ತೆರವುಗೊಳಿಸುವುದೇ ಜಿಲ್ಲಾಧಿಕಾರಿಗಳ ಆದೇಶ?
ಬಂಗಾರಪೇಟೆ: ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವವರು ಕೂಡಲೆ ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ ಪಟ್ಟಣದಲ್ಲಿ ಅತಿಕ್ರಮಣ ಎಗ್ಗಿಲ್ಲದೆ ನಡೆಯುತ್ತಲೆ ಇದೆ.
9ವರ್ಷಗಳ ಹಿಂದೆ ಪಟ್ಟಣದಲ್ಲಿ ಭಾರಿ ಮಳೆ ಸುರಿದಾಗ ಕೆರೆ ಕೋಡಿ ಹರಿದು ರಾಜಕಾಲುವೆಗಳು ಒತ್ತುವರಿ ಮಾಡಿಕೊಂಡಿರುವುದರಿಂದ ನೀರೆಲ್ಲಾ ರಸ್ತೆ ಮೇಲೆ ಹರಿದು ಕುಪ್ಪಸ್ವಾಮಿ ಮೊದಲಿಯಾರ್ ಬಡಾವಣೆ ಸಂಪೂರ್ಣ ಜಲಾವೃತಗೊಂಡಿತ್ತು.
ಅಂದು ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್, ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಮತ್ತಿತರೇ ರಾಜ್ಯ ನಾಯಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಡಾವಣೆ ದ್ವೀಪ ಪ್ರದೇಶವಾಗಿ ಮಾರ್ಪಡಲು ರಾಜಕಾಲುವೆ ಒತ್ತುವರಿಯೇ ಕಾರಣವಾಗಿದ್ದು ಕೂಡಲೆ ಸರ್ವೇ ಮಾಡಿಸಿ ಒತ್ತುವರಿ ತೆರವುಗೊಳಿಸಲು ಎಲ್ಲಾ ನಾಯಕರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು.
ತಾಲೂಕು ಆಡಳಿತ ಮರೆಯಿತು; ತಾಲೂಕು ಆಡಳಿತ ಕೆರೆ ಕೋಡಿಯಿಂದ ಬಸ್ಸು ನಿಲ್ದಾಣದವರೆಗೂ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಾಣ ಮಾಡಿಕೊಂಡಿರುವವರ ಪಟ್ಟಿ ಸಿದ್ಧಪಡಿಸಿ ತೆರವುಗೊಳಿಸುವಂತೆ ಬೀಗಿತ್ತು. ನಂತರ ಮಳೆ ಸಮೃದ್ಧವಾಗಿ ಬಾರದ ಕಾರಣ ರಾಜಕಾಲುವೆಗಳ ಒತ್ತುವರಿಯನ್ನು ತಾಲೂಕು ಆಡಳಿತ ಮರೆಯಿತು.
ಒಮ್ಮೆ ರಾಜಕಾಲುವೆ ದುರಸ್ತಿಗೆ ಹಣ ಮಂಜೂರಾಯಿತು.ನಾಮ್ಕಾವಸ್ತೆ ಎಂಬಂತೆ ಅರ್ಧಂಬರ್ಧ ಕಾಮಗಾರಿ ಮಾಡಿ ಕೈ ತೊಳೆದುಕೊಂಡರೆ ವಿನಃ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಿಲ್ಲ.
ನಕಲಿ ದಾಖಲೆ ಸೃಷ್ಟಿ; ಈಗ ರಾಜಕಾಲುವೆ ಅಕ್ಕಪಕ್ಕದಲ್ಲಿ ಒತ್ತುವರಿದಾರರು ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದರೂ ಪ್ರಶ್ನಿಸುವವರೇ ಇಲ್ಲದಂತಾಗಿದೆ.
ಇದಲ್ಲದೆ ಕೆರೆಯನ್ನೂ ಕೆಲವು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಅಮಾಯಕರಿಗೆ ಮಾರಾಟ ಮಾಡಿದ್ದಾರೆ.
ಸಾರ್ವಜನಿಕರ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ ಮೂರು ಬಾರಿ ಸರ್ವೇ ಮಾಡಿಸಿ ಒತ್ತುವರಿದಾರರನ್ನು ತೆರವುಗೊಳಿಸುವುದಾಗಿ ಭರವಸೆ ಮೂಡಿಸಿ ನಂತರ ಯಥಾವತ್ತಾಗಿ ಮೌನವಹಿಸಿರುವುದು ಸಾರ್ವಜನಿಕರನ್ನು ಕೆರಳಿಸುವಂತಾಗಿದ್ದು ಜೋರು ಮಳೆ ಬಂದರೆ ಮತ್ತೆ ಸಮಸ್ಯೆ ತಪ್ಪಿದ್ದಲ್ಲ.
ಕೆರೆ ಹಾಗೂ ರಾಜಕಾಲುವೆಗಳ ಒತ್ತುವರಿ ಪ್ರಕರಣ ಬರೀ ಪಟ್ಟಣ ವ್ಯಾಪ್ತಿಯಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿಯೂ ವ್ಯಾಪಕವಾಗಿ ನಡೆದಿದೆ.
ಪಟ್ಟಣದಲ್ಲಿ ಯಾವುದೇ ಕ್ರಮಕೈಗೊಳ್ಳದ ತಾಲೂಕು ಮತ್ತು ಜಿಲ್ಲಾಡಳಿತ ಇನ್ನು ಗ್ರಾಮಾಂತರ ಭಾಗದಲ್ಲಿ ಏನು ಕ್ರಮಕ್ಕೆ ಮುಂದಾಗುವುದು ಎಂಬ ಅಸಡ್ಡೆ ಗ್ರಾಮಸ್ಥರದಾಗಿದೆ. ಕೆಲ ಅಧಿಕಾರಿಗಳೂ ಒತ್ತುವರಿದಾರರಿಗೆ ಕುಮ್ಮಕ್ಕು ನೀಡುತ್ತಿರುವುದರಿಂದ ಯಾವುದೇ ಆತಂಕವಿಲ್ಲದೆ ನಡೆಯುತ್ತಿದೆ.
ಈಗ ಹೊಸ ಜಿಲ್ಲಾಧಿಕಾರಿ ಡಿ.ಕೆ. ರವಿ ರಾಜಕಾಲುವೆಗಳ ಒತ್ತುವರಿದಾರರು ಸ್ವಯಂಪ್ರೇರಿತರಾಗಿ ತೆರವುಗೊಳಿಸಲು ಗಡವು ನೀಡಿರುವುದು ಜನರಲ್ಲಿ ಹೊಸ ಆಸೆ ಮೂಡಿಸಿದೆ. ಆದರೆ ಇದು ಹಿದಿನಂತೆ ಆಗದೆ ಕಾರ್ಯಗತವಾಗಲಿ ಎಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

