ಕನ್ನಡ ರಾಜ್ಯೋತ್ಸವ; ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ
ಚಿಕ್ಕಬಳ್ಳಾಪುರ: ಕನ್ನಡಪರ ಹೋರಾಟಗಳಿಗೆ ತನ್ನದೇ ಆದ ಇತಿಹಾಸವನ್ನು ಹೊಂದಿರುವ ಶ್ರೀ ಭುವನೇಶ್ವರಿ ಕನ್ನಡ ಸಮಿತಿ ಹಾಗೂ ಆಟೋ ಚಾಲಕರ ಬಳಗದ ವತಿಯಿಂದ ನಾಡಹಬ್ಬವಾದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ನಗರದ ಭುವನೇಶ್ವರಿ ವೃತ್ತದಲ್ಲಿ ಆಟೋ ಚಾಲಕರಿಗೆ ಸಮವಸ್ತ್ರಗಳನ್ನು ವಿತರಣೆ ಮಾಡುವುದರ ಜತೆಗೆ ನಾಡ ಮಾತೆಯ ಸ್ಮರಣೆ ಮಾಡಲಾಯಿತು. ಶ್ರೀ ಭುವನೇಶ್ವರಿ ಕನ್ನಡ ಸಮಿತಿಯ ಅಧ್ಯಕ್ಷ ಚಿ. ವೀರಶೇಖರ್, ಸಂಘಟನೆಯ ಹಿಂದಿನ ಹೋರಾಟಗಳು ಮತ್ತು ಕನ್ನಡಪರ ಕಾರ್ಯಕ್ರಮಗಳ ಆಚರಣೆಯ ಬಗ್ಗೆ ಮೆಲಕು ಹಾಕಿದರು. ಕನ್ನಡ ರಾಜ್ಯೋತ್ಸವ ಕೇವಲ ಕಾರ್ಯಕ್ರಮ ಆಚರಣೆಗೆ,ಇಲ್ಲವೇ ಯಾರೋ ಹೆಸರನ್ನು ಗಳಿಸುವುದಕ್ಕೆ ಮಾತ್ರ ಸೀಮಿತವಾಗಬಾರದು. ಕನ್ನಡ ಭಾಷೆಯನ್ನು ರಕ್ಷಿಸುವುದೇ ಮೊದಲ ಆದ್ಯತೆಯಾಗಬೇಕು. ಕನ್ನಡಪರ ನಿಜವಾಗಿ ಹೋರಾಟಗಳನ್ನು ನಡೆಸುವವರನ್ನು ಗುರುತಿಸುವುದರ ಜತೆಗೆ ಕನ್ನಡ ಭಾಷೆಯ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಬೆಳೆಸಿಕೊಳ್ಳುವಂತೆ ಮಾಡಬೇಕೆಂದರು. ಕಾರ್ಯಕ್ರಮದಲ್ಲಿ ಸಂಘಟನೆಯ ಮುಖಂಡರಾದ ಕೆ.ಪಿ. ನವಮೋಹನ್, ಆರ್. ವೆಂಕಟನಾರಾಯಣ್, ಮೊಬೈಲ್ ಬಾಬು, ಡಾಂಬು ಶ್ರೀನಿವಾಸ್, ಸ್ನೇಕ್ ಪೃಥ್ವಿ, ವರದರಾಜು, ಮಂಚನಬಲೆ ಶ್ರೀನಿವಾಸ್ ಉಪಸ್ಥಿತರಿದ್ದರು.
28 ರಂದು ಅಚ್ಚ ಕನ್ನಡ-ಸ್ವಚ್ಛ ಕನ್ನಡ ಕಾರ್ಯಕ್ರಮ
ಚಿಂತಾಮಣಿ: ತಾಲೂಕು ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ನ. 28 ರ ಗುರುವಾರ ಮಧ್ಯಾಹ್ನ 1 ಗಂಟೆಗೆ ಸರಿಯಾಗಿ ತಾಲೂಕಿನ ದೊಡ್ಡಬೊಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶಾಲೆಯ ಅಂಗಳದಲ್ಲಿ ಕವಿ ಕಾವ್ಯ ಹಾಗೂ ಅಚ್ಚ ಕನ್ನಡ-ಸ್ವಚ್ಛ ಕನ್ನಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಜಿ. ರಂಗಯ್ಯ ಅಧ್ಯಕ್ಷತೆ ವಹಿಸಲಿದ್ದು. ತಾ.ಪಂ. ಅಧ್ಯಕ್ಷೆ ಗೌರಮ್ಮ ನಾಗೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಕೋಟಗಲ್ ನಾಗಸುಬ್ರಮಣ್ಯಂ. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಬಿ. ಜನಾರ್ದನ ರೆಡ್ಡಿ ಗ್ರಾಮದ ಹಿರಿಯ ಮುಖಂಡರಾದ ವೆಂಕಟರೆಡ್ಡಿ ಹಾಗೂ ಆಹ್ವಾನಿತರಾಗಿ ಎಸ್.ಎಸ್.ವೈ. ಸಾಧಕರಾದ ಮೈಲಾಂಡ್ಲಹಳ್ಳಿ ಅಶ್ವತ್ಥಪ್ಪ, ಜಾನಪದ ಕಲಾವಿದರಾದ ಸೀಕಲ್ ನರಸಿಂಹಪ್ಪ, ಸೋರಪ್ಪಲ್ಲಿ ಚಂದ್ರಶೇಖರ್ ಹಾಗೂ ರಂಗಭೂಮಿ ಕಲಾವಿದ ಪೊಲೀಸ್ ಇಲಾಖೆಯ ಎಂ.ಸಿ.ವಿಶ್ವನಾಥ ಅವರು ಭಾಗವಹಿಸಲಿದ್ದಾರೆಂದು ವೇದಿಕೆಯ ಕಾರ್ಯದರ್ಶಿ ಕೆ.ಎಸ್. ನೂರುಲ್ಲಾ ತಿಳಿಸಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯ ವಿರುದ್ಧ ಜನಜಾಗೃತಿ ಅಭಿಯಾನ
ಕೋಲಾರ: ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸಾಚಾರ ವಿರೋಧ ಜನತೆಯಲ್ಲಿ ಜಾಗೃತಿ ಮೂಡಿಸಲು 16 ದಿನ ಆಂದೋಲನ ಇಂದಿನಿಂದ ಪ್ರಾರಂಭಿಸಲಾಗುತ್ತಿದೆ ಎಂದು ದಿ.ಹಂಗರ್ ಪ್ರಾಜೆಕ್ಟ್ನ ಜಿಲ್ಲಾ ಸಂಯೋಜಿಕಿ ಪಿ. ಶಿಲ್ಪ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ತಾಲೂಕಿನ 10 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಿಳಾ ಜಾಗಣತಿ ವೇದಿಕೆಗಳನ್ನು ರಚನೆ ಮಾಡುವುದರ ಮೂಲಕ ಆಂದೋಲನಕ್ಕೆ ಶಕ್ತಿ ತುಂಬಲಾಗಿದೆ ಎಂದರು. ಮಹಿಳಾ ಜಾಗೃತಿ ವೇದಿಕೆಗಳು ಇರುವಂತಹ ಈ ಗ್ರಾ.ಪಂ.ಗಳಲ್ಲಿ ಸದಸ್ಯರ ಜತೆಗೆ ಗ್ರಾಮದ ಮಹಿಳೆಯರಿಗೆ ಹಕ್ಕುಗಳ ಉಲ್ಲಂಘನೆ, ಹಕ್ಕುಗಳ ಬಗ್ಗೆ ಅರಿವು, ಕಾನೂನು ನೆರವು ಹಾಗೂ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು. ಕಳೆದ ವರ್ಷವೂ ನ.25 ರಿಂದ ಡಿ.25 ಆಂದೋಲನ ಹಮ್ಮಿಕೊಳ್ಳಲಾಗಿತ್ತು. ಈ ವರ್ಷವೂ ಇದನ್ನು ಮುಂದುವರಿಸಿದ್ದು, ಇತ್ತೀಚೆಗೆ ಮಹಿಳೆ ಮೇಲೆ ನಡೆಯುತ್ತಿರುವ ಹಿಂಸಾಚಾರ, ದೌರ್ಜನ್ಯ, ಹಲ್ಲೆ, ಹಕ್ಕುಗಳ ಉಲ್ಲಂಘನೆ ನಡೆಯುತ್ತಿರುವುದರಿಂದ ಮಹಿಳೆಯರಿಗೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯ ಇರುವುದರಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಬಂಗಾರಪೇಟೆ ತಾಲೂಕಿನ ಹುಲಿಬೆಲೆ ಗ್ರಾ.ಪಂ.ಸದಸ್ಯ ಬಿ.ವಿ.ಜಯಂತಿ, ವೇಮಗಲಲ್ಪಂಚಾಯಿತಿಯ ಜರೀನ್ತಾಜ್,ಐತರಾಸನಹಳ್ಳಿಯ ವನಿತಾ, ಮಾತನಾಡಿ, ತಾವುಗಳು ದಿ.ಹಂಗರ್ ಪ್ರಾಜೆಕ್ಟ್ನ ಮೂಲಕ ತರಬೇತಿ ಪಡೆದು ನಮ್ಮ ಹಕ್ಕುಗಳನ್ನು ಚಲಾಯಿಸುತ್ತಿರುವುದಾಗಿ ಹೇಳಿದರು. ವೇಮಗಲ್ ಗ್ರಾ.ಪಂ.ಸದಸ್ಯೆ ಯಲ್ಲಮ್ಮ, ಸ್ವರೂಪ ರಾಣಿ ಇದ್ದರು.
ಶ್ರೀಕೃಷ್ಣ ಸಂಧಾನ ನಾಟಕ ಪ್ರದರ್ಶನ
ಶಿಡ್ಲಘಟ್ಟ: ಕಲೆ, ಸಂಸ್ಕೃತಿ, ಜಾನಪದ ಸೊಗಡನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಭಕ್ತರಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಸ್.ಎನ್. ವೆಂಕಟೇಶ್ ಹೇಳಿದರು. ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಎಂ. ಮಳ್ಳೂರು ಶಿವಣ್ಣ ನಿರ್ದೇಶನದಲ್ಲಿ ನಡೆದ ಶ್ರೀಕೃಷ್ಣ ಸಂಧಾನ ನಾಟಕದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕತೆ ಬೆಳೆದಂತೆಲ್ಲಾ ಹರಿಕಥೆಗಳು, ನಾಟಕಗಳು, ಜಾನಪದಗಳ ಸೊಗಡು ಕಣ್ಮರೆಯಾಗುತ್ತಿದೆ. ಯುವ ಜನತೆ ಆಧುನಿಕತೆಯ ವೈವಿಧ್ಯಮಯ ಜೀವನದ ಕಡೆಗೆ ಆಕರ್ಷಿತರಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಯುವ ಜನತೆಗೆ ಜಾನಪದ, ಕಲೆ, ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕೆಂದರು. ಕಾರ್ಯಕ್ರಮದಲ್ಲಿ ನಿರ್ದೇಶಕ ಎಂ. ಮಳ್ಳೂರು ಶಿವಣ್ಣ, ಬಿ.ಎಂ. ಗೋಪಾಲಗೌಡ, ನಾಗರಾಜ್, ರಮೇಶ್, ಚನ್ನೇಗೌಡ, ನಾರಾಯಣಸ್ವಾಮಿ, ಎಂ. ವೆಂಕಟಮೂರ್ತಿ, ಪಿ.ವಿ. ಮುನೇಗೌಡ, ಕೃಷ್ಣಪ್ಪ, ಎಂ. ವೆಂಕಟೇಶಪ್ಪ ಇದ್ದರು.
'ಗಡಿಗಳಲ್ಲಿ ಕನ್ನಡ ಉಳಿಸಲು ಬದ್ಧರಾಗಿ'
ಗೌರಿಬಿದನೂರು: ಗಡಿ ಭಾಗಗಳಲ್ಲಿ ಕನ್ನಡ ಭಾಷೆಯನ್ನು ಉಳಿಸಲು ನಾವುಗಳು ಬದ್ಧರಾಗಬೇಕು ಹಾಗೂ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಭಾಷೆ ಸೀಮಿತವಾಗಬಾರದೆಂದು ತಾಯ್ನಾಡು ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಹೆಚ್.ಬಿ ರಾಜೇಗೌಡ ಅಭಿಪ್ರಾಯಪಟ್ಟರು. ಅವರು ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಗಡಿಕನ್ನಡಿಗರ ರೈಲು ಪ್ರಯಾಣಿಕರ ಹಾಗೂ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಏಳನೇ ವರ್ಷದ ಕನ್ನಡ ರಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ಕಾರ ಕನ್ನಡ ಶಾಲೆ ಮುಚ್ಚುವ ಯೋಜನೆಯನ್ನು ಕೈಬಿಡಬೇಕು ಶಾಲೆಗಳಲ್ಲಿ ಕನ್ನಡ ಭಾಷೆಗೆ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು. ಗೆಳೆಯರ ಬಳಗವು ಬೆಳಗಿನ ಹಿಂದೂಪುರ ಮತ್ತು ಬೆಂಗಳೂರು ಪ್ಯಾಸೆಂಜರ್ ರೈಲಿಗೆ ಹೂವಿನಿಂದ ಅಲಂಕರಿಸಿ ಕನ್ನಡ ಭಾವುಟವನ್ನು ಆರಿಸಿ ಕನ್ನಡದ ಪರ ಘೋಷಣೆ ಕೂಗಿದರು. ರಾಜ್ಯೋತ್ಸವದಲ್ಲಿ ತಾಲೂಕು ಅಧ್ಯಕ್ಷ ಸುರೇಶ್ಬಾಬು, ಕೆ.ಎನ್ ಅಶ್ವತ್ಥನಾರಾಯಣಪ್ಪ, ಪ್ರಕಾಶ, ಕಿಟ್ಟಿ,ಬದರಿ, ಉಪಾಧ್ಯಕ್ಷ ಮೂರ್ತಿ, ನಟರಾಜು, ಲಕ್ಷ್ಮೀನಾರಾಯಣ, ಮಾರುತಿ ಮುಂತಾದ ಪದಾಧಿಕಾರಿಗಳು ಭಾಗವಹಿಸಿದ್ದರು.
ಗೃಹಿಣಿ ಸಾವು
ಚಿಂತಾಮಣಿ: ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಭಟ್ಲಹಳ್ಳಿ ಗ್ರಾಮದಲ್ಲಿ ಸೋಮವಾರನಡೆದಿದೆ. ತಾಲೂಕಿನ ಭಟ್ಲಹಳ್ಳಿ ಗ್ರಾಮದ ದಲಿತರ ಕಾಲೋನಿಯಲ್ಲಿ ಪದ್ಮಾವತಿ 35 ವರ್ಷ ಅನುಮಾನಾಸ್ಪದವಾಗಿ ಮೃತನ ಪೋಷಕರು ಪೊಲೀಸರಿಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಕಳೆದ ಹಲವು ವರ್ಷಗಳ ಹಿಂದೆ ಚಿಂತಾಮಣಿ ತಾಲೂಕಿನ ಚೌಡದೇನಹಳ್ಳಿ ಗ್ರಾಮದಿಂದ ಭಟ್ಲಹಳ್ಳಿ ಗ್ರಾಮದ ಕೋನಪ್ಪ ಎಂಬಾತನೊಂದಿಗೆ ವಿವಾಹ ನಡೆದಿತ್ತು. ಪದ್ಮಾವತಿಯನ್ನು ಕಿರುಕುಳ ನೀಡಿ ಸಾಯಿಸಿರಬಹುದೆಂದು ಭಟ್ಲಹಳ್ಳಿ ಪೊಲೀಸ್ ಠಾಣೆಯ ಎದುರು ಮೃತಳ ಪೋಷಕರು ಶಂಕೆ ವ್ಯಕ್ತಪಡಿಸಿದ್ದಾರೆ. ಭಟ್ಲಹಳ್ಳಿ ಠಾಣೆಯಲ್ಲಿ ಕೇಸು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

