ಕೋಲಾರ

ಶೈಕ್ಷಣಿಕ ಸಂಸ್ಥೆಗಳಲ್ಲಿ ಲೈಂಗಿಕ ಅಪರಾಧ; ಜಾಗೃತಿ ಮೂಡಿಸಿ

Published On :

ಕನ್ನಡಪ್ರಭ ವಾರ್ತೆ, ಕೋಲಾರ,ಅ.14
ಮಹಿಳೆಯರ ಮತ್ತು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ನಿಯಂತ್ರಣಕ್ಕೆ ಕಠಿಣ ಕಾನೂನುಗಳು ಜಾರಿಯಲ್ಲಿದ್ದು ಅಂತಹ ಸಾಮಾಜಿಕ ಅನಿಷ್ಟ ಕೃತ್ಯದಿಂದ ಹೆಣ್ಣುಮಕ್ಕಳನ್ನು ಸಂರಕ್ಷಿಸುವ ಬಗ್ಗೆ ಪ್ರತಿಯೊಬ್ಬರು ಜಾಗೃತರಾಗಲು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್. ರೇಣುಕಾಪ್ರಸಾದ್ ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಪವನ್ ವಿದ್ಯಾಸಂಸ್ಥೆಗಳು, ರೋಟರಿ ಸಂಸ್ಥೆ, ಕೋಲಾರ ಸಂಯುಕ್ತ ಅಶ್ರಯದಲ್ಲಿ ಇತ್ತೀಚೆಗೆ ನಗರದ ಪವನ್ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹದಿಹರೆಯದ ಮಕ್ಕಳು ನಿರ್ಭಯವಾಗಿ ಸಂಜೆ ಸಮಯದಲ್ಲಿ ಓಡಾಡುವಂತಹ ವಾತಾವರಣ ಈಗಿನ ಮಾಧ್ಯಮಗಳಲ್ಲಿ ಬಿತ್ತರವಾಗುವ ಅಶ್ಲೀಲ ಚಿತ್ರಗಳು, ಕೆಟ್ಟ ಸನ್ನೀವೇಶಗಳ ಪ್ರಚೋದನೆಯಿಂದ ಹದಗೆಡುತ್ತಿದ್ದು ದೆಹಲಿಯಲ್ಲಿನ ಸಾಮೂಹಿಕ ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತಿವೆ, ಆ ಬಗ್ಗೆ ಕಠಿಣ ಕಾನೂನುಗಳು ಜಾರಿಯಾಗಿದ್ದು ವಿಶೇಷ ನ್ಯಾಯಾಲಯಗಳ ಮೂಲಕ ತ್ವರಿತವಾಗಿ ಪ್ರಕರಣಗಳು ಇತ್ಯರ್ಥಗೊಂಡು ತಪ್ಪಿತಸ್ಥರಿಗೆ ಮರಣ ದಂಡನೆಯಂತಹ ಉಗ್ರ ಶಿಕ್ಷೆಗಳು ನೀಡಲ್ಪಡುತ್ತಿವೆ ಎಂದು ತಿಳಿಸಿದರು.
ನ್ಯಾಯಾಧೀಶರು ಮಾನ್ಯ ಉಚ್ಚ ನ್ಯಾಯಾಲಯದಲ್ಲಿನ ಕೆಲವು ಪ್ರಕರಣಗಳನ್ನು ಉಲ್ಲೇಖಿಸಿ 21 ವರ್ಷ ವಯಸ್ಸಿನ ಒಳಗಿನ ಹೆಣ್ಣುಮಗಳು ಪ್ರೀತಿಸಿ ಮದುವೆಯಾಗಬೇಕೆಂದರೂ ತಂದೆ-ತಾಯಿಗಳ ಒಪ್ಪಿಗೆ ಅಗತ್ಯ ಮತ್ತು ಓಡಿ ಹೋಗಿ ಮದುವೆಯಾಗಿ ತಮ್ಮ ಜೀವನದಲ್ಲಿ ಯಶಸ್ಸಾದವರ ಸಂಖ್ಯೆ ರಾಷ್ಟ್ರ ಮಟ್ಟದ ಅಂಕಿ-ಅಂಶಗಳ ಪ್ರಕಾರ ಕೇವಲ ಶೇ.1 ರಷ್ಟು ಮಾತ್ರ, ಉಳಿದಂತೆ ಎಲ್ಲಾ ಓಡಿಹೋಗಿ ಮದುವೆಯಾದ ಹೆಣ್ಣು-ಗಂಡು ಮಕ್ಕಳ ಜೀವನ ಯಶಸ್ವಿಯಾಗದೇ ಅತ್ಮಹತ್ಯೆ, ಮಾನಸಿಕ ಕ್ಷೆಬೆಗೆ ಗುರಿಯಾಗಿ ಮುರಿದುಬೀಳುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.  ಮಾನ್ಯರು ಇತ್ತೀಚೆಗೆ ನಡೆದ ಆಂಧ್ರಪ್ರದೇಶದ ಪ್ರಖ್ಯಾತ ನಟ ಚಿರಂಜೀವಿ ಅವರ ಮಗಳು ತನ್ನ ಪೋಷಕರ ಇಚ್ಚೆಗೆ ವಿರುದ್ಧವಾಗಿ ಮದುವೆಯಾಗಿ ನಂತರ ಒಂದು ವರ್ಷ ಕಳೆಯುವಷ್ಟರಲ್ಲಿ ಅವರ ದಾಂಪತ್ಯ ಜೀವನ ಮುರಿದುಬಿದ್ದು ನ್ಯಾಯಾಲಯದ ಮೆಟ್ಟಿಲೇರಿದ ಪ್ರಸಂಗವನ್ನು ವಿವರಿಸಿದರು.  
ಮಕ್ಕಳಲ್ಲಿ ಈ ಬಗ್ಗೆ ಕಾನೂನು ಜಾಗೃತಿ ಮೂಡಿಸುವ ಸಲುವಾಗಿಯೇ ಸರ್ವೋಚ್ಛ ನ್ಯಾಯಾಲಯದ ಆದೇಶಾನುಸಾರ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹದಿಹರೆಯದ ಹೆಣ್ಣುಮಕ್ಕಳ ಮನ-ಪರಿವರ್ತನೆಗೆ ಮತ್ತು ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕಾನೂನಿನ ಅಂಶಗಳ ಬಗ್ಗೆ ತಿಳಿಹೇಳುವ ಕಾರ್ಯಕ್ರಮಗಳನ್ನು ರೋಟರಿ ಹಾಗೂ ಇತರೆ ಸರ್ಕಾರೇತರ ಸಂಘ ಸಂಸ್ಥೆಗಳಡನೆ ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದರು.    
1ನೇ ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಕೆಂಗಬಾಲಯ್ಯ ರವರು ಮಕ್ಕಳ ಮೇಲೆ ಮಾದಕ ವಸ್ತುಗಳ ಪ್ರಚೋದನೆ ಮತ್ತು ಲೈಂಗಿಕ ದೌರ್ಜನ್ಯದಿಂದ ಸಂರಕ್ಷಣೆ ಬಗ್ಗೆ ಮತ್ತು ಇತ್ತೀಚಿನ ದೆಹಲಿ ಅತ್ಯಾಚಾರ ಪ್ರಕರಣದಿಂದ ರೂಪಿಸಲ್ಪಟ್ಟ ವಿಶೇಷ ಕಾಯಿದೆ ಬಗ್ಗೆ ವಿವರಿಸಿದರು. ವಕೀಲರಾದ ಸ.ನಾ. ಮೂರ್ತಿರವರು ಕಾಲೇಜುಗಳಲ್ಲಿ ಆಂಟಿ ರ್ಯಾಗಿಂಗ್ ಕಾಯಿದೆ ಬಗ್ಗೆ ಉಪನ್ಯಾಸ ನೀಡಿದರು.   
ಪವನ್ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಕೆ.ವಿ. ನಾರಾಯಣಸ್ವಾಮಿ ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನು ವಿದ್ಯಾ ಪ್ರಸಾರದ ಉಪಯೋಗವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸತ್ಪ್ರಜೆಗಳಾಗಿ ರೂಪಗೊಂಡು ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿ ದೆಸೆಯಿಂದಲೇ ತಯಾರಾಗಲು ಪ್ರಯೋಜನ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.