ಸಾಲ ಮನ್ನಾ: ಸರ್ಕಾರದ ಧೋರಣೆಯಿಂದ ಸಹಕಾರ ಸಂಘಗಳಿಗೆ ನಷ್ಟ: ಅಶ್ವತ್ಥರೆಡ್ಡಿ
ಶಿಡ್ಲಘಟ್ಟ: ರಾಜ್ಯ ಸರ್ಕಾರದ ಸಾಲ ಮನ್ನಾ ಧೋರಣೆಯಿಂದಾಗಿ ಸಹಕಾರಿ ಸಂಘಗಳು ಸತತ ನಷ್ಟ ಅನುಭವಿಸುತ್ತಿದೆ ಎಂದು ತಾಲೂಕಿನ ಹಿರಿಯ ಸರಕಾರಿ ಹಾಗೂ ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ರಾಯಪಲ್ಲಿ ಅಶ್ವತರೆಡ್ಡಿ ತಿಳಿಸಿದರು.
ತಾಲೂಕು ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕಿನ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ರೈತರ ಕೃಷಿ ಸಾಲ ಮನ್ನಾ ಯೋಜನೆಯಿಂದಾಗಿ ಸಾಲ ಮಾಡಿದ ರೈತರು ಸಕಾಲಕ್ಕೆ ಮರು ಪಾವತಿಸದೆ. ರಾಜ್ಯದಲ್ಲಿನ ಬಹುತೇಕ ಕೃಷಿ ಬ್ಯಾಂಕುಗಳು ನಷ್ಟ ಅನುಭವಿಸುತ್ತಿದೆ ಎಂದರು.
ಸಣ್ಣ ರೈತರ ಸಾಲ ಮನ್ನಾ ಮಾಡುವ ಸರ್ಕಾರದ ಘೋಷಣೆ ಮಾಡಿದ ಒಂದು ವರ್ಷದ ನಂತರ ಸರ್ಕಾರ ಹಣ ತುಂಬಲಿದ್ದು ಆ ವರ್ಷದ ಬಡ್ಡಿಯನ್ನು ಬ್ಯಾಂಕಿನಿಂದಲೇ ವಸೂಲಿ ಮಾಡುತ್ತಿದ್ದು ಬ್ಯಾಂಕಿನಿಂದ ವಸೂಲಾದ ಶೇ. 30 ರಿಂದ 40 ರಷ್ಟು ಹಣ ಬಡ್ಡಿಗೆ ಜಮೆಯಾಗುತ್ತಿದ್ದು ಶೇ. 80 ರಷ್ಟು ಸಾಲ ವಸೂಲಾತಿಯಾದರಷ್ಟೇ ಹೊಸ ಸಾಲ ನೀಡಲು ಅನುಮತಿಸಲಾಗಿದ್ದು ಸಕಾಲಕ್ಕೆ ಸಾಲ ಮರುಪಾವತಿ ಮಾಡಿದ ಶೇ. 40ರಷ್ಟು ಸದಸ್ಯರಿಗೆ ಹೊಸ ಸಾಲ ಮಂಜೂರಾತಿ ಮಾಡಲು ತೊಂದರೆಯಾಗುತ್ತಿದೆ ಎಂದರು.
ಜಿ.ಪಂ. ಮಾಜಿ ಸದಸ್ಯ ಪಿ.ವಿ ನಾಗರಾಜ್ ಮಾತನಾಡಿ ಸದರಿ ಕೃಷಿ ಬ್ಯಾಂಕ್ ತನ್ನ ಠೇವಣಿ ಹಣವನ್ನು ರಾಷ್ಟ್ರೀಕೃತ ಎಸ್.ಬಿ.ಎಂ ಬ್ಯಾಂಕಿನಲ್ಲಿ ಠೇವಣಿ ಮಾಡಿರುವುದನ್ನು ಟೀಕಿಸಿ ಕೇಂದ್ರ ಅಪೆಕ್ಸ್ ಬ್ಯಾಂಕಿನಲ್ಲೇ ಠೇವಣಿ ಮಾಡಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ರೈತರು ಸಣ್ಣ ರೈತರಿಗೆ ಸಾಲ ನೀಡುವುದಿಲ್ಲ ಎಂದ ಮೇಲೆ ನಮ್ಮ ಷೇರು ಹಣವನ್ನು ವಾಪಸು ಮಾಡಿ ಎಂದು ಒತ್ತಾಯಿಸಿದರು. ಸಂಘದ ಮಾಜಿ ಅದ್ಯಕ್ಷ ಮುನಿಕೃಷ್ಣಪ್ಪ ಮಾತನಾಡಿ ಸಹಕಾರಿ ಕೃಷಿ ಬ್ಯಾಂಕುಗಳ ಪುನಶ್ಚೇತನಕ್ಕೆ ಹಲವು ಮಾರ್ಪಾಡುಗಳ ಅಗತ್ಯವೆಂಬ ವೈದ್ಯನಾಥನ್ ವರದಿಯನ್ನು ಜಾರಿಗೆ ತಂದಲ್ಲಿ ಸಹಕಾರಿ ಸಂಘಗಳ ಸುಧಾರಣೆಯಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಎ. ರಾಮಚಂದ್ರಪ್ಪ ಮಾತನಾಡಿ ತಮ್ಮ ಬ್ಯಾಂಕಿನ ಆರ್ಥಿಕ ಸ್ಥಿತಿ ಸುಧಾರಿಸಲು ಬ್ಯಾಂಕಿಗೆ ಸೇರಿದ ಕಟ್ಟಡಗಳನ್ನು ನವೀಕರಿಸಿ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಬಾಡಿಗೆಗೆ ನೀಡುವುದು ಮತ್ತು ಇಫ್ಕೋ ಸಂಸ್ಥೆಯಿಂದ ರಸಗೊಬ್ಬರಗಳು ಮತ್ತು ಔಷದಿಗಳನ್ನು ಮಾರಾಟ ಮಾಡಲು ಹಾಗೂ ಪಿಗ್ನಿ ವ್ಯವಸ್ಥೆ ಚಿನ್ನದ ಮೇಲಿನ ಸಾಲ ಮುಂತಾದ ಹಲವಾರು ಯೋಜನೆಗಳನ್ನು ಪ್ರಾರಂಭಿಸಲಾಗುವುದು ಎಂದರು.
ಸಭೆಯಲ್ಲಿ ಬ್ಯಾಂಕಿನ ಕಾರ್ಯದರ್ಶಿ ಮುನಿಯಪ್ಪ 2012-2013ರ ಲೆಕ್ಕ ಪತ್ರಗಳನ್ನು ಮಂಡಿಸಿ ಅನುಮೋದನೆ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

