2050 ಸಮಗ್ರ ದೂರದೃಷ್ಟಿ ಯೋಜನೆ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವನ್ನು ದೊಡ್ಡ ನಗರಗಳಿಗೆ ಮಾದರಿಯಾಗಿ ಅಭಿವೃದ್ಧಿ ಸಾಧಿಸಿದ ಮಹಾನಗರವನ್ನಾಗಿಸಲು 2050 ಸಮಗ್ರ ದೂರದೃಷ್ಟಿ ಯೋಜನೆ ರೂಪಿಸಲಾಗುತ್ತಿದೆ ಎಂದು ಶಾಸಕ ಕೆ. ಸುಧಾಕರ್ ತಿಳಿಸಿದರು.
ನಗರದ ಭುವನೇಶ್ವರಿ ವೃತ್ತದಲ್ಲಿ ಭಾನುವಾರ ನಗರಸಭೆ ಹಾಗೂ ಕ.ನ.ನೀ.ಸ. ಮತ್ತು ಒಳ ಚರಂಡಿ ಮಂಡಳಿ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 2013-14ನೇ ಸಾಲಿನ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ನರೋತ್ಥಾನ ಹಂತ-2 ಹಾಗೂ ನೀರು ಸರಬರಾಜು ವಿತರಣ ಕೊಳವೆ ಮಾರ್ಗ (ಜಕ್ಕಲಮಡಗು) ಶಂಕುಸ್ಥಾಪನಾ ಸಮಾರಂಭ ಮತ್ತು ಚೆನ್ನಯ್ಯ ಪಾರ್ಕ್ ನವೀಕರಣ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲ್ಲಿನ ಆಡಳಿತ ಚುಕ್ಕಾಣಿಯನ್ನು ಹಿಡಿದ ಸಿ.ವಿ. ವೆಂಕಟರಾಯಪ್ಪ, ಜಿ.ಎನ್. ವೆಂಕಟರಾಯಲು ಸೇರಿದಂತೆ ಅನೇಕರು ನೀಡಿದ ಕೊಡುಗೆಯ ಫಲವಾಗಿ ಚಿಕ್ಕಬಳ್ಳಾಪುರ ಅಭಿವೃದ್ಧಿ ಸಾಧಿಸಿದ್ದು ಇದನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಅಭಿವೃದ್ಧಿಯ ಭರವಸೆ: ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಚಿಕ್ಕಬಳ್ಳಾಪುರದ ಸಮಗ್ರ ಅಭಿವೃದ್ಧಿಗಾಗಿ ಅಗತ್ಯವಿರುವ ನೆರವನ್ನು ನೀಡುವ ಭರವಸೆಯನ್ನು ಕೊಟ್ಟಿದ್ದು ಮೊದಲ ಭೇಟಿ ಸಂದರ್ಭದಲ್ಲಿ 25 ಕೋಟಿ ರು.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದರು, ನಂತರ ಸುಮಾರು 450 ಕೋಟಿ ರು. ವೆಚ್ಚದ ಚಿಕ್ಕಬಳ್ಳಾಪುರ-ಕೋಲಾರ ಮಾರ್ಗದ ರೈಲು ಸಂಚಾರಕ್ಕೆ ಚಾಲನೆ ನೀಡಿದರಲ್ಲದೇ ಚಿಕ್ಕಬಳ್ಳಾಪುರ ನಗರವನ್ನು ನೋಯಿಡಾ ಮಾದರಿಯಲ್ಲಿ ಉಪ ನಗರವನ್ನಾಗಿ ಅಭಿವೃದ್ಧಿಪಡಿಸಲು ಮುಂದಾಗುವುದಾಗಿ ತಿಳಿಸಿದ್ದಾರೆ. ಇದರಿಂದ ಚಿಕ್ಕಬಳ್ಳಾಪುರಕ್ಕೆ ಶುಕ್ರದೆಸೆ ಬರುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಲಿಖಿತ ದೂರು: ಚಿಕ್ಕಬಳ್ಳಾಪುರ ಅಭಿವೃದ್ಧಿಯ ಮಂತ್ರವನ್ನು ಜಪಿಸಿದ ಶಾಸಕರು, ನಗರೋತ್ಥಾನ ಹಂತ 1 ರಲ್ಲಿ ಕಳಪೆ ಕಾಮಗಾರಿ ನಡೆದಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಕೋಟ್ಯಂತರ ರು. ಹಣವನ್ನು ಬಿಡುಗಡೆ ಮಾಡುತ್ತಿರುವುದನ್ನು ಸದುಪಯೋಗಪಡಿಸಿಕೊಳ್ಳಬೇಕು. ಆದರೆ, ಕೆಲಸ ಕಳಪೆ ಗುಣಮಟ್ಟದಿಂದ ನಡೆದಾಗ ಅನುದಾನ ಕೊಟ್ಟು ಏನು ಪ್ರಯೋಜನ ಎಂದು ಪ್ರಶ್ನಿಸಿದ ಅವರು, ನಗರೋತ್ಥಾನ ಹಂತ 1 ಕಾಮಗಾರಿ ಪೂರ್ಣವಾಗಿ ಕಳಪೆ ಗುಣಮಟ್ಟದಿಂದ ನಡೆದಿದ್ದು ಈ ಬಗ್ಗೆ ಪೌರಾಡಳಿತ ನಿರ್ದೇಶನಾಲಯದ ಪ್ರಧಾನ ಕಾರ್ಯದರ್ಶಿಗಳಿಗೆ ಲಿಖಿತ ದೂರನ್ನು ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದೇನೆ ಎಂದರು.
ಚಿಕ್ಕಬಳ್ಳಾಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ, ಹೆಚ್ಚಿಗೆ ಹದಗೆಟ್ಟ ರಸ್ತೆಗಳು ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಹೆಚ್ಚಿಗೆ ಕಾಡುತ್ತಿವೆ. ಇದನ್ನು ಬಗೆಹರಿಸಲು ಮೊದಲ ಆದ್ಯತೆ ನೀಡಬೇಕೆಂದ ಅವರು, ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಕಳೆದ 15 ವರ್ಷಗಳಿಂದಲೂ ಠಿಕಾಣಿ ಹೂಡಿ ತಮ್ಮ ಅಸಮರ್ಪಕ ಕಾರ್ಯ ವೈಖರಿಯಿಂದ ಅಭಿವೃದ್ಧಿಯಲ್ಲಿ ಹಿಂದುಳಿಯಲು ಕಾರಣವಾಗಿರುವ ನಗರಸಭೆಯಲ್ಲಿನ ಸಿಬ್ಬಂದಿ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

