ಕೋಲಾರ

ಬೆಳಗಾವಿ ಅಧಿವೇಶನ: ರೈತರ ಮುತ್ತಿಗೆ

Published On :

ಕೆಜಿಎಫ್; ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಬೆಳಗಾವಿಯಲ್ಲಿ ನಡೆಯುವ ಅಧಿವೇಶನಕ್ಕೆ ರೈತರು ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೇಳಿದೆ. ಈ ಹಿನ್ನಲೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್ ಬೇತಮಂಗಲ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮನವಿ ಮಾಡಿದರು. ಈ ವೇಳೆ ಮಾತನಾಡಿ, ರೈತ ಬೆಳೆದ ಬೆಳೆಗಳ ಬೆಲೆ ಕುಸಿದಾಗ ಸರ್ಕಾರವೇ ಮಾರುಕಟ್ಟೆಗೆ ಪ್ರವೇಶ ಮಾಡಬೇಕು ಇದಕ್ಕಾಗಿ ಸರ್ಕಾರ ಕನಿಷ್ಠ 20 ಸಾವಿರ ಕೋಟಿ ಆವರ್ತನಿಧಿ ಮೀಸಲಿಡಬೇಕು, ಕೃಷಿ ಭೂಮಿಯನ್ನು ಕೈಗಾರಿಕೆಗಳಿಗೆ ಮತ್ತು ವಸತಿ ಸಂಕಿರಣಗಳ ಉದ್ದೇಶಕ್ಕೆ ಬಳಕೆ ಆಗುವುದನ್ನು ತಡೆಗಟ್ಟಲು ಕೃಷಿ ಭೂಮಿ ಸಂರಕ್ಷಣಾ ಕಾಯ್ದೆ  ಜಾರಿಗೆ ತರಬೇಕು ಮುಂತಾದ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿ ಬೆಳಗಾವಿ ಅಧಿವೇಶನದಲ್ಲಿ ಮುತ್ತಿಗೆ ಹಾಕಿ ಹೋರಾಟ ನಡೆಸುವುದಾಗಿ ಅವರು ತಿಳಿಸಿದರು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಶ್ರೀನಿವಾಸ್‌ಗೌಡ, ವಡ್ಡಹಳ್ಳಿ ಮಂಜುನಾಥ್, ಗಣೇಶ್, ಪ್ರತಾಪ್, ರಾಮಪ್ಪ, ಶಿವಣ್ಣ, ಮಂಜುನಾಥ್, ಕಾರಿ ಸುಬ್ರಮಣಿ, ವಿಶ್ವನಾಥ್, ಮಂಜು, ಮುನೇಗೌಡ ಇದ್ದರು.

ತಡೆರಹಿತ ಸಾರಿಗೆವ್ಯವಸ್ಥೆಗೆ ಚಾಲನೆ
ಚಿಂತಾಮಣಿ: ಪ್ರಯಾಣಿಕರಿಗೆ ತಡೆರಹಿತ ಸಾರಿಗೆವ್ಯವಸ್ಥೆ ಕಲ್ಪಿಸಲಾಯಿತೆಂದು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಹೇಳಿದರು. ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನೂತನವಾಗಿ ಬೆಂಗಳೂರು ತಡೆರಹಿತ 2 ಬಸ್‌ಗಳಿಗೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಮತ್ತು ಪಟ್ಟಣದ ಪ್ರದೇಶಗಳಿಗೆ ಅವಶ್ಯಕತೆಯಿದ್ದಲ್ಲಿ ಇನ್ನೂ ಹೆಚ್ಚು ಬಸ್ ಸೌಲಭ್ಯ ಕಲ್ಪಿಸುವುದಾಗಿ ಹೇಳಿದರು. ಪಟ್ಟಣ ವೇಗವಾಗಿ ಬೆಳೆಯುತ್ತಿದ್ದು, ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣದ ವರೆಗೆ, ಮಾಡಿಕೆರೆ ಕ್ರಾಸ್‌ನಿಂದ ಚಿನ್ನಸಂದ್ರ ಬೈಪಾಸ್ ನಗರ ಸಂಚಾರಕ್ಕೆ ಚಾಲನೆ ನೀಡಲು ಅಧಿಕಾರಿಗಳ ಜೊತೆ ಚರ್ಚಿಸಿ ಶೀಘ್ರ ಕಾರ್ಯರೂಪಕ್ಕೆ ತರಲಾಗುವುದೆಂದು ತಿಳಿಸಿದರು.

ಮನೆಯಲ್ಲಿ ಕಳವು
ಕೆಜಿಎಫ್; ಮನೆಯ ಹಿಂಬಾಗಿಲನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು ಮನೆಯಲ್ಲಿದ್ದ ನಗದು ಹಾಗೂ ಇತರೆ ವಸ್ತುಗಳನ್ನು ಕಳವು ಮಾಡಿರುವ ಘಟನೆ ಬೆಮೆಲ್‌ನಗರದಲ್ಲಿ ನಡೆದಿದೆ. ಬೆಮೆಲ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆಫಿಸರ್ಸ್ಸ್ ಕ್ವಾರ್ಟಸ್ ನಿವಾಸಿ ಈಶ್ವರ್‌ಭಟ್ ಎಂಬವರ ಮನೆಯ ಹಿಂಬಾಗಿಲನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು ಬೀರುವಿನಲ್ಲಿಟ್ಟಿದ್ದ 20 ಸಾವಿರ ನಗದು, ಹಾಲ್‌ನಲ್ಲಿಟ್ಟಿದ್ದ 1 ಮೊಬೈಲ್ ಫೋನ್ ಮತ್ತು 1 ಕೊಡಾಕ್ ಕ್ಯಾಮರಾ ಸೇರಿದಂತೆ ಒಟ್ಟು 23 ಸಾವಿರ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಈಶ್ವರ್‌ಭಟ್ ಬೆಮೆಲ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.