ಸಹಕಾರಿ ಸಂಘಗಳು ಕೆಲಸದಲ್ಲಿ ರಾಜಕೀಯ ಬೆರೆಸಬಾರದು
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಅ. 23
ಸಹಕಾರಿ ಸಂಘಗಳು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿ ಜನರ ಅನುಕೂಲಕ್ಕಾಗಿ ಶ್ರಮಿಸಬೇಕೇ ಹೊರತು ಕೆಲಸದಲ್ಲಿ ರಾಜಕೀಯವನ್ನು ಬೆರೆಸಬಾರದು. ಸಂಸ್ಥೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡಬಾರದೆಂದು ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕೆಇಬಿ ಸಭಾಂಗಣದಲ್ಲಿ ವಿಶ್ವೇಶ್ವರಯ್ಯ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ವಿವಿಧೋದ್ದೇಶ ಸಹಕಾರ ಸಂಘದ ಉದ್ಘಾಟನೆ ಮತ್ತು ಬಡ್ತಿ ಪಡೆದ ಹಾಲು ಒಕ್ಕೂಟದ ಅಧಿಕಾರಿಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ಸಹಕಾರಿ ಸಂಘಗಳಲ್ಲೂ ರಾಜಕೀಯವನ್ನು ಮಾಡುತ್ತಿರುವುದು ಕಂಡು ಬಂದಿದೆ. ಈ ಬೆಳವಣಿಗೆ ಸಮಾಜದ ಹಿತದೃಷ್ಟಿಯಿಂದ ಸರಿಯಲ್ಲ. ಸಹಕಾರಿ ಸಂಘಗಳು ರಾಜಕೀಯ ಮುಕ್ತವಾಗಿ ಕಾರ್ಯ ನಿರ್ವಹಿಸಬೇಕು. ಆರ್ಥಿಕವಾಗಿ ಅಭಿವೃದ್ಧಿಯನ್ನು ಸಾಧಿಸಿ ಜನಪರ ಸೇವೆಗಳನ್ನು ಕೈಗೊಳ್ಳುತ್ತ ಸಂಸ್ಥೆಯ ಮೂಲ ಗುರಿಯನ್ನು ಸಾಧಿಬೇಕು. ಬದಲಿಗೆ ಸ್ವಾರ್ಥಕ್ಕಾಗಿ, ರಾಜಕೀಯಕ್ಕಾಗಿ ಸಂಘ ದುರ್ಬಳಕೆಯಾಗಬಾರದು ಎಂದು ಸಲಹೆ ನೀಡಿದರು.
ಕೆಎಂಎಫ್ ನಿರ್ದೇಶಕ ಕೆ.ವಿ. ನಾಗರಾಜ್ ಮಾತನಾಡಿ, ಒಕ್ಕೂಟವು ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚು ಒತ್ತು ಕೊಟ್ಟಿರುವುದರ ಜತೆಗೆ ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ.ಇದಕ್ಕೆ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರು ಪರಿಶ್ರಮವೂ ಪ್ರಮುಖ ಕಾರಣವಾಗಿದೆ. ನೂತನವಾಗಿ ಉದ್ಘಾಟನೆಯಾಗುತ್ತಿರುವ ನೌಕರರ ಸಂಘಕ್ಕೆ ಅಗತ್ಯವಿರುವ ಸವಲತ್ತುಗಳನ್ನು ಒಕ್ಕೂಟದ ವತಿಯಿಂದ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸಂಘದ ಮುಖ್ಯ ಪ್ರವರ್ತಕ ಜಿ.ಬಿ. ನಾರಾಯಣ್ವಾಮಿ ಮಾತನಾಡಿ, ತಾಲೂಕಿನಲ್ಲಿ 14 ಮಹಿಳಾ ಸಂಘಗಳು ಸೇರಿದಂತೆ ಒಟ್ಟು 173 ಹಾಲು ಉತ್ಪಾದಕರ ಸಂಘಗಳಿದ್ದು ಕಾರ್ಯದರ್ಶಿ, ಹಾಲು ಪರೀಕ್ಷಕ, ಗುಮಾಸ್ತ, ಸಹಾಯಕ ಮತ್ತು ಶುಚಿಗಾರರು ಸೇರಿದಂತೆ ಸುಮಾರು 500 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇವರ ಹಿತ ಕಾಪಾಡುವುದು,ಮಾರ್ಗದರ್ಶನ, ಆರ್ಥಿಕ ಸಹಾಯ, ಪರಿಹಾರ ನೀಡುವುದು ಸೇರಿದಂತೆ ಪ್ರಮುಖ ಕಾರ್ಯವನ್ನು ಕೈಗೊಳ್ಳುವುದು ಸಂಘದ ಮುಖ್ಯ ಉದ್ದೇಶವಾಗಿದೆ. ಸಂಘದ ನೌಕರರು ಸದಸ್ಯತ್ವವನ್ನು ಪಡೆದುಕೊಂಡು ಸಿಗುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಿದರು.
ಒಕ್ಕೂಟದ ಉಪ ವ್ಯವಸ್ಥಾಪಕರಾದ ಕೆ.ರವಿ, ಪಾಪೇಗೌಡ, ಗೋಪಾಲರಾವ್, ನರಸಿಂಹಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ಸಹಕಾರ ಇಲಾಖೆ ಅಧಿಕಾರಿ ಓಬಳೇಶಪ್ಪ, ಎಂಪಿಸಿಎಸ್ ಕಾರ್ಯದರ್ಶಿಗಳಾದ ಪಾಪಣ್ಣ, ಅಶ್ವತ್ಥನಾರಾಯಣರಾವ್, ಪುಷ್ಪ, ವೇಣುಗೋಪಾಲ್, ಕೃಷ್ಣಮೂರ್ತಿ, ಬಾಲಕೃಷ್ಣ, ರಾಮಕೃಷ್ಣಾರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

