3 ತಾಲೂಕಲ್ಲಿ ನರೇಗಾ ಜಾರಿ
ಕ.ಪ್ರ.ವಾರ್ತೆ ಕೋಲಾರ ನ.25
ರಾಜ್ಯ ಸರ್ಕಾರ ಜಿಲ್ಲೆಯ ಮೂರು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದು ಸರ್ಕಾರದ ಮಾರ್ಗಸೂಚಿಯನ್ನು ಆಧರಿಸಿ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಡಿ.ಕೆ.ರವಿ ತಿಳಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ತಜ್ಞರ ವರದಿಯನ್ನು ಅನುಸರಿಸಿ ಬಂಗಾರಪೇಟೆ, ಮುಳಬಾಗಿಲು, ಶ್ರೀನಿವಾಸಪುರ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದೆ ಎಂದರು.
ಮಳೆಯ ಕೊರತೆ, ಬೆಳೆ ನಷ್ಟ, ಕುಡಿಯುವ ನೀರಿನ ಸಮಸ್ಯೆಯನ್ನು ಮಾನದಂಡವಾಗಿಟ್ಟುಕೊಂಡು ತಜ್ಞರು ಸರ್ಕಾರಕ್ಕೆ ನೀಡಿರುವ ವರದಿಯನ್ನು ರಾಜ್ಯ ಸರ್ಕಾರ ಮಾನ್ಯತೆ ಮಾಡಿದೆ. ಇಲ್ಲಿವರೆಗೆ ಯಾವುದೇ ವಿಶೇಷ ಅನುದಾನ ಬಂದಿಲ್ಲ. ಅಗತ್ಯವಿದ್ದಲ್ಲಿ ಈ ಮೂವರು ತಾಲೂಕುಗಳಲ್ಲಿ ನರೇಗಾ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು. ಈ ಬಾರಿ ಬಿದ್ದ ಮಳೆಯಿಂದ ಜಿಲ್ಲೆಯ ಕೆರೆಗಳು ಭರ್ತಿ ಆಗದಿದ್ದರೂ ಬೆಳೆಗಳ ರಕ್ಷಣೆಗೆ ಅನುಕೂಲವಾಗಿದೆ. ಸಧ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿಲ್ಲ. ಮುಂದಿನ ಪರಿಸ್ಥಿತಿ ಗಮನಿಸಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆಂದರು.
ಅಕ್ಚೋಬರ್‌ನಲ್ಲೇ ಹಲವಾರು ಕಲ್ಯಾಣಿಗಳ ಪುನಶ್ಚೇತನ ಕಾಮಗಾರಿ ನಡೆಯಬೇಕಾಗಿತ್ತು. ಮಳೆಯಿಂದ ಕೆಲಸ ನಿಂತಿದೆ. ಬೇಸಿಗೆಯಲ್ಲಿ ಎಲ್ಲ ಕಲ್ಯಾಣಿಗಳ ಕಲ್ಯಾಣ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಾಗುವುದು. ಇದಕ್ಕೆ ನರೇಗಾ ಯೋಜನೆಯ ಅನುದಾನ ವಿನಿಯೋಗ ಮಾಡಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ನೆಲಗಡಲೆಗೆ ಹಾನಿ: ಜಿಲ್ಲೆಯಲ್ಲಿ ಈ ಬಾರಿ ಮಳೆ ಕಡಿಮೆ ಆಗಿರುವುದರಿಂದ ನೆಲಗಡಲೆ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಿಕ್ಕಣ್ಣ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಭೇಟಿಯ ನಂತರ ತಮ್ಮನ್ನು ಕಂಡ ಪತ್ರಕರ್ತರೊಂದಿಗೆ ಮಾತನಾಡಿದ ಕೃಷಿ ಜಂಟಿ ನಿರ್ದೇಶಕ ಚಿಕ್ಕಣ್ಣನವರು ರಾಷ್ಟ್ರೀಯ ಪ್ರಾಕೃತಿಕ ವಿಕೋಪ ನಿರ್ವಹಣಾ ಸಮಿತಿಯ ತಂಡದವರು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಲ್ಲಿನ ಮಳೆ-ಬೆಳೆ ಪರಿಸ್ಥಿತಿ ಅಧ್ಯಯನ ಮಾಡಿ ನೀಡಿರುವ ವರದಿ ಆಧರಿಸಿ ಜಿಲ್ಲೆಯ ಮೂವರು ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿನ ಮಳೆ ಮಾಪನ ಕೇಂದ್ರಗಳಲ್ಲಿ ಸಿಕ್ಕಿರುವ ಮಾಹಿತಿ ಹಾಗೂ ಕೃಷಿ ಚಟುವಟಿಕೆಗಳ ಸ್ಥಿತಿಗತಿಯ ಆಧಾರದ ಮೇಲೆ ಜಿಲ್ಲೆ ಮೂರು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿಯೇ ಹೊರತು ನಮ್ಮಿಂದ ಯಾವುದೇ ಮಾಹಿತಿ ಪಡೆದು ನಿರ್ಧಾರ ಕೈಗೊಂಡಿಲ್ಲ, ಉಪಗ್ರಹದ ಮೂಲಕ ಸಂಗ್ರಹಿಸಿರುವ ಮಾಹಿತಿಯನ್ನು ಪರಿಗಣಿಸಲಾಗಿದೆ ಎಂದು ತಿಳಿಸಿದರು.
ಮೇ ಮತ್ತು ಜೂನ್‌ನಲ್ಲಿ ಬಿದ್ದ ಮಳೆಯನ್ನು ನಂಬಿ ಬೆಳೆದ ನೆಲಗಡಲೆ ಒಳ್ಳೆಯ ಇಳುವರಿ ನೀಡಿದೆ. ಆದರೆ, ಜುಲೈ ಮತ್ತು ಆಗಸ್ಟೆ ನಲ್ಲಿ ಬಿತ್ತನೆಯಾದ ನೆಲಗಡಲೆ ರೈತರಿಗೆ ಲಾಭವಾಗಿಲ್ಲವೆಂದು ಅಭಿಪ್ರಾಯಪಟ್ಟರು.
ಕೋಲಾರ ಜಿಲ್ಲೆಯಲ್ಲಿ ಬೆಳೆಯುವ ನೆಲಗಡಲೆ ತಿನ್ನಲು ಅಷ್ಟೇನು ಉಪಯೋಗವಾಗುತ್ತಿಲ್ಲ. ಎಣ್ಣೆ ತಯಾರಿಸಲು ಬಳಕೆ ಮಾಡಲಾಗುತ್ತಿದೆ. ಹಾಗಾಗಿ ಕೋಲಾರದ ವ್ಯಪಾರಿಗಳು ಮಂಡ್ಯ ಇನ್ನಿತರ ಕಡೆಗಳಿಂದ ಕಡಲೆಕಾಯಿ ತಂದು ಮಾರಾಟ ಮಾಡುತ್ತಿರಬಹುದೆಂದು ಚಿಕ್ಕಣ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸತತವಾಗಿ ನಾಲ್ಕು ವಾರ ಮಳೆ ಇಲ್ಲದಿರುವುದು, ಭೂಮಿಯಲ್ಲಿನ ತೇವಾಂಶದ ಕೊರತೆಯನ್ನು ಪರಿಗಣಿಸಿ ಕೋಲಾರ ಜಿಲ್ಲೆಯ ಮೂರು ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲಾಗಿದೆ. ಮಳೆ ಮಾಪನ ಕೇಂದ್ರಗಳು ಸರ್ಕಾರಕ್ಕೆ ನೇರ ಮಾಹಿತಿ ನೀಡಿರುವುದರಿಂದ ನಮ್ಮ ಅಭಿಪ್ರಾಯ ಪಡೆಯುವ ಅಗತ್ಯ ಸರ್ಕಾರಕ್ಕೆ ಕಂಡು ಬಂದಿಲ್ಲವೆಂದು ತಿಳಿಸಿದರು.
ಜಿಲ್ಲೆಯಲ್ಲಿ ಈ ವರ್ಷ ಶ್ರೀನಿವಾಸಪುರ ತಾಲೂಕಿನಲ್ಲಿ ಕಡಿಮೆ ಮಳೆ ದಾಖಲು ಆಗಿದೆ. 722 ಮಿಮೀ ವಾಡಿಕೆ ಮಳೆಗೆ 519 ಮಿಮೀ ಮಳೆಯಾಗಿದೆ. ಮುಳಬಾಗಿಲು-709 ಮಿಮೀಗೆ 683, ಮಾಲೂರು-675 ಮಿಮೀಗೆ 593, ಕೋಲಾರ-711ಕ್ಕೆ 701 ಹಾಗೂ ಬಂಗಾರಪೇಟೆ ತಾಲೂಕಿನಲ್ಲಿ 683 ಮಿಮೀ ವಾಡಿಕೆ ಮಳೆಗೆ 696 ಮಿಮೀ ಮಳೆಯಾಗಿದೆ ಎಂದು ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

