ಕೋಲಾರ

ತ್ಯಾಜ್ಯ ನಿರ್ವಹಣಾ ಘಟಕಕ್ಕೆ ತೀವ್ರ ವಿರೋಧ

Published On :

ಮಾಲೂರು: ತಾಲೂಕಿನ ಪಿಚ್ಚುಗುಂಟ್ರಹಳ್ಳಿಯಲ್ಲಿ ಖಾಸಗಿ ಸಂಸ್ಥೆ ಎನ್ವೋಟಿಕ್ ವೇಸ್ಟ್ ಮ್ಯಾನೇಜ್ ಮೆಂಟ್ ಸ್ಥಾಪಿಸಲು ಉದ್ದೇಶಿಸಿದ್ದ ತ್ಯಾಜ್ಯ ನಿರ್ವಹಣಾ ಘಟಕದ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಜಿಲ್ಲಾಧಿಕಾರಿ ಡಿ.ಕೆ. ರವಿ  ಸ್ಥಳಕ್ಕೆ ಆಗಮಿಸಿದಾಗ ರೈತರು, ಸಂಘ-ಸಂಸ್ಥೆಗಳ ಸಾವಿರಾರು ಜನ ಘಟಕ ಬೇಡವೇ ಬೇಡ ಎಂಬ ಘೋಷಣೆಯ ಮೂಲಕ ಸ್ವಾಗತ ಕೋರಿದ ಘಟನೆ ಸೋಮವಾರ ನಡೆಯಿತು.
ರೈತ ಸಂಘ, ಕರವೇ ಸೇರಿದಂತೆ ತಾಲೂಕಿನ ಎಲ್ಲ ಸಂಘಟನೆಗಳು, ಸಾರ್ವಜನಿಕರು ಭಾಗವಹಿಸಿದ ಸಭೆಯಲ್ಲಿ ಮಾತನಾಡಿದ ನಿವೃತ್ತ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ರಾಮಯ್ಯ, ಘಟಕದಲ್ಲಿ ರಾಸಾಯನಿಕ, ಕ್ರಿಮಿನಾಶಕ ಗೊಬ್ಬರ ಸೇರಿದಂತೆ ವಿವಿಧ ಉದ್ದಿಮೆಗಳಿಂದ ಉತ್ಪತ್ತಿಯಾಗುವ ನಾನಾ ತ್ಯಾಜ್ಯಗಳನ್ನು ತಂದು ಶೇಖರಣೆ ಮಾಡಿ, ಸುಡಲು ಸಾಧ್ಯವಾಗದ್ದನ್ನು ಭೂಮಿಯಲ್ಲಿ ಹೂಳುತ್ತಾರೆ. ತ್ಯಾಜ್ಯವನ್ನು ಸುಡುವಾಗ ಉತ್ಪತ್ತಿಯಾಗುವ ವಿಷಕಾರಿ ಅನಿಲಗಳಾದ ಡ್ಯಾಯಾಕ್ಸಿನ್ ಹಾಗೂ ಪ್ಲೋರಾನ್‌ಗಳು ಗಾಳಿಯಲ್ಲಿ ಸೇರಿ ಜನರು ಕ್ಯಾನ್ಸ್‌ರ್‌ಗೆ ತುತ್ತಾಗುವುದು ಖಚಿತ ಆದ್ದರಿಂದ ತ್ಯಾಜ್ಯ ನಿರ್ವಹಣಾ ಘಟಕ ಬೇಡವೇ ಬೇಡ ಎಂದರು. ತಾಪಂ ಸದಸ್ಯ ಎಸ್.ವಿ. ಲೋಕೇಶ್ ಮಾತನಾಡಿ, ಜೀವಕ್ಕೆ ಸಂಚಕಾರ ತರುವ ಕಾರ್ಖಾನೆಗಳು ಬೇಕಾಗಿಲ್ಲ. ಇಲ್ಲಿನ ಘಟಕದಿಂದ ಸುತ್ತಮುತ್ತಲ 20 ಗ್ರಾಮಗಳ, 8 ಸಾವಿರ ಎಕರೆ ಕೃಷಿ-ತೋಟಗಾರಿಕೆ ಹಾಗೂ ಸಾವಿರಾರು ಎಕರೆಯ ಅರಣ್ಯ ಪ್ರದೇಶದ ವಾತಾವರಣ ಸಂಪೂರ್ಣ ಕೆಡಲಿದೆ ಎಂದರು. ಮೆ. ಎನ್ವೋಟಿಕ್ ವೇಸ್ಟ್‌ಮ್ಯಾನೇಜ್‌ಮೆಂಟ್ ಸಂಸ್ಥೆಯ ಪರ ಸಂಸ್ಥೆಯ ನಾರಾಯಣ್ ಮಾತನಾಡಿ, ಸಂಸ್ಥೆ ತ್ಯಾಜ್ಯ ನಿರ್ವಹಣೆಯನ್ನು ನೂತನ ತಂತ್ರಜ್ಞಾನದಲ್ಲಿ ಮಾಡುವುದರಿಂದ ಪರಿಸರಕ್ಕಾಗಲೀ, ಜನ ಜೀವನಕ್ಕಾಗಲಿ ಯಾವುದೇ ಅಪಾಯವಿಲ್ಲ ಎಂದರು. ಈಗಾಗಲೇ ಪೂನಾ ಹಾಗೂ ನಾಗಪುರದಲ್ಲಿ ಇಂತಹ ಘಟಕಗಳನ್ನು ಸ್ಥಾಪಿಸಲಾಗಿದ್ದು, ಯಾವುದೇ ಜೀವ ಸಂಕುಲಕ್ಕೆ ತೊಂದರೆಯಾದ ವರದಿಯಾಗಿಲ್ಲ. ಸಂಸ್ಥೆಯ ಅಧಿಕಾರಿಯ ಮಾತನ್ನು ಮಧ್ಯಕ್ಕೆ ತಡೆದ ಪ್ರತಿಭಟನೆಕಾರರು ರಾಜ್ಯ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿರುವಂತೆ ನಮಗೆ ನೀಡುವುದು ಬೇಡ ಎಂದರಲ್ಲದೇ ಯಾವುದೇ ಕಾರಣಕ್ಕೂ ಹಳ್ಳಿಗೆ ಬರಲಿಕ್ಕೆ ಬಿಡುವುದಿಲ್ಲ ಎಂದರು. ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಅಧಿಕಾರಿ ಪ್ರಭುದೇವ ಮಾತನಾಡಿ, ಕಾನೂನು ರೀತ್ಯಾ ಕೇಂದ್ರ ಪರಿಸರ ಮಂಡಳಿಯಿಂದ ಬಂದಿರುವ ಆದೇಶದಂತೆ ಸ್ಥಳಪರಿಶೀಲನೆ ಹಾಗೂ ಸಾರ್ವಜನಿಕ ಅಭಿಪ್ರಾಯ ಪಡೆಯಲು ಬಂದಿದ್ದು, ಇಲ್ಲಿನ ವಾಸ್ತವ ಸ್ಥಿತಿಯನ್ನೇ ವರದಿಯಲ್ಲಿ ಕಳುಹಿಸಲಾಗುವುದು ಎಂದರು. ರೈತ ಸಂಘದ ಬೆ. ರಮೇಶ್, ಅಶ್ವಥ್ ರೆಡ್ಡಿ, ಕರವೇ ಅಧ್ಯಕ್ಷ ಮಂಜುನಾಥ್ ಗೌಡ, ಬ.ಶ್ರೀನಿವಾಸ್, ತಾಪಂ ಸದಸ್ಯ ಕೃಷ್ಣಪ್ಪ, ಹೈದರಾಬಾದ್‌ನ ಎನ್‌ಜಿಒ ಸುನಂದ ರೆಡ್ಡಿ, ಪರಮೇಶ್, ಲಕ್ಷ್ಮಿನಾರಾಯಣ್ ಘಟಕದ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದರು. ತಹಸೀಲ್ದಾರ್ ಡಾ. ಸುಧಾ, ಜಿಪಂ ಸದಸ್ಯೆ ಯಲ್ಲಮ್ಮ, ತಾಪಂ ಅಧ್ಯಕ್ಷ ಪುಟ್ಟಸ್ವಾಮಿ, ಪಂಚಾಯ್ತಿ ಅಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಮಲ್ಲಿಕಾರ್ಜುನಯ್ಯ, ಚಿನ್ನಸ್ವಾಮಿಗೌಡ, ಗಣೇಶ್ ಗೌಡ, ಭೈಚೇಗೌಡ, ಅಬ್ಬಣಿ ಶಿವಣ್ಣ, ರಾಜು, ಚೆನ್ನಕೃಷ್ಣ, ದೇವರಾಜ್, ಮುನಿರಾಜು ಸೇರಿದಂತೆ ಸಾರ್ವಜನಿಕರು ಸೇರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.