ಲೋಕಾಯುಕ್ತ ಎಸ್ಪಿ ಎತ್ತಂಗಡಿ
ಕೋಲಾರ: ನಿವೃತ್ತಿಗೆ ಇನ್ನು ನಾಲ್ಕು ತಿಂಗಳಿದ್ದ ಕೋಲಾರ ಜಿಲ್ಲಾ ಲೋಕಾಯುಕ್ತ ಆಧೀಕ್ಷಕ ಮೋಹನ್ ದಾಸ್ ಶಿಷ್ಟಾಚಾರ ಉಲ್ಲಂಘಿಸಿದ ಆರೋಪದ ಮೇಲೆ ಬೆಂಗಳೂರು ಲೋಕಾಯುಕ್ತ ಕಚೇರಿಗೆ ಎತ್ತಂಗಡಿಯಾಗಿದ್ದಾರೆ.
ಕೋಲಾರ ತಾಲೂಕಿನ ಹೋಳೂರು ನಾಡಕಚೇರಿಯ ಉಪ ತಹಸೀಲ್ದಾರ್ ಹೆಣ್ಣು ಎಂಬುದನ್ನು ಮರೆತು ಅವಾಚ್ಯ ಪದಗಳಿಂದ ನಿಂದನೆ ಮಾಡಿರುವುದು, ಬಂಗಾರಪೇಟೆ ತಹಸೀಲ್ದಾರ್ ಅವರಿಗೆ ದೂರವಾಣಿ ಮೂಲಕ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ನೀಡಿರುವುದಕ್ಕೆ ಬಾಯಿಗೆ ಬಂದಂತೆ ಬೈದಿರುವುದು ಹಾಗೂ ಜಿಲ್ಲಾಧಿಕಾರಿ ರವಿಯವರಿಗೆ ಪತ್ರ ಬರೆದು ತಾವು ಸರಿಯಾಗಿ ಕಚೇರಿಗೆ ಬರುತ್ತಿಲ್ಲ, ಒಂದು ವೇಳೆ ಬಂದರೂ ಕೆಲಸ ಮಾಡದೆ ಸುಮ್ಮನೆ ಕುಳಿತು ಹೊರಗಡೆ ಹೋಗುತ್ತಿರಾ ಎಂದು ಪ್ರಶ್ನಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ವರ್ಗಾವಣೆ ಮಾಡಲಾಗಿದೆ.
ಕಂದಾಯ ಅಧಿಕಾರಿಗಳ ಕರ್ತವ್ಯದಲ್ಲಿ ಅನಗತ್ಯ ಹಸ್ತಕ್ಷೇಪ, ತಪ್ಪು ಮಾಡದ ಅಧಿಕಾರಿಗಳನ್ನು ಏಕವಚನ ಹಾಗೂ ಅವಾಚ್ಯವಾಗಿ ಬೈದಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಲೋಕಾಯುಕ್ತರಿಗೆ ಸಲ್ಲಿಸಿದ್ದ ವರದಿ ಆಧರಿಸಿ ದಿಢೀರ್ ಎತ್ತಂಗಡಿ ಮಾಡಲಾಗಿದೆ.
ಮೋಹನ್ ದಾಸ್ ನಿವೃತ್ತಿ ಹೊಂದಲು ಕೇವಲ 4 ತಿಂಗಳು ಇರುವುದರಿಂದ ಯಾವುದೇ ಶಿಕ್ಷೆ ವಿಧಿಸದೆ ವರ್ಗಾವಣೆ ಮಾಡಲಾಗಿದ್ದು ಇದರ ಜಾಗಕ್ಕೆ ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್ಪಿ ಚಂದ್ರಶೇಖರ್ ಅವರನ್ನು ಹೆಚ್ಚುವರಿಯಾಗಿ ನೇಮಕ ಮಾಡಲಾಗಿದೆ.
ಈ ಸಂಬಂಧ ಮಾಹಿತಿ ಪಡೆಯಲು ಬುಧವಾರ ಪತ್ರಕರ್ತರು ಜಿಲ್ಲಾಧಿಕಾರಿ ಡಿ.ಕೆ. ರವಿ ಅವರನ್ನು ಭೇಟಿಯಾದಾಗ, ನನ್ನಿಂದ ಏನಾದರೂ ತಪ್ಪು ಆಗಿದ್ದರೆ ಪತ್ರ ಬರೆದು ಇಲ್ಲವೇ ಮೌಖಿಕವಾಗಿ ಸ್ಪಷ್ಟನೆ ಕೇಳಿದ್ದರೆ ಸಮಜಾಯಿಷಿ ನೀಡಬಹುದಿತ್ತು. ಶಿಷ್ಟಾಚಾರ ಉಲ್ಲಂಘನೆ ಮಾಡಿ ನನ್ನ ಕರ್ತವ್ಯದ ಬಗ್ಗೆ ಉದ್ದಟತನದಿಂದ ಪ್ರಶ್ನೆ ಮಾಡಿದ್ದರಿಂದ ಲೋಕಾಯುಕ್ತರಿಗೆ ಎಸ್ಪಿ ಮೋಹನ್ ದಾಸ್ ವರ್ತನೆ ಕುರಿತು ವರದಿ ನೀಡಿದ್ದು ನಿಜ ಎಂದು ತಿಳಿಸಿದ್ದಾರೆ.
ತಪ್ಪು ಮಾಡುವ ಅಧಿಕಾರಿಗಳನ್ನು ಏಕವಚನದಲ್ಲಿ ಅದರಲ್ಲೂ ಅವಾಚ್ಯವಾಗಿ ಬೈದರೆ ಹೇಗೆ ಸಹಿಸಿಕೊಳ್ಳಲು ಸಾಧ್ಯ. ಹೋಳೂರು ನಾಡ ಕಚೇರಿಯಲ್ಲಿ ಉಪ ತಹಸೀಲ್ದಾರ್ ಆಗಿರುವ ದಲಿತ ಮಹಿಳೆಯನ್ನು ಅತ್ಯಂತ ಕೀಳು ಭಾಷೆಯಲ್ಲಿ ಬೈದಿರುವುದರಿಂದ ತಾವು ಲೋಕಾಯುಕ್ತರಿಗೆ ವರದಿ ನೀಡುವುದು ಅನಿವಾರ್ಯವಾಯಿತೆಂದು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

