ರಾಹುಲ್ ಪ್ರಧಾನಿ ಮಾಡಲು ಆಂಧ್ರ ವಿಭಜನೆಗೆ ಸಂಚು
ಕ.ಪ್ರ ವಾರ್ತೆ, ಕೋಲಾರ, ಅ.9
ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಪುತ್ರ ರಾಹುಲ್ ಗಾಂಧಿಯರವನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುವ ಉದ್ದೇಶದಿಂದ ಅಖಂಡ ಆಂಧ್ರ ಪ್ರದೇಶವನ್ನು ವಿಭಜನೆ ಮಾಡಲು ಸಂಚು ನಡೆಸಿದ್ದಾರೆಂದು ಬಿಜೆಪಿಯ ಮುಖಂಡ, ಮಾಜಿ ಶಾಸಕ ನಂದೀಶರೆಡ್ಡಿ ಆರೋಪಿಸಿದರು.
ನಗರದ ಚೊಕ್ಕ ಕನ್ವೆಷನ್ ಹಾಲಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕುರ್ಚಿ ಆಸೆಗಾಗಿ ಸೋನಿಯಾ ಗಾಂಧಿಯವರು ಆಂಧ್ರ ವಿಭಜನೆ ಮಾತ್ರವಲ್ಲ, ದೇಶವನ್ನು ಒಡೆಯಲು ಸಿದ್ಧರಾಗಿದ್ದಾರೆಂದು ಕಿಡಿಕಾರಿದರು.
ದೇಶದಲ್ಲಿ ಕಾಂಗ್ರೆಸ್ ವಿರುದ್ಧ ಈಗ ಜನತೆ ತಿರುಗಿ ಬಿದ್ದಿದ್ದಾರೆ. ಗುಜರಾತ್ ರಾಜ್ಯದಲ್ಲಿ ಅಭಿವೃದ್ಧಿಯ ಪರ್ವ ಸೃಷ್ಟಿಸಿ ಜನಪ್ರಿಯರಾಗಿರುವ ನರೇಂದ್ರ ಮೋದಿಯವರನ್ನು ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ ನಂತರ ಇಡೀ ದೇಶದಲ್ಲಿ ಮೋದಿ ಅಲೆ ಜೋರಾಗುತ್ತಿದೆ, ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ 273 ಸ್ಥಾನಗಳಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವೆಂದು ನುಡಿದರು. ಮೋದಿ ಪ್ರಧಾನಿಯಾದರೆ ಭಾರತ ಎಲ್ಲಾ ರಂಗಗಳಲ್ಲಿ ಪ್ರಗತಿ ಸಾಧಿಸಿ ಜಗತ್ತಿನಲ್ಲಿ ಮೊದಲ ಸ್ಥಾನ ಪಡೆಯುತ್ತದೆ ಎಂಬ ಕಾರಣದಿಂದ ಕೆಲವು ರಾಷ್ಟ್ರಗಳು ಮೋದಿ ಪ್ರಧಾನಿ ಆಗುವುದಕ್ಕೆ ಇಷ್ಟ ಪಡುತ್ತಿಲ್ಲ. ಕಾಂಗ್ರೆಸ್ ಪಕ್ಷವೂ ಇದೇ ರೀತಿಯ ಕುತಂತ್ರ ಮಾಡುತ್ತಿದೆ. ಮತದಾರರು ಈ ಬಾರಿ ನಮೋ ಬ್ರಿಗೇಡ್ ಅವರನ್ನು ಪ್ರಧಾನಿ ಮಾಡುವುದಕ್ಕೆ ತುದಿಗಾಲಿನಲ್ಲಿ ನಿಂತಿದ್ದು, ಕೋಲಾರ ಕ್ಷೇತ್ರದಲ್ಲೂ ಬಿಜೆಪಿ ವಿಜಯ ಪತಾಕೆ ಹಾರಿಸಲು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ನಾಲ್ಕೈದು ಆಕಾಂಕ್ಷಿಗಳಿದ್ದಾರೆ. ಪಕ್ಷದ ವರಿಷ್ಠರು ಯಾರಿಗೇ ಟಿಕೆಟ್ ನೀಡಿದರೂ ಬಿನ್ನಮತ ಬಿಟ್ಟು ಒಗ್ಗಟ್ಟಿನಿಂದ ಅಧಿಕೃತ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುವ ಮೂಲಕ ಪಕ್ಷಕ್ಕೆ ಜಯ ತಂದುಕೊಡಬೇಕೆಂದು ತಿಳಿಸಿದರು.
ನರೇಂದ್ರ ಮೋದಿಯವರು ಅ.16 ರಂದು ರಾಜ್ಯದಲ್ಲಿ ಪ್ರವಾಸ ನಡೆಸುತ್ತಿದ್ದು ಜಿಲ್ಲೆಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಭಾಗವಹಿಸಬೇಕೆಂದು ಮನವಿ ಮಾಡಿದರು.
ಕೆಜಿಎಫ್ ಮಾಜಿ ಶಾಸಕ ವೈ. ಸಂಪಂಗಿ ಮಾತನಾಡಿ, ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಲು ಬದ್ಧರಾಗಿದ್ದಾರೆಂದು ನುಡಿದರು.
ಹಾಲಿ ಸಂಸದ, ಸಚಿವ ಕೆ.ಎಚ್. ಮುನಿಯಪ್ಪನವರು ಇಷ್ಟು ದಿನ ಜನರನ್ನು ಮರಳು ಮಾಡಿ ಅಧಿಕಾರ ಅನುಭವಿಸಿದ್ದರೂ ಯಾವುದೇ ಗುರುತರವಾದ ಅಭಿವೃದ್ಧಿ ಕೆಲಸವಾಗಿಲ್ಲ. ಬಿಜೆಪಿಗೆ ಕಾಂಗ್ರೆಸ್ ಎದುರಾಳಿ, ಕೇಂದ್ರದಲ್ಲಿನ ಯುಪಿಎ ಆರೋಗ್ಯ ಕೆಟ್ಟಿರುವುದರಿಂದ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ವಿಶ್ರಾಂತಿ ನೀಡಿ ಬಿಜೆಪಿಯನ್ನು ಗೆಲ್ಲಿಸಬೇಕೆಂದರು.
ಜಿಲ್ಲೆಗೆ ನರೇಂದ್ರ ಮೋದಿ ಹಾಗೂ ಇತರ ಪ್ರಮುಖ ರಾಷ್ಟ್ರೀಯ ನಾಯಕರನ್ನು ಕರೆಸಬೇಕೆಂದು ಮನವಿ ಮಾಡಿದ ಅವರು, ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಡಿಸಿಸಿ ಬ್ಯಾಂಕ್, ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಜಯ ತಂದುಕೊಡುವುದಕ್ಕೆ ಕಾರ್ಯಕರ್ತರನ್ನು ಸಿದ್ಧಪಡಿಸುವಂತೆ ಮುಖಂಡರಿಗೆ ಸಲಹೆ ನೀಡಿದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ, ಮಾಜಿ ಶಾಸಕ ಎಂ. ನಾರಾಯಣಸ್ವಾಮಿ, ನಿವೃತ್ತ ಪೊಲೀಸ್ ಅಧಿಕಾರಿ ರಂಗಪ್ಪ, ವೆಂಕಟೇಶ ಮೌರ್ಯ ಅವರು ತಾವೂ ಅಕಾಂಕ್ಷಿಯಾಗಿದ್ದರೂ ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುವುದಾಗಿ ಪ್ರಕಟಿಸಿದರು.
ಪಕ್ಷದ ಜಿಲ್ಲಾ ಸಂಘಟನೆಯ ಜವಾಬ್ದಾರಿ ಹೊತ್ತಿರುವ ಬಿಬಿಎಂಪಿ ಸದಸ್ಯ ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಮಿತಿ ಅಧ್ಯಕ್ಷ ಕೃಷ್ಣಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ನರಸಿಂಹರಾಜು, ನಗರ ಘಟಕದ ಅಧ್ಯಕ್ಷ ಜಯಂತಿ ಲಾಲ್ ಇದ್ದರು. ಪ್ರಧಾನ ಕಾರ್ಯದರ್ಶಿ ಮಾಗೇರಿ ನಾರಾಯಣಸ್ವಾಮಿ ನಿರೂಪಿಸಿದರು.
ಓಂಶಕ್ತಿ ಚಲಪತಿ ಆಯ್ಕೆ: ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಓಂಶಕ್ತಿ ಚಲಪತಿ ಅವರನ್ನು ರಾಜ್ಯ ಸಮಿತಿಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಮಾಜಿ ಶಾಸಕ ನಂದೀಶರೆಡ್ಡಿ ಪ್ರಕಟಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

