ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ
-ಪಾ.ಶ್ರೀ. ಅನಂತರಾಮ್
ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿಯನ್ನು ಕೊಡುಗೆಯಾಗಿ ನೀಡುವ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿರುವ ಬಂಗಾರಪೇಟೆ ತಾಲೂಕಿಗೆ ಸೇರಿದ ಕೆಜಿಎಫ್ನಲ್ಲಿ ಡಿಸೆಂಬರ್ 5 ರಂದು ನಡೆಯಲಿರುವ ಜಿಲ್ಲಾ ಮಟ್ಟದ ಪ್ರಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಭರದಿಂದ ಸಿದ್ಧತೆಗಳು ನಡೆದಿದೆ.
ಮಕ್ಕಳ ಸಾಹಿತ್ಯ ಸಮ್ಮೇಳನ ನವೆಂಬರ್ನಲ್ಲಿ ನಡೆಸಬೇಕಾಗಿತ್ತಾದರೂ ಜಿಲ್ಲಾ ಸಾಹಿತ್ಯ ಪರಿಷತ್ ಮತ್ತು ಕೆಜಿಎಫ್ ವಿಶೇಷ ಘಟಕವು ಕಾರಣಾಂತರಗಳಿಂದ ಸಮ್ಮೇಳನವನ್ನು ಡಿಸೆಂಬರ್ನಲ್ಲಿ ಮುಂದೂಡಿ, ಒಂದು ದಿನ ನಡೆಯುವ ಸಮ್ಮೇಳನವನ್ನು ಯಶಸ್ವಿಗೊಳಿಸಲು ಮತ್ತು ಅರ್ಥಪೂರ್ಣವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಶ್ರಮಿಸುತ್ತಿದೆ.
ಪ್ರೌಢಶಾಲಾ ಮಕ್ಕಳಲ್ಲಿ ಇರುವ ಸೂಪ್ತವಾದ ಪ್ರತಿಭೆಯನ್ನು ಸಾಹಿತ್ಯ ಜಗತ್ತಿಗೆ ಸಾಭೀತು ಮಾಡುವುದು, ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಕತೆ, ಕವನ, ಸಾಂಸ್ಕೃತಿಕ ಚಿಂತನೆ, ವೈಚಾರಿಕತೆ ಹಾಗೂ ಸಾಮಾಜಿಕ ವೈರುಧ್ಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರಾಯೋಗಿಕವಾಗಿ ಡಿ.5 ರಂದು ಕೆಜಿಎಫ್ನಲ್ಲಿ ಒಂದು ದಿನದ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸುವ ಮೂಲಕ ಮುಂದಿನ ದಿನಗಳಲ್ಲಿ ಜಿಲ್ಲೆಯ ಮಕ್ಕಳು ಸಾಹಿತ್ಯ ಕ್ಷೇತ್ರದ ವಾರಸುದಾರರನ್ನಾಗಿ ಮಾಡುವುದೇ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ.
ಮಕ್ಕಳ ಸಾಹಿತ್ಯ ಸಮ್ಮೇಳನದ ಸಂಪೂರ್ಣ ನಿರ್ವಹಣೆಯನ್ನು ಮಕ್ಕಳಿಂದಲೇ ಮಾಡಿಸಲು ಭರ್ಜರಿಯಾಗಿ ತಯಾರಿ ನಡೆಸಲಾಗುತ್ತಿದೆ. ಪ್ರತಿ ತಾಲೂಕಿನಿಂದ 10 ಪ್ರತಿಭಾವಂತ ಮಕ್ಕಳನ್ನು ಒಂದು ಕಡೆ ಕಲೆಹಾಕಿ ಅವರಲ್ಲಿ ಹುದಿಗಿರುವ ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ವಿಜ್ಞಾನ, ಸಾಮಾಜಿಕ ಚಿಂತನೆ, ಶೈಕ್ಷಣಿಕ ಪ್ರಗತಿ ಹಾಗೂ ಕೌಶಲ್ಯವನ್ನು ಗುರುತಿಸಿ ಒಬ್ಬ ಅತ್ಯುತ್ತಮ ಪ್ರತಿಭಾವಂತ ವಿದ್ಯಾರ್ಥಿಯನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲು ಕಳೆದ ಎರಡು ವಾರಗಳಿಂದ ವಿವಿಧ ರೀತಿಯ ಪರೀಕ್ಷೆ, ಸಮೀಕ್ಷೆ ನಡೆಸಿ 4 ವಿದ್ಯಾರ್ಥಿಗಳನ್ನು ಸಂಭವನೀಯ ಅಧ್ಯಕ್ಷರ ಪಟ್ಟಿಗೆ ಸೇರಿ ಈ ಪೈಕಿ ಒಬ್ಬರ ಹೆಸರನ್ನು ಅಂತಿಮಗೊಳಿಸಲು ಜಿಲ್ಲಾ ಕಸಾಪ ಪದಾಧಿಕಾರಿಗಳು ಪ್ರಯತ್ನ ಮುಂದುವರೆಸಿದ್ದಾರೆ.
ಪ್ರತಿಭಾವಂತರ ಆಯ್ಕೆಗೆ ಪರೀಕ್ಷೆ: ಜಿಲ್ಲೆಯ ಐದು ತಾಲೂಕುಗಳಿಂದ ಮೊದಲ ಹಂತದಲ್ಲಿ 50 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಇವರಿಗೆ ಸೂಕ್ತ ಮಾರ್ಗದರ್ಶನ ನೀಡಲು ಕೆಜಿಎಫ್ನಲ್ಲಿ ವಿಶೇಷ ಶಿಬಿರವನ್ನು ನಡೆಸಲಾಗಿದೆ. ಕೆಜಿಎಫ್ನ ಜೈನ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಪ್ರೊ. ಮಂಜುಳ ಹಾಗೂ ಕೆಜಿಎಫ್ನ್ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿರುವ ಶ್ರೀದೇವಿ ಅವರ ಮೂಲಕ ಮಕ್ಕಳಿಗೆ ವಿಶೇಷ ತರಬೇತಿ ಕಲ್ಪಿಸಿ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಸಾಹಿತ್ಯ, ಸಂಗೀತ, ಶಿಕ್ಷಣದಲ್ಲಿನ ಆಸಕ್ತಿಯನ್ನು ಪರಿಗಣಿಸಿ ಒಟ್ಟು ನಾಲ್ವರನ್ನು ಆಯ್ಕೆ ಮಾಡಿ ಈ ಪೈಕಿ ಹೆಚ್ಚು ಪ್ರತಿಭೆ ಹೊಂದಿರುವ ಒಬ್ಬ ವಿದ್ಯಾರ್ಥಿನಿಯನ್ನು ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಅರ್ಹಳೆಂದು ನಿರ್ಧರಿಸಲಾಗಿದ್ದರೂ ಅಂತಿಮ ಪ್ರಕಟಣೆ ಕಾಯ್ದಿರಿಸಲಾಗಿದೆ.
ಕೆಜಿಎಫ್, ಬಂಗಾರಪೇಟೆ, ಮುಳಬಾಗಿಲು, ಶ್ರೀನಿವಾಸಪುರ ತಾಲೂಕಿನ ಮಕ್ಕಳಲ್ಲಿ ಒಬ್ಬರು ಸಮ್ಮೇಳನದ ಅಧ್ಯಕ್ಷರಾಗುವ ಸಾಧ್ಯತೆಗಳಿದ್ದು ಜಿಲ್ಲಾ ಕಸಾಪ ಪದಾಧಿಕಾರಿಗಳು ಸಮ್ಮೇಳನಾಧ್ಯಕ್ಷರ ಈ ವಾರದಲ್ಲಿ ಘೋಷಣೆ ಮಾಡುವ ಸಾಧ್ಯತೆಗಳಿವೆ.
ಸಮ್ಮೇಳನಾಧ್ಯಕ್ಷರಾಗಲು ಏರ್ಪಟ್ಟಿರುವ ಪೈಪೋಟಿಯಲ್ಲಿ ಕುದಲೆಳೆಯಷ್ಟು ಅಂತರದಲ್ಲಿ ಹಿಂದೆ ಉಳಿಯುವ ಮಕ್ಕಳಿಗೆ ನಿರಾಸೆ ಉಂಟು ಮಾಡದೆ ವಿವಿಧ ಗೋಷ್ಠಿಗಳಿಗೆ ಅಧ್ಯಕ್ಷರನ್ನಾಗಿ ಮಾಡಲು ನಿರ್ಧರಿಸಲಾಗಿದೆ.
ಜಿಲ್ಲೆಯ ಹಿರಿಯ ಸಾಹಿತಿ, ಮಾಲೂರಿನಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಸ. ರಘುನಾಥ, ಮುಳಬಾಗಿಲು ತಾಲೂಕು ಕಸಾಪ ಸಮ್ಮೇಳನದ ಅಧ್ಯಕ್ಷರಾಗಿದ್ದ ಹಾಗೂ ಹಾಲಿ ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷರಾಗಿರುವ ಪುರುಷೋತ್ತಮ್, ಕಲಾವಿದ ಚಂದ್ರ ಪ್ರಕಾಶ್ ಹಾಗೂ ಅನುಭವಿ ಮಕ್ಕಳ ಸಾಹಿತಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು ಈ ಸಮಿತಿ ಸಮ್ಮೇಳನದಲ್ಲಿ ವಿವಿಧ ಸ್ತರಗಳ ಜವಾಬ್ದಾರಿ ವಹಿಸಿಕೊಳ್ಳುವ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಮಕ್ಕಳದ್ದೇ ದರ್ಬಾರು: ಸಮ್ಮೇಳನದ ವೇದಿಕೆಯಲ್ಲಿ ಮಕ್ಕಳದ್ದೇ ದರ್ಬಾರು, ನಿರೂಪಣೆ, ಸ್ವಾಗತ, ವಂದನೆ, ಅಧ್ಯಕ್ಷತೆ, ವಿಚಾರಗೋಷ್ಠಿಗಳ ನಿರ್ವಹಣೆ ಎಲ್ಲವೂ ಮಕ್ಕಳ ಮಯವಾಗಿಸಲು ಕಸಾಪ ಪದಾಧಿಕಾರಿಗಳು ಚಿಂತನೆ ನಡೆಸಿರುವುದರಿಂದ ಕೆಜಿಎಫ್ಲ್ಲಿ ಡಿಸೆಂಬರ್ 5 ರಂದು ಮಕ್ಕಳ ಕಲರವ ಕಾಣುವುದರಲ್ಲಿ ಅನುಮಾನವಿಲ್ಲ.
ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಮಕ್ಕಳ ಸಾಹಿತ್ಯಕ್ಕೆ ಒತ್ತು ನೀಡುವ ಅಂಶಗಳ ಜೊತೆಗೆ ಜಿಲ್ಲೆಯ ಜ್ವಲಂತ ಸಮಸ್ಯೆ ಹಾಗೂ ಮೌಲ್ಯಾಧಾರಿತ ಶಿಕ್ಷಣ ಜಾರಿಗೆ ಸರ್ಕಾರ ಮತ್ತು ಸಮಾಜದ ಮೇಲೆ ಬೆಳಕು ಚೆಲ್ಲುವ ಪ್ರಯತ್ನವಾಗಲಿ ಎಂಬುದು ಜನತೆಯ ಆಶಯವಾಗಿದೆ.
ಕೆಜಿಎಫ್ ಕಸಾಪ ವಿಶೇಷ ಘಟಕಕ್ಕೆ ಕೇಂದ್ರ ಕಸಾಪದಿಂದ ಯಾವುದೇ ಅನುದಾನ ಸಿಗುವುದಿಲ್ಲ. ಜಿಲ್ಲಾ ಕಸಾಪ 50 ಸಾವಿರ ರು. ಅನುದಾನ ನೀಡಿದೆ. ಸಮ್ಮೇಳನಕ್ಕೆ 3 ಲಕ್ಷ ರು. ವೆಚ್ಚವಾಗಬಹುದೆಂದು ಅಂದಾಜು ಮಾಡಲಾಗಿದ್ದು ಉಳಿದ ಹಣವನ್ನು ಸ್ಮರಣ ಸಂಚಿಕೆ, ದಾನಿಗಳ ದೇಣಿಗೆ ಮೂಲಕ ಕ್ರೂಢಿಕರಿಸಲು ಕಸರತ್ತು ನಡೆದಿದೆ.
ಜಿಲ್ಲೆಯಾದ್ಯಂತ 500 ಮಕ್ಕಳು ಸಮ್ಮೇಳನದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸುವರೆಂದು ಕಸಾಪ ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜ್ ಹಾಗೂ ಪ್ರಧಾನ ಕಾರ್ಯದರ್ಶಿ ಮಾಲೂರು ಅಶ್ವತ್ಥರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗಡಿ ಪ್ರದೇಶವಾದ ಕೆಜಿಎಫ್ನಲ್ಲಿ ನಡೆಯುವ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಮನೆಯ ಕಾರ್ಯಕ್ರಮವೆಂದು ಜಿಲ್ಲೆಯ ಪ್ರತಿಯೊಬ್ಬರು ಭಾವಿಸಿ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

