ಎಬಿವಿಪಿಯಿಂದ ಪದವಿ ಕಾಲೇಜುಗಳ ಬಂದ್
ಕಪ್ರ ವಾರ್ತೆ ಕೋಲಾರ ಅ.11
ಬೆಂಗಳೂರು ವಿಶ್ವವಿದ್ಯಾಲಯದ ಸಮಸ್ಯೆಗಳಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವುದರಿಂದ ರಾಜ್ಯ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ ಪರೀಕ್ಷಾಂಗ ವಿಭಾಗದ ಅವ್ಯವಸ್ಥೆ ಸರಿಪಡಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನಿಂದ ಶುಕ್ರವಾರ ಕರೆ ನೀಡಲಾಗಿದ್ದ ಪದವಿ ಕಾಲೇಜುಗಳ ಬಂದ್ ಯಶಸ್ವಿಯಾಯಿತು.
ಎಬಿವಿಪಿ ಮುಖಂಡರು ನಗರದ ಎಲ್ಲಾ ಪದವಿ ಕಾಲೇಜುಗಳಿಗೆ ಭೇಟಿ ನೀಡಿ ಬೆಂಗಳೂರು ವಿವಿಯು ಸೃಷ್ಟಿ ಮಾಡುತ್ತಿರುವ ಗೊಂದಲಗಳಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದರಿಂದ ಕಾಲೇಜು ಬಂದ್ ಮೂಲಕ ವಿವಿಯ ಆಡಳಿತ ಮಂಡಳಿಗೆ ಚುರುಕು ಮುಟ್ಟಿಸಬೇಕಾಗಿರುವುದರಿಂದ ವಿದ್ಯಾರ್ಥಿಗಳು ಮತ್ತು ಕಾಲೇಜಿನ ಆಡಳಿತ ಮಂಡಳಿಗಳು ಸಹಕಾರ ನೀಡಬೇಕೆಂದು ಕೋರಿದರು.
ಇದಕ್ಕೆ ಸ್ಪಂಧಿಸಿದ ಗೋಕುಲ್ ಕಾಲೇಜು, ಆದರ್ಶ ಕಾಲೇಜು, ಮಹಿಳಾ ಸಮಾಜ ಕಾಲೇಜು ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತರಗತಿಗಳನ್ನು ಬಹಿಷ್ಕರಿಸಿ ಕಾಲೇಜುಗಳಿಂದ ಹೊರ ಬಂದು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸೇರಿ ಬೆಂಗಳೂರು ವಿವಿಯ ವಿರುದ್ಧ ಘೋಷಣೆಗಳನ್ನು ಕುಗಿದರಲ್ಲದೆ, ಪರೀಕ್ಷಾಂಗ ವಿಭಾಗದಲ್ಲಿನ ಗೊಂದಲ ನಿವಾರಿಸಿ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಪರೀಕ್ಷಾ ಫಲಿತಾಂತ ಪ್ರಕಟಿಸಬೇಕು ಹಾಗೂ ಯಾವುದೇ ದೋಷವಿಲ್ಲದಂತೆ ಮಾರ್ಕ್ಸ್ ಕಾರ್ಡುಗಳನ್ನು ವಿತರಣೆ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿಗೆ ಮನವಿ ಸಲ್ಲಿಸಿದರು. ಬೆಂಗಳೂರು ವಿವಿಯಲ್ಲಿ ಸಮಸ್ಯೆಗಳಿಗೆ ಕೊನೆ ಇಲ್ಲದಂತಾಗಿದೆ. ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ, ಪದವಿ ವಿದ್ಯಾರ್ಥಿಗಳು ಯಾವುದೇ ಲೋಪವಿಲ್ಲದೆ ಪರೀಕ್ಷೆ ಬರೆಯುತ್ತಿದ್ದರೂ ವಿವಿಯವರು ಮಾತ್ರ ಫಲಿತಾಂಶ ಪ್ರಕಟಣೆ ಮತ್ತು ಅಂಕಪಟ್ಟಿಯಲ್ಲಿ ದೋಷಗಳನ್ನುಂಟು ಮಾಡಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚಲ್ಲಾಟವಾಡುತ್ತಿದ್ದಾರೆಂದು ಎಬಿವಿಪಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುರಳಿ ಆರೋಪಿಸಿದು.
ಮೊದಲ ಮತ್ತು ಎರಡನೇಯ ಸೆಮಿಸ್ಟರ್ ಪದವಿ ಪರೀಕ್ಷೆಯ ಫಲಿತಾಂಶದಲ್ಲಿ ಉಂಟಾಗಿರುವ ದೋಷದಿಂದ ಸುಮಾರು 4 ಸಾವಿರ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ, ಈ ಸಂಬಂಧ ಎಬಿವಿಪಿಯಿಂದ ಪ್ರತಿಭಟನೆಗಳು ನಡೆದಿದ್ದರೂ ಸಮಸ್ಯೆ ನಿವಾರಣೆ ಆಗಿಲ್ಲ, ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ ದೋಷ ಪೂರಿತ ಫಲಿತಾಂಶವನ್ನು ಸರಿಪಡಿಸಿಕೊಡಬೇಕು, ಉತ್ತರ ಪತ್ರಿಕೆಯ ಮರು ಮೌಲ್ಯ ಮಾಪನಕ್ಕೆ ಪಡೆಯುತ್ತಿರುವ ರು. 1,250 ದುಬಾರಿ ಆಗಿದೆ.
ಬಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉತ್ತರ ಪತ್ರಿಕೆಯ ಮೌಲ್ಯ ಮಾಪನಕ್ಕೆ ರು. 300 ಪಡೆಯಬೇಕು, ವಿದ್ಯಾರ್ಥಿಗಳ ಸಮಸ್ಯ ನಿವಾರಣೆಗಾಗಿ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿವಿಯ ಪರೀಕ್ಷಾಂಗ ವಿಭಾಗದಲ್ಲಿ ಸಹಾಯವಾಣಿ ತೆರೆಯಬೇಕು, ಪರೀಕ್ಷಾಂಗ ವಿಭಾಗದಲ್ಲಿನ ಲೋಪಗಳನ್ನು ತನಿಖೆಗೆ ಒಳಪಡಿಸಬೇಕು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಯಾ ಕಾಲೇಜುಗಳಲ್ಲೇ ಸಂಯೋಜಕರನ್ನು ನೇಮಕ ಮಾಡಿ ತ್ವರಿತ ಪರಿಹಾರಕ್ಕೆ ಮುಂದಾಗಬೇಕೆಂದು ಮುರಳಿ ವಿದ್ಯಾರ್ಥಿಗಳ ಪರವಾಗಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಬಿವಿಪಿಯ ಜಿಲ್ಲಾ ಸಂಚಾಲಕ ಸುನೀಲ್ ಕುಮಾರ್, ನಗರ ಕಾರ್ಯದರ್ಶಿ ಹರೀಶ್ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿ ಮುಖಂಡರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

