ಅಣುಸ್ಥಾವರ ತ್ಯಾಜ್ಯ ವಿಲೇವಾರಿಗೆ ಅನುಮತಿ ನೀಡಿದ ಕೆ.ಎಚ್.ಮುನಿಯಪ್ಪರನ್ನು ತಿರಸ್ಕರಿಸಿ
ಕೆಜಿಎಫ್: ಕುಡಂಕುಲಂ ಅಣುಸ್ಥಾವರ ತ್ಯಾಜ್ಯ ವಿಲೇವಾರಿಯನ್ನು ಕೆಜಿಎಫ್ನಲ್ಲಿ ಡಂಪ್ ಮಾಡುವ ಮೂಲಕ ಇಲ್ಲಿನ ಜನತೆಯನ್ನು ಗುಳೇ ಹೋಗುವಂತೆ ಮಾಡಲು ಕೆ.ಎಚ್. ಮುನಿಯಪ್ಪ ಮುಂದಾಗಿದ್ದಾರೆ ಎಂದು ಶಾಸಕಿ ವೈ. ರಾಮಕ್ಕ ಹೇಳಿದರು.
ನಗರದ ಗಾಂಧಿ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಅಭ್ಯರ್ಥಿ ಎಂ. ನಾರಾಯಣಸ್ವಾಮಿ ಪರ ಬಿರುಸಿನ ಮತಯಾಚನೆ ನಡೆಸಿದ ವೇಳೆ ಮಾತನಾಡಿ, ಒಬ್ಬ ಕೇಂದ್ರ ಸಚಿವನಾಗಿ ತಮಗೆ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿ ರಾಗ ಬದಲಿಸುವ ಮೂಲಕ ಜನರನ್ನು ವಂಚಿಸಿದ್ದನ್ನು ಕ್ಷೇತ್ರದ ಜನತೆ ಇನ್ನೂ ಮರೆತಿಲ್ಲ. ಬಿಜಿಎಂಎಲ್ ಚಿನ್ನದ ಗಣಿಯನ್ನು ನಷ್ಟದ ನೆಪವೊಡ್ಡಿ ಎನ್ಡಿಎ ಸರ್ಕಾರ ಮುಚ್ಚಿಸಿತು ಎಂದು ಹೇಳಿ ಭಾಷಣ ಮಾಡುವವರಿಗೆ ಕಳೆದ 13 ವರ್ಷ ಕೇಂದ್ರದಲ್ಲಿ ಯುಪಿಎ ಆಡಳಿತದಲ್ಲಿ ಮುನಿಯಪ್ಪ ಸಚಿವರಾಗಿದ್ದು ಚಿನ್ನದ ಗಣಿ ಪುನರಾರಂಭಿಸಲು ಸಾಧ್ಯವಾಗಿಲ್ಲವೇ ಎಂದು ಪ್ರಶ್ನಿಸಿದರು.
ಕಳೆದ 13 ವರ್ಷಗಳಿಂದ ಈ ಭಾಗದ ಸುಮಾರು 20 ಸಾವಿರ ಮಂದಿ ಕಾರ್ಮಿಕರ ಕುಟುಂಬದ ಮಕ್ಕಳು ಮತ್ತು ನಿರುದ್ಯೋಗಿಗಳು ಕೆಲಸ ಹುಡಿಕಿಕೊಂಡು ಬೆಂಗಳೂರು ಹಾಗೂ ಇತರೆ ಜಿಲ್ಲೆಗಳಿಗೆ ಹೋಗಿ ಬರುತ್ತಿರುವ ಹಿನ್ನಲೆಯಲ್ಲಿ ಈ ಕ್ಷೇತ್ರದಲ್ಲಿ ಕೈಗಾರಿಕೆ ಸ್ಥಾಪಿಸಲು ಮುಂದಾಗಲಿಲ್ಲ. ಚಿನ್ನದ ಗಣಿ ಮುಚ್ಚಿದ ಮೇಲೆ ಇಲ್ಲಿನ ಸಾವಿರಾರು ಕಾರ್ಮಿಕರು ಸಿಲಿಕಾಸಿಸ್ ರೋಗದಿಂದ ಮೃತಪಟ್ಟಾಗ ಕನಿಷ್ಠ ಮಾನವೀಯ ದೃಷ್ಟಿಯಿಂದ ಬಂದು ನೋಡದ ಕೆ.ಎಚ್. ಮುನಿಯಪ್ಪರಿಗೆ ಇದೀಗ ಲೋಕಸಭೆ ಚುನಾವಣೆಗೆ ತಮ್ಮನ್ನು 7ನೇ ಬಾರಿಗೆ ಜಯಗಳಿಸಬೇಕು ಎಂದು ಮತಯಾಚಿಸುತ್ತಿದ್ದು, ಅವರಿಗೆ ಜಿಲ್ಲೆಯ ಜನತೆ ಶಾಪದ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಮಾಜಿ ಶಾಸಕ ವೈ. ಸಂಪಂಗಿ ಹಾಗೂ ನಗರ ಘಟಕದ ಅಧ್ಯಕ್ಷ ಸುರೇಶ್ ನಾರಾಯಣಕುಟ್ಟಿ ಮಾತನಾಡಿ, 30 ವರ್ಷಗಳಿಂದ ಕೆಜಿಎಫ್ನಲ್ಲಿ ಕೆ.ಎಚ್. ಮುನಿಯಪ್ಪ ಯಾವುದೇ ಅಭಿವೃದ್ಧಿ ಮಾಡಿಲ್ಲ. ಚುನಾವಣೆಯಲ್ಲಿ ಪಕ್ಷದ ನಿಷ್ಠಾವಂತ ಮುಖಂಡರನ್ನು ಮತ್ತು ಕಾರ್ಯಕರ್ತರನ್ನು ತುಳಿದು ಬೇರೆ ಪಕ್ಷಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ರಾಜಕೀಯ ಪಿತೂರಿ ನಡೆಸಿ ಜಯಗಳಿಸುತ್ತಿದ್ದ ಅವರ ಆಟ ಈ ಚುನಾವಣೆಯಲ್ಲಿ ನಡೆಯಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

