ಕಾಟಾಚಾರಕ್ಕೆ ನಡೆದ ಸಾಂಸ್ಕೃತಿಕ ಸೌರಭ
ಕ.ಪ್ರ.ವಾರ್ತೆ ಕೋಲಾರ ನ.24
ಒಂದು ಕಡೆ ಉದ್ಯೋಗ ಮೇಳ, ಜೊತೆಗೆ ಭಾನುವಾರವಾಗಿದ್ದರಿಂದ ಮನೆ, ಮಠ, ಊರು-ಟೂರುಗಳಲ್ಲಿ ಲೀನರಾಗಿದ್ದ ಜನ, ಕ್ರಿಕೆಟ್ ನೋಡಲು ಟಿವಿಗಳ ಮುಂದೆ ಠಿಕಾಣಿ, ಇದೆಲ್ಲದಕ್ಕಿಂತ ಪ್ರಚಾರದ ಕೊರೆತೆಯಿಂದಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿ ಸೌಲಭ ಕಾರ್ಯಕ್ರಮ ಪ್ರೇಕ್ಷಕರಿಲ್ಲದೆ ಬಣಗುಟ್ಟಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಟಿ. ಚನ್ನಯ್ಯರಂಗ ಮಂದಿರಲ್ಲಿ ಭಾನುವಾರ ಸಾಂಸ್ಕೃತಿ ಸೌರಭ ಯೋಜನೆಯಡಿ ರಂಗಗೀತೆ ಹಾಗೂ ನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಪ್ರಯೋಗಶೀಲರ ಟ್ರಸ್ಟ್ನಿಂದ ತುಮಕೂರು ಶಿವಕುಮಾರ್ ರಚಿತ ಹಾಗೂ ಯು. ಗೋವಿಂದಗೌಡರು ನಿರ್ದೇಶನದ ಪದರಗಳು ನಾಟಕವನ್ನು ಏರ್ಪಡಿಸಲಾಗಿತ್ತು.
ಬೆಳಿಗ್ಗೆ 10.30ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜೆ.ಜಿ. ನಾಗರಾಜ್ ಅವರು ರಂಗ ಮಂದಿರಕ್ಕೆ ಪ್ರವೇಶಿಸಿದಾಗ ಕಾರ್ಯಕ್ರಮದ ಸಂಘಟಕರಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್. ವೆಂಕಟಾಚಲಪತಿ, ಶಿಕ್ಷಕ ನಾರಾಯಣಸ್ವಾಮಿ, ಪದರಗಳು ನಾಟಕ ತಂಡದ ಕಲಾವಿದರು ಮಾತ್ರ ಕಾಣಿಸಿದ್ದರಿಂದ ತಕ್ಷಣ ಒಂದಿಷ್ಟು ಪತ್ರಕರ್ತರಿಗೆ, ಕಸಾಪ ಪದಾಧಿಕಾರಿಗಳಿಗೆ ಮೊಬೈಲ್ನಲ್ಲಿ ಮೆಸೇಜ್ ಮಾಡಿದರಾದರೂ ಅನೇಕರು ಪೂರ್ವನಿಯೋಜಿತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ರಂಗ ಮಂದಿರ ಭರ್ತಿ ಆಗಲು ಸಾಧ್ಯವಾಗಲೇ ಇಲ್ಲ.
ಸಾಮಾನ್ಯವಾಗಿ ಕೋಲಾರದಲ್ಲಿ ನಡೆಯುವ ಅನೇಕ ಕಾರ್ಯಕ್ರಮಗಳಿಗೆ ಪ್ರೇಕ್ಷಕರ ಕೊರತೆ ಕಂಡು ಬಂದಲ್ಲಿ ಸಮೀಪದ ಶಾಲಾ-ಕಾಲೇಜಿನ ವಿದ್ಯಾರ್ಥಿಗಳನ್ನು ಬಲವಂತವಾಗಿ ಕರೆತಂದು ಕಾರ್ಯಕ್ರಮಕ್ಕೆ ಕಳೆ ತುಂಬಲಾಗುತ್ತದೆಯಾದರೂ ಭಾನುವಾರವಾದ್ದರಿಂದ ಸಂಘಟಕರಿಗೆ ವಿದ್ಯಾರ್ಥಿಗಳನ್ನು ಕರೆತರಲು ಆಗಲಿಲ್ಲ.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅತಿಥಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರ ಸೇರಿದಂತೆ ಕೇವಲ 52 ಮಂದಿ ರಂಗಮಂದಿರದ ಆಸನಗಳಲ್ಲಿ ಕಾಣಿಸಿಕೊಂಡರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜೆ.ಜಿ. ನಾಗರಾಜ್ ಅವರು ಪ್ರೇಕ್ಷಕರ ಕೊರತೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಪ್ರಚಾರದ ಕೊರತೆ ಇರುವುದಾಗಿ ಅಕ್ಷೇಪಿಸಿದರು. ಉಗ್ಯೋಗ ಮೇಳ, ಕ್ರಿಕೆಟ್ ಪಂದ್ಯಾ, ಭಾನುವಾರದ ರಜೆ ಮುಂತಾದ ಕಾರಣಗಳಿಂದ ಕಾರ್ಯಕ್ರಮಕ್ಕೆ ಜನ ಬಂದಿಲ್ಲ. ನಾಟಕ ಪ್ರದರ್ಶನವನ್ನು ನಿಗದಿ ಮಾಡುವಾಗ ಯೋಚಿಸಬೇಕಾಗಿತ್ತು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಆಗಿ ತಿಳಿಸಿದರು.
ಮತ್ತೊಬ್ಬ ಅತಿಥಿಯಾಗಿದ್ದ ದಾನಮ್ಮ ಚನ್ನಬಸಪ್ಪ ಮಹಿಳಾ ಕಾಲೇಜಿನ ಅಧ್ಯಕ್ಷೆ ಉಷಾ ಗಂಗಾಧರ್, ಪ್ರೇಕ್ಷಕರಿಲ್ಲದೆ ಈ ರೀತಿಯ ಕಾರ್ಯಕ್ರಮ ನಡೆಸುವುದರಿಂದ ಕಲಾವಿದರಿಗೆ ನಿರಾಸೆ ಆಗುತ್ತದೆ, ಕೋಲಾರದ ಬಗ್ಗೆ ಕಹಿ ಅನುಭವವಾಗುವುದರಿಂದ ಮುಂದಿನ ದಿನಗಳಲ್ಲಿ ಎಚ್ಚರವಹಿಸಿ ಕಾರ್ಯಕ್ರಮ ಆಯೋಜಿಸಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮುಳಬಾಗಿಲು ಶಾರದ ಕಾಲೇಜಿನ ಕಾರ್ಯದರ್ಶಿ ಟಿ.ಎಸ್. ರಮೇಶ್, ಮನುಷ್ಯರ ಜೀವನ ಈಗ ಯಂತ್ರಿಕವಾಗುತ್ತಿದೆ. ಟಿವಿಗಳು ಮನುಷ್ಯನ ಕ್ರಿಯಾಶೀಲತೆ ಹಾಗೂ ಸಮಾಜದಿಂದ ದೂರ ಉಳಿಯುವಂತೆ ಮಾಡುತ್ತಿದೆ, ನಾಟಕ ಪ್ರದರ್ಶನಗಳಿಗೆ ಹಳ್ಳಿಗಳಲ್ಲಿ ಸಿಗುತ್ತಿರುವಷ್ಟು ಪ್ರೋತ್ಸಾಹ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಸಿಗುತ್ತಿಲ್ಲವೆಂದು ವಿಷಾಧಿಸಿದರು.
ಪ್ರೇಕ್ಷಕರ ಕೊರತೆಯ ನಡುವೆಯೂ ಪ್ರಯೋಗಶೀಲರ ಟ್ರಸ್ಟ್ ಕಲಾವಿದರು ಪದರಗಳು ನಾಟಕವನ್ನು ಪ್ರದರ್ಶಿಸಿದರು. ನಾಟಕದ ತಿರುಳು, ಪಾತ್ರದಾರಿಗಳ ಅಭಿಯನಕ್ಕಿಂತ ರಂಗಸಜ್ಜಿಕೆ ಆಕರ್ಷಣಿಯವಾಗಿತ್ತು. ಹಾಜರಿದ್ದ 52 ಮಂದಿ ಪ್ರೇಕ್ಷಕರಲ್ಲಿ ಬಹುತೇಕರು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು ಇದ್ದುದ್ದರಿಂದ ನಾಟಕದ ತಿರುಳು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಆದರೆ, ನಟರಿಬ್ಬರ ದ್ವಂದ್ವಾರ್ಥ ಸಂಭಾಷಣೆಯಿಂದ ಕೆಲ ಹುಡುಗರು ಶಿಳ್ಳೆ ಹಾಕುವ ಮೂಲಕ ಖುಷಿಪಟ್ಟಿದ್ದು ಬಿಟ್ಟರೆ ಹೊಸದೇನನ್ನು ಜೀರ್ಣಿಸಿಕೊಳ್ಳಲು ಅವಕಾಶವಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

