ನೇನು ನ್ಯಾಯಾಲಯ ಪ್ರಕರಣವನ್ನು ಇತ್ಯರ್ಥಗೊಳಿಸಲಿದೆ. ಆ ನಂತರ ತಕ್ಷಣ ಪ್ರಕ್ರಿಯೆ ಶುರುವಾಗಲಿದೆ ಎಂದರು.
ನಗರೋತ್ಥಾನ ಹಂತ 2 ಯೋಜನೆಯಡಿ ಚಿಕ್ಕಬಳ್ಳಾಪುರ ನಗರಕ್ಕೆ 30 ಕೋಟಿ ಅನುದಾನ ಮಂಜೂರಾಗಿದ್ದು, ಇದರಲ್ಲಿ ರಸ್ತೆ ಮತ್ತು ರಸ್ತೆ ಬದಿ ಚರಂಡಿಗಳ 18 ಕಾಮಗಾರಿಗಳನ್ನು 24 ಕೋಟಿಗಳಲ್ಲಿ ಹಾಗೂ ಮಳೆ ನೀರು ಸರಾಗವಾಗಿಹರಿಯಲು ಚರಂಡಿಗಳ 6 ಕಾಮಗಾರಿಗಳು ಸೇರಿದಂತೆ 6 ಕೋಟಿ ರು.ಗಳಲ್ಲಿ ಜಿಲ್ಲಾ ಮೇಲ್ವಿಚಾರಣಾ ಸಮಿತಿ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಇದಕ್ಕೆ ಸರ್ಕಾರದಿಂದ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ ಎಂದರು.
ಜಿಲ್ಲೆಗೆ ಕುಡಿಯುವ ನೀರನ್ನು ಒದಗಿಸಲು ಎತ್ತಿನ ಹೊಳೆಯ ಯೋಜನೆಯ ಮೊದಲನೇ ಹಂತದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದ ಅವರು,ಚಿಕ್ಕಬಳ್ಳಾಪುರ ನಗರಕ್ಕೆ ಜಕ್ಕಲಮಡಗು ಜಲಾಶಯದಿಂದ ನೀರನ್ನು ಸರಬರಾಜು ಮಾಡಲು 11 ಕೋಟಿ 4 ಲಕ್ಷ ರು. ವೆಚ್ಚದಲ್ಲಿ ನೀರು ಸರಬರಾಜು ವಿತರಣಾ ಕೊಳವೆ ಮಾರ್ಗವನ್ನು 104 ಕಿ.ಮೀ.ವರೆಗೂ ಅಳವಡಿಸುತ್ತಿದ್ದು ಇದಕ್ಕೆ 4 ಕೋಟಿ ಹೆಚ್ಚುವರಿ ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದರು.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಖಾತೆ ಸಚಿವ ಡಾ. ವೀರಪ್ಪ ಮೊಯಿಲಿ ಮಾತನಾಡಿ, ಚಿಕ್ಕಬಳ್ಳಾಪುರ ನಗರವನ್ನು ಮಾದರಿ ಉಪ ನಗರವನ್ನಾಗಿ ಅಭಿವೃದ್ಧಿಪಡಿಸಬೇಕಾಗಿದೆ ಎಂದ ಅವರು, ಜಿಲ್ಲಾ ಕೇಂದ್ರದಲ್ಲಿನ ಚೆನ್ನಯ್ಯ ಪಾರ್ಕ್ ಉದ್ಯಾನವನವನ್ನು 11.10 ಲಕ್ಷಗಳಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇದು ನಾಗರಿಕರಿಗೆ ಉತ್ತಮ ವಿಹಾರ ತಾಣವಾಗುತ್ತದೆ. ಈಗಾಗಲೇ ಹೊಸ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು 6.7 ಕೋಟಿ ರು.ಗಳಲ್ಲಿ ನಿರ್ಮಾಣವಾಗಲಿದೆ. ಗೇಲ್ ಸಂಸ್ಥೆಯು ಇದಕ್ಕೆ ಒಂದೂವರೆ ಕೋಟಿ ಧನ ಸಹಾಯ ಮಾಡಲಿದೆ. ಇನ್ನೂ ರಂಗಮಂದಿರದ ನಿರ್ಮಾಣಕ್ಕೆ 3 ಕೋಟಿ ವೆಚ್ಚವಾಗಲಿದ್ದು ತೈಲ ಕಂಪನಿಯವರು 2 ಕೊಟಿ ನೀಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಕೆ. ಸುಧಾಕರ್, ಮಾಜಿ ಶಾಸಕರಾದ ಅನಸೂಯಮ್ಮ, ಶಿವಾನಂದ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಅಭಿಯಂತರ ಪಿ. ತಿಮ್ಮೇಗೌಡ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಆರ್. ನಾಗರಾಜ ಶೆಟ್ಟಿ, ನಗರಸಭೆ ಪೌರಾಯುಕ್ತ ಬಿ.ಕೆ. ರುದ್ರಮುನಿ, ನಗರಸಭಾ ಸದಸ್ಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

