ಕೋಲಾರ

ತೇರಹಳ್ಳಿ ಬೆಟ್ಟದಲ್ಲಿ ಚಾರಣ

Published On :

ಕೋಲಾರ: ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ಕರ್ನಾಟಕ ಶಾಖೆಯಿಂದ ನಗರದ ಹೊರವಲಯದ ತೇರಹಳ್ಳಿ ಬೆಟ್ಟದಲ್ಲಿ ನಡೆದ ರಾಜ್ಯಮಟ್ಟದ ಚಾರಣ ಕಾರ್ಯಕ್ರಮ ಯುವಕರಲ್ಲಿ ಉತ್ಸಾಹ ಹಾಗೂ ಉಲ್ಲಾಸ ಉಂಟು ಮಾಡಿತು. ನಗರದ ಪವನ್ ಕಾಲೇಜಿನ ಆಡಳಿತ ಮಂಡಳಿಯ ನಾರಾಯಣಸ್ವಾಮಿರವರ ಸಹಕಾರದೊಂದಿಗೆ ಕಾಲೇಜಿನ ವಿದ್ಯಾರ್ಥಿಗಳ ಎರಡು ತಂಡಗಳ 85 ವಿದ್ಯಾರ್ಥಿಗಳು ಚಾರಣದಲ್ಲಿ ಭಾಗವಹಿಸಿ ತೇರಹಳ್ಳಿ ಬೆಟ್ಟದಲ್ಲಿರುವ ಅನೇಕ ಗುಹೆ, ಮೋಹಕ ಪ್ರದೇಶಗಳು, ಸುಮಾರು ಹದಿನೈದು ಟನ್ತೂಕ ಇರುವ ತೂಗುಬಂಡೆ ( ಡ್ಯಾನ್ಸಿಂಗ್ ರಾಕ್), ಹಜಾರ ಹಾಗೂ ಕೋಟೆ ಮತ್ತು ಸುತ್ತಮುತ್ತಲಿನ ಸೊಬಗನ್ನು ಸವಿದರು. ಚಾರಣಿಗರೊಂದಿಗೆ ತಮ್ಮ ಸಮಯವನ್ನು ವ್ಯಯಸಿದ ವೈ.ಎಚ್.ಎ.ಐನ ರಾಜ್ಯ ಕಾರ್ಯದರ್ಶಿ ಎಸ್.ಎನ್. ಗಣೇಶ್ ಚಾರಣಿಗರಿಗೆ ಮಾರ್ಗದರ್ಶನ ನೀಡಿದರಲ್ಲದೆ ಚಾರಣದಿಂದಾಗುವ ಪ್ರಯೋಜನಗಳ ಬಗ್ಗೆ ಹಾಗೂ ಸಂಸ್ಥೆಯ ಉದ್ದೇಶಗಳನ್ನು ವಿವರಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ಅರ್ಹತಾ ಪತ್ರವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ವೈ.ಹೆಚ್.ಎ.ಐ ನ ಕೋಲಾರ ಜಿಲ್ಲಾಧ್ಯಕ್ಷ ಆಶ್ವತ್ನಾರಾಯಣಶೆಟ್ಟಿ, ಕೆ.ಜಿ.ಎಫ್. ಯೂನಿಟ್ ನ ಅಧ್ಯಕ್ಷ ಈಶ್ವರ್, ಖಜಾಂಜಿ ಪ್ರಕಾಶ್, ಸದಸ್ಯರಾದ ಚಂದನ ಚಂದ್ರಶೇಖರ್, ಬಾಬು, ಸುರೇಶ್, ಹಾಗೂ ಸ್ಥಳೀಯ ಮಾರ್ಗದರ್ಶಕರಾದ ನಾಗರಾಜ್, ಚೌಡಪ್ಪ ಇದ್ದರು.

ಸಾರ್ಕ್ ರಾಬೀನ್ ಜನ್ಮದಿನಾಚರಣೆ
ಕೋಲಾರ:
ಪಲ್ಸ್ ಪೋಲಿಯೋ ಲಸಿಕೆ ಕಂಡು ಹಿಡಿದ ಸಾರ್ಕ್ ರಾಬೀನ್ ಹುಟ್ಟು ಹಬ್ಬದ ಅಂಗವಾಗಿ ರೋಟರಿ ಕೋಲಾರದ ವತಿಯಿಂದ ನಗರದ ಮೆಕ್ಕೆ ವೃತ್ತದಲ್ಲಿ ಪೋಲಿಯೋ ಜಾಗೃತಿ ಆಂದೋಲನದ ಬೈಕ್ ರ್ಯಾಲಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮನಿವಾಸ್ ಸಪಟ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೋಟರಿ ಸಂಸ್ಥೆಯ ಆರೋಗ್ಯ ಕಾಳಜಿ ಈ ಕಾರ್ಯಕ್ರಮದ ಮೂಲಕ ಹೊರಹೊಮ್ಮಿದೆ ಎಂದ ಅವರು, ಆರೋಗ್ಯ ರಕ್ಷಣೆ, ಪೋಲಿಯೋ ಜಾಗೃತಿ ಮೂಲಕ ಪೋಲಿಯೋ ಮುಕ್ತ ರಾಷ್ಟ್ರ ಮಾಡುವ ರೋಟರಿ ಕೋಲಾರದ ಕಾರ್ಯವನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಕೋಲಾರದ ಅಧ್ಯಕ್ಷ ಬಿ.ಗೋಪಾಲರೆಡ್ಡಿ, ರೋಟರಿ ಸೆಂಟ್ರಲ್ನ ಅಧ್ಯಕ್ಷ ಗೋಪಾಲಕೃಷ್ಣೇಗೌಡ, ರೋ. ರವೀಂದ್ರನಾಥ್, ರೋ.ವಿ.ಪಿ. ಸೋಮಶೇಖರ್, ರಾಘವೇಂದ್ರಬಾಲಾಜಿ, ನಾಗರಾಜ್, ಬಿ.ಕೆ. ಅಶೋಕ್ಕುಮಾರ್, ನಾಗಶೇಖರ್, ಶಿಕ್ಷಕರಾದ ರತ್ನಪ್ಪ, ಚೌಡಪ್ಪ ಹಾಗೂ ಶಾಲಾ ಮಕ್ಕಳು ಹಾಜರಿದ್ದರು. ಜಾಗೃತಿ ಬೈಕ್ ಜಾಥಾ ಮೆಕ್ಕೆ ವೃತ್ತದಲ್ಲಿ ಆರಂಭಗೊಂಡು ಕಾಲೇಜು ವೃತ್ತ, ಹೊಸ ಬಸ್ನಿಲ್ದಾಣಗಳ ಮೂಲಕ ನಗರದ ಮುಖ್ಯ ರಸ್ಥೆಗಳಲ್ಲಿ ಸಂಚರಿಸಿ ಪೋಲಿಯೋ ಕುರಿತು ಜಾಗೃತಿ ಮೂಡಿಸಿತು.

ಕೊಲೆ ಆರೋಪಿ ಬಂಧನ
ಮುಳಬಾಗಲು:
ತಾಲೂಕಿನ ದೊಡ್ಡಗುರ್ಕಿ ಗ್ರಾಮದಲ್ಲಿ ಪತ್ನಿಯನ್ನು ಕೊಲೆ ಮಾಡಿದ್ದ ಆರೋಪಿಯನ್ನು ಮುಳಬಾಗಲು ಪೊಲೀಸರು 24 ಗಂಟೆಯ ಅವಧಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃಷ್ಣಪ್ಪ ಎಂಬಾತ ತನ್ನ ಪತ್ನಿ ವೆಂಕಟಲಕ್ಷ್ಮಮ್ಮ ಪರ ಪುರಷನೊಂದಿಗೆ ಅಕ್ರಮ ಸಂಬಂಧ ಹೊಂದಿರುವಳೆಂಬ ಅನುಮಾನದ ಮೇಲೆ ಬುಧವಾರ ರಾತ್ರಿ ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಈ ಕುರಿತು ಮೃತಳ ಸಹೋದರ ಮಾಲೂರು ತಾಲೂಕಿನ ನಕ್ಕನಹಳ್ಳಿ ವೆಂಕಟೇಶ್ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಆರೋಪಿಯನ್ನು ಕೋಲಾರ ಬಳಿ ಬಂಧಿಸಿ, ಶುಕ್ರವಾರ ಮುಳಬಾಗಲು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಸಬ್ಇನ್ಸ್ ಪೆಕ್ಟರ್ಗಳಾದ ಮೇಲ್ವಿನ್ ಪ್ರಾನ್ಸಿಸ್, ಶಂಕರಪ್ಪ, ಕೆ. ಶ್ರೀಧರ್, ಸಿಬ್ಬಂದಿಯಾದ ರಮೇಶ್ ಕುಮಾರ್, ಸುರೇಶ್ ಆರೋಪಿಗಳನ್ನು ಬಂಧಿಸಿವಲ್ಲಿ ಯಶಸ್ವಿಯಾಗಿದ್ದಾರೆ. ಸಿಬ್ಬಂದಿಗೆ ಕೋಲಾರ ಎಸ್ಪಿ ರಾಮನಿವಾಸ ಸಪಟ್ ಬಹುಮಾನ ಘೋಷಿಸಿದ್ದಾರೆ.

ಗಣಪತಿ ವಿಸರ್ಜನೆ
ನಾಗಮಂಗಲ:
ಪಟ್ಟಣದ ಕೋಟೆ ವಿದ್ಯಾಗಣಪತಿಯನ್ನು ವೈಶಿಷ್ಟ ಪೂರ್ಣವಾಗಿ ಮೆರವಣಿಗೆ ನಡೆಸಿ ವಿಸರ್ಜನೆ ಮಾಡಲಾಯಿತು. ಸೆ. 9ರಿಂದ ಅ. 24ರ ವರೆಗೆ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿವಿಧ ಪೂಜಾ ಕೈಂಕರ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಶುಕ್ರವಾರ ವಿಶೇಷ ಪೂಜೆ ನಡೆಸಿದ ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರಾಜ್ಯ ನೆರೆ ರಾಜ್ಯದ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ನಂತರ ಪಟ್ಟಣದ ಹೊರವಲಯ ಸೂಳೆಕೆರೆಯಲ್ಲಿ ವಿನಾಯಕ ಮೂರ್ತಿಯನ್ನು ವಿಸರ್ಜಿಸಲಾಯಿತು.

ರಾಜ್ಯಮಟ್ಟದ ಕಲಾ ಉತ್ಸವ
ಮಂಡ್ಯ:
ಬೆಂಗಳೂರು ಬಾಲ ಭವನ ಸೊಸೈಟಿ ವತಿಯಿಂದ 2013-14ನೇ ಸಾಲಿನಲ್ಲಿ ಮಕ್ಕಳ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಕಲಾ ಉತ್ಸವ ಹಾಗೂ ಕಲಾಶ್ರೀ ಪ್ರಶಸ್ತಿ ಶಿಬಿರಕ್ಕೆ 9 ರಿಂದ 16 ವರ್ಷದೊಳಗಿನ ಅರ್ಹ ಮಕ್ಕಳನ್ನು ಜಿಲ್ಲಾ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆ ಮಾಡಲು ನ.6 ರಂದು ಬೆಳಗ್ಗೆ 10 ಗಂಟೆಗೆ ಪಾಂಡವಪುರದ ಬಿಆರ್ಸಿ ಕೇಂದ್ರದಲ್ಲಿ ಶಿಬಿರ ಏರ್ಪಡಿಸಲಾಗಿದೆ. ಸೃಜನಾತ್ಮಕ ಕಲೆ, ಬರವಣಿಗೆ, ಪ್ರದರ್ಶನ ಕಲೆ ಮತ್ತು ವಿಜ್ಞಾನದಲ್ಲಿ ನೂತನ ಅವಿಷ್ಕಾರ ಈ ನಾಲ್ಕು ವಿಭಾಗಗಳಲ್ಲಿ ತಲಾ ಇಬ್ಬರಂತೆ ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮಿನಿ ವಿಧಾನಸೌಧದ ಎದುರು, ಪಾಂಡವಪುರ (ದೂ.08236-255642) ಇಲ್ಲಿ ಸಂಪರ್ಕಿಸುವುದು.

ಪ್ರಾಣಾಯಾಮ ಕಲಿಕಾ ಶಿಬಿರ
ನಾಗಮಂಗಲ:
ಪಟ್ಟಣದ ಪತಂಜಲಿ ಸ್ವದೇಶಿ ಕೇಂದ್ರ, ಯೋಗಾನರಸಿಂಹಸ್ವಾವು ಸೇವಾ ಟ್ರಸ್ಟ್ ಹಾಗೂ ಜ್ಞಾನಂ ವೇದಿಕೆ ಸಹಯೋಗದಲ್ಲಿ ಅ.25 ರಿಂದ 27ರವರೆಗೆ ಪ್ರತಿ ದಿನ ಬೆಳಗ್ಗೆ 6 ರಿಂದ 7 ಹಾಗೂ ಸಂಜೆ 6 ರಿಂದ 7ರ ವರೆಗೆ ಎರಡು ವಿಭಾಗಗಳಲ್ಲಿ ಉಚಿತ ಯೋಗಾಸನ, ಧ್ಯಾನ, ಪ್ರಾಣಾಯಾಮ ಕಲಿಕಾ ಶಿಬಿರವನ್ನು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಮಾಹಿತಿಗಾಗಿ ಮೊ- 972578458ಗೆ ಸಂಪರ್ಕಿಸಲು ಕೋರಲಾಗಿದೆ.

ಇಂದು ಹಲಗೂರಿಗೆ ಸಂಸದೆ ರಮ್ಯಾ
ಹಲಗೂರು:
ಮಂಡ್ಯ ಲೋಕಸಭಾ ಸದಸ್ಯೆ ರಮ್ಯಾ ಹಾಗೂ ಮಳವಳ್ಳಿ ವಿಧಾನಸಭಾ ಸದಸ್ಯ ಪಿ.ಎಂ. ನರೇಂದ್ರ ಸ್ವಾಮಿ ಮಳವಳ್ಳಿ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ವಿವಿಧ ಗ್ರಾಮಗಳಿಗೆ ಶನಿವಾರ ಬೇಟಿ ನೀಡಲಿದ್ದಾರೆ. ಜಿಪಂ, ತಾಪಂ, ಗ್ರಾಪಂ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಬೇಕಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜೂಜು ಅಡ್ಡೆ ಮೇಲೆ ದಾಳಿ: 13 ಜನ ಬಂಧನ
ಮಾಲೂರು:
ತಾಲೂಕಿನ ಸಿದ್ಧನಹಳ್ಳಿ ಬಳಿ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ನಡೆಸಿದ ಇನ್ಸ್ಪೆಕ್ಟರ್ ಶಿವುಕುಮಾರ್ ನೇತೃತ್ವದ ತಂಡ 13 ಜನರನ್ನು ಬಂಧಿಸಿ 30 ಸಾವಿರ ನಗದು, ನಾಲ್ಕು ಕಾರು, ನಾಲ್ಕು ಬೈಕ್ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ದಾಳಿ ನಡೆಸಿ ಅತ್ತಿಬೆಲೆಯ ಶ್ರೀನಿವಾಸ್, ಯಾಸೀನ್, ಜಾನಕೀರಾಮ್, ಅಹಮದ್ ಅಕ್ಮಲ್, ಬಾಬು, ಬೆಂಗಳೂರಿನ ನೀಲಕಂಠ, ಚೆನ್ನಸಂದ್ರದ ಕೃಷ್ಣಪ್ಪ, ಕಾಡಗೋಡಿಯ ರಾಜೇಂದ್ರ ಬಾಬು, ಲಕ್ಕೂರಿನ ಬಾಬು ಹಾಗೂ ಮಂಜುನಾಥ್, ಚೂಡಗೊಂಡನಹಳ್ಳಿಯ ರಮೇಶ್, ಧನರಾಜ್ ರನ್ನು ಬಂಧಿಸಿದ್ದಾರೆ. ದಾಳಿ ನೆಡಿಸಿದ ತಂಡದಲ್ಲಿ ಪೇದೆಗಳಾದ ಈರಣ್ಣ, ರಮೇಶ್, ನಾಗಭೂಷಣ್ ರೆಡ್ಡಿ, ಸುರೇಶ್, ಅನಂತಮೂರ್ತಿ, ಹುಸೇನ್, ಗೋಪಾಲ್ ಭಾಗವಹಿಸಿದ್ದರು.

ಜೀವನದಲ್ಲಿ ಜಿಗುಪ್ಸೆ; ವ್ಯಕ್ತಿ ಆತ್ಮಹತ್ಯೆ
ಕೆಜಿಎಫ್:
ಜೀವನದಲ್ಲಿ ಜಿಗುಪ್ಸೆಗೊಂಡ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ  ನಡೆದಿದೆ. ಆಂಡ್ರಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕರಡುಗೂರು ಗ್ರಾಮದ ನಿವಾಸಿ ಗಂಟ್ಲಪ್ಪ ಎಂಬುವರ ಮಗ ಕುಮಾರ್(24) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ತಮ್ಮ ಮನೆಯಲ್ಲಿ ನೋಡಿದ ಹುಡುಗಿಯನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದರಿಂದ ಕುಮಾರ್ ತಮ್ಮ ಮನೆಯ ಹಿಂಭಾಗದಲ್ಲಿ ವಿಷ ಸೇವಿಸಿ ಅಸ್ವಸ್ಥನಾಗಿದ್ದ ಈತನನ್ನು ಕುಪ್ಪಂನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಆಂಡ್ರಸನ್ಪೇಟೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಪಘಾತ; ವ್ಯಕ್ತಿ ಸಾವು
ಕೆಜಿಎಫ್:
ಬಸ್ಗೆ ಸಿಲುಕಿದ ವ್ಯಕ್ತಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ಉರಿಗಾಂ ಪೊಲೀಸ್ ಠಾಣಾ ವ್ಯಾಪ್ತಿಯ ಇ.ಟಿ. ಬ್ಲಾಕ್ ನಿವಾಸಿ ವೇಣುಗೋಪಾಲ್ ಎಂಬವರ ಮಗ ಮಹೇಂದ್ರಕುಮಾರ್(34) ಹೆನ್ರೀಸ್ ಬಳಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ರಾಜ್ಯ ಸಾರಿಗೆ ಬಸ್ ಡಿಕ್ಕಿಹೊಡೆದ ಪರಿಣಾಮ ಮಹೇಂದ್ರಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದು ಹಿಂಬದಿ ಕುಳುತ್ತಿದ್ದ ಮುರಳೀ ಎಂಬುವರು ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ವೃತ್ತನಿರೀಕ್ಷಕ ಲಕ್ಷ್ಮೀನಾರಾಯಣ ಪಿಎಸ್ಐ ಮಾರ್ಕಂಡಪ್ಪ ಭೇಟಿ ನೀಡಿ ಪರಿಶೀಲಿಸಿದ್ದು ಬಸ್ ಚಾಲಕನನ್ನು ಬಂಧಿಸಿ ಬಸ್ನ್ನು ವಶಕ್ಕೆಪಡೆದ ಉರಿಗಾಂ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.

ಅಪರಿಚಿತ ವಾಹನ ಡಿಕ್ಕಿ: ಮಗು ಸಾವು
ಚಿಂತಾಮಣಿ:
ಅಪರಿಚಿತ ವಾಹನ ಬಾಲಕನಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾರ್ಲಹಳ್ಳಿ ಹತ್ತಿರ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.