'ಅವಕಾಶ ಕೊಟ್ರೆ ನಾವು ಸಾಧಿಸುತ್ತೇವೆ'
ಕ.ಪ್ರ.ವಾರ್ತೆ ಕೋಲಾರ ನ.25
ನಗರದ ಸರ್.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ವಿಕಲಚೇತನರಿಗಾಗಿ ಏರ್ಪಡಿಸಿದ್ದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಭರ್ಜರಿಯಾಗಿತ್ತು.
ನಾವು ಯಾರಿಗಿಂತ ಕಡಿಮೆ ಇಲ್ಲ. ಅವಕಾಶ ನೀಡಿದ್ರೆ ಸಾಧಿಸಿ ತೋರಿಸ್ತೀವಿ ಎಂದು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ವಿಕಲಚೇತನರು ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸುವ ಮೂಲಕ ಸಾಭೀತು ಮಾಡಿದರು.
ನಂದದೀಪ ಅಂಗವಿಕಲರ ಶಿಕ್ಷಣ ಮತ್ತು ಪುನಶ್ಚೇತನ ಸಂಸ್ಥೆ, ಶತಶೃಂಗ ಕಿವುಡ ಮಕ್ಕಳ ವಸತಿ ಶಾಲೆ, ಅಂತರಗಂಗೆ ಬುದ್ದಿಮಾಂಧ್ಯ ವಿಕಲಚೇತನ ಕೇಂದ್ರ, ಜೈ ಭಾರತ ಕಿವುಡ ಮಕ್ಕಳ ವಸತಿ ಶಾಲೆ, ವಾದಿರಾಜ್ ಟ್ರಸ್ಟ್ನ ನೂರಾರು ಮಕ್ಕಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುವುದರ ಮೂಲಕ ಗಮನ ಸೆಳೆದರು.
ಕ್ರೀಡಾಕೂಟದಲ್ಲಿ ಸಾಕಷ್ಟು ವಿಕಲಚೇತನ ಮಕ್ಕಳು ನಿಲ್ಲುವುದಕ್ಕೆ ಸಾಧ್ಯವಾಗದಿದ್ದರೂ ಛಲದಿಂದ ಓಡುವ ಮೂಲಕ ಪ್ರಶಂಸೆಗೆ ಪಾತ್ರರಾದರು.
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಜಿ.ಪಂ. ಉಪಕಾರ್ಯದರ್ಶಿ ಬದನೂರು, ವಿಕಲಚೇತನರಲ್ಲಿ ನ್ಯೂನತೆಯಿದ್ದರೂ ಸಹ ಕ್ರೀಡಾಕೂಟದಲ್ಲಿ ಇಷ್ಟು ಜನ ಭಾಗವಹಿಸಿರುವುದನ್ನು ನೋಡಿದರೆ ಇವರನ್ನು ನೋಡಿ ಅನುಕಂಪ ಪಡುವುದಕ್ಕಿಂತ ಪ್ರೀತಿ, ವಿಶ್ವಾಸ ತೋರಿ ಸಹಾಯಹಸ್ತ ಚಾಚಿದರೆ ಇತರರಂತೆ ಬದುಕಿ ಏನಾದರೂ ಸಾಧಿಸಿ ತೋರಿಸುತ್ತಾರೆ ಎಂದರು.
ಸರ್ಕಾರ ಶೇ.3 ರಷ್ಟು ಮೀಸಲಾತಿಯನ್ನು ವಿಕಲಚೇತನರಿಗೆ ನಿಗದಿ ಮಾಡಿರುವ ಜತೆಗೆ ಪ್ರತಿ ಗ್ರಾ.ಪಂ. ಅನುದಾನದಲ್ಲಿ ಶೇ.3 ರಷ್ಟು ವಿಕಲಚೇತನರ ಕಲ್ಯಾಣ ಕಾರ್ಯಕ್ರಮಕ್ಕೆ ಬಳಸುವಂತೆ ಸೂಚನೆ ನೀಡಿದ್ದು ಇದನ್ನು ವಿಕಲಚೇತನರಿಗಾಗಿ ಶ್ರಮಿಸುತ್ತಿರುವ ಸಂಘ ಸಂಸ್ಥೆಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಎ. ಶಕುಂತಲಾ ಮಾತನಾಡಿ, ವಿಕಲಚೇತನ ಮಕ್ಕಳನ್ನು ಕೀಳಾಗಿ ನೋಡದೆ ಅವರಿಗೆ ಆತ್ಮಸ್ಥೈರ್ಯ ತುಂಬಿ ಸಮಾಜದ ಮುಖವಾಹಿನಿಗೆ ತಂದರೆ ಸ್ವಾವಲಂಬಿಯಾಗಿ ಜೀವನ ಸಾಗಿಸುತ್ತಾರೆ ಎಂದರು.
ಗೃಹರಕ್ಷದ ದಳದ ಕಮಾಂಡೆಂಟ್ ಬಿ. ಮರಿಸ್ವಾಮಿ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಎಚ್.ಸಿ. ನಾಗಮಣಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ರುದ್ರಪ್ಪ, ವಕೀಲ ಧನರಾಜ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಮಂಜುನಾಥ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

