ಕೋಚಿಮುಲ್ ಮಾಜಿ ಅಧ್ಯಕ್ಷ ಅಣ್ಣಿಹಳ್ಳಿ ಆರ್. ಕೃಷ್ಣಪ್ಪ ನಿಧನ
ಕೋಲಾರ: ಜಿಲ್ಲೆಯ ಸಹಕಾರಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಅಣ್ಣಿಹಳ್ಳಿ ಆರ್. ಕೃಷ್ಣಪ್ಪ ಮಂಗಳವಾರ ನಗರದ ಎಲ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಕಳೆದೆರಡು ತಿಂಗಳಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಆರ್. ಕೃಷ್ಣಪ್ಪ ಅವರನ್ನು ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಸ್ಪತ್ರೆಯಿಂದ ಮೃತದೇಹವನ್ನು ಕೋಲಾರದ ಸಿ. ಬೈರೇಗೌಡ ನಗರದಲ್ಲಿರುವ ಅವರ ನಿವಾಸಕ್ಕೆ ತಂದು ಸಾರ್ವಜನಿಕ ದರ್ಶನಕ್ಕಿಡಲಾಗಿತ್ತು. ಕೃಷ್ಣಪ್ಪ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು, ಸಮುದಾಯದವರು ಮೃತರ ಮನೆಗೆ ಬಂದು ಅಂತಿಮ ದರ್ಶನ ಪಡೆದರು. ಸಂಜೆ 5 ಗಂಟೆಗೆ ಅವರ ಸ್ವಗ್ರಾಮವಾದ ಅಣ್ಣಿಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿತು.
ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಕೋಮುಲ್ನ ನಿರ್ದೇಶಕರಾಗಿ 4 ಬಾರಿ ಆಯ್ಕೆಯಾಗಿದ್ದ ಕೃಷ್ಣಪ್ಪ, ಒಮ್ಮೆ ಅಧ್ಯಕ್ಷರಾಗಿ ಸಂಸ್ಥೆಯನ್ನು ಆರ್ಥಿಕವಾಗಿ ಬೆಳೆಸಿದ ಕೀರ್ತಿಗೆ ಪಾತ್ರರಾಗಿದ್ದರು.
ಸಹಕಾರಿ ಕ್ಷೇತ್ರಕ್ಕೆ ಪದಾರ್ಪಣೆ: ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಅವರು, ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾಗಿ, ಕೆಎಂಎಫ್ ನಿರ್ದೇಶಕರಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು.
ಗ್ರಾಮ ಪಂಚಾಯಿತಿ ಸದಸ್ಯರಾಗಿ, ಅಧ್ಯಕ್ಷರಾಗಿ ರಾಜಕೀಯ ಪ್ರವೇಶ ಮಾಡಿದ ಅವರು, ಮಂಡಲ ಪ್ರಧಾನರಾಗಿಯೂ ಸೇವೆ ಸಲ್ಲಿಸಿದ್ದರು. 1979 ರಲ್ಲಿ ಜನತಾ ಪಕ್ಷ ವಿಭಜನೆಯಾದಾಗ ದೇವೇಗೌಡರೊಂದಿಗೆ ಗುರುತಿಸಿಕೊಂಡು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಜನತಾಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲುಂಡಿದ್ದರು.
ಅವರ ಸಾವಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಸಹಕಾರಿ ಯೂನಿಯನ್ ನಿರ್ದೇಶಕ ಬ್ಯಾಲಹಳ್ಳಿ ಎಂ. ಗೋವಿಂದಗೌಡ ಸಂತಾಪ ಸೂಚಿಸಿದ್ದು, ಸಹಕಾರಿ ಕ್ಷೇತ್ರದ ಪ್ರಮುಖ ಕೊಂಡಿಯೊಂದು ಕಳಚಿದ್ದು, ಜಿಲ್ಲೆಯ ಸಹಕಾರಿ ರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದಿದ್ದಾರೆ.
ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಶಾಸಕರಾದ ವರ್ತೂರು ಪ್ರಕಾಶ್, ರಮೇಶ್ಕುಮಾರ್, ಮಾಜಿ ಶಾಸಕರಾದ ವೆಂಕಟಶಿವಾರೆಡ್ಡಿ, ಮಾಜಿ ಸಚಿವ ಕೆ. ಶ್ರೀನಿವಾಸಗೌಡ, ಸಹಕಾರಿ ಯೂನಿಯನ್ ಅಧ್ಯಕ್ಷ ಕೃಷ್ಣಾರೆಡ್ಡಿ, ಮಾಜಿ ಅಧ್ಯಕ್ಷ ಉರಿಗಿಲಿ ರುದ್ರಸ್ವಾಮಿ, ರಾಜ್ಯ ಮುದ್ರಣಕಾರರ ಸಹಕಾರ ಸಂಘದ ಅಧ್ಯಕ್ಷ ಅಬ್ಬಣಿಶಂಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಲ್ಕುಮಾರ್, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಮತ್ತಿತರರು ಹಾಜರಿದ್ದರು.
ಅಮಲಿನಲ್ಲಿ ಬಾವಿಗೆ ಬಿದ್ದು ವ್ಯಕ್ತಿ ಸಾವು
ಶಿಡ್ಲಘಟ್ಟ: ಕುಡಿದ ಮತ್ತಿನಲ್ಲಿ ಬಾವಿಯಲ್ಲಿ ಬಿದ್ದು, ಒಂದು ವಾರದ ನಂತರ ಶವವಾಗಿ ಪತ್ತೆಯಾದ ಘಟನೆ ಹೇಮಾರ್ಲ ಹಳ್ಳಿಯಲ್ಲಿ ನಡೆದಿದೆ. ವಿಜಯಕುಮಾರ್(30) ಮೃತಪಟ್ಟವ. ಈತನಿಗೆ ಮದುವೆಯಾಗಿದ್ದು, 2 ಗಂಡು ಮಕ್ಕಳು ಇದ್ದಾರೆ. ವಿಜಯಕುಮಾರ್ ಮಾಂಸದೂಟ ಮಾಡಿದಾಗ ಕುಡಿಯುತ್ತಿದ್ದ. ಅದೇ ರೀತಿ, ಮಾ.25ರಂದು ನಂದಿಕ್ರಾಸ್ನಲ್ಲಿರು ತನ್ನ ಸ್ನೇಹಿತನ ಮನೆಗೆ ಮುಂದ್ಯಾವರಕ್ಕೆ ಹೋಗಿದ್ದು, ಬರುವಾಗ ಕುಡಿದು ಬಂದು ತನ್ನ ಮನೆಯ ಪಕ್ಕದಲ್ಲಿರುವ ಬಾವಿಯಲ್ಲಿ ಬಿದ್ದಿರುವುದಾಗಿ ತಿಳಿದು ಬಂದಿದೆ. ಒಂದು ವಾರದಿಂದ ಕಾಣೆಯಾಗಿರುವ ವಿಜಯಕುಮಾರ್ನನ್ನು ಬಂಧುಗಳು ಹುಡುಕುತ್ತಿದ್ದು, ಮನೆಯ ಪಕ್ಕದಲ್ಲಿರುವ ಬಾವಿಯಿಂದ ವಾಸನೆ ಬರುತ್ತಿದ್ದನ್ನು ಗಮನಿಸಿದ ಗ್ರಾಮಸ್ಥರು ಪೋಲಿಸರಿಗೆ ವಿಷಯ ತಿಳಿಸಿದ್ದಾರೆ. ಪೋಲಿಸರು ಶವವನ್ನು ಮೇಲಕ್ಕೆ ಎತ್ತಿ ನೋಡಿದಾಗ ವಿಜಯ ಕುಮಾರ್ ಎಂದು ಗುರುತಿಸಲಾಗಿದೆ.
ರಸ್ತೆ ಅಪಘಾತದಲ್ಲಿ ಇಬ್ಬರು ಸಾವು
ಕೋಲಾರ: ದ್ವಿಚಕ್ರವಾಹನ ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಮೃತಪಟ್ಟ ಘಟನೆ ತಾಲೂಕಿನ ತೊಟ್ಲಿ ಗ್ರಾಮದ ಬಳಿ ಸೋಮವಾರ ನಡೆದಿದೆ. ಮೃತಪಟ್ಟವರನ್ನು ತಾಲೂಕಿನ ಮದನಹಳ್ಳಿಯ ನಿವಾಸಿಗಳಾದ ರಮೇಶ್ ನಾಯ್ಕ (45), ಹನುಮಂತರಾಯಪ್ಪ (40) ಎಂದು ಗುರುತಿಸಲಾಗಿದೆ. ಯುಗಾದಿ ಹಬ್ಬಕ್ಕೆಂದು ಕೋಲಾರ ನಗರಕ್ಕೆ ಬಂದು, ಬಟ್ಟೆ, ಪೂಜಾ ಸಾಮಾಗ್ರಿಗಳನ್ನು ಖರೀದಿ ಮಾಡಿ ವಾಪಸ್ ಊರಿಗೆ ಹೋಗುತ್ತಿದ್ದಾಗ ಎದರುಗಡೆಯಿಂದ ಬಂದ ಬಸ್ ಗುದ್ದಿದೆ. ಗ್ರಾಮಾಂತರ ಪ್ರದೇಶದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಪ್ರತ್ಯೇಕ ಜೂಜು: 13 ಜನರ ಬಂಧನ
ಶಿಡ್ಲಘಟ್ಟ: ಪಟ್ಟಣದ ಮೇಲೂರು ಗ್ರಾಮದಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು 7 ಜನರನ್ನು ಬಂಧಿಸಿದ್ದಾರೆ. ಮೇಲೂರಿನ ನಾರಾಯಣಸ್ವಾಮಿ ಎಂಬುವವರ ಮನೆಯ ಹಿಂದೆ ಅಂದರ್ ಬಾಹರ್ ಆಡಲಾಗುತ್ತಿತ್ತು. ದಾಳಿ ನಡೆಸಿದ ಪೊಲೀಸರು 7 ಜನರನ್ನು ಬಂದಿಸಿ, ಬಂಧಿತರಿಂದ 1160, 3 ಮೊಬೈಲ್, 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮಾಲಿಕ ನಾರಾಯಣಸ್ವಾಮಿ ತಲೆ ಮರೆಸಿಕೊಂಡಿದ್ದಾನೆ. 7 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಬಿಡುಗಡೆ ಮಾಡಲಾಗಿದೆ.
ಮತ್ತೊಂದು ಪ್ರಕರಣ: ರಹಮತ್ ನಗರದಲ್ಲಿ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿ 6 ಜನರನ್ನು ಬಂಧಿಸಿದ ಘಟನೆ ನಡೆದಿದೆ. ಆಸಿಫ್, ಬಾಬಾಜಾನ್, ಫಕ್ರುದೀನ್, ಬಾಬು, ಬಾಬು, ಮಹೇಶ್ ಬಂಧಿತರು. ಇವರಿಂದ ಪೊಲೀಸರು 8700 ನಗದು ಹಾಗೂ ಮೂರು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

