ಕೋಲಾರ

ನಾಳೆ ವಾಲ್ಮೀಕಿ ವೃತ್ತ ನಾಮಕರಣ

Published On :

ಚಿಂತಾಮಣಿ: ಹಲವು ವರ್ಷಗಳಿಂದ ವಿಳಂಬವಾಗಿದ್ದ ಮಹರ್ಷಿ ವಾಲ್ಮೀಕಿ ವೃತ್ತಕ್ಕೆ ನಾಮಕರಣ ಮಾಡಲು ತಾಲೂಕು ಆಡಳಿತ ಯಂತ್ರಾಂಗ ಹಾಗೂ ನಗರಸಭೆ ತರಾತುರಿಯಿಂದ ಕಾಮಗಾರಿ ನಡೆಸುತ್ತಿದೆ.
ಪಟ್ಟಣದ ಬಾಗೇಪಲ್ಲಿ ವೃತ್ತಕ್ಕೆ ಮಹರ್ಷಿ ವಾಲ್ಮೀಕಿ ವೃತ್ತವನ್ನಾಗಿ ನಾಮಕರಣ ಮಾಡಲು ಅ.18 ರಂದು ನಾಮಕರಣ ಮಾಡಲು ಸಿದ್ಧರಾಗಿದ್ದಾರೆ. ತಾಲೂಕು ಆಡಳಿತ ಯಂತ್ರಾಂಗ ಹಾಗೂ ನಗರಸಭೆ ಅಧಿಕಾರಿಗಳು ಸುಮಾರು 2 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ವೃತ್ತದ ಕಲ್ಲಿನ ಕೆಲಸಕ್ಕೆ ತರಾತುರಿಯಲ್ಲಿ ಕಾಮಗಾರಿ ನಡೆಯುತ್ತಿದೆ.
2ವರ್ಷಗಳ ಹಿಂದೆಯೇ ವಾಲ್ಮೀಕಿ ವೃತ್ತವನ್ನಾಗಿ ಮಾಡಲು ನಗರಸಭೆ ಅನುಮೋದನೆ ಪಡೆದಿದ್ದರೂ ಸಹ ಕಾರಣಾಂತರಗಳಿಂದ ವಿಳಂಬವಾಗಿ ಜಿಲ್ಲಾಧಿಕಾರಿಗಳಿಂದ ಸೂಚನೆ ಹೊರ ಬಂದ ನಂತರ ಇದೀಗ ಬಾಗೇಪಲ್ಲಿ ವೃತ್ತಕ್ಕೆ ನೂತನವಾಗಿ ವಾಲ್ಮೀಕಿ ವೃತ್ತವೆಂದು ನಾಮಕರಣ ಮಾಡಲು  ಕಡೆಗೂ ಕಾಮಗಾರಿಗೆ ಮೋಕ್ಷ ದೊರೆತಿದೆ.
2010-11 ನೇ ಸಾಲಿನಲ್ಲಿಯೇ ಮಾಜಿ ಶಾಸಕ ಡಾ. ಸುಧಾಕರ್ ನೇತೃತ್ವದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ವೆಂಕಟರಮಣ ಸ್ವಾಮಿ ಆಡಳಿತದ ಅವಧಿಯಲ್ಲಿ ಮಹರ್ಷಿ ವಾಲ್ಮೀಕಿ ವೃತ್ತವನ್ನು ನಾಮಕರಣ ಮಾಡಲು ಈಗಿರುವ ಬಾಗೇಪಲ್ಲಿ ವೃತ್ತಕ್ಕೆ ನಾಮಕರಣ ಮಾಡಲು ನಗರಸಭೆ ಸಾಮಾನ್ಯ ಸಭೆಯಲ್ಲಿ ಸೂಚಿಸಲಾಗಿತ್ತು.
ತಾಲೂಕಿನ 65 ಸಾವಿರ ವಾಲ್ಮೀಕಿ ಸಮಾಜದ ಬಂಧುಗಳು ಕನಸು ಹಾಗೂ ಪರಿಶ್ರಮದಿಂದ ಕಡೆಗೂ ನಾಮಕರಣ ಮಾಡಲು ಸ್ಪಂದಿಸಿದ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಅಭಿನಂದನೆಗಳು ಸಲ್ಲಿಸಿದ್ದಾರೆ.
ವ್ಯಾನ್ ಡಿಕ್ಕಿ: ಮೂವರಿಗೆ ಗಾಯ
ಚಿಕ್ಕಬಳ್ಳಾಪುರ: ದ್ವಿಚಕ್ರ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿಕೊಂಡು ಮಾತನಾಡುತ್ತಿದ್ದ ಮೂವರಿಗೆ ಮಾರುತಿ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಕಮ್ಮಲಹಳ್ಳಿಯ ಬಳಿ ನಡೆದಿದೆ. ಶಿಡ್ಲಘಟ್ಟ ತಾಲೂಕಿನ ಕಂಬಾಲಹಳ್ಳಿ ಗ್ರಾಮದ ಹನುಮಪ್ಪ (40), ಆಂಜಿನಪ್ಪ (42) ಮತ್ತು ವೆಂಕಟೇಶಪ್ಪ (45) ಗಾಯಾಳುಗಳಾಗಿದ್ದಾರೆ. ಪಟ್ರೇನಹಳ್ಳಿ ಸಮೀಪದ ಶಿಡ್ಲಘಟ್ಟ ಸರ್ವಿಸ್ ರಸ್ತೆಯಲ್ಲಿ ತಮ್ಮ ದ್ವಿಚಕ್ರ ವಾಹನಗಳಲ್ಲಿ ಪ್ರತ್ಯೇಕವಾಗಿ ಹೋಗುತ್ತಿದ್ದ ಹನುಮಪ್ಪ, ಆಂಜಿನಪ್ಪ ಮತ್ತು ವೆಂಕಟೇಶಪ್ಪ ಪರಸ್ಪರ ಮಾತನಾಡಲು ತಮ್ಮ ವಾಹನಗಳನ್ನು ರಸ್ತೆ ಬದಿಗೆ ನಿಲ್ಲಿಸಿಕೊಂಡಿದ್ದರು.  ಈ ವೇಳೆ ವೇಗವಾಗಿ ಬಂದ ಮಾರುತಿ ವ್ಯಾನ್ ಮೂವರಿಗೂ ಡಿಕ್ಕಿ ಹೊಡೆದಿದೆ. ಘಟನೆಯಿಂದ ಭಯಭೀತನಾದ ಕಾರಿನ ಚಾಲಕ ಶ್ರೀಧರ್ ಪರಾರಿಯಾಗಿದ್ದಾನೆ. ಸ್ಥಳೀಯರು ಗಾಯಾಳುಗಳನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದು ತೀವ್ರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಇದೀಗ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗೆದ. ಈ ಸಂಬಂಧ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೈಕ್‌ಗೆ ಡಿಕ್ಕಿ: ಗಾಯ
ಶಿಡ್ಲಘಟ್ಟ: ಜೆ.ವೆಂಕಟಾಪುರದ ಕಟ್ಟೆಯ ಮೇಲೆ ಟಾಟಾ ಸುಮೋ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿ ಚಕ್ರ ಸವಾರರಿಬ್ಬರು ಗಾಯಗೊಂಡ ಘಟನೆ ನಡೆದಿದೆ. ವಾಹದಲ್ಲಿ ವಿಷ್ಣು ಹಾಗೂ ಜೀವನ್ ಜಂಗಮಕೋಟೆಯಿಂದ ಚಿಕ್ಕಬಳ್ಳಾಪುರಕ್ಕೆ ಬರುತಿದ್ದ  ವಿಜಯಪುರದಿಂದ ಕೋಲಾರ ಕಡೆ ಹೋಗುತ್ತಿದ್ದ ಟಾಟಾ ಸುಮೋ ಜೆ.ವೆಂಕಟಾಪುರದ ಕಟ್ಟೆಯ ಮೇಲೆ ಡಿಕ್ಕಿ ಹೊಡೆದ ಪರಿಣಾಮ ದ್ವಿ ಚಕ್ರವಾಹನ ಸವಾರರು ಗಾಯಗೊಂಡು ಬೆಂಗಳೂರಿನ ಬೌರಿಂಗ್ ಹಾಗೂ ಮಾರ್ಥಾಸ್  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟಾಟಾ ಸುಮೋ ಚಾಲಕನ ಬಗ್ಗೆ ವಿವರಗಳು ತಿಳಿದುಬಂದಿಲ್ಲ.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪದಾಧಿಕಾರಿಗಳ ನೇಮಕ
ಕೋಲಾರ: ಭಾರತೀಯ ಜನತಾ ಪಕ್ಷದ ಕೋಲಾರ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷ ಎಂ.ಎಸ್.ನಿರ್ಮಲ ಅವರ ನಿರ್ದೇಶನದಲ್ಲಿ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ನೂತನ ಪಟ್ಟಿಯನ್ನು ಬಿಡುಗಡೆ ಮಾಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಕೃಷ್ಣಾರೆಡ್ಡಿ ಆದೇಶ ಹೊರಡಿಸಿದ್ದಾರೆ. ಕೋಲಾರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಎಂ.ಎಸ್. ನಿರ್ಮಲರೊಂದಿಗೆ ಪ್ರಧಾನ ಕಾರ್ಯದರ್ಶಿಗಳಾಗಿ ದೇವಕಿ ಪ್ರಕಾಶ್, ಎನ್.ಮಂಜುಳ ಅಮರ್, ಉಪಾಧ್ಯಕ್ಷರಾಗಿ ವಿಜಯಲಕ್ಷ್ಮಿ, ಸುಮನಾಗರಾಜ್, ಪ್ರಮೀಳಾ, ಲಲಿತಮ್ಮ, ಕಾರ್ಯದರ್ಶಿಗಳಾಗಿ ಭಾಗ್ಯ, ಜಗದೀಶ್ವರಿ, ಕವಿತಾಶಂಕರ್, ಅಮರಾವತಿ, ದ್ರಾಕ್ಷಾಯಿಣಿ, ಕೋಶಾಧ್ಯಕ್ಷರಾಗಿ ರೂಪಾ ನೇಮಕಗೊಂಡಿದ್ದಾರೆ ಮಾಲೂರು ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಕನಕ ಶ್ರೀನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಪಾರ್ವತಮ್ಮ, ಕೆ.ಜಿ.ಎಫ್. ನಗರ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಪಿ.ಉಮಾ, ಪ್ರಧಾನ ಕಾರ್ಯದರ್ಶಿಯಾಗಿ ಮುನಿಯಮ್ಮ ಕೋಲಾರ ಗ್ರಾಮಾಂತರ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಶಶಿಕಲಾ, ಪ್ರಧಾನ ಕಾರ್ಯದರ್ಶಿಗಳಾಗಿ ಮಮತಾ ವೆಂಕಟೇಶ್ ನೇಮಕ ಮಾಡಲಾಗಿದೆ.
ಫ್ಲೆಕ್ಸ್ ರಾಜಕಾರಣಕ್ಕೆ ಜೆಡಿಎಸ್ ಖಂಡನೆ
ಕೋಲಾರ: ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಲು ನಿರಂತರವಾಗಿ ಸುಮಾರು ದಶಕಗಳಿಂದ ಹೋರಾಟಗಳನ್ನು ನಡೆಸುತ್ತಾ ಬಂದಿರುವ ಕೋಲಾರ ಜಿಲ್ಲಾ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಶ್ರಮ ವಹಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಕಡೆಯಿಂದ ಜಿಲ್ಲೆಗೆ ಬಂದು ಚುನಾವಣ ದೃಷ್ಟಿಯಿಂದ ಪ್ಲೆಕ್ಸ್ ಮತ್ತು ಇತರೆ ಕರ ಪತ್ರಗಳ ಮೂಲಕ ಪ್ರಚಾರ ಮಾಡಿಕೊಳ್ಳುವುದು ಸರಿಯಲ್ಲ ಎಂದು ಜೆಡಿಎಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿ ಸ್ಥಳೀಯ ಮುಂಖಡರಿಗೆ ಇದ್ದರೂ, ಜಿಲ್ಲೆ ಪರಿಚಯವಿಲ್ಲದ ಆದಿನಾರಾಯಣ ಎಂಬುವರು ನಾನೇ ಲೋಕಾಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಪ್ರಚಾರ ಮಾಡಿಕೊಳ್ಳುತ್ತಿರುವು ಸರಿಯಲ್ಲ. ಇವರಿಗೆ ಯಾವುದೇ ಕಾರಣಕ್ಕೂ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಆವಕಾಶ ಕಲ್ಪಿಸಿಕೊಡಬಾರದು ಎಂದು ಜೆಡಿಎಸ್ ಪರಿಶಿಷ್ಟ ಜಾತಿ ಜಿಲ್ಲಾಧ್ಯಕ್ಷ ಮುದುವಾಡಿ ಮಂಜುನಾಥ್ ವರಿಷ್ಠರನ್ನು ಒತ್ತಾಯಿಸಿದ್ದಾರೆ. ಜಿಲ್ಲೆಯ ಇತಿಹಾಸವೇ ಗೊತ್ತಿಲ್ಲದ ಆದಿನಾರಾಯಣ ಜಿಲ್ಲೆಗೆ ಬಂದು ಪ್ರಚಾರ ಆರಂಭಿಸಿರುವುದು ಸರಿಯಲ್ಲ. ಕೂಡಲೇ ಜಿಲ್ಲೆಯನ್ನು ಬಿಟ್ಟು ಹೋಗದಿದ್ದ ಪಕ್ಷದಲ್ಲಿ ಹಿರಿಯ ನಾಯಕರಿಗೆ ದೂರು ನೀಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.