ಡಿಸಿ ಕಚೇರಿ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಕೋಲಾರ ಅ. 23
ಈಗಿರುವ ಜಿಲ್ಲಾಧಿಕಾರಿಗಳ ಕಚೇರಿಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದೆಂದು ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಬುಧವಾರ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಗಳ ಕಚೇರಿ ಸ್ಥಳಾಂತರ ನಿರ್ಧಾರ ಸರ್ಕಾರದ ತುಘಲಕ್ ನೀತಿಯಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಭೂ ಮಾಫಿಯಗಳಿಗೆ ಮಣಿದು ಜಿಲ್ಲಾಧಿಕಾರಿಗಳ ಕಚೇರಿಯನ್ನು ಸ್ಥಳಾಂತರ ಮಾಡಿದಲ್ಲಿ ಜಿಲ್ಲೆಯ ಸಾವಿರಾರು ಮಂದಿಯ ದಿನನಿತ್ಯದ ಅಗತ್ಯ ಮತ್ತು ವ್ಯವಹಾರಗಳಿಗೆ ತೊಂದರೆ ಆಗುತ್ತದೆ ಎಂದು ದೂರಿದರು.
ಜನಪರ ಹೋರಾಟಗಳನ್ನು, ಸಾರ್ವಜನಿಕರನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದ ದೂರವಿರಿಸುವ ಹುನ್ನಾರವಿದು. ಕೋರ್ಟ್ ಆವರಣ ಮತ್ತು ತೋಟಗಾರಿಕೆ ಇಲಾಖೆ ಹೊರತುಪಡಿಸಿದರೆ ಸುಮಾರು ಆರುವರೆ ಎಕರೆಯಷ್ಟು ಸ್ಥಳಾವಕಾಶ ಇರುವುದರಿಂದ ಈಗಿರುವ ಹಳೆಯ ಕಟ್ಟಡವನ್ನು ಉರುಳಿಸದೆ, ಸ್ಮಾರಕವಾಗಿ ಉಳಿಸಿಬೇಕೆಂದುಕೊಂಡಿದ್ದರೂ ಆ ಕಟ್ಟಡವನ್ನು ನವೀಕರಿಸಿಕೊಳ್ಳಬಹುದು, ಅಥವಾ ಪಕ್ಕದಲ್ಲೇ ಇರುವ ತೋಟಗಾರಿಕೆ ಇಲಾಖೆಯ ನರ್ಸರಿಯನ್ನು ಬೇರೆಡೆಗೆ ವರ್ಗಾಯಿಸಿ ಜಿಲ್ಲಾಧಿಕಾರಿಗಳ ಕಚೇರಿಯನ್ನು ಇಲ್ಲಿಯೇ ಉಳಿಸಬಹುದು ಹಾಗೂ ಬೆಂಗಳೂರಿನಲ್ಲಿರುವ ಬಹುಮಹಡಿಗಳಂತಹ ಬೃಹತ್ ಕಟ್ಟಡವನ್ನು ಕಟ್ಟಬಹುದೆಂದು ಸಲಹೆ ನೀಡಿದ್ದಾರೆ.
ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡುತ್ತಿದ್ದ ಸಚಿವ ಖಾದರ್ ಅವರು ಪ್ರತಿಭಟನಾ ಸ್ಥಳಕ್ಕೆ ಬರಲು ತಡ ಮಾಡಿದ್ದರಿಂದ ಪ್ರತಿಭಟನಾಕಾರರು ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೆಡಿಪಿ ಸಭೆಯ ನಂತರ ಪ್ರತಿಭಟನಾಕಾರರನ್ನು ಭೇಟಿಯಾಗಿ ಮನವಿ ಸ್ವೀಕರಿಸಿದ ಸಚಿವರು, ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರ ನಿರ್ಧಾರ ಕೈಗೊಂಡಿದೆ. ಸಮಸ್ಯೆಯನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ಹೋರಾಟ ಸಮಿತಿಯ ಗೌರವಾಧ್ಯಕ್ಷ ಶ್ರೀಕೃಷ್ಣ, ಕಾರ್ಯದರ್ಶಿ ಅಂಚೆ ಅಶ್ವಥ್, ಉಪಾಧ್ಯಕ್ಷರಾದ ಟಿ. ವಿಜಯಕುಮಾರ್, ಗಾಂಧಿನಗರ ನಾರಾಯಣಸ್ವಾಮಿ, ಪಂಡಿತ್ ಮುನಿವೆಂಕಟಪ್ಪ, ಎಂ. ಇಮ್ರಾನ್, ವಿ. ಗೀತಾ, ಸಹ ಕಾರ್ಯದರ್ಶಿಗಳಾದ ವಿ. ಅಂಬರೀಷ್,ಕೆ.ಎಂ. ಸುಶೀಲ, ಪಾರೇಹೊಸಹಳ್ಳಿ ನಾರಾಯಣಸ್ವಾಮಿ, ಮುಜೀಬ್, ಯುವರಾಜ್, ಹಿರಿಯ ವಕೀಲ ಧನರಾಜ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ವಿಜಯಕೃಷ್ಣ, ಆಟೋ ಮಂಜುನಾಥ್, ಜನವಾದಿ ಮಹಿಳಾ ಸಂಘಟನೆಯ ಶಾಂತ,ಶಾರದಾ ಇದ್ದರು.
ಮುಂಜಾಗ್ರತಾ ಕ್ರಮವಾಗಿ ಡಿವೈಎಸ್ಪಿ ಅಶೋಕ್ಕುಮಾರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

