ಕೋಲಾರ

ಎಲ್ಲಾ ವರ್ಗದ ಹನಿ ನೀರಾವರಿ ಫಲಾನುಭವಿಗಳಿಗೆ ಶೇ.90 ರಷ್ಟು ಸಬ್ಸಿಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Published On :

ಕೋಲಾರ: ನಮ್ಮ ಸರ್ಕಾರ ರೈತರ ಮತ್ತು ಬಡವರ ಪರವಾಗಿದೆ. ಜನತೆಯ ನಿರೀಕ್ಷೆಗಳಿಗೆ ಧಕ್ಕೆ ತರುವುದಿಲ್ಲ, ವಿಶ್ವಾಸ ಉಳಿಸಿಕೊಳ್ಳುತ್ತೇವೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.
 ಕೋಲಾರ ತಾಲೂಕಿನ ವೇಮಗಲ್ ಕ್ರೀಡಾಂಗಣದಲ್ಲಿ ಜಿಲ್ಲಾ ಆಡಳಿತ ಮತ್ತು ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳ ಮಂತ್ರಾಲಯದಿಂದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದರು.
 ರಾಜ್ಯದ ರೈತರ ಕಷ್ಟ ಏನೆಂಬುದು ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಅರ್ಥವಾಗಿದೆ. ನಮ್ಮ ಸರ್ಕಾರ ಬಂದ ಮೇಲೆ ರೈತರ ಹಿತ ಕಾಪಾಡಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಹನಿ ನೀರಾವರಿ ಯೋಜನೆಯಡಿ ಈ ಮುಂಚೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ರೈತರಿಗೆ ಶೇ.90 ರಷ್ಟು ಹಾಗೂ ಇನ್ನುಳಿದ ವರ್ಗಕ್ಕೆ ಶೇ.75ರಷ್ಟು ಸಬ್ಸಿಡಿ ವ್ಯವಸ್ಥೆ ಜಾರಿಯಲ್ಲಿತ್ತು. ಈಗ ನಮ್ಮ ಸರ್ಕಾರ ಎಲ್ಲಾ ವರ್ಗದ ರೈತರಿಗೂ ಶೇ.90 ರಷ್ಟು ಸಬ್ಸಿಡಿ ನೀಡಲು ನಿರ್ಧರಿಸಿದೆ ಎಂದರು.
ಸರ್ಕಾರ ಹನಿ ನೀರಾವರಿಗಾಗಿ ಶೇ.90 ರಷ್ಟು ಸಬ್ಸಿಡಿ ನೀಡುವುದರಿಂದ ರೈತರು ತಮ್ಮ ಪಾಲಿನ ಶೇ.10 ರಷ್ಟು ಮಾರ್ಜಿನ್ (ಅಂಚಿನ ಹಣ) ಪಾವತಿಸಿದಲ್ಲಿ ಯೋಜನೆ ಅನುಷ್ಠಾನಗೊಳಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಹನಿ ನೀರಾವರಿ ಯೋಜನೆಗಾಗಿ ಅರ್ಜಿ ಸಲ್ಲಿಸುವ ಎಲ್ಲಾ ಫಲಾನುಭವಿಗಳಿಗೂ ಸಬ್ಸಿಡಿ ನೀಡುವುದರಿಂದ ರೈತರು ಇದರ ಪ್ರಯೋಜನ ಪಡೆಯಬೇಕೆಂದು ಕರೆ ನೀಡಿದರು.
ಒಣ ಬೇಸಾಯಕ್ಕೆ ಹೊಸ ನೀತಿ: ಕೋಲಾರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯಲ್ಲಿ ರೈತರು ತಾವು ಬೆಳೆದ ಬೆಳೆಗಳಿಗೆ ನ್ಯಾಯ ಬೆಲೆ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ನಮ್ಮ ಸರ್ಕಾರ ಕೃಷಿಯನ್ನು ಲಾಭದಾಯಕ ಕ್ಷೇತ್ರ ಮಾಡಲು ನಿರ್ಧರಿಸಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಹೊಸ ನೀತಿ: ಕೃಷಿ ಸಚಿವ ಕೃಷ್ಣಬೈರೇಗೌಡರು ಜೊತೆ ಈಗಾಗಲೇ ಒಣಭೂಮಿ ಬೇಸಾಯ ಹಾಗೂ ಕೃಷಿ ಬೆಲೆ ಆಯೋಗ ರಚನೆ ಸಂಬಂಧ ಚರ್ಚಿಸಲಾಗಿದೆ. ರೈತರಿಗೆ ಶಕ್ತಿ ತುಂಬುವುದು ಈ ಯೋಜನೆಗಳ ಉದ್ಧೇಶವಾಗಿದೆ.  ರೈತ ಪ್ರತಿನಿಧಿಗಳು, ಜನಪ್ರತಿನಿಧಿಗಳು ಹಾಗೂ ಕೃಷಿ ಪರಿಣಿತರೊಂದಿಗೆ ಕೃಷಿ ಸಚಿವರು ಚರ್ಚಿಸಿ ವರದಿ ನೀಡಿದಲ್ಲಿ ಅದಷ್ಟು ಬೇಗನೆ ಒಣಭೂಮಿ ಬೇಸಾಯಕ್ಕಾಗಿ ಹೊಸ ನೀತಿ ಹಾಗೂ ಕೃಷಿ ಬೆಲೆ ಆಯೋಗ ರಚನೆ ಮಾಡುವುದಾಗಿ ಪ್ರಕಟಿಸಿದರು.
ರೈತರಿಗೆ ನ್ಯಾಯ ಬೆಲೆ ಹಾಗೂ ಕೃಷಿಯ ಅಭಿವೃದ್ಧಿ ಸಂಬಂಧ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ರೂಪಿಸಿರುವ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಿದ್ದು, ಕಳೆದ ಬಜೆಟ್‌ನಲ್ಲಿ ಅವರ್ತ ನಿಧಿಗಾಗಿ 1 ಸಾವಿರ ಕೋಟಿ ರು. ಮೀಸಲಿಡಲಾಗಿದೆ. ಮುಂದಿನ ವರ್ಷ ಇನ್ನೂ ಹೆಚ್ಚು ಅನುದಾನ ನೀಡಲಾಗುವುದು, ಕೃಷಿ ಬೆಲೆ ಸ್ಥಿರೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.
ಕೃಷಿ ಆಯೋಗ ರಚನೆಯ ಸಂಬಂಧ ಕೃಷಿ ಮಂತ್ರಿಗಳು ಕಾರ್ಯೋನ್ಮುಖರಾಗಿದ್ದಾರೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ರೈತರಿಗೆ ನಷ್ಟವಾದಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡಿ ನಷ್ಟ ಉಂಟಾಗದಂತೆ ನೋಡಿಕೊಳ್ಳಲಿರುವುದರಿಂದ ಯಾವುದೇ ರೈತರು ಆತಂಕಪಡಬೇಕಾಗಿಲ್ಲವೆಂದು ಧೈರ್ಯ ತುಂಬಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.