ಸೋನಿಯಾ ಎದುರು ಬಲ ಪ್ರದರ್ಶನಕ್ಕೆ ವರ್ತೂರ್ ಸಜ್ಜು
ಕೋಲಾರ: ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ ಹಾಗೂ ಬೆಂಬಲಿಗರು ಕೆಲವು ಕಾಂಗ್ರೆಸ್ ಮುಖಂಡರ ಪ್ರತಿರೋಧವನ್ನೂ ಲೆಕ್ಕಿಸದೆ ಏ.9ರಂದು ಕೋಲಾರಕ್ಕೆ ಬಲಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಎದುರು ತಮ್ಮ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ.
ಕೋಲಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ 23 ಗ್ರಾಪಂಗಳು ಬರಲಿದ್ದು, ಸೋಮವಾರ ಬೆಳಗ್ಗೆಯಿಂದಲೇ ಅಮ್ಮನಲ್ಲೂರು ಗ್ರಾಪಂ ಮೂಲಕ ಪ್ರವಾಸಕ್ಕೆ ಚಾಲನೆ ನೀಡಿದ್ದಾರೆ. ಇಂದು 12 ಗ್ರಾಪಂಗಳಿಗೆ ಭೇಟಿ ನೀಡಿ ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಅವರನ್ನು ಬೆಂಬಲಿಸುತ್ತಿರುವುದಾಗಿ ಪ್ರಕಟಿಸಿದ್ದಾರೆ. ಮಾತ್ರವಲ್ಲ, ಏ.9ರಂದು ಸೋನಿಯಾಗಾಂಧಿ ಕಾರ್ಯಕ್ರಮಕ್ಕೆ ಪ್ರತಿ ಪಂಚಾಯಿತಿ ಯಿಂದ 500ರಿಂದ 1000 ಬೆಂಬಲಿಗರು ಭಾಗವಹಿಸುವ ಮೂಲಕ ಶಕ್ತಿ ತುಂಬುವಂತೆ ಮನವಿ ಮಾಡಿದ್ದಾರೆ. ವರ್ತೂರ್ ಪ್ರಕಾಶ್ಗೆ ಮುಖಂಡ ಬೆಗ್ಲಿ ಸೂರ್ಯಪ್ರಕಾಶ್ ಸಾಥ್ ನೀಡಿದ್ದಾರೆ. ಪಕ್ಷೇತರ ಶಾಸಕ ಕಾಂಗ್ರೆಸ್ಸಿಗೆ ಬೆಂಬಲ ಘೋಷಿಸಿದ ನಂತರ ಪಕ್ಷದ ಕೆಲ ಮುಖಂಡರು ಮುನಿಸಿಕೊಂಡಿರುವ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲಿ ತೇಪೆ ಹಚ್ಚುವ ಕೆಲಸಕ್ಕೆ ಮುನಿಯಪ್ಪ ಕೈಹಾಕಿದ್ದಾರೆ. ಕಾಂಗ್ರೆಸ್ ನನ್ನನ್ನು ಸೇರಿಸಿಕೊಳ್ಳಲಿ, ಬಿಡಲಿ ಕೇಂದ್ರದಲ್ಲಿ ಸೋನಿಯಾಗಾಂಧಿ, ರಾಹುಲ್ಗಾಂಧಿ ಹಾಗೂ ರಾಜ್ಯದಲ್ಲಿ ಸಿದ್ದರಾಮಯ್ಯ ಕೈ ಬಲಪಡಿಸಲು ಕಾಂಗ್ರೆಸ್ಗೆ ಬೆಂಬಲ ನೀಡಲು ನಿರ್ಧರಿಸಿರುವುದಾಗಿ ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ ಘೋಷಿಸಿದ್ದಾರೆ.
ಕೆಲವರ ಅಪಸ್ವರ: ಜಿಲ್ಲಾ ಮುಖಂಡರ ಬಗ್ಗೆ ಆಡಿದ ಮಾತುಗಳು ಇನ್ನು ಮಾಸದಿರುವಾಗ ವರ್ತೂರ್ ಪ್ರಕಾಶ್ ಅವರನ್ನು ಮತ್ತೆ ಕಾಂಗ್ರೆಸ್ಗೆ ಸೇರಿಸಿಕೊಂಡಲ್ಲಿ ಮತದಾರರಿಗೆ ತಪ್ಪು ಸಂದೇಶ ಹೋಗುತ್ತದೆ ಎಂದು ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ನಜೀರ್ ಅಹಮ್ಮದ್ ಹಾಗೂ ಕೆಲವು ಮುಖಂಡರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಮುನಿಯಪ್ಪಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಆದರೂ ಏನು ಆಗದು ಎಂಬ ಆತ್ಮವಿಶ್ವಾಸದಿಂದ ತಮ್ಮ ಕೆಲಸ ಮುಂದುವರೆಸಿದ್ದಾರೆ. ಏ.9ರಂದು ಕೋಲಾರಕ್ಕೆ ಸೋನಿಯಾಗಾಂಧಿ ಬಂದು ಹೋದ ನಂತರ ಎಲ್ಲ ಸರಿ ಹೋಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ಕುಮಾರ್ ಇನ್ನಿತರರು ಹೇಳಿಕೊಳ್ಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

