ಕೋಲಾರ

ಕಳಪೆ ರಸ್ತೆ ಕಾಮಗಾರಿ: ಉಸ್ತುವಾರಿ ಸಚಿವ ಖಾದರ್ ಸಿಡಿಮಿಡಿ

Published On :

ಕ.ಪ್ರ.ವಾರ್ತೆ ಕೋಲಾರ ಸೆ.24
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರೂ ಆಗಿರುವ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಂಗಳವಾರ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕಳಪೆ ಕಾಮಗಾರಿಗೆ ಸಿಡಿಮಿಡಿಗೊಂಡರು.
ಸೆ.25ರಂದು ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಸಿದ್ಧತೆಗಳ ಪರಿಶೀಲನೆ ನಡೆಸಿದ ಸಚಿವರು ಪತ್ರಕರ್ತರೊಂದಿಗೆ ನಗರ ಸಂಚಾರ ಮಾಡಿ ಇತ್ತೀಚೆಗಷ್ಟೇ ಲಕ್ಷಾಂತರ ರುಪಾಯಿ ಖರ್ಚು ಮಾಡಿ ನಡೆಸಿರುವ ರಸ್ತೆಗಳ ಅಭಿವೃದ್ಧಿ ಕಾಮಗಾರಿಯಲ್ಲಿ ಲೋಪವಾಗಿರುವುದನ್ನು ಗಮನಿಸಿ ಗುಣಮಟ್ಟ ಪರಿಶೀಲಿಸಲು ವಿಫಲರಾಗಿರುವ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಅವರನ್ನು ಸೇವೆಯಿಂದ ಅಮಾನತುಪಡಿಸುವಂತೆ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮುನಿ ಆಂಜನಪ್ಪರವರಿಗೆ ಸೂಚನೆ ನೀಡಿದರು.
ನಗರದ ಮೆಕ್ಕೆ ವೃತ್ತ, ಕಾಳಮ್ಮ ಗುಡಿ ಬೀದಿಯಲ್ಲಿನ ಟ್ಯಾಕ್ಸಿ ಸ್ಟ್ಯಾಂಡ್ ರಸ್ತೆಯನ್ನು ಪರಿಶೀಲಿಸಿದ ಸಚಿವರು ಸರ್ಕಾರ ಸಾಕಷ್ಟು ಹಣ ನೀಡಿದ್ದರೂ ಏಕೆ ರಸ್ತೆಗಳು ಸುಧಾರಣೆ ಕಂಡಿಲ್ಲವೆಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಚಿವರ ನಗರ ಸಂಚಾರ ಸಂದರ್ಭದಲ್ಲಿ ಸಾರ್ವಜನಿಕರು ಸಹ ರಸ್ತೆಗಳ ದುಸ್ಥಿತಿಯ ವಿರುದ್ಧ ದೂರು ನೀಡಿದಾಗ, ಕೂಡಲೇ ಕಳಪೆ ಕಾಮಗಾರಿ ಸರಿಪಡಿಸಿ, ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸಲು ಆದೇಶಿಸಿದರು. ಎಲ್ಲಿ ಕಳಪೆ ಕಾಮಗಾರಿ ನಡೆದಿದೆಯೋ ಪರಿಶೀಲನೆ ನಡೆಸಿ, ಗುತ್ತಿಗೆದಾರರಿಗೆ ಬಿಲ್ ತಡೆ ಹಿಡಿಯಿರಿ ಎಂದು ತಾಕೀತು ಮಾಡಿದರು.
ಕೆರೆಯಲ್ಲಿ ಕಟ್ಟಡಗಳು ಬೇಡ: ನಂತರ ಸಚಿವರು ಕೋಲಾರಮ್ಮ ಕೆರೆ ಕೋಡಿಯಲ್ಲಿ ನಿರ್ಮಿಸಿರುವ ಗೃಹ ರಕ್ಷಕ ದಳದ ಕಟ್ಟಡ ವೀಕ್ಷಿಸಿ, ಕೆರೆಯಲ್ಲಿ ಕಟ್ಟಡ ನಿರ್ಮಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಈಗಾಗಲೇ ಕಟ್ಟಡ ಪೂರ್ಣಗೊಂಡಿರುವುದರಿಂದ ಕೆಡವುವುದು ಬೇಡ. ಆದರೆ, ಕೆರೆಯ ನೀರು ಪೋಲಾಗದಂತೆ ಕಟ್ಟಡದ ಸುತ್ತಲು ಭದ್ರತೆಗಾಗಿ ಗೋಡೆ ನಿರ್ಮಿಸಲು ಅಧಿಕಾರಿಗಳಿಗೆ ತಿಳಿಸಿದರು. ಕೆರೆಯಲ್ಲಿ ಕಟ್ಟಡ ನಿರ್ಮಿಸಲು ಇನ್ನು ಮುಂದೆ ಯಾವುದೇ ಕಾರಣಕ್ಕೂ ಅನುಮತಿ ನೀಡಬೇಡಿ ಎಂದು ಜಿಲ್ಲಾಧಿಕಾರಿ ಡಿ.ಕೆ.ರವಿ ಅವರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಎಸ್‌ಪಿ ಡಾ.ರಾವ್‌ನಿವಾಸ್‌ಪಟ್ ಇದ್ದರು.
ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸೆ.25ರಂದು ಮುಖ್ಯಮಂತ್ರಿಗಳು ಕೋಲಾರ ಭೇಟಿ ಸಂದರ್ಭದಲ್ಲಿ ಅನುಷ್ಠಾನಕ್ಕೆ ತರಲಿರುವ ಹಾಗೂ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸುವ ವಿವರಗಳನ್ನು ನೀಡಿದರು. ಜಿಲ್ಲೆಯನ್ನು ಕಾಡುತ್ತಿರುವ ನೀರಿನ ಸಮಸ್ಯೆ ಸೇರಿದಂತೆ ರೈತರು ಹಾಗೂ ಬಡವರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗುವುದು. ಇದಕ್ಕಾಗಿ ಜಿಲ್ಲಾ ಆಡಳಿತದಿಂದ ಸಕಲ ಸಿದ್ಧತೆ ನಡೆಯುತ್ತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.