ಕೋಲಾರ

ವಿಶ್ವ ಅರವಳಿಕೆ ದಿನಾಚರಣೆ

Published On :

ಕೋಲಾರ; ನಗರದ ಟಮಕ ಪ್ರದೇಶದ ದೇವರಾಜ ಅರಸ್ ವೈದ್ಯಕೀಯ ಕಾಲೇಜಿನಲ್ಲಿ ವಿಶ್ವ ಅರವಳಿಕೆ ದಿನಾಚರಣೆ ಆಚರಿಸಲಾಯಿತು. ದೇವರಾಜ ಅರಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಉಪ ಕುಲಪತಿ ಪ್ರೊ.ಪಿ.ಎಪ್. ಕೊಟ್ಟೂರ್ ಅವರು ವಿಶ್ವ ಅರವಳಿಕೆಯ ದಿನಾಚರಣೆ ಮಹತ್ವವನ್ನು ತಿಳಿಸಿದರು. ಯಾವುದೇ ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ ಅರವಳಿಕೆ ಅಗತ್ಯವಾಗಿರುತ್ತದೆ, ರೋಗಿಗಳ ದೇಹ ಸ್ಥಿತಿ ಮತ್ತು ರೋಗದ ಬಗ್ಗೆ ಅರವಳಿಕೆ ತಜ್ಞರು ಸರಿಯಾಗಿ ಅದ್ಯಯನ ಮಾಡಿ ಅರವಳಿಕೆ ನೀಡಬೇಕು, ಇಂದು ಸಮಾಜದಲ್ಲಿ ಅರವಳಿಕೆಯ ಬಗ್ಗೆ ಸರಿಯಾದ ಅರಿವು ಇಲ್ಲದೆ ಗೊಂದಲ ಮೂಡಿಸಲಾಗುತ್ತಿದೆ. ಇದನ್ನು ಸಮರ್ಥವಾಗಿ ನಿಬಾಯಿಸಲು ವೈದ್ಯರು ಸಿದ್ಧತೆ ಮಾಡಿಕೊಳ್ಳಬೇಕು ಹಾಗೂ ಜನತೆಯ ವಿಶ್ವಾಸಕ್ಕೆ ಧಕ್ಕೆ ಬರದಂತೆ ಮತ್ತು ಭಯ ನಿವಾರಣೆ ಮಾಡುವುದು ಮುಖ್ಯವೆಂದರು. ಕೋಲಾರ ಐಎಸ್‌ಐ ಶಾಖೆಯ ಅಧ್ಯಕ್ಷ ಪ್ರೊ.ಎಂ.ಎಚ್.ಚಂದ್ರಪ್ಪ, ಉಪಾಧ್ಯಕ್ಷ ಡಾ. ಸೋಮಶೇಖರ್, ದೇವರಾಜ ಅರಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಿ. ಸಾಣಿಕೊಪ್ಪ, ಹಿರಿಯ ಅರವಳಿಕೆ ತಜ್ಞೆ ಪ್ರೊ. ನಾಗಲಕ್ಷ್ಮಿ ಮಾತನಾಡಿದರು. ಸುಮಾರು 30ಕ್ಕೂ ಹೆಚ್ಚು ಅರವಳಿಕೆ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹೆಜ್ಜೇನು ಕಚ್ಚಿ ಒಬ್ಬರ ಸಾವು
ಮುಳಬಾಗಲು: ತಾಲೂಕಿನ ಮಂಡಿಕಲ್ ಗ್ರಾಮದ ಮುನೇಶ್ವರಸ್ವಾಮಿ ದೇವಾಲಯದ ಬಳಿ ಭಾನುವಾರ ಮಧ್ಯಾಹ್ನ ಹೆಜ್ಜೇನು ಕಡಿದು ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಮೃತರನ್ನು ತಾಲೂಕಿನ ವಮ್ಮಸಂದ್ರ ಗ್ರಾಮದ ಪಿ. ನಾರಾಯಣಪ್ಪ(75) ಎಂದು ಗುರ್ತಿಸಲಾಗಿದೆ.
ಇವರಲ್ಲದೆ ಇತರೆ ಐದು ಮಂದಿ ತೀವ್ರ ಗಾಯಗೊಂಡು ಮುಳಬಾಗಲು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದೇವಾಲಯದ ಬಳಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾರಾಯಣಪ್ಪ ಬಂದಿದ್ದರು. ಏಕಾಏಕಿ ಹೆಜ್ಜೇನು ದಾಳಿ ನಡೆಸಿ ದುರಂತ ಸಂಭವಿಸಿದೆ.

ಹೆಣ್ಣು ಶಿಶು ಪತ್ತೆ
ಮಧುಗಿರಿ: ಮಧುಗಿರಿಯಿಂದ - ತುಮಕೂರು ಜಿಲ್ಲಾ ಕೇಂದ್ರಕ್ಕೆ ಹಾದು  ಹೋಗುವ ರಾಜ್ಯ ಹೆದ್ದಾರಿ ಹುಣೆಸೇಮರದಹಳ್ಳಿ ಗೇಟ್ ಸಮೀಪದ ಮಂಟಪದ  ಬಳಿ  ಹೆತ್ತವರಿಗೆ ಬೇಡವಾದ  ನವಜಾತ ಹೆಣ್ಣು ಶಿಶುವೊಂದು ಸಂಜೆ ಪತ್ತೆಯಾಗಿದೆ. ಹೆತ್ತವರಿಗೆ ಬೇಡವಾದ ಆಗ ತಾನೇ ಜನಿಸಿದ ನವಜಾತ ಹೆಣ್ಣು ಮಗುವನ್ನು ಅನಾಥವಾಗಿ ಬಿಟ್ಟು ಹೋಗಿದ್ದಾರೆ.

ಇಂದು ಮಹೇಂದ್ರ ಏರೋಸ್ಲೇಸ್ ಘಟಕ ಉದ್ಘಾಟನೆ
ಕೋಲಾರ: ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಮಹೇಂದ್ರ ಏರೋಸ್ಲೇಸ್ ಘಟಕದ ಉದ್ಘಾಟನಾ ಸಮಾರಂಭ ಸೋಮವಾರ ಬೆಳಿಗ್ಗೆ 11.45ಕ್ಕೆ ಹಮ್ಮಿಕೊಳ್ಳಲಾಗಿದೆ. ಕಂಪನಿಯ ಸಿಎಂಡಿ ಆನಂದ್ ಮಹೇಂದ್ರ ಅವರು ಮುಖ್ಯ ಅತಿಥಿಯಾಗಿದ್ದು, ಅಧ್ಯಕ್ಷ ಹೇಮಂತ್ ಲೊತ್ರಾ ಹಾಗೂ ಸಿಇಒ ಆರವಿಂದ್ ಮೆಹ್ರಾ ಭಾಗವಹಿಸಲಿದ್ದಾರೆ.

'ಒಕ್ಕಲಿಗರು ಸಂಘಟಿತರಾಗಿ'
ಶಿಡ್ಲಘಟ್ಟ: ರೈತನೇ ದೇಶದ ಬೆನ್ನೆಲುಬು ಆದರೆ ವ್ಯವಸಾಯ ಮಾಡಲು ನೀರಿಲ್ಲದೆ ರೈತನ ಬೆನ್ನೆಲುಬು ಮುರಿದಿದೆ ಎಂದು ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದ ಸ್ವಾಮೀಜಿ ಹಗೇಳಿದರು. ಅಬ್ಲೂಡು ಪಂಚಾಯ್ತಿ ವ್ಯಾಪ್ತಿಯ ಒಕ್ಕಲಿಗರ ಕ್ಷೇಮಾಬಿವೃದ್ಧಿ ಸಂಘದ ಉದ್ಘಾಟನೆಯಲ್ಲಿ ಮಾತನಾಡಿ, ಸಂಘಟನೆಯಿಂದ ಮಾತ್ರ ಅಬಿವೃದ್ಧಿ ಸಾಧ್ಯ. ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿ ಒಕ್ಕಲಿಗರ ಸಂಘ ಮಾಡುವುದರ ಮೂಲಕ ಅಬವೃದ್ಧಿ ಸಾಧಿಸಭೇಕೆಂದು ಕರೆ ನೀಡಿದರು. ಶಾಸಕ ರಾಜಣ್ಣ ಮಾತನಾಡಿ, ಒಕ್ಕಲಿಗೆ ಸಮುದಾಯದವರೆಲ್ಲಾ ಸೇರಿ ಬಲಿಷ್ಠವಾದ ಸಂಘ ಕಟ್ಟಬೇಕೆಂದು, ಸಂಘಟನೆಗೆ ರಾಜಕೀಯ ಬೇದ ಬೇಡ ಎಂದು ಹೇಳಿದರು. ಸಮುದಾಯದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಒಕ್ಕಲಿಗರ ಕ್ಷೇಮಾಬಿವೃದ್ಧಿ ಸಂಘದ ಅಧ್ಯಕ್ಷ ಅಬ್ಲೂಡು, ಸಿ.ಎಂ. ಗೋಪಾಲ್, ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ಯಲವಳ್ಳಿ ಎನ್. ರಮೇಶ್, ಎಂ.ಸಿ. ನವೀನ್ ಕುಮಾರ್, ಎಸ್.ಎಂ. ನಾರಾಯಣಸ್ವಾಮಿ, ತಮ್ಮೇಶ್ ಗೌಡ, ಕೆ. ಗುಡಿಯಪ್ಪ, ನಾರಾಯಣಸ್ವಾಮಿ, ಅಪ್ಪಿರೆಡ್ಡಿ, ಅಶ್ವತ್ಥ ರೆಡ್ಡಿ, ಜಯದೇವ್, ಮಂಜುಳ ಮುನಿರೆಡ್ಡಿ, ನೇತ್ರಾ ಲಕ್ಷೀಪತಿ, ಎಸ್. ಶ್ರೀನಾಥ್ ಇದ್ದರು.

ಅಕ್ರಮ ಮರಳು ಸಾಗಾಣಿಕೆ: ನಾಲ್ಕು ಲಾರಿಗಳ ವಶ
ಚಿಕ್ಕಬಳ್ಳಾಪುರ: ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ 4 ಲಾರಿಗಳನ್ನು ಅಪರಾಧ ನಿಯಂತ್ರಣ ವಿಭಾಗದ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ತಾಲೂಕಿನ ನಂದಿ ಕ್ರಾಸ್ ಸಮೀಪ ಬೆಂಗಳೂರಿನ ಕಡೆಗೆ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡಲಾಗುತ್ತಿತ್ತು. ಇದನ್ನು ಪತ್ತೆ ಹಚ್ಚಿದ ಪೊಲೀಸರು ಪರಿಶೀಲನೆ ನಡೆಸಿ ನಾಲ್ಕು ಲಾರಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅನಾಥ ಶವ ಸಂಸ್ಕಾರ
ಗುಡಿಬಂಡೆ: ಸುಮಾರು 50 ವರ್ಷದ ಅಪರಿಚಿತ ಬಿಕ್ಷುಕನೊಬ್ಬನ ಶವ ಇಲ್ಲಿನ ಮಾರುತಿ ಸರ್ಕಲ್ ಸಮೀಪದ ಬಸ್ ತಂಗುದಾಣದಲ್ಲಿ ಭಾನುವಾರ ಮಧ್ಯಾಹ್ನ ಪತ್ತೆಯಾಗಿದೆ. ಅನಾರೋಗ್ಯದಿಂದ ಬಿಕ್ಷುಕ ಸಾವನ್ನಪ್ಪಿದ್ದು ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಂತರ ಅನಾಥ ಶವ ಸಂಸ್ಕಾರವನ್ನು ನೆರವೇರಿಸಿದರು.

ಅಪಘಾತ; ಇಬ್ಬರಿಗೆ ಗಾಯ
ಕೆಜಿಎಫ್: ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ವಾಹನ ಸವಾರರು ಗಂಭೀರ ಗಾಯಗೊಂಡು ಕೋಲಾರ ಆಸ್ಪತ್ರೆಗೆ ಸಾಗಿಸಿರುವ ಘಟನೆ ನಗರದ ಉರಿಗಾಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಸಂಭವಿಸಿದೆ. ಮಾರಿಕುಪ್ಪಂ ವ್ಯಾಪ್ತಿಯ ವೆಸ್ಟ್ ಗಿಲ್ಬರ್ಟ್ ನಿವಾಸಿಗಳಾದ ಸೋಮೇಶ್ ಎಂಬವರ ಮಗನಾದ ನಿಘ್ನೇಶ್(19) ಷಣ್ಮುಗಂ ಎಂಬವರ ಮಗನಾದ ಜೈಪ್ರತಾಪ್(19) ಮತ್ತು ಕಾರ್ನೋಷನ್‌ಟೌನ್ ನಿವಾಸಿ ಸೌಂದರ್ ಎಂಬವರ ಮಗನಾದ ಅಹ್ಮಸ್(19) ಎಂಬವರು ಗಾಯಗೊಂಡಿದ್ದು ಇವರನ್ನು  ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡ ಉರಿಗಾಂ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಪರಿಚಿತ ವ್ಯಕ್ತಿ ಸಾವು
ಗುಡಿಬಂಡೆ: ಪಟ್ಟಣದ ಮಾರುತಿ ಸರ್ಕಲ್ ಬಳಿಯ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಪ್ರಯಾಣಿಕರ ತಂಗುದಾಣದಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದೆ. ಸುಮಾರು 45 ವರ್ಷ ವಯಸ್ಸುಳ ಈತ 3 ದಿನಗಳಿಂದ ಈ ತಂಗುದಾಣದಲ್ಲೇ ಕಾಯಿಲೆಯಿಂದ ನರಳುತ್ತಿದ್ದನೆಂದು ಸ್ಥಳೀಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಆರಕ್ಷಕ ವೃತ್ತ ನಿರೀಕ್ಷಕ ಹಾಗೂ ಪೊಲೀಸ್ ಪೇದೆಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವ್ಯಕ್ತಿಯ ಗುರುತು: ಕಪ್ಪು ಬಣ್ಣದ ಮೈಕಟ್ಟು, ಸನಕಳು ದೇಹ, ಬುಜದ ಮೇಲೆ ಹಳೆಯ ಗಾಯಗಳಿವೆ.

ಅತಿಥಿ ಉಪನ್ಯಾಸಕರ ಪ್ರತಿಭಟನೆ ಇಂದು
ಕೋಲಾರ: ಅತಿಥಿ ಉಪನ್ಯಾಸಕರ ಬೇಡಿಕೆಗಳು ಈಡೇರದಿರುವುದರಿಂದ ಸರ್ಕಾರದ ಗಮನ ಸೆಳೆಯಲು ಬೆಂಗಳೂರು,ಮೈಸೂರು, ಶಿವಮೊಗ್ಗ, ದಾರವಾಡ, ಮಂಗಳೂರು, ಗುಲ್ಬರ್ಗ, ಪ್ರಾದೇಶಿಕ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಮುಂದೆ ಅ.21 ರಂದು ಸೋಮವಾರ ಧರಣಿ ನಡೆಸಲಾಗುತ್ತಿದ್ದು ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ರಾಜ್ಯ ಸಮಿತಿ ಅಧ್ಯಕ್ಷ ರವಿಕುಮಾರ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗನಾಳ ಮುನಿಯಪ್ಪ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜನಾಂಗದ ಸಭೆಗೆ ರಾಜಕೀಯ ಬಣ್ಣ ಬೇಡ
ಮುಳಬಾಗಲು: ಜನಾಂಗದ ಅಭಿವೃದ್ಧಿಗಾಗಿ ನಡೆಸುವ ಸಭೆಗಳಿಗೆ ರಾಜಕೀಯ ಲೇಪ ಕೂಡದೆಂದು ಬೋವಿ ಜನಾಂಗದ ಮುಖಂಡ ವಿ. ವೆಂಕಟಮುನಿ ತಾಖಿತು ಮಾಡಿದ್ದಾರೆ. ಭಾನುವಾರ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಕಳೆದ ಬುಧವಾರ ಕೋಲಾರದಲ್ಲಿ ಭೋವಿ ಮುಖಂಡರು ಕರೆದಿದ್ದ ಸಭೆ ಜನಾಂಗದ ಅಭಿವೃದ್ಧಿ ಕುರಿತಾದುದಾಗಿದ್ದು ಮರು ದಿವಸ ಅದು ರಾಜಕೀಯ ಪಕ್ಷದ ಸಭೆ ಎಂದು ಬಿಂಬಿತವಾಗಿದೆ. ಬೋವಿ ಜನಾಂಗದವರು ಅವರಿಗೆ ಇಷ್ಟವಾದ ಪಕ್ಷದಲ್ಲಿರಬಹುದು ಆದರೆ ಎಲ್ಲಾ ಪಕ್ಷದವರು ಸೇರಿದ ಸಭೆಯನ್ನು ಪಕ್ಷದ ಸಭೆಯೆಂದು ಬಿಂಬಿಸುವುದು ಸರಿಯಲ್ಲ ಎಂದು ಮಾಜಿ ಶಾಸಕ ಎಂ. ನಾರಾಯಣಸ್ವಾಮಿಯವರಿಗೆ ಸೂಚಿಸಿದ್ದಾರೆ.

ಜಡಿ ಮಳೆ, ಜನ ಜೀವನ ಅಸ್ತವ್ಯಸ್ತ
ಕೋಲಾರ: ನಗರದಲ್ಲಿ ಭಾನುವಾರ ಮಧ್ಯಾಹ್ನದಿಂದ ಸಂಜೆಯವರೆಗೆ ಸುರಿದ ಜಡಿ ಮಳೆಯಿಂದ ಜನ ಜೀವನ ಅಸ್ತವ್ಯಸ್ಥಗೊಂಡಿತ್ತು. ಪೇಟೆ, ಮಾರುಕಟ್ಟೆಗೆ ಬಂದಿದ್ದ ಜನ ಪರದಾಡಿದರು, ನಗರದ ಟೇಕಲ್ ರಸ್ತೆಯಲ್ಲಿ ರಸ್ತೆ ಕಾಮಗಾರಿ ವಿಳಂಬದಿಂದಾಗಿ ವಾಹನ ಚಾಲಕರಿಗೆ ಅನನೂಕೂಲವಾಯಿತು. ಮೈಮೇಲೆ ಕೆಸರು ಎರಚಿದ ವಾಹನ ಸವಾರರಿಗೆ ಪಾದಚಾರಿಗಳು ಹಿಡಿ ಶಾಪ ಹಾಕಿದರು. ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದ ಕೆಂಗಟ್ಟಿದ್ದ ರಹಮತ್ ನಗರ, ಶಾಂತಿ ನಗರ, ಕುವೆಂಪು ನಗರದ ಜನತೆ ರಾಜ ಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದಿದ್ದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಮುಂಜಾಗ್ರತಾ ಕ್ರಮವಾಗಿ ನಗರಸಭೆಯವರು ರಾಜ ಕಾಲುವೆಗಳ ಸಮೀಪ ನಿವಾಸಿಗಳ ರಕ್ಷಣೆಗಾಗಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು.

ಪದಾಧಿಕಾರಿಗಳ ಆಯ್ಕೆ
ಬಾಗೇಪಲ್ಲಿ: ದಲಿತ ಸಂರಕ್ಷಣಾ ವೇದಿಕೆಯ ತಾಲೂಕು ಘಟಕದ ಪದಾಧಿಕಾರಿಗಳನ್ನು ಸಂಘದ ರಾಜ್ಯಾಧ್ಯಕ್ಷ ಕೆ.ವಿ. ವಿಜಯ ಕುಮಾರ್ ಮತ್ತು ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ ನೇತೃತ್ವದಲ್ಲಿ ನೂತನವಾಗಿ ಆಯ್ಕೆ ಮಾಡಲಾಗಿದೆ.   ಗೌರವಾಧ್ಯಕ್ಷರಾಗಿ ಬಿ.ಜಿ. ರಾಮಚಂದ್ರಪ್ಪ, ಅಧ್ಯಕ್ಷರಾಗಿ ಎಂ. ಶ್ರೀನಿವಾಸ್, ಉಪಾದ್ಯಕ್ಷರಾಗಿ ಎನ್. ಕಿರಣ್‌ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಭಾನುಪ್ರಕಾಶ್, ಕಾರ್ಯದರ್ಶಿಯಾಗಿ ಆರ್. ಚಂದ್ರಪ್ಪ, ಖಜಾಂಚಿಯಾಗಿ ಅಬ್ಬು, ಸಂಘಟನಾ ಸಂಚಾಲಕರಾಗಿ ಟಿ.ಆರ್. ಶಂಕರ್, ಸಹಸಂಚಾಲಕರಾಗಿ ರಾಘವೇಂದ್ರ, ಕಾನೂನು ಸಲಹೆಗಾರರಾಗಿ ಎಂ.ಎ. ನರಸಿಂಹಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.