ವರ್ಗಾವಣೆಗೆ ಕೋಲಾರ- ಕೆಜಿಎಫ್ ಎಸ್ಪಿ ಕಸರತ್ತು
ಕೋಲಾರ: ಕಳೆದ ಎರಡು ವರ್ಷಗಳಿಂದ ಯಾವುದೇ ಆರೋಪಗಳಿಲ್ಲದೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಾ ಬಂದಿರುವ ಪೊಲೀಸ್ ದಂಪತಿ ವರ್ಗಾವಣೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ನಿವಾಸ್ ಸಪಟ್ ಹಾಗೂ ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಕಚೋಟ್ ಸಪಟ್ ಅವರು ವರ್ಗಾವಣೆಗೆ ಮನವಿ ಸಲ್ಲಿಸಿರುವ ಪೊಲೀಸ್ ದಂಪತಿ.
ಕೋಲಾರ ಮತ್ತು ಕೆಜಿಎಫ್ ಎರಡೂ ಪೊಲೀಸ್ ಜಿಲ್ಲೆಗಳು ಅತ್ಯಂತ ಸೂಕ್ಷ್ಮವಾಗಿದ್ದರೂ ಈ ಪೊಲೀಸ್ ದಂಪತಿ ಸರ್ಕಾರದ ವ್ಯವಸ್ಥೆ, ರಾಜಕೀಯ ಹಾಗೂ ವಿವಿಧ ವರ್ಗದ ಜನತೆಯ ಭಾವನೆ ಅರ್ಥ ಮಾಡಿಕೊಂಡು ತಮ್ಮ ಶಕ್ತಾನುಸಾರ ಸೇವೆ ಸಲ್ಲಿಸುತ್ತಿದ್ದು, ವರ್ಗಾವಣೆ ಎಂಬ ಮಾನದಂಡಕ್ಕೆ ಇನ್ನು ಒಂದು ವರ್ಷ ಬಾಕಿ ಇರುವಾಗಲೇ ಜಿಲ್ಲೆಯನ್ನು ಖಾಲಿ ಮಾಡಲು ಪ್ರಯತ್ನಿಸುತ್ತಿರುವುದಕ್ಕೆ ಕೆಲಸದ ಒತ್ತಡ, ರಾಜಕಾರಣಿಗಳ ಅಸಹಕಾರ, ಕಾನೂನು ಪ್ರಕಾರ ಕೆಲಸ ಮಾಡುವುದಕ್ಕೆ ಇರುವ ಅಡೆ- ತಡೆಗಳು ಕಾರಣವೆನ್ನಲಾಗಿದೆ.
ಕೋಲಾರ ಎಸ್ಪಿ ಡಾ. ರಾಮನಿವಾಸ್ ಸಪಟ್ ಅವರಿಗೆ ಕನ್ನಡ ಸರಿಯಾಗಿ ಮಾತನಾಡಲು ಸಮಸ್ಯೆಯಿದ್ದರೂ ಜನರ ಕಷ್ಟ ಅರಿತು ಕೆಲಸ ಮಾಡುತ್ತಿದ್ದಾರೆಯಾದರೂ ಅಕ್ರಮ ಮರಳು ದಂಧೆ, ಜೂಜಾಟ, ದಿನಕ್ಕೊಂದು ಪ್ರತಿಭಟನೆಯಿಂದ ಬೇಸತ್ತು ಹಾಗೂ ಪುಟ್ಟ ಮಗಳೊಂದಿಗೆ ಒಂದು ದಿನವೂ ನೆಮ್ಮದಿಯಿಂದ ಇರಲು ಆಗುತ್ತಿಲ್ಲವೆಂಬ ನೋವಿನಿಂದಾಗಿ ಬೆಂಗಳೂರಿಗೆ ವರ್ಗಾವಣೆ ಕೋರಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಪತಿ ರಾಮ್ನಿವಾಸ್ ಸಪಟ್ ಅವರಿಗಿಂತ ಧೈರ್ಯವಾಗಿ ತಮ್ಮ ಕೆಲಸ ಕಾರ್ಯನಿರ್ವಹಿಸುವ ಮೂಲಕ ಕೆಜಿಎಫ್ನಲ್ಲಿ ಕಾನೂನು ಸುವ್ಯವಸ್ಥೆಯನ್ನು ತಹಬದಿಗೆ ತಂದಿರುವ ಡಾ. ರೋಹಿಣಿ ಕಚೋಟ್ ಸಪಟ್ ಅವರು ಸಹ ಪತಿ ಇರುವ ಕಡೆಯೇ ಕೆಲಸ ಮಾಡುವ ಮೂಲಕ ಪತಿ ಮತ್ತು ಮಗಳ ಯೋಗಕ್ಷೇವು ನೋಡಿಕೊಳ್ಳುವ ಉದ್ದೇಶದಿಂದ ಬೆಂಗಳೂರಿಗೆ ವರ್ಗಾವಣೆ ಕೋರಿ ಪ್ರಯತ್ನ ಮುಂದುವರಿಸಿದ್ದಾರೆನ್ನಲಾಗಿದೆ.
ಕೆಜಿಎಫ್ನಲ್ಲಿ ಮುಚ್ಚಲ್ಪಟ್ಟಿರುವ ಗಣಿಯಲ್ಲಿ ಅನೇಕ ವರ್ಷಗಳಿಂದ ಲೂಟಿ ಆಗುತ್ತಿತ್ತು.
ಡಾ.ರೋಹಿಣಿ ಕಚೋಟ್ ಎಸ್ಪಿಯಾಗಿ ಬಂದ ಮೇಲೆ ತಹಬದಿಗೆ ಬಂದಿತ್ತು. ಆದರೆ, ಇತ್ತೀಚೆಗೆ ಮತ್ತೆ ಗಣಿಯಲ್ಲಿ ಚಿನ್ನ ಲೂಟಿ ಆಗುತ್ತಿರುವುದರಿಂದ ಹಾಗೂ ಇದರಲ್ಲಿ ರಾಜಕಾರಣಿಗಳು, ಪೊಲೀಸರು ಶಾಮೀಲು ಆಗಿರುವುದರಿಂದ ಆತಂಕಗೊಂಡಿರುವ ಡಾ. ರೋಹಿಣಿ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಎದುರಿಸುವ ಬದಲು ವರ್ಗಾವಣೆ ಮಾಡಿಸಿಕೊಂಡು ಹೋದಲ್ಲಿ ಟೀಕೆ- ಟಿಪ್ಪಣಿ ತಪ್ಪುತ್ತದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆನ್ನಲಾಗಿದೆ.
ಈ ಅಪರೂಪದ ಪೊಲೀಸ್ ದಂಪತಿ ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಬಿಡಾರ ಹೂಡಿ ವರ್ಗಾವಣೆಗೆ ಪ್ರಯತ್ನಿಸುತ್ತಿದ್ದಾರೆ. ಬೆಂಗಳೂರು ಮಹಾನಗರದ ವಿವಿಧ ಪೊಲೀಸ್ ವಿಭಾಗದಲ್ಲಿ ಇಬ್ಬರು ಇಲಾಖೆಯ ಕೆಲಸ ಮಾಡಲು ನಿಶ್ಚಯಿಸಿದ್ದಾರೆ. ಇವರಿಬ್ಬರ ಜಾಗಕ್ಕೆ ಹಾಲಿ ಬೆಂಗಳೂರಿನಲ್ಲಿ ಡಿಸಿಪಿ ಆಗಿರುವ ರೇವಣ್ಣ ಕೆಜಿಎಫ್ಗೆ ಹಾಗೂ ಕೋಲಾರಕ್ಕೆ ಕೃಷ್ಣಭಟ್ ಬರಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದ್ದು, ಪೊಲೀಸ್ ದಂಪತಿಯ ಕೋರಿಕೆಯನ್ನು ಸರ್ಕಾರ ಮನ್ನಿಸುವುದೇ ಇಲ್ಲವೇ ನಾನೊಂದು ತೀರಾ, ನಿನೊಂದು ತೀರಾ ಎನ್ನುತ್ತಾ ಇನ್ನೊಂದು ವರ್ಷ ಜಿಲ್ಲೆಯಲ್ಲಿ ಮುಂದುವರಿಯಲು ಸೂಚಿಸುವುದೇ ಎಂಬುದು ಕುತೂಹಲ ಮೂಡಿಸಿದೆ.
ಪಾ.ಶ್ರೀ. ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

