ಕೋಲಾರ

ಅಪೌಷ್ಟಿಕತೆಯಿಂದ ಮಕ್ಕಳನ್ನು ಉಳಿಸಿ: ನ್ಯಾ. ಪಾಟೀಲ್

Published On :

ಕೋಲಾರ: ಅಪೌಷ್ಟಿಕತೆಯಿಂದ ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಉಂಟಾಗದಂತೆ ಎಚ್ಚರವಹಿಸುವ ಜವಾಬ್ದಾರಿ ಪೋಷಕರು, ಸರ್ಕಾರ ಮತ್ತು ಸಂಘ ಸಂಸ್ಥೆಗಳ ಮೇಲಿದೆ ಎಂದು ರಾಜ್ಯ ಹೈಕೋರ್ಟಿನ ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ಕರೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಅವರು ಕೋಲಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಮಕ್ಕಳ ಅಪೌಷ್ಟಿಕತೆ ತಡೆಗಟ್ಟುವುದರ ಹಾಗೂ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಬಗ್ಗೆ ಅರಿವು-ನೆರವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ದೇಶದ ಭವಿಷ್ಯದ ಪ್ರಜೆಗಳುಈ ಮಕ್ಕಳ ಪಾಲನೆ, ಪೋಷಣೆ, ಆರೋಗ್ಯ ಮತ್ತು ಶಿಕ್ಷಣದ ಮೇಲೆ ಹೂಡಲ್ಪಡುವ ಬಂಡವಾಳವು ಒಂದು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ತಳಹದಿಯಾಗಿರುತ್ತದೆ ಎಂದರು.
ಪ್ರಪಂಚದ ಇತರ ಭಾಗಗಳಲ್ಲಿರುವಂತೆ ಭಾರತದಲ್ಲೂ ಮಕ್ಕಳ ಅಪೌಷ್ಟಿಕತೆ ಆತಂಕದ ವಿಷಯವಾಗಿದೆ. 2011ರಲ್ಲಿ ರಾಜ್ಯದ ರಾಯಚೂರಿನ ದೇವದುರ್ಗ ತಾಲೂಕಿನ ಮರಕಲದಿನ್ನಿ ಗ್ರಾಮದಲ್ಲಿ ಮಕ್ಕಳು ಹಸಿವು ಮತ್ತು ವೈದ್ಯಕೀಯ ಚಿಕಿತ್ಸೆ ಕೊರತೆಯಿಂದ ಅಪೌಷ್ಟಿಕತೆಗೆ ಒಳಗಾಗಿ ನರಳುತ್ತಿದ್ದರು ಎಂಬ ಮಾಹಿತಿ ಹಿನ್ನಲೆಯಲ್ಲಿ ಹೈಕೋರ್ಟ್ ಸ್ವಯಂ ಪೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡು ಮಕ್ಕಳ ಅಪೌಷ್ಟಿಕತೆಯನ್ನು ತಡೆಗಟ್ಟುವುದರ ಬಗ್ಗೆ ಸಮಗ್ರ ಕಾರ್ಯ ಯೋಜನೆಯ ವರದಿಯನ್ನು ಸಲ್ಲಿಸುವಂತೆ ತಮ್ಮ ನೇತೃತ್ವದಲ್ಲಿ 9 ಜನರ ಪರಿಣಿತ ಸಮಿತಿ ರಚಿಸಲಾಯಿತು ಎಂದು ಹೇಳಿದರು.
2012 ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಮಿತಿ ರಾಜ್ಯದ ಹಲವು ಜಿಲ್ಲೆಗಳ ನೂರಾರು ಹಳ್ಳಿಗಳನ್ನು ಸುತ್ತಿ ಮಕ್ಕಳ ಅಪೌಷ್ಟಿಕತೆಯ ಬಗ್ಗೆ ಅಧ್ಯಯನ ನಡೆಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ 2012ರ ಆಗಸ್ಟ್ ತಿಂಗಳಲ್ಲಿ ಹೈಕೋರ್ಟಿಗೆ ವರದಿ ಸಲ್ಲಿಸಿದ್ದು ಸಮಿತಿಯ ಅನೇಕ ಶಿಫಾರಸ್ಸುಗಳನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಲು ತಾತ್ವಿಕವಾಗಿ ಒಪ್ಪಿತ್ತು. ಸರ್ಕಾರ ಯಾವ ರೀತಿ ವರದಿಯನ್ನು ಜಾರಿಗೆ ತರುತ್ತದೆ ಎಂಬುದನ್ನು ತಿಳಿಯಲು ಉಸ್ತುವಾರಿ ಸಮಿತಿ ರಚನೆಗೆ ಹೈಕೋರ್ಟ್ ಮುಂದಾಗಿತ್ತಾದರೂ ಸುಪ್ರೀಂ ಕೋರ್ಟ್ ಆಹಾರ ಹಕ್ಕು ಪ್ರಕರಣ ಬಾಕಿ ಇದೆ ಎಂದು ತಿಳಿಸಿದ್ದರಿಂದ ಮಕ್ಕಳ ಅಪೌಷ್ಠಿಕತೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ಸುಪ್ರೀಂ ಕೋರ್ಟ್ ಗೆ ವರ್ಗಾವಣೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಕೋಲಾರ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಡಾ. ಜವಾದ್ ರಹೀಂ ವಹಿಸಿದ್ದರು. ನ್ಯಾಯಮೂರ್ತಿಗಳಾದ ಅನಂದ್ ಬೈರಾರೆಡ್ಡಿ, ಎನ್. ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಡಿ.ಕೆ. ರವಿ, ಜಿಪಂ ಸಿಇಒ ಆರ್. ವಿನೋತ್ ಪ್ರಿಯಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಡಾ. ಫಯಾಜ್ ಖಾನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಎ. ಶಕುಂತಲಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.