ಕೋಲಾರ

ಪ್ರತಿ ಮನೆಯಲ್ಲಿ ಶೌಚಾಲಯವಿರಲಿ

Published On :

ಕೋಲಾರ: ಊರಿಗೊಂದು ದೇವಾಲಯ ಮನೆಗೊಂದು ಶೌಚಾಲಯ ಎಂಬ ನಾಣ್ನುಡಿಯಂತೆ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಿಸಿಕೊಂಡು ಸದೃಢ ಆರೋಗ್ಯ ಸಮಾಜ ಸ್ಥಾಪಿಸಲು ಸಹಕಾರಿಗಳಾಗುವಂತೆ ತಾಪಂ ನಿರ್ಮಲ ಭಾರತ ಅಭಿಯಾನ ಸಂಯೋಜಕ ಜಿ. ಶ್ರೀನಿವಾಸ್ ಸಲಹೆ ಮಾಡಿದರು.
ತಾಲೂಕಿನ ತೊಂಡಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರ್ಮಲ ಭಾರತ ಅಭಿಯಾನ ವತಿಯಿಂದ ಏರ್ಪಡಿಸಿದ್ದ ಸ್ವಚ್ಛತಾ ಉತ್ಸವ ಮಕ್ಕಳ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಸರ್ಕಾ ನೀಡುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರತಿ ಕುಟುಂಬವೂ ಶೌಚಾಲಯ ಹೊಂದಬೇಕು ಎಂದರು. ಜಾಥಾದಲ್ಲಿ ಮುಖ್ಯೋಪಾಧ್ಯಾಯ ಎನ್. ನರೇಂದ್ರಬಾಬು, ಶಿಕ್ಷಕ ಎಚ್.ಇ. ಸೀನಪ್ಪ, ಕೆ. ರಾಮಕೃಷ್ಣಪ್ಪ, ಎಸ್. ರೇಖಾ ಇದ್ದರು.

ಗುರು ಸ್ಮರಣೆ ಕಾರ್ಯಕ್ರಮಕ್ಕೆ ಬನ್ನಿ
ಕೋಲಾರ: ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಆಶ್ರಯದಲ್ಲಿ ಡಿಸೆಂಬರ್ 15 ರಂದು ಚಿಕ್ಕಬಳ್ಳಾಪುರದ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠಕ್ಕೆ ಸೇರಿದ ವಿರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಹನುಮ ಜಯಂತಿ, ನವಗ್ರಹ ನೂತನ ಮಂದಿರದ ಉದ್ಘಾಟನೆ ಹಾಗೂ ಗುರುಪ್ರತಿಮೆ ಪ್ರತಿಷ್ಠಾಪನಾ ಸಮಾರಂಭಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಬೇಕೆಂದು ಚಿಕ್ಕಬಳ್ಳಾಪುರ ಶಾಖೆಯ ಮಂಗಳಾನಂದನಾಥ ಸ್ವಾಮೀಜಿ ಕರೆ ನೀಡಿದ್ದಾರೆ. ನಗರದ ಜಿಲ್ಲಾ ಒಕ್ಕಲಿಗರ ಸಂಘದ ವಿದ್ಯಾರ್ಥಿ ನಿಲಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಆದಿಚುಂಚನಗಿರಿಯ ಹಿರಿಯ ಸ್ವಾಮೀಜಿಗಳ ಆಶಯದಂತೆ ಕಾರ್ಯಕ್ರಮ ನಡೆಸಲಾಗುತ್ತಿದ್ದು ಜಿಲ್ಲೆಯ ಸಮಸ್ತ ಒಕ್ಕಲಿಗ ಸಮುದಾಯ ಸಹಕಾರ ನೀಡಬೇಕೆಂದರು. ಕೆ.ವಿ. ಶಂಕರಪ್ಪ, ನಗರಸಭೆ ಸದಸ್ಯ ಎಸ್.ಆರ್. ಮುರಳಿಗೌಡ, ಡಾ. ಮೌನಿ, ಡಾ. ಪ್ರಭಾಕರರೆಡ್ಡಿ, ನಂಜುಂಡಗೌಡ, ಸದಾಶಿವರೆಡ್ಡಿ, ವಕ್ಕಲೇರಿ ರಾಮು ಮುರಳಿಗೌಡ, ಲೋಕೇಶ್, ನಾರಾಯಣಗೌಡ ಇದ್ದರು.

ಗೋದಾಮಿನಲ್ಲಿ ರು. 3 ಲಕ್ಷ ಕಳವು
ಕೋಲಾರ; ನಗರದ ಕೆನರಾ ಬ್ಯಾಂಕಿನ ಸಮೀಪದ ಚೌಡೇಶ್ವರಿ ಏಜೆನ್ಸಿಸ್‌ಗೆ ಸೇರಿದ ಗೋದಾಮಿನ ಬಾಗಿಲ ಬೀಗ ಮುರಿದು 3 ಲಕ್ಷ ರು.ನಗದು ದೋಚಿ ಪರಾರಿಯಾಗಿದ್ದಾರೆ. ಗೋದಾಮಿನ ಮಾಲೀಕ ವೇಣುಗೋಪಾಲ್ ಎಂಬುವರು ಶನಿವಾರ ರಾತ್ರಿ ಕೆಲಸ ಮುಗಿಸಿ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗಿದ್ದರು. ಭಾನುವಾರ ರಜೆ ಇದ್ದ ಕಾರಣ ಗೋದಾಮಿಗೆ ಬಂದಿರಲಿಲ್ಲ. ಗೋದಾಮಿನ ಅಕ್ಕ-ಪಕ್ಕದ ಜನ ಬಾಗಿಲು ತೆಗೆದಿರುವುದನ್ನು ಗಮನಿಸಿ ಅನುಮಾನದಿಂದ ನೋಡಿದಾಗ ಬೀಗ ಮುರಿದಿರುವುದು ಗೊತ್ತಾಗಿ ತಕ್ಷಣ ಗೋದಾಮು ಮುಂಭಾಗ ಹಾಕಲಾಗಿರುವ ನಾಮಫಲಕದಲ್ಲಿ ಇದ್ದ ಮೊಬೈಲ್‌ಗೆ ಕರೆ ಮಾಡಿ ವಿಷಯ ತಿಳಿಸಿದಾಗ ಮಾಲೀಕ ವೇಣುಗೋಪಾಲ್ ಸ್ಥಳಕ್ಕೆ ಬಂದು ನೋಡಿದಾಗ ಗೋದಾಮಿಗೆ ಕಳ್ಳರು ಪ್ರವೇಶ ಮಾಡಿ ಲಾಕರ್‌ನಲ್ಲಿದ್ದ 3 ಲಕ್ಷ ರು. ದೋಚಿರುವುದು ಗೊತ್ತಾದ ಹಿನ್ನಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪೊಲೀಸರು ಶ್ವಾನದಳದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದಲ್ಲಿ ಮತ್ತೆ ಕಳ್ಳತನ ಪ್ರಕರಣಗಳು ಮರುಕಳಿಸಿರುವುದಕ್ಕೆ ಜನತೆ ಆತಂಕ ವ್ಯಕ್ತಪಡಿಸಿದ್ದಾರೆ.

ಬಂದೂಕು ತೋರಿಸಿ ಹಣ ಕಸಿದು ಪರಾರಿ
ಬಾಗೇಪಲ್ಲಿ: ಅಂಗಡಿಯಿಂದ ಮನೆಗೆ ಹೋಗುತ್ತಿದ್ದ ವ್ಯಾಪಾರಿಗೆ ಬಂದೂಕು ತೋರಿಸಿ ಬೆದರಿಸಿದ ದುಷ್ಕರ್ಮಿಗಳು ಸುಮಾರು ಒಂದೂವರೆ ಲಕ್ಷ ರು. ಹಣವಿದ್ದ ಬ್ಯಾಗನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಪಟ್ಟಣದ ಪ್ರಮುಖ ವ್ಯಾಪಾರಿಯಾಗಿರುವ ತ್ಯಾಗರಾಜ್ ಎಂಬವರೇ ಹಣ ಕಳೆದುಕೊಂಡಿರುವವರು. ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಂದೂಕು ತೋರಿಸಿ ಬೆದರಿಸಿ, ಕೈಯಲ್ಲಿದ್ದ ಹಣದ ಬ್ಯಾಗನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.