14ನೇ ಹಣಕಾಸು ಆಯೋಗದ ತಂಡ ಭೇಟಿ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಅ. 25
14ನೇ ಹಣಕಾಸು ಆಯೋಗ ಕೇಂದ್ರ ತಂಡದ ಸದಸ್ಯರು ಶುಕ್ರವಾರ ಚಿಕ್ಕಬಳ್ಳಾಪುರ ತಾಲೂಕಿನ ವಿವಿಧೆಡೆ ಪರಿಶೀಲನೆ ಪ್ರವಾಸ ಕೈಗೊಂಡು ಸಮಸ್ಯೆಗಳನ್ನು ಆಲಿಸಿದರ ಜತೆಗೆ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ಅಗತ್ಯವಿರುವ ಅನುದಾನದ ಬಗ್ಗೆ ಜಿಲ್ಲಾಡಳಿತ ಸದಸ್ಯರ ಗಮನಸೆಳೆಯಿತು.
ಜಿಲ್ಲೆಗೆ ಭೇಟಿ ನೀಡಿದ 14 ನೇ ಹಣಕಾಸು ಆಯೋಗ ಕೇಂದ್ರ ತಂಡದಲ್ಲಿ ಸದಸ್ಯರಾದ ಪ್ರೊ. ಅಭಿಜಿತ್ ಸೇನ್, ಸುಷ್ಮಾನಾಥ್, ಡಾ.ಎಂ. ಗೋವಿಂದ, ಡಾ. ಸುದೀಪ್ ಟೋ ಮಂಡಲೆ, ಕಾರ್ಯದರ್ಶಿಗಳಾದ ಎ.ಎನ್.ಜಾ.ಎ.ಎನ್. ಸೆಂಥಿಲ್, ಎಂ.ಎನ್. ಭಾಟಿಯಾ, ಆರ್ಥಿಕ ಸಲಹೆಗಾರ ಪಿನಕಿ ಚಕ್ರಬೋರ್ತಿ, ನಿರ್ದೇಶಕ ಆಶುತೋಷ್ ಜೋಷಿ ಮುಂತಾದವರು ಇದ್ದರು.
ಮೊದಲಿಗೆ ನಂದಿ ಸಮೀಪದ ತೋಟಗಾರಿಕೆ ಇಲಾಖೆಯ ವನಕ್ಷೇತ್ರಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ನಂತರ ಎಸ್ಟಿಪಿ ಪ್ಲಾಂಟ್, ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮ ಸ್ಥಳವಾದ ಮುದ್ದೇನಹಳ್ಳಿಯ ಸರ್.ಎಂ.ವಿ. ಸಮಾಧಿ, ಕಂದವಾರ ಕೆರೆ, ನಗರದ ಎಂ.ಜಿ. ರಸ್ತೆಯಲ್ಲಿರುವ ಜಿಲ್ಲಾಡಳಿತ ಭವನ, ನಂತರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಸಮಸ್ಯೆಗಳ ಚರ್ಚೆ: ರಾಜ್ಯ ರಾಜಧಾನಿ ಬೆಂಗಳೂರಿಗೆ ಸಮೀಪವಿರುವ ಚಿಕ್ಕಬಳ್ಳಾಪುರ ಜಿಲ್ಲೆ ಹಾಲು ಉತ್ಪಾದನೆ, ರೇಷ್ಮೆ, ದ್ರಾಕ್ಷಿ, ತರಕಾರಿ ಬೆಳೆಗಳನ್ನು ಬೆಳೆಯುವಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದ್ದು ಈ ನಡುವೆ ಮಳೆ ಸಮರ್ಪಕವಾಗಿ ಬೀಳುತ್ತಿಲ್ಲ. ಈ ಬಾರಿ ಶೇ.50 ರಷ್ಟು ಮಳೆಯ ಕೊರತೆಯನ್ನು ಜಿಲ್ಲೆ ಎದುರಿಸುತ್ತಿದೆ. ಇದರಿಂದ ರೈತರು ಕೃಷಿ ಚಟುವಟಿಕೆಗಳಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗದೇ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ವಿಶಾಲ್ ನಿಯೋಗದ ಗಮನ ಸೆಳೆದರು.
ಇದಕ್ಕೆ ಸ್ಪಂದಿಸಿದ ತಂಡ ಸರ್ಕಾರಕ್ಕೆ ವರದಿ ನೀಡಿ ಅಗತ್ಯವಿರುವ ನೆರವನ್ನು ಕೊಡಿಸಲು ಮುಂದಾಗುವ ಭರವಸೆ ನೀಡಿತು. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಮತ್ತು ಸೌಕರ್ಯಗಳ ಸಮಸ್ಯೆ ಕಾಡುತ್ತಿದೆ. ರಾಷ್ಟ್ರೀಯ ಹೆದ್ದಾರಿ 7 ಜಿಲ್ಲೆಯಲ್ಲಿ ಹಾದು ಹೋಗಿರುವುದರಿಂದ ರಸ್ತೆ ಅಪಘಾತಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿದ್ದು ಅಲ್ಲದೇ ಜಿಲ್ಲಾಸ್ಪತ್ರೆಗೆ ಬೇರೆ ಕಡೆಯಿಂದ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ, ರೋಗಿಗಳಿಗೆ ಅನುಗುಣವಾಗಿ ಆಸ್ಪತ್ರೆಯಲ್ಲಿ ಸೌಲಭ್ಯಗಳು ಸಿಗುತ್ತಿಲ್ಲ.ಪ್ರಮುಖವಾಗಿ ವೈದ್ಯರ ಸಮಸ್ಯೆ ಕಾಡುತ್ತಿದೆ ಎಂದು ಗಮನ ಸೆಳೆಯಲಾಯಿತು. ಈ ಸಂದರ್ಭದಲ್ಲಿ ನಿಯೋಗದ ಸದಸ್ಯರು ಸ್ಥಳೀಯ ವೈದ್ಯರು ಮತ್ತು ರೋಗಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಖುದ್ದು ತಿಳಿದುಕೊಂಡರು.
ಸದಸ್ಯರ ಭರವಸೆ: ಭಾರತ ರತ್ನ ಸರ್.ಎಂ.ವಿ.ರವರ ಜನ್ಮ ಸ್ಥಳ ಮುದ್ದೇನಹಳ್ಳಿ ಗ್ರಾಮದಲ್ಲಿ 10 ಎಕರೆ ಜಾಗವನ್ನು ಗುರುತಿಸಿದ್ದು ಇಂಗಖಿಖ ಸರ್.ಎಂ.ವಿ. ಮಾಸ್ಟರ್ಸಸ್ ಮಾಸ್ಟರ್ ಟ್ರೈನರ್ ಕೌಶಲ್ಯ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡಲಾಗುವುದು. ಪ್ರಸ್ತುತ ತಾತ್ಕಾಲಿಕವಾಗಿ ಯಲಹಂಕದ ನಿಟ್ಟೇಮೀನಾಕ್ಷಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ನಗರದ ಹೃದಯ ಭಾಗದಲ್ಲಿರುವ ಕಂದವಾರ ಕೆರೆ ಅಭಿವೃದ್ಧಿಗಾಗಿ ರು. 200 ಲಕ್ಷ ಬಿಡುಗಡೆ ಮಾಡಿದ್ದು ಇದಕ್ಕೆ ಹೆಚ್ಚಿನ ಅನುದಾನದ ಅವಶ್ಯಕತೆಯಿದೆ. ಚಿಕ್ಕಬಳ್ಳಾಪುರದಲ್ಲಿ 12,500 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್ ನಿರ್ಮಾಣ ಮಾಡಲು ಮುಂಬರುವ ದಿನಗಳಲ್ಲಿ ಉದ್ದೇಶಿಸಲಾಗಿದೆ. ಕಳೆದ ಬಾರಿ ಜಿಲ್ಲಾ ಇನೋವೇಷನ್ ಯೋಜನೆಯಡಿ 1 ಕೋಟಿ ಬಂದಿದ್ದು, ಈ ಬಾರಿ ಸುಮಾರು 5 ಕೋಟಿ. ಅವಶ್ಯಕತೆ ಇದೆ ಎಂಬ ಜಿಲ್ಲಾಡಳಿತದ ಮನವಿಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ತಂಡ ನೀಡಿತು. ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 14ನೇ ಹಣಕಾಸು ಆಯೋಗ ಕೇಂದ್ರ ತಂಡದ ಸದಸ್ಯರು ಸಭೆ ನಡೆಸಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ಅಪರ ಜಿಲ್ಲಾಧಿಕಾರಿ ಸತ್ಯಭಾಮಾ, ಉಪವಿಭಾಗಾಧಿಕಾರಿ ಕೆ.ಟಿ. ಶಾಂತಲಾ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

