ಗುರುವಾಯೂರಪ್ಪ ವಿನಾಯಕ ದರ್ಶನಕ್ಕೆ ತೆರೆ
ಕಪ್ರ ವಾರ್ತೆ, ಕೋಲಾರ, ಅ.20
ನವರಾತ್ರಿ ಪ್ರಯುಕ್ತ ನಗರದ ಡೂಂ ಲೈಟ್ ವೃತ್ತದ ಕೆಇಬಿ ಗಣಪತಿ ದೇವಾಲಯದ ಆವರಣದಲ್ಲಿ ವಿವೇಕಾನಂದ ಮಿತ್ರ ಬಳಗದಿಂದ ಹಮ್ಮಿಕೊಂಡಿದ್ದ ಗುರುವಾಯೂರಪ್ಪ ವಿನಾಯಕ ದರ್ಶನಕ್ಕೆ ಭಾನುವಾರ ಅದ್ಧೂರಿ ತೆರೆ ಬಿದ್ದಿದೆ. ನವರಾತ್ರಿಯ ಅಂಗವಾಗಿ ಅ. 5ರಂದು ಗುರುವಾಯೂರಪ್ಪ ವಿನಾಯಕ, ದುರ್ಗೆ, ಕೈವಾರ ತಾತಯ್ಯ ಸೇರಿದಂತೆ ಪುರಾಣ ಪ್ರಸಿದ್ಧ ಕತೆಗಳಿಗೆ ಸಂಬಂಧಿಸಿದ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಹದಿನೈದು ದಿನಗಳ ಕಾಲ ನಡೆದ ನವರಾತ್ರಿ ಉತ್ಸವದಲ್ಲಿ ಪ್ರತಿನಿತ್ಯ ವಿಶೇಷ ಪೂಜೆ, ಅಲಂಕಾರಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನತೆಯ ಮನ ಗೆದ್ದಿದ್ದ ವಿವೇಕಾನಂದ ಮಿತ್ರ ಬಳಗದವರು ಭಾನುವಾರ ಜಡಿ ಮಳೆಯ ನಡುವೆಯೂ ಅದ್ಧೂರಿ ಮೆರವಣಿಗೆ ನಡೆಸಿ ವಿನಾಯಕ, ದುರ್ಗೆ ಮೂರ್ತಿಗಳನ್ನು ವಿಸರ್ಜನೆ ಮಾಡಿದರು. ಈ ಬಾರಿ ವಿಶೇಷ ಆಕರ್ಷಣೆಯಾಗಿ ಕೇರಳದ ಗುರುವಾಯೂರಪ್ಪ ದೇವಾಲಯದ ಮಾದರಿಯನ್ನು ಸಿದ್ದಪಡಿಸಿ ಭಕ್ತರಿಗೆ ಗುರುವಾಯೂಪ್ಪನ ದರ್ಶನ ಭಾಗ್ಯ ಕಲ್ಪಿಸಲಾಗಿತ್ತು. ಯುವಕರು ಕೇಸರಿ ಬಣ್ಣದ ಟೀ ಶರ್ಟ್ ತೊಟ್ಟು ಮೆರವಣಿಗೆಯಲ್ಲಿ ಗಮನ ಸೆಳೆದರು. ಮಕ್ಕಳು ಮೆರವಣಿಗೆಗೆ ಕಳೆ ತುಂಬಿದರು.
ವೀರಗಾಸೆ ಕುಣಿತ, ಗಾರುಡಿ ಗೊಂಬೆ, ಕೀಲು ಕುದುರೆ, ನಯ್ಯಾಂಡಿ ನೃತ್ಯ. ಮರಕೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರಗಳು ಮೆರವಣಿಗೆಗೆ ಮೆರುಗು ನೀಡಿದವು. ಮುಂಜಾಗ್ರತಾ ಕ್ರಮವಾಗಿ ಮೆರವಣಿಗೆ ಸಂದರ್ಭದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಭಾರತೀಯ ಸಂಸ್ಕೃತಿ ಪುನರುಜ್ಜೀವನಕ್ಕೆ ಪ್ರಹ್ಲಾದ್ ರಾವ್ ಕರೆ
ಕೋಲಾರ: ನಗರದ ಮಂಜುನಾಥ ನಾಟ್ಯ ಕಲಾ ಶಾಲೆಯ ದ್ವಿತೀಯ ವಾರ್ಷಿಕೋತ್ಸವ ಪ್ರಯುಕ್ತ ನೃತ್ಯ ವೈಭವ ಕಾರ್ಯಕ್ರಮವನ್ನು ನಗರದ ಬಾಲಾಜಿ ಪ್ರಾರ್ಥನಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ಕೆ.ಪ್ರಹ್ಲಾದ್ ರಾವ್ ಮಾತನಾಡಿ, ನಶಿಸುತ್ತಿರುವ ಭಾರತೀಯ ಸಂಸ್ಕೃತಿಯ ಪುನರುಜ್ಜೀವನ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಮಂಜುನಾಥ್ ನಾಟ್ಯ ಕಲಾ ಶಾಲೆ ಮುಂದಿನ ಪೀಳಿಗೆಗೆ ಭರತನಾಟ್ಯ ಕಲೆಯಲ್ಲಿ ಆಸಕ್ತಿ ಉಂಟುಮಾಡಿ ಅದರಲ್ಲಿ ಕಾರ್ಯೋನ್ಮುಖರಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದರು. ನವದೆಹಲಿಯ ರಾಷ್ಟ್ರೀಯ ಬಾಲಭವನ ಹಾಗೂ ಆಂಧ್ರ ಭವನದಲ್ಲಿ ಆಕ್ಟೋಬರ್ 2 ರಂದು ಗಾಂಧಿಜಯಂತಿ ಕಾರ್ಯಕ್ರಮದಲ್ಲಿ ಸಂಸ್ಥೆಗೆ ಅಭಿನಂದನಾ ಪತ್ರ ನೀಡಿ ಗೌರವಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಾಲಾಜಿ ಪ್ರಾರ್ಥನಾ ಮಂದಿರದ ವ್ಯಸ್ಥಾಪಕ ಬೆಂದಲೂರು ಶಂಕರನಾರಾಯಣಶೆಟ್ಟಿ,ಶ್ರೀನಿವಾಸಯ್ಯ, ವಿದ್ವಾನ್ ನಟರಾಜ್, ಕೃಷ್ಣಮೂರ್ತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

