ಕೋಲಾರ

ಇದು ಬೊಂಬೆ ಆಟವಯ್ಯ...

Published On :


ಕ.ಪ್ರ.ವಾರ್ತೆ, ಕೋಲಾರ,ಅ.10
ನವರಾತ್ರಿ ಪ್ರಯುಕ್ತ ಪ್ರತಿವರ್ಷ ಆಚರಿಸುವ ದಸರ ಹಬ್ಬದ ವಿಶೇಷವೆಂದರೆ ಬೊಂಬೆಗಳ ಪ್ರದರ್ಶನ.
ಆಧುನೀಕತೆಯ ಭರಾಟೆಯಿಂದಾಗಿ ಅನೇಕರು ಹಬ್ಬ-ಹರಿ ದಿನಗಳ ಆಚರಣೆ ಕಡಿಮೆ ಮಾಡಿದ್ದಾರೆ, ಸಂಪ್ರದಾಯ ಮರೆಯುತ್ತಿದ್ದಾರೆ, ಅವಿಭಜಿತ ಕುಟುಂಬಗಳು ವಿಭಜನೆಯಿಂದ ಮಾನವೀಯ ಸಂಬಂಧಗಳು ಕ್ಷೀಣಿಸುವಂತಾಗಿದೆ.
ಇದಕ್ಕೆ ತದ್ವಿರುದ್ಧವೆಂಬಂತೆ ಕೋಲಾರ ನಗರದಲ್ಲಿ ಕೆಲವು ಮನೆಗಳಲ್ಲಿ ಹಿರಿಯರು ಅಂದರೆ ಪೂರ್ವಿಕರು ಹಾಕಿಕೊಟ್ಟಿರುವ ಮಾರ್ಗವನ್ನು ಮರೆಯದೆ ಹಬ್ಬಗಳನ್ನು ಅತ್ಯಂತ ವೈಭವದಿಂದ, ಅರ್ಥಗರ್ಭಿತವಾಗಿ ಆಚರಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಒಂದಿಷ್ಟು ನೆನಪುಗಳನ್ನು ಉಳಿಸುವ ಪ್ರಯತ್ನ ಸಾಗಿದೆ. ಇಂದು ಅನೇಕರು ತಮ್ಮ ಮನೆಗಳಲ್ಲಿ ಅಸ್ತಂಗತರಾಗಿರುವ ಜನರನ್ನು ಸಹ ನೆನಪು ಮಾಡಿಕೊಳ್ಳದಂತಾಗಿದೆ. ಆದರೆ, ಕೋಲಾರದ ಹಿರಿಯ ಪತ್ರಕರ್ತ ದಿ. ಕೃಷ್ಣಸ್ವಾಮಿಯವರ ಧರ್ಮಪತ್ನಿ ರತ್ನಮ್ಮ ಅವರು ಕಳೆದ 60 ವರ್ಷಗಳಿಂದ ತಮ್ಮ ಮನೆಯಲ್ಲಿ ದಸರ ಪ್ರಯುಕ್ತ ಬೊಂಬೆ ಪ್ರದರ್ಶನ ಏರ್ಪಡಿಸಿ ಮನೆಯರಿಗೆ ಮಾತ್ರವಲ್ಲದೆ ಅಕ್ಕ-ಪಕ್ಕದ ಜನರಿಗೆ, ಮುಖ್ಯವಾಗಿ ಮಕ್ಕಳಿಗೆ, ಊರಿನಲ್ಲಿರುವ ನೆಂಟರು, ಪರಿಚಿತರಿಗೆ ನವರಾತ್ರಿಯ ವಿಶೇಷತೆಯನ್ನು ಸಾಗುತ್ತಿದ್ದಾರೆ.
100 ವರ್ಷಗಳಿಂದ ಹಬ್ಬ:  ಕೃಷ್ಣಸ್ವಾಮಿಯವರ ಮಡದಿಯಾಗುವ ಮುನ್ನ ತವರು ಮನೆಯಲ್ಲೂ ನವರಾತ್ರಿ ಹಬ್ಬ ಜೋರಾಗಿ ನಡೆಯುತ್ತಿತ್ತು, ಗಂಡನ ಮನೆಯಲ್ಲೂ ಸುಮಾರು 100 ವರ್ಷಗಳಿಂದ ಹಬ್ಬ ಆಚರಿಸಲಾಗುತ್ತಿದೆ. ನಾನು ಈ ಮನೆಗೆ ಸೊಸೆಯಾಗಿ ಬಂದ ಮೇಲೆ ಕಳೆದ 60 ವರ್ಷಗಳಿಂದ ಬೊಂಬೆಗಳನ್ನು ಪ್ರತಿಷ್ಠಾಪಿಸಿ ಪ್ರತಿನಿತ್ಯ ಪದ್ಧತಿ ಪ್ರಕಾರ ಪೂಜೆ, ಆರತಿ, ಪ್ರಸಾದ ವಿನಿಯೋಗ ಹಾಗೂ ಮಕ್ಕಳೊಂದಿಗೆ ಆಟ-ಪಾಠದ ಕಾರ್ಯಕ್ರಮ ನಡೆಸುತ್ತಿರುವುದಾಗಿ ಕನ್ನಡಪ್ರಭದೊಂದಿಗೆ ತಮ್ಮ ಅನುಭವಗಳನ್ನು ಮೆಲಕು ಹಾಕಿದರು.
ನಾಲ್ಕು ಮಂದಿ ಹೆಣ್ಣು ಮಕ್ಕಳ ಪೈಕಿ ಇಬ್ಬರ ಮನೆಯಲ್ಲೂ ನಮ್ಮ ಮನೆಯ ರೀತಿಯಲ್ಲೇ ನವರಾತ್ರಿ ಆಚರಿಸಲಾಗುತ್ತಿದೆ, ಜೋಡಿಸಿರುವ ದಸರ ಬೊಂಬೆಗಳ ಪೈಕಿ ಶ್ರೀಕೃಷ್ಣನಿಗೆ 65 ವರ್ಷವಾಗಿದೆ. ಪಟ್ಟದ ಗೊಂಬೆಗಳಿಗೆ ಸುಮಾರು 70 ವರ್ಷವಾಗಿದೆ. ಪಿಂಗಾಣಿ ಮತ್ತು ಮಣ್ಣಿನಿಂದ ತಯಾರಿಸಿರುವ ಸೀತಾ-ರಾಮ ಸಮೇತ ಆಂಜನೇಯ ವಿಗ್ರಹಕ್ಕೂ ಆಯಸ್ಸು ಆಗಿದ್ದರೂ ಎಚ್ಚರಿಕೆಯ ಕ್ರಮಗಳಿಂದಾಗಿ ಯಾವುದೇ ಬೊಂಬೆಗೆ ಹಾನಿಯಾಗಿಲ್ಲವೆಂದು ಹೇಳಿದರು.
ನಮ್ಮಲ್ಲಿರುವ ಬೊಂಬೆಗಳನ್ನು ತಮಿಳುನಾಡಿನ ವೃದ್ಧಾಚಲಂ, ಜೋತ್ನಾಪುರ್, ಬೆಂಗಳೂರು ಇನ್ನಿತರ ಕಡೆಗಳಿಂದ ಖರೀದಿಸಲಾಗಿದೆ. ಬೊಂಬೆಗಳ ರಕ್ಷಣೆಗಾಗಿಯೇ ಎರಡು ಕಬ್ಬಿಣದ ಪೆಟ್ಟಿಗೆಗಳು ಇವೆ. ಹಬ್ಬಕ್ಕಾಗಿ ಎರಡು ದಿನ ತಯಾರಿ ನಡೆಯುತ್ತದೆ. ಪ್ರಶಸ್ತಿಗಾಗಿ ಬೊಂಬೆ ಪ್ರದರ್ಶನ ನಡೆಸುತ್ತಿಲ್ಲ, ಮನೆಯ ಸಾಂಪ್ರಾದಯ ಮುರಿಯಬಾರದೆಂದು ಹಬ್ಬ ಆಚರಿಸಲಾಗುತ್ತಿದೆ. ಮುಂದೆ ಇದೇ ರೀತಿ ನಡೆಯಬೇಕೆಂಬುದೇ ನನ್ನ ಆಸೆ ಎಂದರು.
ಹಬ್ಬಕ್ಕೆ ಮೆರುಗು:  ಬುದ್ಧ, ಲಕ್ಷ್ಮೀ, ಸರಸ್ವತಿ, ಶಿವ-ಪಾರ್ವತಿ, ವಿಷ್ಣು-ಲಕ್ಷ್ಮೀ ಸೇರಿದಂತೆ ನೂರಾರು ಬೊಂಬೆಗಳು ಸೊಗಸಾಗಿವೆ. ಪ್ರತಿದಿನ ಸಂಜೆ ಮಕ್ಕಳಿಗೆ ಇಷ್ಟವಾದ ತಿನಿಸುಗಳನ್ನು ನೀಡಿ ಹಬ್ಬಕ್ಕೆ ಮೆರುಗು ನೀಡಲಾಗುತ್ತಿದೆ. ಮಗ ರಂಗನಾಥ್, ಸೊಸೆ ವಾಣಿ, ಮೊಮ್ಮಗಳು  ದೀಪ್ತಿ, ಮೊಮ್ಮಗ ಶ್ರೀಷ ಅವರ ಸಹಕಾರ ಇರುವುದರಿಂದ ಹಬ್ಬ ಚನ್ನಾಗಿ ನಡೆಯುತ್ತಿದೆ ಎಂದು ಅಭಿಮಾನದಿಂದ ನುಡಿದರು.
ಇದೇ ರೀತಿ ಮತ್ತೊಬ್ಬ ಹಿರಿಯ ಪತ್ರಕರ್ತ ಬಿ.ಪಿ. ಗೋಪಿನಾಥ್ ಅವರ ಮನೆಯಲ್ಲೂ ಕಳೆದ ಹಲವಾರು ವರ್ಷಗಳಿಂದ ನವರಾತ್ರಿ ಉತ್ಸವ ವೈಭವದಿಂದ ನಡೆಸಲಾಗುತ್ತಿದೆ. ಶಿಕ್ಷಕಿ ನಳಿನಿ, ಮಕ್ಕಳಾದ ಸುದರ್ಶನ್ ಹಾಗೂ ಶ್ವೇತ ಅವರು ಹಬ್ಬವನ್ನು ನಿಷ್ಠೆಯಿಂದ ಆಚರಿಸುತ್ತಿದ್ದಾರೆ.
ಕೋಲಾರದ ಪ್ರಸಿದ್ಧ ವಕೀಲ ವಾಸುದೇವಮೂರ್ತಿಯವರ ಮನೆಯಲ್ಲಿ ದಸರ ವೈಭವ ಜೋರಾಗಿಯೇ ಇರುತ್ತದೆ, ಬೊಂಬೆ ಪ್ರದರ್ಶನಕ್ಕಾಗಿ ಸುಮಾರು 10 ದಿನಗಳ ತಯಾರಿ ನಡೆಯುತ್ತದೆ. ಒಂದು ದೊಡ್ಡ ಹಾಲ್ನಲ್ಲಿ ಬೊಂಬೆಗಳಿಗೆ ಜಾಗ ಕಾದಿರಿಸಲಾಗುತ್ತದೆ. ಕಳೆದ 75 ವರ್ಷಗಳಿಂದ ಬೊಂಬೆ ಪ್ರದರ್ಶನ ನಡೆಸಲಾಗುತ್ತಿದ್ದು ಭಾರತ ವಿಕಾಸ್ ಪರಿಷತ್ತಿನಿಂದ ಅನೇಕ ಬಾರಿ ಬಹುಮಾನಗಳನ್ನು ಸಹ ಪಡೆದಿದ್ದಾರೆ.
ಇನ್ನು ನಗರದ ಗಲ್ಪೇಟೆಯಲ್ಲಿರುವ ನಗರಸಭೆ ಮಾಜಿ ಸದಸ್ಯ ತ್ಯಾಗರಾಜ್ ಅವರ ಮನೆಯಲ್ಲೂ ಬೊಂಬೆ ಹಬ್ಬ ಅಚ್ಚುಕಟ್ಟಾಗಿ ನಡೆಯುತ್ತದೆ, 30 ವರ್ಷಗಳಿಂದ ನಡೆಯುತ್ತಿರುವ ಹಬ್ಬಕ್ಕೆ ಪತ್ನಿ ಕುಮಾರಿ, ಮಗಳು ಶರ್ವಣ ಅವರು ಸಾಥ್ ನೀಡುತ್ತಿದ್ದಾರೆ.
ಕೋಲಾರದ ಕುರುಬರ ಪೇಟೆಯ ನಿವಾಸಿ ಹಾಗೂ ನಗರಸಭೆ ಮಾಜಿ ಅಧ್ಯಕ್ಷೆ ಗಿರಿಜಮ್ಮ ರಾಮಸ್ವಾಮಿ ಅವರ ಮನೆಯಲ್ಲೂ ಅನೇಕ ವರ್ಷಗಳಿಂದ ದಸರ ಬೊಂಬೆ ಪ್ರದರ್ಶನ ನಡೆಯುತ್ತಿದೆ. ಪುರಾಣ ಪ್ರಸಿದ್ಧ ಬೊಂಬೆಗಳನ್ನು ಜೋಡಿಸಿ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ. ಕೋಲಾರದ ಅನೇಕ ಕಡೆ ಈ ರೀತಿಯ ಬೊಂಬೆ ಪ್ರದರ್ಶನ ನಡೆಯುತ್ತಿದೆ.

-ಪಾ.ಶ್ರೀ. ಅನಂತರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.