ಕೋಲಾರ

ಚರ್ಚೆಗಳು ಸಭೆಗೆ ಸೀಮಿತ, ಸಮಸ್ಯೆ ಬಗೆಹರಿದಿಲ್ಲ

Published On :

ಬಾಗೇಪಲ್ಲಿ: ಪ್ರತಿ ಸಭೆಯಲ್ಲೂ ಗ್ರಾಮಗಳಲ್ಲಿನ ವಿವಿಧ ರೀತಿಯ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಆದರೆ, ಈ ಚರ್ಚೆಗಳು ಕೇವಲ ಸಭೆಗೆ ಸೀಮಿತವಾಗಿವೆ. ಇದುವರೆಗೂ ಒಂದೇ ಒಂದು ಸಮಸ್ಯೆಯನ್ನೂ  ಬಗೆಹರಿಸಲು ಆಡಳಿತ ಯಂತ್ರದಿಂದಾಗಿಲ್ಲ ಎಂದು ತಾ.ಪಂ. ಮಾಜಿ ಅಧ್ಯಕ್ಷೆ ಶೋಭಾರಾಣಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಮುನಿರತ್ನಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಸಭೆಯಲ್ಲಿ ತಾಲೂಕಿನ ಬಹುತೇಕ ಶಾಲಾ ಆವರಣಗಳಲ್ಲಿ ಹಾಗೂ ಹಲವು ಗ್ರಾಮಗಳಲ್ಲಿ ನಡು ರಸ್ತೆಗಳಲ್ಲಿ ವಿದ್ಯುತ್ ತಂತಿಗಳ ಹಾದು ಹೋಗಿರುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದರಿಂದ ಈ ವಿದ್ಯುತ್ ತಂತಿಗಳನ್ನು ತೆರವುಗೊಳಿಸುವಂತೆ ಅನೇಕ ಬಾರಿ ಸಭೆಯಲ್ಲಿ ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇನ್ನು ಕೆಲವು ಗ್ರಾಮಗಳಲ್ಲಿನ ಶಾಲೆಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಆದರೆ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ, ಈ ವಿಚಾರದ ಬಗ್ಗೆ ಕೇಳಿದರೆ ಪದೇ ಪದೇ ನಾನು ಹೊಸದಾಗಿ ಬಂದಿದ್ದೇನೆ. ಕ್ರಮ ಕೈಗೊಳ್ಳುತ್ತೇನೆಂದು ಹಾರಿಕೆಯ ಉತ್ತರವನ್ನು ನೀಡುತ್ತಲೇ ಬರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿ, ವಿದ್ಯುತ್ ತಂತಿಗಳಿಂದ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಏನಾದರೂ ತೊಂದರೆಯಾದರೆ ನೀವೇ ಹೊಣೆ ಎಂದು ಗುಡುಗಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬೆಸ್ಕಾಂ ಅಧಿಕಾರಿ ಬಾಲಾಜಿ, ವಿದ್ಯುತ್ ತಂತಿಗಳನ್ನು ಬೇರೆಡೆಗೆ ವರ್ಗಾಯಿಸಲು ತಗುಲುವ ವೆಚ್ಚವನ್ನು ಆಯಾ ಶಾಲೆಯವರೇ ಭರಿಸಬೇಕೆಂದು ಈಗಾಗಲೇ ಬಿಇಒರವರಿಗೆ ಮಾಹಿತಿಯನ್ನು ನೀಡಲಾಗಿದೆ ಎಂದು ಸಭೆಗೆ ತಿಳಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಬಿಇಓ ಇಂತಹ ವೆಚ್ಚಗಳನ್ನು ಭರಿಸಲು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಥವಾ ಶಾಲಾ ಖಾತೆಯಲ್ಲಾಗಲಿ ಹಣವಿರುವುದಿಲ್ಲ. ಅದರಿಂದ ತಂತಿಗಳನ್ನು ಸ್ಥಳಾಂತರ ಮಾಡಲು ತಾ.ಪಂ ಸದಸ್ಯರ ಅನುದಾನದಲ್ಲಿ ಸಹಾಯ ಹಸ್ತ ನೀಡುವಂತೆ ಮನವಿ ಮಾಡಿದರು.
ತಾಲೂಕಿನ ಮಿಟ್ಟೇಮರಿ ಶಾಲೆಯಲ್ಲಿ ಮಕ್ಕಳಿಗೆ ಪಾಠವನ್ನೇ ಮಾಡಿಲ್ಲ. ಆ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಖಾಲಿ ಉತ್ತರ ಪತ್ರಿಕೆಯನ್ನು ನೀಡಿ ಬಂದಿದ್ದಾರೆ. ಆ ಮಕ್ಕಳ ಭವಿಷ್ಯ ಹೇಗೆ ಎಂದು ತಾ.ಪಂ. ಅಧ್ಯಕ್ಷೆ ಮುನಿರತ್ನಮ್ಮ ಬಿಇಓರವನ್ನು ಪ್ರಶ್ನಿಸಿದರು.
ತಾಲೂಕಿನ ಚೇಳೂರು ಕೀಶೋರ್ ವಿದ್ಯಾ ಸಂಸ್ಥೆಯಲ್ಲಿ 5 ಅಡುಗೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ದಾಖಲೆಗಳಲ್ಲಿ ತೋರಿಸಿದ್ದು ಆದರೆ ಕೇವಲ ಇಬ್ಬರು ಅಡುಗೆ  ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿರವುದು ಕಂಡು ಬಂದಿದೆ. ಒಬ್ಬರ ಹೆಸರಿನಲ್ಲಿ ಇನ್ನೊಬ್ಬರು ಸಹಿ ಹಾಕಿ ಹಣ ಡ್ರಾ ಮಾಡಲಾಗಿದೆ ಎಂದು ತಾ.ಪಂ. ಸದಸ್ಯ ವೆಂಕಟರವಣರೆಡ್ಡಿ ಆರೋಪಿಸಿದಾಗ ಪ್ರತಿಕ್ರಿಯಿಸಿದ ಬಿಇಒ, ತನಿಖೆಯಲ್ಲಿ ಅವ್ಯವಹಾರ ನಡೆದಿರುವುದು ಕಂಡು ಬಂದಿದೆ. ಮೇಲಾಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲಾಗಿದೆ ಎಂದರು.
ಜಿ.ಪಂ. ತಾಂತ್ರಿಕ ಉಪ ವಿಭಾಗದ ಎಇಇ ಪಿ.ವಿ. ನಾಗಪ್ಪ, ಸಿಡಿಪಿಒ ಲಕ್ಷ್ಮೀದೇವಮ್ಮ, ತಾಲೂಕು ಆರೋಗ್ಯಾಧಿಕಾರಿ ಮಂಜೇನಾಯಕ್, ತೋಟಾಗಾರಿಗೆ ಇಲಾಖೆ ಶ್ರೀನಿವಾಸ, ಕೃಷಿ ಇಲಾಖೆ ಶಿವನಾಗಪ್ಪ, ಪಶುವೈದ್ಯ ಇಲಾಖೆಯ ಡಾ. ವೆಂಕಟೇಶ್ ಸೇರಿದಂತೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.