7 ಮರಳು ಲಾರಿಗಳ ವಶ
ಕೋಲಾರ: ಅಕ್ರಮ ಮರಳು ದಂಧೆ ತಡೆಗೆ ಜಿಲ್ಲಾಧಿಕಾರಿಗಳು ರಚಿಸಿರುವ ಜಾಗೃತಿ ದಳಗಳು ಕಾರ್ಯೋನ್ಮುಕವಾಗಿದ್ದು, ಮಂಗಳವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ-4 ರ ರಾಮಸಂದ್ರ ಗೇಟ್ ಬಳಿ ಏಳು ಮರಳು ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿ ಎಂ. ರಾಜಾರಾಂ ನೇತೃತ್ವದ ಜಾಗೃತಿ ದಳ ಮಂಗಳವಾರ ತಮಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಕೋಚಿಮುಲ್ ಸಮೀಪದ ರಾಮಸಂದ್ರ ಗೇಟ್ ಬಳಿ ಮರಳು ತುಂಬಿ ಬೆಂಗಳೂರು ಕಡೆಗೆ ಸಾಗುತ್ತಿದ್ದ 7 ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಳ್ಳಲಾಗಿರುವ ಮರಳು ಲಾರಿಗಳನ್ನು ಗ್ರಾಮಾಂತರ ಠಾಣೆ ವಶಕ್ಕೆ ಒಪ್ಪಿಸಲಾಗಿದೆ,ದಾಳಿಯಲ್ಲಿ ರಾಜಾರಾಂರೊಂದಿಗೆ ಬಾಬು, ನರೇಶ್, ವಿನೋದ್ಕುಮಾರ್, ಆರ್.ಐ. ವೆಂಕಟೇಶ್ ಭಾಗವಹಿಸಿದ್ದರು.
ರಾಜ್ಯ ಮಟ್ಟದ ಪೈಕಾ ಮಹಿಳಾ ಕ್ರೀಡಾಕೂಟ
ಕೋಲಾರ: 2013-14ನೇ ಸಾಲಿನ ರಾಜ್ಯ ಮಟ್ಟದ ಪೈಕಾ ಮಹಿಳಾ ಕ್ರೀಡಾಕೂಟವು ಗುಂಪು- 1 ಮತ್ತು ಗುಂಪು- 2ರ ಬಾಸ್ಕೆಟ್ಬಾಲ್, ಹಾಕಿ, ಹ್ಯಾಂಡ್ಬಾಲ್, ಈಜು, ಕ್ರೀಡೆಗಳನ್ನು ಅ.27ರಿಂದ 29ರವರೆಗೆ ಚಿತ್ರದುರ್ಗದಲ್ಲಿ ಏರ್ಪಡಿಸಲಾಗಿದೆ. ಕ್ರೀಡಾಕೂಟದಲ್ಲಿ ಭಾಗವಹಿಸುವಂತಹ ಜಿಲ್ಲಾ ಕ್ರೀಡಾಪಟುಗಳನ್ನು ಅ.25ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಮಟ್ಟದಲ್ಲಿ ಬಾಸ್ಕೆಟ್ಬಾಲ್, ಹಾಕಿ, ಹ್ಯಾಂಡ್ಬಾಲ್, ಈಜು ಕ್ರೀಡೆಗಳಲ್ಲಿ ಆಯ್ಕೆ ಕಾರ್ಯಕ್ರಮವನ್ನು ನಗರದ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಹಿಳಾ ಕ್ರೀಡಾಪಟುಗಳು ಅ.25ರಂದು ಬೆಳಗ್ಗೆ 11 ಗಂಟೆಯೊಳಗೆ ಪಿ.ಎಲ್. ಶಂಕರಪ್ಪ, ಜಿಲ್ಲಾ ಅಥ್ಲೆಟಿಕ್ಸ್ ತರಬೇತುದಾರರು, ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣ, ಕೋಲಾರ ಇವರಲ್ಲಿ ವರದಿ ಮಾಡಿಕೊಳ್ಳಲು ಕೋರಲಾಗಿದೆ.
ಗೊಂದಲದಲ್ಲಿ ಮುಗಿದ ರಾಜ್ಯೋತ್ಸವ ಸಭೆ
ಗುಡಿಬಂಡೆ: ಕನ್ನಡ ರಾಜ್ಯೋತ್ಸವ ಆಚರಣೆ ಸಂಬಂಧ ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಪೂರ್ವಭಾವಿ ಸಭೆ ಹಲವು ಸಂಘಟನೆಗಳ ಆಕ್ಷೇಪಗಳಿಗೆ ಗುರಿಯಾಗಿ ಗೊಂದಲದ ಗೂಡಾಗಿ ಪರಿಣಮಿಸಿದ ಪ್ರಸಂಗ ನಡೆಯಿತು. ರಾಜ್ಯೋತ್ಸವ ನಿಮಿತ್ತ ಮಾಡಿಕೊಳ್ಳಬೇಕಾದ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಚರ್ಚಿಸಲು ಮಿನಿವಿಧಾನಸೌಧ ಸಬಾಂಗಣದಲ್ಲಿ ಸಭೆ ಕರೆಯಲಾಗಿತ್ತು. ಆದರೆ ಸದರಿ ಸಭೆಗೆ ಕನ್ನಡಪರ ಸಂಘಟನೆಗಳು ಸ್ವಯಂಸೇವಾ ಸಂಸ್ಥೆಗಳು ಸೇರಿದಂತೆ ಸಂಬಂಧಪಟ್ಟ ವ್ಯಕ್ತಿಗಳಿಗೆ ಸಭೆ ನಡೆಯುವ ಬಗ್ಗೆ ನಿಖರ ಮಾಹಿತಿ ನೀಡಿಲ್ಲವೆಂದು ಜಯಕರ್ನಾಟಕ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು ದೂರಿದರು. ಇದರಿಂದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರೂ ಆದ ತಹಸೀಲ್ದಾರ್ ಮಂಜುಳಾ ಮುಜುಗರಕ್ಕೆ ಒಳಗಾದರು. ನಂತರ ಸಿಬ್ಬಂದಿಯವರಿಂದ ವಿಷಯದ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ಲೋಪದೋಷಗಳನ್ನು ಸರಿಪಡಿಸುವ ಭರವಸೆ ನೀಡಿದರು. ಸಭೆ ತಿಳಿವಳಿಕೆ ಬಗ್ಗೆ ಹಲವರಿಗೆ ನೀಡಿರುವ ಪತ್ರದಲ್ಲಿ 12-30ಕ್ಕೆ ಸಭೆ ನಡೆಯಲಿದೆ ಎಂದು ನಮೂದಿಸಿ, ಇನ್ನು ಹಲವರಿಗೆ ನೀಡಿರುವ ಪತ್ರದಲ್ಲಿ 3 ಗಂಟೆಗೆ ಸಭೆ ನಡೆಯಲಿದೆ ಎಂದು ತಿಳಿಸಿದ್ದರಿಂದ ಗೊಂದಲ ಉಂಟಾಗಲು ಕಾರಣವಾಯ್ತು.
ನಂದಿಗಾನಹಳ್ಳಿ ಗ್ರಾಪಂ ಕಾಮಗಾರಿಗೆ ತಡೆ
ಚಿಂತಾಮಣಿ: ನಂದಿಗಾನಹಳ್ಳಿ ಗ್ರಾಮ ಪಂಚಾಯ್ತಿ ಕಚೇರಿ ನಡೆಸುತ್ತಿರುವ ಕಟ್ಟಡದ ಕಾಮಗಾರಿಗೆ ನ್ಯಾಯಾಲಯವು ತಡೆಯಾಜ್ಞೆ ನೀಡಿ ಆದೇಶಿಸಿದೆ. ತಾಲೂಕಿನ ಮುರುಗಮಲ್ಲ ಹೋಬಳಿ ನಂದಿಗಾನಹಳ್ಳಿ ಗ್ರಾಮ ಪಂಚಾಯ್ತಿಯ ಕಟ್ಟಡ ಕಾಮಗಾರಿ ನಡೆಸದಂತೆ ಹಾಗೂ ಹಾಲಿ ನಡೆದಿರುವ ಕಾಮಗಾರಿಗೆ ಬಿಲ್ ಪಾವತಿಸದಂತೆ ನ್ಯಾಯಾಲಯದಲ್ಲಿ ಶಾಶ್ವತ ನಿರ್ಬಂಧಕಾಜ್ಞೆಯಾಗಿದ್ದು, ಸದರಿ ಆದೇಶವನ್ನು ಪಾಲಿಸಬೇಕೆಂದು ಸಂಬಂಧಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಹಾಗೂ ತಾಲೂಕು ಪಂಚಾಯ್ತಿ ಜೂನಿಯರ್ ಎಂಜಿನಿಯರ್ ಜಿಲ್ಲಾ ಪಂಚಾಯ್ತಿ ಉಪ ವಿಭಾಗ ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳಿಗೆ ನ್ಯಾಯಾಲಯದಲ್ಲಿ ದಾವೆ ಅರ್ಜಿದಾರನಾದ ಗೋಪಾಲಕೃಷ್ಣ ಸಂಬಂಧಪಟ್ಟ ಅಧಿಕಾರಿಗಳಿಗೆ ನ್ಯಾಯಾಲಯದ ತಡೆಯಾಜ್ಞೆ ಆದೇಶದ ಪ್ರತಿಯನ್ನು ನೀಡಿದ್ದಾರೆ.
ಇಂದು ಕೆಡಿಪಿ ಸಭೆ
ಕೋಲಾರ: ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ಅ.23ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಕಾಲುಬಾಯಿ ಜ್ವರ, ರಾಜ ಕಾಲುವೆ, ಕಲ್ಯಾಣಿಗಳ ಅಭಿವೃದ್ಧಿಯ ವಿಚಾರಗಳ ಬಗ್ಗೆ ಚರ್ಚಿಸಲಿರುವ ಸಚಿವರು, ಜಿಲ್ಲಾ ಆಡಳಿತದಲ್ಲಿ ಆಗಿರುವ ಸುಧಾರಣೆಯ ಬಗ್ಗೆಯೂ ಸಮಾಲೋಚನೆ ನಡೆಸಲಿದ್ದಾರೆ.
ಬಿಇಒ ಆಗಿ ಜಗದೀಶ್ ಅಧಿಕಾರ ಸ್ವೀಕಾರ
ಕೋಲಾರ: ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಬಿ. ಜಗದೀಶ್ ನಿರ್ಗಮಿತ ಅಧಿಕಾರಿ ಶಿವಲಿಂಗಯ್ಯರಿಂದ ಅಧಿಕಾರ ಸ್ವೀಕರಿಸಿದರು. ಶಿವಲಿಂಗಯ್ಯ ಅವರಿಗೆ ಚಿಕ್ಕಬಳ್ಳಾಪುರ ವಯಸ್ಕರ ಶಿಕ್ಷಣಾಧಿಕಾರಿಯಾಗಿ ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ಗೌರಿಬಿದನೂರಿನಲ್ಲಿ ಬಿಇಒ ಆಗಿದ್ದ ಜಗದೀಶ್ ನೇಮಕಗೊಂಡಿದ್ದಾರೆ. ನೂತನ ಬಿಇಒ ಅವರನ್ನು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಚಿಲಕಾಂತಮಠ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಮಂಜುನಾಥ್, ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್,ಇಲಾಖೆಯ ನಾರಾಯಣರೆಡ್ಡಿ, ಸಂತೋಷ್ ಮತ್ತಿತರರು ಅಭಿನಂದಿಸಿದರು. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲ್ಕುಮಾರ್ ನೇತೃತ್ವದಲ್ಲಿ ನೂತನ ಬಿಇಒ ಅವರಿಗೆ ಇದೇ ಸಂದರ್ಭದಲ್ಲಿ ಆತ್ಮೀಯ ಸ್ವಾಗತ ಕೋರಲಾಯಿತು. ಸಂಘದ ಮುಖಂಡ ಶ್ರೀನಿವಾಸಮೂರ್ತಿ ಮತ್ತಿತರರು ಇದ್ದರು.
ನಾಲ್ಕು ಕಾಲುಳ್ಳ ಕೋಳಿ ಮರಿ ಜನನ!
ಚಿಂತಾಮಣಿ: ಪ್ರಕೃತಿ ವೈಚಿತ್ರ್ಯ ಎಂಬಂತೆ ಕೋಳಿ ಮರಿಯೊಂದಕ್ಕೆ ತೋಕೆ ಹಿಂಬದಿಯಲ್ಲಿ ಎರಡು ಕಾಲು ಹುಟ್ಟಿವೆ. ವಿಚಿತ್ರದಿಂದ ಇರುವ ಈ ಕೋಳಿ ಮರಿಗೆ ನಾಲ್ಕು ಕಾಲುಗಳು ಕಾಣಿಸಿಕೊಂಡಿರುವುದರಿಂದ ಇದನ್ನು ನೋಡಲು ನಾಗರಿಕರು ತಂಡೋಪತಂಡಗಳಾಗಿ ಆಗಮಿಸುತ್ತಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಪಟ್ಟಣದ ಆಶ್ರಯ ಬಡಾವಣೆಯ ಸುದ್ದುಕುಂಟೆಯಲ್ಲಿ ಬೆಳಕಿಗೆ ಬಂದಿದೆ. ಪಟ್ಟಣದ ಆಶ್ರಯ ಬಡಾವಣೆಯ(ಸುದ್ದುಕುಂಟೆ) ನಿವಾಸಿ ಶಾಂತಮೂರ್ತಿ ಎಂಬವರಿಗೆ ಸೇರಿದ ನಾಟಿ ಕೋಳಿವೊಂದರ ಮರಿಗೆ ತೋಕೆ ಹಿಂಬದಿಯಲ್ಲಿ 2 ಕಾಲು ಹುಟ್ಟಿ ಕಳೆದ ಒಂದು ವಾರದಿಂದ ಆರೋಗ್ಯವಾಗಿದೆ. ರಾಜಕೀಯ ಮುಖಂಡರು, ವಿವಿಧ ಸಂಘ- ಸಂಸ್ಥೆಗಳ ಹಲವರ ಗಮನ ಸೆಳೆದಿದೆ.
'ಗ್ರಾಮಗಳ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆ ತಯಾರಿ'
ಮಾಗಡಿ: ಗ್ರಾಮಗಳ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆಯನ್ನು ತಯಾರಿಸಲಾಗುತ್ತಿದೆ ಎಂದು ಆಗಲಕೋಟೆ ಗ್ರಾ.ಪಂ. ಅಧ್ಯಕ್ಷೆ ನಾಗರತ್ನಮ್ಮ ನುಡಿದರು. ಅವರು ಆಗಲಕೋಟೆ ಗ್ರಾಮ ಪಂಚಾಯ್ತಿಯಲ್ಲಿ ಮೊದಲನೆ ಸುತ್ತಿನ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಗುಚ್ಚ ಕಾಮಗಾರಿ ತಯಾರಿಕೆ ವೇಳೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜನತೆ ಹಾಜರಿದ್ದು, ಯೋಜನೆ ಕುರಿತು ಮಹತ್ವದ ಮಾಹಿತಿ ನೀಡಬೇಕಿದೆ. ಈ ನಿಟ್ಟಿನಲ್ಲಿ ವಿಶೇಷವಾಗಿ ಕಾಮಗಾರಿಗಳ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ನರೇಗ ಯೋಜನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಅರ್ಹ ಪಲಾನುಭವಿಗಳು ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಮುದ್ದುರಾಜ ಯಾದವ್, ತಾ.ಪಂ. ಅಧ್ಯಕ್ಷ ಜಿ.ಕೃಷ್ಣ, ಮಾಜಿ ಅಧ್ಯಕ್ಷ ಬಿ.ಟಿ.ವೆಂಕಟೇಶ್ ಯೋಜನೆಗಳ ಮಾಹಿತಿ ನೀಡುವ ಮೂಲಕ ಸದ್ಬಳಕೆ ಮಾಡಿಕೊಳ್ಳುವಂತೆ ಜನತೆಗೆ ತಿಳಿಸಿದರು. ಬಿಇಓ ಇಲಾಖೆಯ ನಾಗಯ್ಯ, ಸಾಮಾಜಿಕ ಲೆಕ್ಕ ತಪಾಸಣಾ ಕುರಿತು ರೇಖಾ ಮಾತನಾಡಿದರು. ಉಪಾಧ್ಯಕ್ಷ ಮೇಲಗಿರಯ್ಯ, ಸದಸ್ಯರಾದ ನಾರಾಯಣಸ್ವಾಮಿ, ಅಶೋಕ್, ಹೊನ್ನಪ್ಪ, ಹೊಟ್ಟಪ್ಪ, ನಾಗರಾಜಯ್ಯ, ಶಾರದಮ್ಮ, ರಾಣಿ, ಮನಿರತ್ನಮ್ಮ, ನಳಿನಾಕ್ಷಿ, ಪಾರ್ವತಮ್ಮ, ಪಿಡಿಓ ಶಿವರಾಜಯ್ಯ, ಕಾರ್ಯದರ್ಶಿ ದಾಸಯ್ಯ ಹಾಗು ಗ್ರಾಮಸ್ಥರು ಇದ್ದರು.
ಧನಮಟ್ನಹಳ್ಳಿಯಲ್ಲಿ ಎನ್ಎಸ್ಎಸ್ ಶಿಬಿರ
ಕ.ಪ್ರ.ವಾರ್ತೆ ಕೋಲಾರ ಅ. 22
ನಗರದ ಬಾಲಕರ ಪಿಯು ಕಾಲೇಜು ವತಿಯಿಂದ ತಾಲೂಕಿನ ಧನಮಟಹಳ್ಳಿಯಲ್ಲಿ ಎನ್ಎಸ್ಎಸ್ ಶಿಬಿರವನ್ನು ಆಯೋಜಿಸಲಾಗಿದ್ದು, ಅ.23 ರಂದು ಬೆಳಗ್ಗೆ 10.30ಕ್ಕೆ ಶಾಸಕ ವರ್ತೂರು ಪ್ರಕಾಶ್ ಚಾಲನೆ ನೀಡುವರು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ವೆಂಕಟಮುನಿಯಪ್ಪ, ಶೆಟ್ಟಿಹಳ್ಳಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮುನಿನಾರಾಯಣ ಮತ್ತಿತರರು ಉಪಸ್ಥಿತರಿದ್ದು, ಕಾಲೇಜು ಪ್ರಾಂಶುಪಾಲ ಎಸ್. ವೆಂಕಟಸ್ವಾಮಿ ಅಧ್ಯಕ್ಷತೆ ವಹಿಸುವರು. ಸಸಿ ನೆಡುವ ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ಜೆ.ಜಿ. ನಾಗರಾಜ್ ಉದ್ಘಾಟಿಸಲಿದ್ದು, ತಹಸೀಲ್ದಾರ್ ಜಿ.ಆರ್.ನಾಗರಾಜ್, ಪಶುಸಂಗೊಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಸ್. ಚನ್ನಕೇಶವಯ್ಯ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಲ್. ಕೃಷ್ಣಪ್ಪ ಮತ್ತಿತರರು ಹಾಜರಿರುವರು. ಸಂಜೆ 7.30ಕ್ಕೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಜಿ. ದೊರೆಸ್ವಾಮಿ ಉದ್ಘಾಟಿಸಲಿದ್ದು, ರಾಘವೇಂದ್ರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಹಾಡಹಗಲೇ ಚಿನ್ನಾಭರಣ ಕಳವು
ಚಿಂತಾಮಣಿ: ಹಾಡಹಗಲೇ ಲಕ್ಷಾಂತರ ರುಪಾಯಿ ಬೆಲೆ ಬಾಳುವ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗಂಡ್ರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಿಂತಾಮಣಿ ತಾಲೂಕಿನ ಗಂಡ್ರಗಾನಹಳ್ಳಿ ಗ್ರಾಮದ ರೈತ ಆಂಜನೇಯರೆಡ್ಡಿ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಅಪರಿಚಿತರು ಹಾಡುಹಗಲೇ ಮನೆಗೆ ನುಗ್ಗಿ ಸುಮಾರು 390 ಗ್ರಾಂ. ಮೌಲ್ಯದ ಬಂಗಾರದ ಲಾಂಗ್ ಚೈನ್, ಓಲೆಗಳು, ಉಂಗುರ, ನೆಕ್ಲಿಸ್ ಸೇರಿದಂತೆ 10 ಲಕ್ಷ ಮೌಲ್ಯದ ಒಡವೆಗಳೆಂದು ಅಂದಾಜಿಸಲಾಗಿದೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಡಿವೈಎಸ್ಪಿ ಸಣ್ಣತಿಮ್ಮಪ್ಪ, ವೃತ್ತ ನಿರೀಕ್ಷಕ ವೆಂಕಟೇಶ್ಮೂರ್ತಿಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೋಲಾರ ಮತ್ತು ಚಿಕ್ಕಬಳ್ಳಾಪುರದಿಂದ ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಲಾಗಿತ್ತು. ಸಂಬಂಧಿಸಿ ಪೊಲೀಸರು ಕೇಸ್ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
30ರಂದು ಕುಂದುಕೊರತೆ ಸಭೆ
ಕೋಲಾರ: ಡಾ. ಬಿ.ಆರ್. ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಾಂಗದ ಕುಂದುಕೊರತೆಗಳ ವಿಚಾರಣೆ ಸಭೆಯನ್ನು ಅ.30ರಂದು ಬೆಳಿಗ್ಗೆ 11 ಗಂಟೆಗೆ ಕರೆಯಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ವಹಿಸಲಿದ್ದಾರೆ. ಅಂದು ನಡೆಯಲಿರುವ ಕುಂದುಕೊರತೆ ವಿಚಾರಣೆ ಸಭೆಗೆ ಸಂಬಂಧಿಸಿದ ಎಲ್ಲಾ ಮುಖಂಡರು ಹಾಜರಾಗಬೇಕೆಂದು ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಸ್ಎಫ್ಐಗೆ ನೇಮಕ
ಮಾಲೂರು: ಪಟ್ಟಣದ ಕೃಷಿಕ ಸಮಾಜದಲ್ಲಿ ನಡೆದ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ(ಎಸ್ಎಫ್ಐ)ನ 3ನೇ ತಾಲೂಕು ಸಮ್ಮೇಳನದಲ್ಲಿ ತಾಲೂಕು ಎಸ್ಎಫ್ಐಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ- ಸಿ.ವೈ. ಗೋಪಿ, ಉಪಾಧ್ಯಕ್ಷರು- ಎಂ.ಆರ್. ಮುನಿರಾಜು, ದಿವ್ಯ ಪಿ, ಶರತ್ ಕುಮಾರ್, ಕಾರ್ಯದರ್ಶಿ- ಅರುಣ್ ಕುಮಾರ್, ಸಹ ಕಾರ್ಯದರ್ಶಿಗಳು-ಜಿ. ರೂಪ, ಉಮೇಶ್, ಎಂ. ಅಂಜನ್ ಕುಮಾರ್ ಹಾಗೂ ಸದಸ್ಯರುಗಳಾಗಿ ಡಿ.ಆರ್. ಆಶಾ, ಬಿ.ಎಸ್. ದ್ರಾಕ್ಷಾಯಿಣಿ, ಬಿ. ಸುವಿತ್ರ, ಅನಿತಾ, ರೂಪೇಶ್, ಅಬ್ಬಾಸ್, ರವಿಚಂದ್ರ, ಚಂದ್ರಿಕಾ, ಕೃಷ್ಣಮೂರ್ತಿ ಅವರು ರಾಜ್ಯ ಕಾರ್ಯದರ್ಶಿ ಉಳ್ಳಿ ಉಮೇಶ್ ಅಧ್ಯಕ್ಷತೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಸಂಘಟನೆಯ ಕಾರ್ಯದರ್ಶಿ ಅರುಣ್ ಕುಮಾರ್ ತಿಳಿಸಿದ್ದಾರೆ.
26ರಂದು ಕಲಾ ಉತ್ಸವ
ಮಾಲೂರು: ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅ.26ರಂದು ತಾಲೂಕು ಮಟ್ಟದ ಕಲಾ ಉತ್ಸವ ಹಾಗೂ ಕಲಾಶ್ರೀ ಶಿಬಿರ ಹಮ್ಮಿಕೊಂಡಿದೆ. ಇಲ್ಲಿನ ಬಾಲಕಿಯರ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಾಲಭವನ ಸೊಸೈಟಿ, ಶಿಕ್ಷಣ ಇಲಾಖೆ, ತಾಲೂಕು ಪಂಚಾಯ್ತಿ ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸಹಕಾರದೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿರುವ ಈ ಶಿಬಿರದಲ್ಲಿ 5 ವರ್ಷದಿಂದ 16 ವರ್ಷದ ಮಕ್ಕಳಿಗೆ ಸೃಜನ್ಮಾತಕ ಕಲೆ, ಬರವಣಿಗೆ, ಪ್ರದರ್ಶನ ಕಲೆ ಹಾಗೂ ವಿಜ್ಞಾನದಲ್ಲಿ ನೂತನ ಆವಿಷ್ಕಾರ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ನೋಂದಣಿಗೆ ಅ.25ರಂದು ಕಡೆಯ ದಿನ. ವಿವರಕ್ಕೆ ದೂ. 08151- 232215 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

