ಕಾಲುಬಾಯಿ ಜ್ವರದಿಂದ ರಾಸುಗಳ ಸಾವು: ಪರಿಹಾರಕ್ಕೆ ವೀರಯ್ಯ ಆಗ್ರಹ
ಕೋಲಾರ: ಪಶುಪಾಲನಾ ಇಲಾಖೆ ಹಾಗೂ ಹಾಲು ಒಕ್ಕೂಟದ ವೈಫಲ್ಯದಿಂದ ಜಿಲ್ಲೆಯಲ್ಲಿ ನೂರಾರು ಜಾನುವಾರುಗಳು ಸಾವನ್ನಪ್ಪಿದ್ದು, ಸರ್ಕಾರ ಕೂಡಲೇ ಸೂಕ್ತಪರಿಹಾರ ನೀಡಬೇಕು ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವುದಾಗಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಎಚ್ಚರಿಸಿದ್ದಾರೆ.
ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ನಂತರ ಬೈರಂಡಹಳ್ಳಿ ಗ್ರಾಮದಲ್ಲಿ ರೈತರ ಮನವಿ ಆಲಿಸಿ ಅವರು ಮಾತನಾಡುತ್ತಿದ್ದರು.
ಬೈರಂಡಹಳ್ಳಿ ಒಂದರಲ್ಲೇ 30ಕ್ಕೂ ಹೆಚ್ಚು ಜಾನುವರುಗಳು ಸಾವನ್ನಪ್ಪಿವೆ, ಪಶುಪಾಲನಾ ಇಲಾಖೆ ಮತ್ತು ಕೆಎಂಎಫ್ ನಿರ್ಲಕ್ಷಕ್ಕೆ ಇದು ಕಾರಣವಾಗಿದೆ, ಈ ರಾಸುಗಳಿಗೆ ನೀಡಲಾಗಿದ್ದ ವಿಮೆ ನವೀಕರಿಸದ ಕಾರಣ ಇಂದು ರೈತರು ಸಂಕಷ್ಟಕ್ಕೊಳಗಾಗಿದ್ದಾರೆ ಎಂದರು.
ಸರ್ಕಾರಿ ಜಾನುವಾರು ಕಳೆದುಕೊಂಡ ಎಲ್ಲಾ ರೈತರು ಬಡವರಿದ್ದು, ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ, ಅವರ ಬದುಕಿಗೆ ಆಧಾರವಾಗಿದ್ದ ಹಸು ಸಾವನ್ನಪ್ಪಿರುವುದು ಅವರ ಆತಂಕಕ್ಕೆ ಕಾರಣವಾಗಿದೆ ಎಂದರು.
ಸರ್ಕಾರ ಕೂಡಲೇ ಎಲ್ಲಾ ರೈತರಿಗೂ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ಅವರು, ಬೈರಂಡಹಳ್ಳಿ ಗ್ರಾಮದಲ್ಲಿ ಇನ್ನು ಹಲವಾರು ಜಾನುವಾರುಗಳಿಗೂ ಕಾಲುಬಾಯಿ ಜ್ವರ ಬಂದಿದ್ದು, ಅವುಗಳ ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ವೈದ್ಯರ ತಂಡ ಊರಿನಲ್ಲೇ ಉಳಿದುಕೊಂಡು ರಾಸುಗಳ ರಕ್ಷಣೆಗೆ ಮುಂದಾಗಬೇಕು, ಇಲ್ಲವಾದಲ್ಲಿ ಕೆಎಂಎಫ್ ಮುಂದೆ ರೈತರೊಂದಿಗೆ ತಾವು ಪ್ರತಿಭಟನೆ ನಡೆಸುವುದಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಕೆ.ಎಸ್. ರಾಜೇಂದ್ರ, ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ಓಹಿಲೇಶ್ವರ್, ಕಲ್ಕೆರೆ ವಿಜಯಕುಮಾರ್, ಕೇಬಲ್ ಅಧ್ಯಕ್ಷ ಮುಖೇಶ್,ನಾರಾಯಣಸ್ವಾಮಿ, ಗಂಗಾರೆಡ್ಡಿ, ಬೈರಂಡಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಚಂದ್ರಪ್ಪ, ಸುರೇಶ್ಕುಮಾರ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶಿವಾರೆಡ್ಡಿ ಮತ್ತಿತರರು ಈಸಂದರ್ಭದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

