ಕೋಲಾರ

ಬಂಗಾರಪೇಟೆ 'ಪುರ' ಕಸಕ್ಕೆ ಮುಕ್ತಿ ಸಿಗುವುದೇ?

Published On :

ಬಂಗಾರಪೇಟೆ: ಕಳೆದ ಐದು ತಿಂಗಳಿಂದ ಆಡಳಿತ ಮಂಡಳಿ ಅಸ್ತಿತ್ವದಲ್ಲಿರದ ಕಾರಣ ಪಟ್ಟಣ ಪೂರ ತ್ಯಾಜ್ಯ ವಸ್ತುಗಳಿಂದ ತುಂಬಿಹೋಗಿದೆ. ಆದರೂ ಪುರಸಭೆ ಮಾತ್ರ ವಿಲೇವಾರಿಗೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರಿಂದ ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ. ಅಂತೂ ಇಂತೂ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿರುವ ಸದಸ್ಯರಿಗೆ ಅಧಿಕಾರ ಚಲಾಯಿಸುವ ಕಾಲ ಸನ್ನಿಹಿತವಾಗಿದ್ದು ಇವರಾದರೂ ಪಟ್ಟಣದ ಸ್ವಚ್ಛತೆಗೆ ಆದ್ಯತೆ ಕೊಡುವರೇ ಎಂದು ಎದುರು ನೋಡುವಂತಾಗಿದೆ..
ಐದು ತಿಂಗಳಿಂದ ಆಡಳಿತ ಮಂಡಳಿ ಅಸ್ತಿತ್ವದಲ್ಲಿರದ ಕಾರಣ ಪುರಸಭೆಯಲ್ಲಿ ಅಧಿಕಾರಿಗಳದ್ದೇ ಕಾರುಬಾರಾಗಿತ್ತು. ಹೊಸ ಸದಸ್ಯರು ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರೂ ಕಿವಿ ಕೊಡದೆ ನೋಡೋಣ ಎಂದಷ್ಟೇ ಉತ್ತರ ಸಿಗುತ್ತಿತ್ತು. ಇದರಿಂದ ಪಟ್ಟಣದ ಎಲ್ಲ ವಾರ್ಡುಗಳಲ್ಲಿ ನೈರ್ಮಲ್ಯ ಹದಗೆಟ್ಟಿತ್ತು. ವಾರಗಟ್ಟಲೆ ಕಸ ವಿಲೇವಾರಿ ಮಾಡದೆ ನಿರ್ಲಕ್ಷ್ಯ ಮಾಡಲಾಗಿತ್ತು. ಇನ್ನು ಪಟ್ಟಣದಲ್ಲಿ ಕುಡಿಯುವ ನೀರಿನ ಅಭಾವದ ಬಗ್ಗೆ ಹೇಳಲೇಬೇಕಿಲ್ಲ. ವರ್ಷಕ್ಕೆ ಎರಡು ಬಾರಿ ನೀರು ಪೂರೈಕೆ ಮಾಡಿದೆ, ಅದೇ ಜನರ ಪುಣ್ಯ ಎಂಬಂತಾಗಿದೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಮುಖ್ಯಾಧಿಕಾರಿಗಳು ಶಾಸಕರೊಂದಿಗೆ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ನೀಗಿಸುವ ಬಗ್ಗೆ ಗಮನಹರಿಸಿಲ್ಲದಿರುವುದು ಜನರು ಪುರಸಭೆ ಎಂದರೆ ಮೂಗು ಮುರಿಯುವಂತಾಗಿದೆ. ಆದರೆ ಜನರು ಮಾತ್ರ ಬೀದಿಗೆ ಇಳಿದು ನೀರಿಗಾಗಿ ಪ್ರತಿಭಟನೆ ಮಾಡಿದ್ದು ವಿರಳ. ದುಬಾರಿ ಹಣ ಕೊಟ್ಟು ನೀರು ಖರೀದಿಸುವುದು ಎಲ್ಲರಿಗೂ ಅನಿವಾರ್ಯವಾಗಿ ಬಿಟ್ಟಿದೆ.
ನೂತನ ಸದಸ್ಯರು ಚುನಾಯಿತರಾದರೂ ಅಧಿಕಾರ ಚಲಾಯಿಸಲು ಆಗುತ್ತಿಲ್ಲ. ಪ್ರತಿದಿನ ತಮ್ಮ ವಾರ್ಡಿನ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದೆ ಚಡಪಡಿಸುತ್ತಿದ್ದರು. ಈಗ ಆಡಳಿತ ಮಂಡಳಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮೀಸಲಾತಿ ಪ್ರಕಟವಾಗಿದ್ದು ತಿಂಗಳೊಳಗೆ ಹೊಸ ಅಧ್ಯಕ್ಷರು ಅಧಿಕಾರಕ್ಕೆ ಬರಲಿದ್ದು ಅವರ ಮುಂದೆ ನೈರ್ಮಲ್ಯ, ಕುಡಿಯುವ ನೀರು ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಬಂದೊಡನೆ ಎದುರಿಸಬೇಕು.
ಮಹಿಳೆಯರ ಪೈಪೋಟಿ: ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ಮೀಸಲಾತಿ ಬಂದಿರುವುದರಿಂದ ಮಹಿಳಾ ಮಣಿಗಳು ಅಧಿಕಾರದ ಗದ್ದುಗೆ ಏರಲು ಲಾಬಿ ಶುರುಮಾಡಿದ್ದಾರೆ. ನಾಲ್ಕು ಬಾರಿ ಗೆದ್ದಿರುವ ಗಂಗಮ್ಮರಂಗರಾಮಯ್ಯ ಹಾಗೂ ಒಮ್ಮೆ ಅಧಿಕಾರದ ರುಚಿ ಕಂಡಿರುವ ಭಾಗ್ಯಮ್ಮ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಅಂತಿಮವಾಗಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಯಾರ ಕಡೆ ಒಲವು ತೋರುವರೋ ಅವರೇ ಅಧ್ಯಕ್ಷರಾಗುವುದು ಖಚಿತ. ಪೈಪೋಟಿ ಹೆಚ್ಚಾದರೆ ಇಬ್ಬರಿಗೂ ಅಧಿಕಾರ ಹಂಚುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಶಾಸಕರಿಗೆ ಇಬ್ಬರೂ ಆತ್ಮೀಯವಾಗಿರುವುದರಿಂದ ಯಾರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲಿ ಮುಳುಗಿದ್ದಾರೆ. ಬೆಳಗ್ಗೆ ಸೂರ್ಯ ನೆತ್ತಿ ಮೇಲೆ ಬರುತ್ತಿದ್ದಂತೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸದಸ್ಯರ ಮನೆ ಬಾಗಿಲನ್ನು ತಟ್ಟಿ ಬೆಂಬಲ ಕೋರುತ್ತಿರುವುದು ಸಾಮಾನ್ಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.