ಕೋಲಾರ

ಕೆನರಾಬ್ಯಾಂಕ್‌ನಿಂದ ಕೊಡುಗೆಗಳ ಸುರಿಮಳೆ

Published On :

ಚಿಕ್ಕಬಳ್ಳಾಪುರ: ನಗರದ ಹೊರ ವಲಯದಲ್ಲಿ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಇರುವ ಕೆನರಾಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅನೇಕರಿಗೆ ಬೃಹತ್ ಸಾಲ ಮತ್ತು ಅಪಾರ ಆರ್ಥಿಕ ನೆರವು ನೀಡುವುದರ ಮೂಲಕ ಕೆನರಾ ಬ್ಯಾಂಕ್ ಮೆಚ್ಚುಗೆಗೆ ಪಾತ್ರವಾಯಿತು.
ಸುಮಾರು 3.5 ಕೋಟಿ ರು.ಗಳ ವೆಚ್ಚದಲ್ಲಿ 200 ಪ್ರಯಾಣಿಕರಿಗೆ ಆಟೋ ವಾಹನ ಖರೀದಿ ಸಾಲ, ಐಟಿಐ, ಡಿಪ್ಲೊಮೋ, ಪಾಲಿಟೆಕ್ನಿಕ್ ಮೆಡಿಕಲ್ ಎಂಜಿನಿಯರ್ ಕೋರ್ಸ್‌ಗಳಲ್ಲಿ ಓದುತ್ತಿರುವ 11,108 ಬಡ ವಿದ್ಯಾರ್ಥಿಗಳಿಗೆ 75 ಕೋಟಿ ಸಾಲ, ಅಲ್ಲದೇ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ 500 ಮಹಿಳಾ ಸ್ವಸಹಾಯ ಗುಂಪುಗಳಿಗೆ 10 ಕೋಟಿ ರು. ಧನ ಸಹಾಯ, ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸುಮಾರು 10 ಲಕ್ಷ ರು. ವೆಚ್ಚದ ಡಯಾಲಿಸಿಸ್ ಯಂತ್ರ ಹಾಗೂ ಔಷಧಿಗಳ ವಿತರಣೆ, ಅಲ್ಲದೇ ಅಂಗವಿಕಲರ ಆತ್ಮ ವಿಶ್ವಾಸ ಹೆಚ್ಚಿಸಲು ದ್ವಿಚಕ್ರ ವಾಹನಗಳನ್ನು ಕೊಡುವ ಮೂಲಕ ಕೆನರಾ ಬ್ಯಾಂಕ್ ಬಡ ಮತ್ತು ಮಧ್ಯಮ ವರ್ಗದ ಜನರಿಗಾಗಿ ಹಣದ ಹೊಳೆಯನ್ನೇ ಹರಿಸಿತು.
ಕೊಡುಗೆಗಳ ಸುರಿಮಳೆ: ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿಗಳಿಗೆ, ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಕೌಶಲ್ಯ ತರಬೇತಿಯನ್ನು ನೀಡಿ ಸ್ವಾವಲಂಬಿ ಜೀವನ ನಡೆಸುವಂತೆ ಮಾಡುತ್ತ ಮೆಚ್ಚುಗೆಯನ್ನು ಗಳಿಸಿದ ಕೆನರಾಬ್ಯಾಂಕ್ ಕಾರ್ಯಕ್ರಮದಲ್ಲಿ ಮತ್ತಿತರೆ ಕಾರ್ಯಕ್ರಮಗಳನ್ನು ಘೋಷಣೆ ಮಾಡಿತು. 10 ಸಾವಿರ ಫಲಾನುಭವಿಗಳಿಗೆ ಓಡಿ ಸೌಲಭ್ಯವನ್ನು ಒಳಗೊಂಡಂತೆ 5 ಕೋಟಿ ರು.ಗಳ ಸಾಲ ವಿತರಣೆ, ರಾಷ್ಟ್ರೀಯ ಪಿಂಚಣಿ ಯೋಜನೆಗೆ 5 ಸಾವಿರ ಫಲಾನುಭವಿಗಳ ಹೊಸ ಸೇರ್ಪಡೆ, 5 ಸಾವಿರ ಫಲಾನುಭವಿಗಳಿಗೆ ಮೈಕ್ರೋ ವಿಮಾ ಯೋಜನೆ, ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾಮವನ್ನು ಅಭಿವೃದ್ಧಿಗಾಗಿ ದತ್ತು ಸ್ವೀಕಾರ, ದೇವನಹಳ್ಳಿಯಲ್ಲಿ ಇ-ಅಂಗಳದ ಶಾಖೆ ಮತ್ತು ನೆಲಮಂಗಲ ಆಲೂಕಿನ ದೊಡ್ಡಬೆಲೆ ಗ್ರಾಮದಲ್ಲಿ ಕೆನರಾ ಬ್ಯಾಂಕಿನ ನೂತನ ಶಾಖೆಯನ್ನು ಪ್ರಾರಂಭ ಮಾಡಿದರ ಜತೆಗೆ ಅನೇಕ ಕೊಡುಗೆಗಳನ್ನು ಘೋಷಣೆ ಮಾಡಲಾಯಿತು.
ಮುಂಚೂಣಿಯಲ್ಲಿ ಕೆನರಾ ಬ್ಯಾಂಕ್: ಪ್ರಗತಿಪರ ಕೆಲಸಗಳಿಗಾಗಿ ಸದಾ ಮುಂಚೂಣಿಯಲ್ಲಿರುವ ದೇಶದ ಬ್ಯಾಂಕುಗಳಲ್ಲಿ ಕೆನರಾ ಬ್ಯಾಂಕ್ ಮೊದಲ ಸ್ಥಾನದಲ್ಲಿರುತ್ತದೆ ಎಂದು ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಚೆಕ್ ಮತ್ತು ಸಲಕರಣೆಗಳನ್ನು ವಿತರಿಸಿ ಮಾತನಾಡಿದ ಅವರು, ಕೆನರಾ ಬ್ಯಾಂಕಿನ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈರವರು ಹಾಕಿಕೊಟ್ಟ ಭದ್ರ ಬುನಾದಿಯಿಂದ ಕೆನರಾ ಬ್ಯಾಂಕ್ ವ್ಯಾಪಕವಾಗಿ ಬೆಳೆದು ಕೃಷಿ, ಶಿಕ್ಷಣ, ಔದ್ಯೋಗಿಕ, ಆರೋಗ್ಯ ಸೇರಿದಂತೆ ಅನೇಕ ಕ್ಷೇತ್ರಗಳ ಪ್ರಗತಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಬ್ಯಾಂಕು ತನ್ನ ವ್ಯಾಪಾರ ವಹಿವಾಟಿನ ಪ್ರಗತಿಯ ಜತೆಗೆ ಜನರ ಕಲ್ಯಾಣ ಕಾರ್ಯಕ್ರಮಗಳಿಗೂ ಹೆಚ್ಚು ಒತ್ತು ಕೊಟ್ಟಿರುವುದು ಶ್ಲಾಘನೀಯ ಎಂದರು.
ಮುಂದಿನ ದಿನಗಳಲ್ಲೂ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವುದರೊಂದಿಗೆ ಕೆನರಾ ಬ್ಯಾಂಕು ಹೆಸರನ್ನು ಪಡೆಯಬೇಕು. ಫಲಾನುಭವಿಗಳು ಆರ್ಥಿಕ ನೆರವನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿಯನ್ನು ಸಾಧಿಸಬೇಕು.ಅಲ್ಲದೇ ಬ್ಯಾಂಕಿನಿಂದ ಪಡೆದ ಸಾಲವನ್ನು ಸಕಾಲಕ್ಕೆ ಪಾವತಿ ಮಾಡಿ,ಬೇರೆಯವರು ಬ್ಯಾಂಕಿನ ನೆರವನ್ನು ಪಡೆಯಲು ಅನುಕೂಲವಾಗುವಂತೆ ಮಾಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಾ.ಕೆ. ಸುಧಾಕರ್, ಕೆನರಾಬ್ಯಾಂಕ್ ಇಂತಹ ಬೃಹತ್ ಸಾಲ ಮೇಳವನ್ನು ಚಿಕ್ಕಬಳ್ಳಾಪುರದಲ್ಲಿ ಕೈಗೊಂಡಿರುವುದು ಏಳ್ಗೆಯ ಸಂಕೇತ. ಕೆನರಾಬ್ಯಾಂಕಿನ ನುಡಿಯಂತೆ, ನಾವು ಬೆಳೆದು ನೀವು ಬೆಳೆದರೆ ದೇಶವು ಬೆಳೆದಂತೆ ಎಂದರು. ಕೆನರಾ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಆರ್.ಕೆ. ದುಬೇ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಧಾನಸಭೆ ಉಪಸಭಾಪತಿ ಎನ್.ಎಚ್. ಶಿವಶಂಕರರೆಡ್ಡಿ, ಜಿಪಂ ಅಧ್ಯಕ್ಷ ಚಿನ್ನಪ್ಪ, ಶಾಸಕ  ವೆಂಕಟರಮಣಯ್ಯ, ತಾಪಂ ಅಧ್ಯಕ್ಷ ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಆರ್. ವಿಶಾಲ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ಕೆನರಾ ಬ್ಯಾಂಕಿನ ಕಾರ್ಯ ನಿರ್ವಾಹಕ ನಿರ್ದೇಶಕ ಎ.ಕೆ. ಗುಪ್ತಾ, ಉಪ ಮಹಾಪ್ರಬಂಧಕ ಸಂಪತ್ತು ಕುಮಾರ್, ಒಎನ್ಜಿಸಿ ಯ ಸಿದ್ಧಾರ್ಥ್, ಲೀಡ್ ಬ್ಯಾಂಕ್ ಮ್ಯಾನೇಜರ್ ಸುಂದರೇಶ್, ಮಾಜಿ ಶಾಸಕ ಎನ್. ಸಂಪಂಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.