ಕೋಲಾರ

ಜೆಡಿಎಸ್ -ವರ್ತೂರ್ ಬಣದಿಂದ ಪ್ರತ್ಯೇಕ ಪ್ರತಿಭಟನೆ

Published On :

ಕ.ಪ್ರ.ವಾರ್ತೆ ,  ಕೋಲಾರ ,  ಅ. 18
ತಾಲೂಕಿನ ಚಿಕ್ಕನಹಳ್ಳಿ-ಲಕ್ಷ್ಮೀಪುರ ಗ್ರಾಮದ ಜಮೀನು ಗಲಾಟೆಗೆ ಸಂಬಂಧಿಸಿ ಜೆಡಿಎಸ್ ಮತ್ತು ವರ್ತೂರ್ ಬಣದ ಗುಂಪುಗಳಿಂದ ಶುಕ್ರವಾರ ನಗರದ ಹೊಲವಲಯದ ಟಮಕದಲ್ಲಿರುವ ಜಿಲ್ಲಾ ಪೊಲೀಸ್ ಕಚೇರಿ ಮುಂದೆ ಪ್ರತ್ಯೇಕವಾಗಿ ಪ್ರತಿಭಟನೆ ನಡೆಯಿತು.
ವಕ್ಕಲೇರಿ ಗ್ರಾಮದ ವಾಸಿ ಸಿ.ಎಂ. ವೆಂಕಟೇಶಪ್ಪ ಎಂಬವರಿಗೆ ಚಿಕ್ಕನಹಳ್ಳಿಯ ಸರ್ವೆ.ನಂ 82ರಲ್ಲಿ 1.30 ಎಕರೆ ಜಮೀನು ಇದ್ದು ಇದರಲ್ಲಿ 6 ಗಂಟೆ ಜಮೀನು ನಾಗೇಶ್ ಎಂಬವರ ಹೆಸರಿನಲ್ಲಿ ಎಂ.ಆರ್.ಹೆಚ್ 08,2ರಲ್ಲಿ ಕ್ರಯದ ಮೂಲಕ ಪಡೆದಿರುವ ಸರ್ವೆ ನಂ.82ರಲ್ಲಿ ಸಿ.ಎಂ. ವೆಂಕಟೇಶಪ್ಪ ಮತ್ತು ನಾಗೇಶ್‌ಗೆ ಖಾತೆಯಾಗಿರುತ್ತದೆ. ನಾಗೇಶ್ ಅವರು ವಿನಾ ಕಾರಣ ಸಿ.ಎಂ. ವೆಂಕಟೇಶಪ್ಪನವರಿಗೆ ಸೇರಿದ ಜಮೀನಿನಲ್ಲಿ ಅ.17 ರಂದು ಅಕ್ರಮವಾಗಿ ಪ್ರವೇಶ ಮಾಡಿ ಉಳಿಮೆ ಮಾಡಿದ್ದನ್ನು ತಡೆದಾಗ ನಾಗೇಶ್ ಹಾಗೂ ಇತರರು ವೆಂಕಟೇಶಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆಂದು ಜೆಡಿಎಸ್ ಮುಖಂಡರು ಆರೋಪಿಸಿದರು.
ಹಲವು ಜಾಗಗಳ ಅತಿಕ್ರಮ: ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದಾಗ ಪೊಲೀಸರು ದೂರು ಸ್ವೀಕರಿಸಿದೆ ತೊಂದರೆ ನೀಡಿರುವುದಲ್ಲದೆ, ಹಲ್ಲೆಗೆ ಒಳದಾಗ ವೆಂಕಟೇಶಪ್ಪನ ವಿರುದ್ಧವೇ ಅಟ್ರಾಸಿಟಿ ಪ್ರಕರಣ ದಾಖಲು ಮಾಡಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್‌ನಿವಾಸ್ ಸಪಟ್‌ಗೆ ದೂರು ನೀಡಿದರು.
ಸುಳ್ಳು ದೂರುಗಳು: ಇದೇ ರೀತಿ ತಾಲೂಕಿನ ಶ್ಯಾನಬೋಗನಹಳ್ಳಿಯಲ್ಲಿ ಮುಜರಾಯಿ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸುತ್ತಿದ್ದ ಬಿ. ಶಂಕರಪ್ಪ ಎಂಬುವರು ಅಕ್ರಮ ಪ್ರಶ್ನಿಸಿದ ಗ್ರಾಮದ ಹಿರಿಯರ ವಿರುದ್ಧ ಪೊಲೀಸರಿಗೆ ಸುಳ್ಳು ನೀಡಿದ್ದಾರೆ. ಈಕಂಬಳ್ಳಿ ಗ್ರಾಮದ ವಕೀಲ ಚೌಡರೆಡ್ಡಿ ಎಂಬವರ ವಿರುದ್ಧ 5 ಸುಳ್ಳು ದೂರುಗಳನ್ನು ದಾಖಲು ಮಾಡಿಸಲಾಗಿದೆ. ಕೋಲಾರ ನಗರದ ಭವಾನಿ ಚಿತ್ರ ಮಂದಿರ ದಲಿತ ಮಹಿಳೆಗೆ ಸೇರಿದ್ದು ಚಿತ್ರ ಮಂದಿರದ ಮಾಲೀಕ ಸುಳ್ಳು ದಾಖಲೆ ಸೃಷ್ಟಿ ಮಾಡಿ ಆಸ್ತಿ ಲಪಾಟಾಯಿಸಿದ್ದಾರಲ್ಲದೆ, ಸರ್ಕಾರಕ್ಕೆ ತೆರಿಗೆ ಪಾವತಿಸದೆ ವಂಚಿಸುತ್ತಿದ್ದು ಇದಕ್ಕೆ ಶಾಸಕರ ಕುಮ್ಮಕ್ಕು ಇದೆ ಎಂದು ಆರೋಪಿಸಿದ್ದಾರೆ.
ದಬ್ಬಾಳಿಕೆ; ಕಳೆದ ಐದಾರು ತಿಂಗಳಿಂದ ಜೆಡಿಎಸ್ ಕಾರ್ಯಕರ್ತರ ಮೇಲೆ ನಿರಂತರವಾಗಿ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದೆ, ಪೊಲೀಸರು ಸುಳ್ಳು ದೂರುಗಳಿಗೆ ಮನ್ನಣೆ ನೀಡುತ್ತಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಕೆ. ಶ್ರೀನಿವಾಸಗೌಡ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬ್ಯಾಲಹಳ್ಳಿ ಎಂ. ಗೋವಿಂದಗೌಡ, ತಾಲೂಕು ಅಧ್ಯಕ್ಷ ಮೂರಂಡಹಳ್ಳಿ ಗೋಪಾಲ, ವಕ್ಕಲೇರಿ ರಾಮು, ಶ್ರೀಕೃಷ್ಣ, ಕೋಡಿಹಳ್ಳಿ ರಾಮಚಂದ್ರೇಗೌಡ, ಸುರೇಶ್ ಬಾಬು, ಚಂದ್ರಮೌಳಿ, ಮಂಜು, ಎಪಿಎಂಸಿ ಅಧ್ಯಕ್ಷ ರಾಜರಾಜೇಶ್ವರಿ, ಜಿಪಂ ಸದಸ್ಯ ಎಸ್.ಬಿ. ಮುನಿವೆಂಕಟಪ್ಪ, ಎಪಿಎಂಸಿ ಸದಸ್ಯ ಬಣಕನಹಳ್ಳಿ ನಟರಾಜ್, ಕೆ.ಬಿ. ಗೋಪಾಲಕೃಷ್ಣ, ಪಿಲ್ಲರ್ ಮಂಜು, ನಗರಸಭೆ ಸದಸ್ಯ ರವೀಂದ್ರ ಸೇರಿದಂತೆ ಅನೇಕರು ಇದ್ದರು.
ವರ್ತೂರ್ ಬಣದಿಂದ ಪ್ರತಿಭಟನೆ: ಜೆಡಿಎಸ್ ಮುಖಂಡರ ಪ್ರತಿಭಟನೆ ವಿಷಯ ತಿಳಿದು ಜಿಲ್ಲಾ ಪೊಲೀಸ್ ಕಚೇರಿಗೆ ಆಗಮಿಸಿದ ಶಾಸಕ ವರ್ತೂರ್ ಬಣದ ಮುಖಂಡರು ಸಿ.ಎಂ. ವೆಂಕಟೇಶಪ್ಪನವರು ನಾಗೇಶ್ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ದಲಿತ ಜನಾಂಗಕ್ಕೆ ಸೇರಿದ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದು, ಇದಕ್ಕೆ ಸಂಬಂಧಿಸಿದಂತೆ ಠಾಣೆಯಲ್ಲಿ ಅಟ್ರಾಸಿಟಿ ಕೇಸು ದಾಖಲು ಆಗಿದೆ. ಆದರೆ, ಪ್ರಕರಣವನ್ನು ಮರೆ ಮಾಚಲು ಜೆಡಿಎಸ್ ಮುಖಂಡರು ಶಾಸಕರ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿದ್ದಾರೆಂದು ಆರೋಪಿಸಿದರು.
ಆರೋಪಿ ವೆಂಕಟೇಶಪ್ಪನವರನ್ನು ಕೂಡಲೇ ಬಂಧಿಸಿಬೇಕೆಂದು ಒತ್ತಾಯಿಸಿ ಧರಣಿ ನಡೆಸಿದ ವರ್ತೂರ್ ಬಣದವರು ಜೆಡಿಎಸ್ ಮುಖಂಡರ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ವಕ್ಕಲೇರಿ ಗ್ರಾಪಂ ಅಧ್ಯಕ್ಷ ರಾಜಪ್ಪ, ವರದೇನಹಳ್ಳಿ ವೆಂಕಟೇಶ್, ನಗರಸಭೆ ಸದಸ್ಯ ಸೋಮಶೇಖರ್, ಮಾಜಿ ಉಪಾಧ್ಯಕ್ಷ ರಾಜೇಶ್, ಅಪ್ಪಿ, ತ್ಯಾಗರಾಜ್, ಪ್ರಸಾದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.