ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಅಂದ್ರೆ ಬೇನೆ!
-ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ: ಹೆರಿಗೆ ನೋವು ಕಾಣಿಸಿಕೊಂಡಾಗ ತಕ್ಷಣ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಗರ್ಭಿಣಿಯನ್ನು ಕರೆದುಕೊಂಡು ಬರಲು ಜನರು ತುಂಬಾ ಹೆದರುತ್ತಿದ್ದಾರೆ. ಕಾರಣ, ಬಡವರ ಆಸ್ಪತ್ರೆ ಎಂದು ಕರೆಸಿಕೊಳ್ಳುವ ಈ ಆಸ್ಪತ್ರೆಯಲ್ಲಿ ತುರ್ತು ಹೆರಿಗೆ ಮಾಡಿಸುವ ವೈದ್ಯರ ಸಮಸ್ಯೆ ಪ್ರಮುಖವಾಗಿ ಕಾಡುತ್ತಿರುವುದು.
ಸರ್ಕಾರ ಲಕ್ಷಾಂತರ ರು. ಸಂಬಳ ನೀಡುತ್ತೇವೆ ಎಂದೇಳುತ್ತಿದ್ದರೂ ಸಹ ಅನೇಕರ ಜೀವಗಳನ್ನು ಕಾಪಾಡಬೇಕಾಗಿರುವ ವೈದ್ಯರು ಮಾತ್ರ ಸರ್ಕಾರಿ ಆಸ್ಪತ್ರೆಗಳಿಗೆ ಸೇವೆ ಮಾಡಲು ಬರುತ್ತಿಲ್ಲ. ಇನ್ನೂ ಹಾಲಿ ಇರುವ ವೈದ್ಯರುಗಳೇ ಖಾಸಗಿ ಆಸ್ಪತ್ರೆಗಳ ಕಡೆಗೆ ಸಂಪಾದನೆಯ ಒಲವಿನಿಂದ ಹೋಗುತ್ತಿದ್ದಾರೆ. ಎಲ್ಲೆಡೆ ಕಂಡು ಬರುತ್ತಿರುವ ಇಂತಹ ಸಮಸ್ಯೆಯಿಂದ ಇಲ್ಲಿನ ಜಿಲ್ಲಾ ಸರ್ಕಾರಿಯು ಸಹ ಹೊರತಾಗಿಲ್ಲ.
ವರ್ಗಾವಣೆ ಹೆರಿಗೆ: ಹೆಸರಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಾದರೂ ಸಹ ಇಲ್ಲಿ ಹೆರಿಗೆ ಮಾಡಿಸುವ ವೈದ್ಯರ ಹುದ್ದೆ ಕಳೆದ ಅನೇಕ ತಿಂಗಳುಗಳಿಂದಲೂ ಖಾಲಿ ಬಿದ್ದಿದೆ. ಹಿಂದೆ ಇದ್ದವರು ಇದೀಗ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಈ ನಡುವೆ ಶಾಸಕ ಸುಧಾಕರ್ ಒತ್ತಡದಿಂದ ಹೊಸದಾಗಿ ಮತ್ತೊಬ್ಬ ವೈದ್ಯರನ್ನು ನೇಮಿಸಿಕೊಂಡರೂ ಸಹ ಆ ವೈದ್ಯರು ಬಂದ ವೇಗದಲ್ಲಿಯೇ ಕೆಲಸವನ್ನು ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಶಿಡ್ಲಘಟ್ಟ ಮತ್ತು ಚಿಂತಾಮಣಿಯಿಂದ ಹೆರಿಗೆ ಮಾಡಿಸಲು ಇಬ್ಬರು ವೈದ್ಯರನ್ನು ಇಲ್ಲಿಗೆ ಕರೆಸಿಕೊಳ್ಳಲಾಗುತ್ತಿದೆ. ವಾರದ 7 ದಿನಗಳಲ್ಲಿ ತಲಾ 3 ದಿನಗಳ ಸೇವೆ ಸಿಗುವ ವ್ಯವಸ್ಥೆಯಂತೆ ದಿನ ಬಿಟ್ಟು ದಿನ ವೈದ್ಯರು ಇಲ್ಲಿಗೆ ಬಂದು ಹೆರಿಗೆ ಮಾಡಿಸುತ್ತಿದ್ದಾರೆ.ದಿನದಲ್ಲಿ ಬೆಳಗ್ಗೆ 10 ಗಂಟೆಗೆ ಬಂದು ಸಂಜೆ 6 ಗಂಟೆಯವರೆಗೂ ನಿರಂತರವಾಗಿ ಕೆಲಸದಲ್ಲಿ ತೊಡಗಿದ್ದರೂ ಸಹ ಇವರ ಪರಿಸ್ಥಿತಿ ಅಲ್ಲಿಯೂ, ಇಲ್ಲಿಯೂ ಸಮರ್ಪಕವಾಗಿ ಕೆಲಸ ಮಾಡದಂತಿದೆ. ಸಂಜೆ 6 ಗಂಟೆ ಮೇಲೆ ಬೆಳಗ್ಗೆ 10 ಗಂಟೆಯವರೆಗೂ ಈ ವೈದ್ಯರ ಸೇವೆ ಇಲ್ಲಿ ಸಿಗುವುದಿಲ್ಲ.ಏನಾದರೂ ಹೆರಿಗೆ ನೋವು ಹೇಳಿ ಕೇಳಿ ಬರುತ್ತದೆಯೇ.ಒಂದು ವೇಳೆ ಮಧ್ಯರಾತ್ರಿ(ಅಸಲಿಗೆ ರಾತ್ರಿ ಸಮಯದಲೆಲ್ಲಾ) 12 ಅಥವಾ ಮುಂಜಾವ 3 ಗಂಟೆಗೇನಾದರೂ ಹೆರಿಗೆ ನೋವಿಗೆ ತುತ್ತಾದ ಮಹಿಳೆಯನ್ನು ಇಲ್ಲಿಗೆ ಕರೆದುಕೊಂಡು ಬಂದರೆ ದೇವರೇ ಗತಿ.
ಸಾಮಾನ್ಯ ವೈದ್ಯರು ಇಲ್ಲವೇ ಶುಶ್ರೂಷಕಿಯರೇ ಹೆರಿಗೆ ಮಾಡಿಸಬೇಕು. ಈ ಸಂದರ್ಭದಲ್ಲಿ ಹೆರಿಗೆ ಗಂಭೀರ ಸ್ಥಿತಿಗೆ ತಿರುಗಿದರೆ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಶಿಫಾರಸ್ಸೇ ಗತಿ. ಇಲ್ಲಿ ಪ್ರಮುಖ ಅಂಶ ಏನೆಂದರೆ, ರಾತ್ರಿ ಪಾಳೇಯದಲ್ಲಿ ಏಕೆ ಅಷ್ಟು ರಿಸ್ಕ್ ತೆಗೆದುಕೊಳ್ಳಬೇಕೆಂಬ ಭಾವನೆಯಲ್ಲಿ ಸಾಮಾನ್ಯ ಹೆರಿಗೆಯಾಗುವಂತಹ ಲಕ್ಷಣಗಳಿದ್ದರೂ ಸಹ ಪರಿಸ್ಥಿತಿ ಗಂಭೀರವಾಗಿದೆ ಎಂದೇಳಿ ಸಾಗು ಹಾಕುವಂತಹುದೇ ಹೆಚ್ಚಿಗೆ ನಡೆಯುತ್ತಿದೆ. ಇತ್ತೀಚೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸು ಮಾಡಲಾದ ಇಬ್ಬರು ಮಹಿಳೆಯರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ, ಮತ್ತೊಬ್ಬ ಮಹಿಳೆಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾಮಾನ್ಯ ಹೆರಿಗೆಯಾಗಿರುವಂತಹುದು ನಿದರ್ಶನಗಳೆನ್ನಬಹುದು.
ಖಾಸಗಿ ವರದಾಯಕ: ಮೊದಲೇ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಿದ್ದವರೂ ಇದೀಗ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಮಾಡುತ್ತಿರುವುದರ ನಡುವೆ ಸರ್ಕಾರಿ ಆಸ್ಪತ್ರೆಯಲ್ಲಿನ ಹೆರಿಗೆ ಮಾಡಿಸುವ ವೈದ್ಯರ ಸಮಸ್ಯೆ ಖಾಸಗೀ ಆಸ್ಪತ್ರೆಗಳಿಗೆ ವರದಾಯಕವಾಗಿದೆ. 108 ಆಂಬ್ಯುಲೆನ್ಸ್ ವಾಹನದಲ್ಲಿ ಗರ್ಭಿಣಿಯರು ತ್ವರಿತವಾಗಿ ಸರ್ಕಾರಿ ಆಸ್ಪತ್ರೆಗೆ ಬಂದು ಇಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಮತ್ತೆ ಖಾಸಗಿ ಆಸ್ಪತ್ರೆಗಳಿಗೆ ಅನಿವಾರ್ಯವಾಗಿ ಮೊರೆ ಹೋಗುತ್ತಿದ್ದಾರೆ. ಈ ಮೂಲಕ ಸರ್ಕಾರಿ ಆಸ್ಪತ್ರೆಯ ರೋಗಿಗಳು ಖಾಸಗಿ ಆಸ್ಪತ್ರೆಗಳ ಗಿರಾಕಿಗಳಾಗುತ್ತಿದ್ದು ಖಾಸಗಿ ಆಸ್ಪತ್ರೆಯಲ್ಲಿ 20 ಸಾವಿರ ರು.ಗಳಿಂದ ಹಿಡಿದು 35 ಸಾವಿರ ರು.ಗಳವರೆಗೂ ಹಣವನ್ನು ಪೀಕಲಾಗುತ್ತಿದೆ. ಉಳ್ಳವರೇನೋ ಸರಿ ಇನ್ನೂ ಬಡವರ ಗತಿ ಏನಾಗಬೇಕು. ಇಲ್ಲಿನ ಖಾಸಗಿ ಆಸ್ಪತ್ರೆಗಳಿಗೆ ಹೋಗಲಾಗದೇ ಹಲವರು ತತ್ತರಿಸುತ್ತಿದ್ದಾರೆ.
ಗಮನಕೊಡಿ ಸ್ವಾಮಿ: 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಹೈಟೆಕ್ ಮಾದರಿಯಲ್ಲಿ ಇಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದೇಳಿ ಪ್ರಚಾರ ಪಡೆಯುತ್ತಿರುವ ಕೇಂದ್ರ ಸಚಿವರಾಗಲಿ ಅಥವಾ ಸ್ಥಳೀಯ ಜನಪ್ರತಿನಿಧಿಗಳಾಗಲಿ, ಜಿಲ್ಲಾಡಳಿತವಾಗಲಿ ಇತ್ತ ಗಮನಹರಿಸಬೇಕಾಗಿದೆ. ಇಡೀ ರಾಜ್ಯಾದ್ಯಂತ ವೈದ್ಯರ ಕೊರತೆ ಇದೆ ಎಂಬ ಸಬೂಬು ಬಡವರ ಜೀವವನ್ನು ಉಳಿಸುವುದಿಲ್ಲ. ಮೂಲ ಸೌಕರ್ಯಗಳನ್ನು ಒದಗಿಸದೇ ಕೇವಲ ಕಟ್ಟಡವನ್ನು ನಿರ್ಮಾಣ ಮಾಡಿ ಬಿಟ್ಟರೆ ರೋಗಿಗಳ ಸಮಸ್ಯೆ, ಜತೆಗೆ ವೈದ್ಯರ ಮೇಲಿರುವ ಒತ್ತಡ ದೂರವಾಗುವುದಿಲ್ಲ. ಸೂಕ್ತ ಸಂಬಳವನ್ನು ಕೊಡುತ್ತೇವೆ ಎಂದು ಹೇಳುತ್ತಿದ್ದರೂ ಸಹ ವೈದ್ಯರು ಬರುತ್ತಿಲ್ಲ ಎನ್ನುವುದನ್ನು ಹೇಳದೇ ಪ್ರಮುಖವಾಗಿ ಈ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಬಡ ಗರ್ಭಿಣಿಯರ(ಜತೆಗೆ ತಾಯಿ ಮತ್ತು ಮಗು) ಪ್ರಾಣ ಹಾನಿ ಸಂಭವಿಸುವುದು. ಖಾಸಗೀ ಆಸ್ಪತ್ರೆಗಳ ಸುಲಿಗೆ ಮಾಡುವುದು ಮುಂದುವರೆಯುತ್ತಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

